ರೈತರ ನಿರೀಕ್ಷೆ ಹುಸಿ; ಪಿಎಂ ಕಿಸಾನ್ ವಾರ್ಷಿಕ ಮೊತ್ತ 6 ಸಾವಿರಕ್ಕಿಂತ ಹೆಚ್ಚು ಮಾಡಲ್ಲ,ಕೇಂದ್ರ ಸ್ಪಷ್ಟನೆ
ಪಿಎಂ ಕಿಸಾನ್ ಯೋಜನೆ ಸಹಾಯಧನದಲ್ಲಿ ಹೆಚ್ಚಳ ಮಾಡುವ ಯಾವುದೇ ಪ್ರಸ್ತಾವನೆ ಸದ್ಯಕ್ಕಿಲ್ಲ ಎಂಬ ಮಾಹಿತಿಯನ್ನು ಕೇಂದ್ರ ಸರ್ಕಾರ ಸಂಸತ್ತಿಗೆ ನೀಡಿದೆ.
ನವದೆಹಲಿ (ಫೆ.6): ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಸಹಾಯಧನದಲ್ಲಿ ಹೆಚ್ಚಳವಾಗುತ್ತದೆ ಎಂಬ ಬಗ್ಗೆ ಸಾಕಷ್ಟು ವರದಿಗಳು ಬಂದಿದ್ದವು. ಈ ಬಾರಿಯ ಮಧ್ಯಂತರ ಬಜೆಟ್ ನಲ್ಲಿ ಸಹಾಯಧನದ ಮೊತ್ತವನ್ನು 6 ಸಾವಿರ ರೂ.ನಿಂದ 8 ಸಾವಿರ ಅಥವಾ 12 ಸಾವಿರ ರೂ.ಗೆ ಏರಿಕೆ ಮಾಡಬಹುದೆಂಬ ನಿರೀಕ್ಷೆ ಕೂಡ ಇತ್ತು. ಆದರೆ, ಹಾಗೇನೂ ಆಗಿಲ್ಲ. ಆದರೆ, ಈಗ ಈ ಬಗ್ಗೆ ಲೋಕಸಭೆಯಲ್ಲಿ ಸರ್ಕಾರ ಸ್ಪಷ್ಟನೆ ನೀಡಿದೆ. ಪಿಎಂ ಕಿಸಾನ್ ಯೋಜನೆಯಲ್ಲಿ ರೈತರಿಗೆ ನೀಡುವ ಸಹಾಯಧನವನ್ನು ವಾರ್ಷಿಕ 8,000ರೂ.ನಿಂದ 12,000ರೂ.ಗೆ ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಕೃಷಿ ಸಚಿವ ಅರ್ಜುನ್ ಮುಂಡ ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ. ಹಾಗೆಯೇ ಈ ಯೋಜನೆಯಲ್ಲಿ ಮಹಿಳಾ ರೈತರಿಗೆ ಕೂಡ ಸಹಾಯಧನ ಹೆಚ್ಚಳ ಮಾಡುವ ಯಾವುದೇ ಪ್ರಸ್ತಾವನೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯನ್ನು (ಪಿಎಂ-ಕಿಸಾನ್) 2019ರಲ್ಲಿ ಪ್ರಾರಂಭಿಸಲಾಗಿತ್ತು. ಈ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಅರ್ಹ ರೈತರಿಗೆ 2 ಸಾವಿರ ರೂಪಾಯಿಯಂತೆ, ವಾರ್ಷಿಕವಾಗಿ 6 ಸಾವಿರ ರೂಪಾಯಿಗಳನ್ನು ನೇರವಾಗಿ ವರ್ಗಾವಣೆ ಮಾಡುತ್ತದೆ. ಈ ಹಣವನ್ನು ಡಿಬಿಟಿ ಮೂಲಕ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುತ್ತದೆ. ಕೇಂದ್ರ ಸರ್ಕಾರವು ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಖರೀದಿ ಸೇರಿದಂತೆ ಆರ್ಥಿಕವಾಗಿ ನೆರವಾಗುವ ದೃಷ್ಟಿಯಿಂದ ಈ ಯೋಜನೆಯನ್ನು ಜಾರಿಗೆ ತಂದಿತ್ತು.
