ನವದೆಹಲಿ[ಜೂ.23]: ಜುಲೈ 5ರಂದು ಕೇಂದ್ರ ಬಜೆಟ್‌ ಮಂಡನೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರಸ್ತುತ ಆರ್ಥಿಕ ಪರಿಸ್ಥಿತಿ ಕುರಿತು ಅರ್ಥ ಶಾಸ್ತ್ರಜ್ಞರು ಹಾಗೂ ಉದ್ಯಮ ತಜ್ಞರ ಜೊತೆ ಸಮಾಲೋಚನೆ ನಡೆಸಿದರು. ಉನ್ನತ ಆರ್ಥಿಕಾಭಿವೃದ್ಧಿ ದರ ಸಾಧಿಸುವ ಬಗ್ಗೆ ಮಾತುಕತೆ ನಡೆಯಿತು.

‘ಆರ್ಥಿಕ ನೀತಿ- ಮುಂದಿರುವ ಹಾದಿ’ ಕುರಿತಾಗಿ ನೀತಿ ಆಯೋಗ ಶನಿವಾರ ಏರ್ಪಡಿಸಿದ ಸಮಾಲೋಚನೆ ಸಭೆಯಲ್ಲಿ 40ಕ್ಕೂ ಹೆಚ್ಚು ಮಂದಿ ಆರ್ಥ ಶಾಸ್ತ್ರಜ್ಞರು ಹಾಗೂ ಇತರೆ ತಜ್ಞರು ನೀಡಿದ ಸಲಹೆ, ಸೂಚನೆಗಳನ್ನು ಮೋದಿ ಅವರು ಸ್ವೀಕರಿಸಿದರು ಎನ್ನಲಾಗಿದೆ. ಬ್ಯಾಂಕಿಂಗ್‌ ಹಾಗೂ ವಿಮಾ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಮಿತಿ ಹೆಚ್ಚಳ, ಸರ್ಕಾರಿ ಕಂಪನಿಗಳಿಂದ ಷೇರು ಹಿಂತೆಗೆತ ಪ್ರಕ್ರಿಯೆಗೆ ಚುರುಕು, ಜಲಸಂಪನ್ಮೂಲ ನಿರ್ವಹಣೆಯಂತಹ ವಿಚಾರಗಳು ಈ ಸಭೆಯಲ್ಲಿ ಚರ್ಚೆಗೆ ಬಂದವು ಎಂದು ಮೂಲಗಳು ತಿಳಿಸಿವೆ.

ಸಮಗ್ರ ಆರ್ಥಿಕತೆ ಹಾಗೂ ಉದ್ಯೋಗ ಸೃಷ್ಟಿ, ಕೃಷಿ ಮತ್ತು ಜಲ ಸಂಪನ್ಮೂಲಗಳು, ವ್ಯಾಪಾರದ ಯುದ್ಧಗಳ ಹೊರತಾಗಿಯೂ ರಫ್ತು ಹೆಚ್ಚಳ, ಶಿಕ್ಷಣ ಮತ್ತು ಆರೋಗ್ಯ ಸೇರಿದಂತೆ ಇತರೆ ವಿಚಾರಗಳ ