ಪಿಎಂ ಕಿಸಾನ್ ಯೋಜನೆ 16ನೇ ಕಂತು ಬಿಡುಗಡೆ; ನಿಮ್ಮ ಖಾತೆಗೆ ಹಣ ಕ್ರೆಡಿಟ್ ಆಯ್ತಾ, ಚೆಕ್ ಮಾಡೋದು ಹೇಗೆ?
ಪಿಎಂ ಕಿಸಾನ್ ಯೋಜನೆ 16ನೇ ಕಂತನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಬಿಡುಗಡೆಗೊಳಿಸಿದ್ದಾರೆ. ಖಾತೆಗೆ ಹಣ ಕ್ರೆಡಿಟ್ ಆಗಲು ಫಲಾನುಭವಿಗಳು ಇ-ಕೆವೈಸಿ ಮಾಡೋದು ಅಗತ್ಯ.
ನವದೆಹಲಿ (ಫೆ. 29): :ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) 16ನೇ ಕಂತನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ (ಫೆ.28) ಮಹಾರಾಷ್ಟ್ರದ ಯವಟ್ಮಲ್ ನಲ್ಲಿ ಬಿಡುಗಡೆಗೊಳಿಸಿದ್ದಾರೆ. ಒಟ್ಟು 21,000 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಲಾಗಿದ್ದು, 9 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಇದರ ಪ್ರಯೋಜನ ಸಿಗಲಿದೆ. ಡಿಬಿಟಿ ಮೂಲಕ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು. ಹಲವು ದಿನಗಳಿಂದ ಪಿಎಂ ಕಿಸಾನ್ ಯೋಜನೆ ಸಹಾಯಧನದ ನಿರೀಕ್ಷೆಯಲ್ಲಿದ್ದ ರೈತರಿಗೆ ಇದರಿಂದ ಖುಷಿಯಾಗಿದೆ. ರೈತರು ಆನ್ ಲೈನ್ ನಲ್ಲೇ ತಮ್ಮ ಬ್ಯಾಂಕ್ ಖಾತೆಗೆ ಹಣ ಬಂದಿದೆಯಾ ಇಲ್ಲವೋ ಎಂದು ಪರಿಶೀಲಿಸಬಹುದು. ಆದರೆ, ಈ ಕಂತಿನ ಹಣ ಪಡೆಯಲು ಎಲ್ಲ ಫಲಾನುಭವಿಗಳು ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸೋದು ಅಗತ್ಯ. ಇ-ಕೆವೈಸಿ ಪೂರ್ಣಗೊಳಿಸದ ರೈತರ ಖಾತೆಗೆ ಹಣ ಬರೋದಿಲ್ಲ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಅರ್ಹ ರೈತರಿಗೆ ನಾಲ್ಕು ತಿಂಗಳಿಗೊಮ್ಮೆ ಪ್ರತಿ ಕಂತಿನಲ್ಲೂ 2000 ರೂ. ಹಣ ಪಾವತಿಸಲಾಗುತ್ತದೆ. ಫಲಾನುಭವಿ ಒಂದು ವರ್ಷದಲ್ಲಿ ಒಟ್ಟು 6000 ರೂ. ಹಣ ಪಡೆಯುತ್ತಾನೆ.
ಪಿಎಂ ಕಿಸಾನ್ ಯೋಜನೆ 16ನೇ ಕಂತನ್ನು ಬಿಡುಗಡೆಗೊಳಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, '2047ರ ಹೊತ್ತಿಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ನಾವು ನಾಲ್ಕು ವಿಚಾರಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ದೇಶವನ್ನು ನಾವು ಉದ್ದೇಶಿಸಿರುವ ಎತ್ತರಕ್ಕೆ ಕೊಂಡೊಯ್ಯಲು ಬಡವರು, ರೈತರು, ಯುವಕರು ಹಾಗೂ ಮಹಿಳಾ ಶಕ್ತಿಗೆ ಹೆಚ್ಚಿನ ಒತ್ತು ನೀಡುತ್ತೇವೆ. ಇಂದು ರೈತರು ಎಲ್ಲ ರೀತಿಯ ನೀರಾವರಿ ನೀರನ್ನು ಪಡೆಯುತ್ತಿದ್ದಾರೆ. ಹಾಗೆಯೇ ಬಡವರಿಗೆ ಕಾಂಕ್ರೀಟ್ ಮನೆಗಳನ್ನು ನಿರ್ಮಿಸಿ ಕೊಡಲಾಗುತ್ತಿದೆ. ಹಳ್ಳಿಗಳಲ್ಲಿ ಮಹಿಳೆಯರು ಆದಾಯದ ನೆರವು ಪಡೆಯುತ್ತಿದ್ದಾರೆ. ಯುವಕರ ಆಶಯಗಳಿಗೆ ಅನುಗುಣವಾಗಿ ಸಾರ್ವಜನಿಕ ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗುತ್ತಿದೆ' ಎಂದು ಅವರು ಹೇಳಿದರು. ಮಹಾರಾಷ್ಟ್ರದಲ್ಲಿ ರೈತರ ಖಾತೆಗಳಿಗೆ ಪ್ರತ್ಯೇಕವಾಗಿ 3,800 ಕೋಟಿ ರೂ. ವರ್ಗಾವಣೆ ಮಾಡಲಾಗುತ್ತಿದೆ ಎಂದು ಪ್ರಧಾನಿ ಈ ಸಂದರ್ಭದಲ್ಲಿ ತಿಳಿಸಿದರು.