ರೈತರಿಗೆ ಗುಡ್ ನ್ಯೂಸ್;ಪಿಎಂ ಕಿಸಾನ್ ಯೋಜನೆ ಮೊತ್ತ 6,000 ರೂ.ನಿಂದ 8,000ರೂ.ಗೆ ಏರಿಕೆ ಸಾಧ್ಯತೆ
ಪಿಎಂ ಕಿಸಾನ್ ಯೋಜನೆ ಸಹಾಯಧನವನ್ನು ವಾರ್ಷಿಕ 8,000 ರೂ.ನಿಂದ 12,000ರೂ.ಗೆ ಏರಿಕೆ ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸುವ ಸಂದರ್ಭದಲ್ಲಿ ಸಚಿವರು ಈ ಮಾಹಿತಿ ನೀಡಿದ್ದಾರೆ. ಇನ್ನು ಈ ಯೋಜನೆ ಪ್ರಗತಿಯ ಬಗ್ಗೆ ಮಾಹಿತಿ ನೀಡಿದ ಸಚಿವರು, ಸರ್ಕಾರ ಈ ತನಕ 2.81 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವನ್ನು 11 ಕೋಟಿಗಿಂತಲೂ ಅಧಿಕ ರೈತರಿಗೆ 15 ಕಂತುಗಳಲ್ಲಿ ವಿತರಿಸಿದೆ ಎಂದು ಹೇಳಿದ್ದಾರೆ. ಭೂಮಿ ಹೊಂದಿರುವ ರೈತರಿಗೆ ಕೃಷಿ ಚುಟವಟಿಕೆಗಳಿಗೆ ಆರ್ಥಿಕ ನೆರವು ಒದಗಿಸೋದು ಈ ಯೋಜನೆ ಉದ್ದೇಶ ಎಂದು ಅವರು ತಿಳಿಸಿದ್ದಾರೆ.
ಇನ್ನು ಪಿಎಂ ಕಿಸಾನ್ ಯೋಜನೆ ವಿಶ್ವದ ಅತ್ಯಂತ ದೊಡ್ಡ ನೇರ ಪ್ರಯೋಜನ ವರ್ಗಾವಣೆ (DBT) ಯೋಜನೆಯಾಗಿದೆ. ಯಾವುದೇ ಮಧ್ಯಸ್ಥಗಾರನ ನೆರವಿಲ್ಲದೆ ಈ ಯೋಜನೆಯ ಪ್ರಯೋಜನ ದೇಶಾದ್ಯಂತ ನೇರವಾಗಿ ಎಲ್ಲ ರೈತರಿಗೂ ಸಿಗುವಂತೆ ರೈತ ಕೇಂದ್ರೀಕೃತ ಡಿಜಿಟಲ್ ಮೂಲಸೌಕರ್ಯ ರೂಪಿಸಲಾಗಿದೆ. ಈ ಯೋಜನೆಗೆ ಸಂಬಂಧಿಸಿದ ಇನ್ನೊಂದು ಪ್ರಶ್ನೆಗೆ ಉತ್ತರಿಸುವ ಸಂದರ್ಭದಲ್ಲಿ ಸಚಿವರು, ಉತ್ತರ ಪ್ರದೇಶದಲ್ಲಿ 2,62,45,829 ರೈತರು ಪಿಎಂ ಕಿಸಾನ್ ಯೋಜನೆ ಪ್ರಾರಂಭವಾದಾಗಲಿನಿಂದ ಇಲ್ಲಿಯ ತನಕ ಪ್ರಯೋಜನ ಪಡೆದಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.
ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ಸೇರ್ಪಡೆಗೊಳ್ಳೋದು ಹೇಗೆ?
- ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಅಧಿಕೃತ ವೆಬ್ ಸೈಟ್ www.pmkisan.gov.in. ಭೇಟಿ ನೀಡಿ.