ರೈತರ ನಿರೀಕ್ಷೆ ಹುಸಿ; ಪಿಎಂ ಕಿಸಾನ್ ವಾರ್ಷಿಕ ಮೊತ್ತ 6 ಸಾವಿರಕ್ಕಿಂತ ಹೆಚ್ಚು ಮಾಡಲ್ಲ,ಕೇಂದ್ರ ಸ್ಪಷ್ಟನೆ
'ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ 3ಲಕ್ಷ ರೂ.ಗಿಂತಲೂ ಅಧಿಕ ಹಣವನ್ನು ದೇಶಾದ್ಯಂತ 11 ಕೋಟಿ ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ. ರೈತರು 30,000 ಕೋಟಿ ರೂ. ಸ್ವೀಕರಿಸಿದ್ದು, ಅದರಲ್ಲಿ 900 ಕೋಟಿ ರೂ. ಅನ್ನು ಯವಟ್ಮಲ್ ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಫಲಾನುಭವಿಗಳ ಪಟ್ಟಿಯಲ್ಲಿ ಹೆಸರು ಹುಡುಕೋದು ಹೇಗೆ?
ಹಂತ 1: ಪಿಎಂ ಕಿಸಾನ್ ವೆಬ್‌ಸೈಟ್ https://pmkisan.gov.in/ ಭೇಟಿ ನೀಡಿ
ಹಂತ 2: ಅಲ್ಲಿ ಫಲಾನುಭವಿಗಳ ಪಟ್ಟಿ (Beneficiary list) ಟ್ಯಾಬ್ ಕ್ಲಿಕ್ ಮಾಡಿ. ವೆಬ್‌ಸೈಟ್‌ನ ಬಲಭಾಗದಲ್ಲಿ ಇದು ಇರುತ್ತದೆ.
ಹಂತ 3: ರಾಜ್ಯ, ಜಿಲ್ಲೆ, ಉಪ-ಜಿಲ್ಲೆ, ಬ್ಲಾಕ್ ಮತ್ತು ಹಳ್ಳಿಯಂತಹ ಡ್ರಾಪ್-ಡೌನ್ ವಿವರಗಳನ್ನು ಆಯ್ಕೆಮಾಡಿ.
ಹಂತ 4: ಗೆಟ್ ರಿಪೋರ್ಟ್ ಎನ್ನುವ ಟ್ಯಾಬ್ ಕ್ಲಿಕ್ ಮಾಡಿ, ಫಲಾನುಭವಿಗಳ ಪಟ್ಟಿಯ ವಿವರಗಳು ಪ್ರಕಟವಾಗುತ್ತದೆ.
ಪಿಎಂ ಕಿಸಾನ್, ಶ್ರಮಯೋಗಿ ಮಾನಧನ್.. 2019ರ ಮಧ್ಯಂತರ ಬಜೆಟ್‌ನಲ್ಲಿ ಘೋಷಣೆ ಆಗಿತ್ತು ಈ ಯೋಜನೆಗಳು!
ಖಾತೆಗೆ ಹಣ ಕ್ರೆಡಿಟ್ ಆಗಿದೆಯಾ ಪರಿಶೀಲಿಸೋದು ಹೇಗೆ?
ಹಂತ 1: ಪಿಎಂ ಕಿಸಾನ್ ವೆಬ್‌ಸೈಟ್ https://pmkisan.gov.in/ ಭೇಟಿ ನೀಡಿ
ಹಂತ 2: ಅಲ್ಲಿ ಫಲಾನುಭವಿಗಳ ಪಟ್ಟಿ (Beneficiary list) ಟ್ಯಾಬ್ ಕ್ಲಿಕ್ ಮಾಡಿ. ವೆಬ್‌ಸೈಟ್‌ನ ಬಲಭಾಗದಲ್ಲಿ ಇದು ಇರುತ್ತದೆ.
ಹಂತ 3: ರಾಜ್ಯ, ಜಿಲ್ಲೆ, ಉಪ-ಜಿಲ್ಲೆ, ಬ್ಲಾಕ್ ಮತ್ತು ಹಳ್ಳಿಯಂತಹ ಡ್ರಾಪ್-ಡೌನ್ ವಿವರಗಳನ್ನು ಆಯ್ಕೆಮಾಡಿ
ಹಂತ 4: ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆಯಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿ. ಇದರ ಮೂಲಕ ನೀವು ನಿಮ್ಮ ಖಾತೆಗೆ ಹಣ ಕ್ರೆಡಿಟ್ ಆಗಿದೆಯೋ ಇಲ್ಲವೋ ಎಂಬುದನ್ನು
ನೋಡಬಹುದು.