-ಮುಖಪುಟದಲ್ಲಿ ಕಾಣಿಸೋ 'Farmers Corner'ಎಂಬ ಆಯ್ಕೆ ಮೇಲೆ ಕ್ಲಿಕಿಸಿ.
-ಈಗ 'New Farmer Registration'ಮೇಲೆ ಕ್ಲಿಕ್ ಮಾಡಿ.
-ಈಗ ನೋಂದಣಿ ಅರ್ಜಿ ತೆರೆದುಕೊಳ್ಳುತ್ತದೆ. ಇದ್ರಲ್ಲಿ ಕೇಳಿರೋ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿ.
-ಬಳಿಕ submit ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಒಂದೇ ಕ್ಲಿಕ್‌ನಲ್ಲಿ ರೈತರ ಖಾತೆ ಸೇರಿದ ಸಮ್ಮಾನ್ ನಿಧಿ, ಇದೆಲ್ಲವೂ ದೇಶದ 'ಕೃಪೆ'ಯಿಂದ ನಡೆಯುತ್ತಿದೆ ಎಂದ ಮೋದಿ!
ಈ ರೈತರಿಗೆ ಪ್ರಯೋಜನ ಸಿಗಲ್ಲ
-ಒಂದು ಕುಟುಂಬದ ಯಾವುದೇ ಸದಸ್ಯ ಆದಾಯ ತೆರಿಗೆ ಪಾವತಿಸುತ್ತಿದ್ರೆ ಅಂಥ ಕುಟುಂಬದ ರೈತನಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಫಲಾನುಭವಿಯಾಗಲು ಸಾಧ್ಯವಿಲ್ಲ.
-ಯಾರ ಬಳಿ ಕೃಷಿಯೋಗ್ಯ ಭೂಮಿಯಿಲ್ಲವೋ ಅಂಥವರು ಕೂಡ ಈ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಿಲ್ಲ.
-ಒಂದು ವೇಳೆ ಕೃಷಿ ಭೂಮಿ ನಿಮ್ಮ ಹೆಸರಿನಲ್ಲಿ ಇಲ್ಲದಿದ್ರೆ ಅಂದ್ರೆ ನಿಮ್ಮ ತಾತಾ ಅಥವಾ ಅಪ್ಪನ ಹೆಸರಿನಲ್ಲಿದ್ರೆ ನೀವು ಈ ಯೋಜನೆ ವ್ಯಾಪ್ತಿಗೆ ಒಳಪಡೋದಿಲ್ಲ.
-ಒಂದು ವೇಳೆ ನೀವು ಕೃಷಿ ಭೂಮಿ ಹೊಂದಿದ್ದು, ಸರ್ಕಾರಿ ನೌಕರಿಯಲ್ಲಿದ್ರೆ ನಿಮಗೆ ಈ ಯೋಜನೆ ಲಾಭ ಸಿಗೋದಿಲ್ಲ.
-ನೋಂದಾಯಿತ ವೈದ್ಯ, ಇಂಜಿನಿಯರ್, ನ್ಯಾಯವಾದಿ ಹಾಗೂ ಸಿಎ ಅಂಥ ಹುದ್ದೆಯಲ್ಲಿರೋ ವ್ಯಕ್ತಿ ಹೆಸರಿನಲ್ಲಿ ಕೃಷಿ ಭೂಮಿ ಇದ್ದರೂ ಆತ ಈ ಯೋಜನೆ ಫಲಾನುಭವಿಯಾಗಲು ಸಾಧ್ಯವಿಲ್ಲ.
-ಯಾವುದೇ ರೈತನಿಗೆ ಮಾಸಿಕ 10 ಸಾವಿರ ರೂ. ಪಿಂಚಣಿ ದೊರೆಯುತ್ತಿದ್ರೆ, ಅಂಥವರು ಕೂಡ ಈ ಯೋಜನೆ ಫಲಾನುಭವಿಯಾಗಲು ಸಾಧ್ಯವಿಲ್ಲ.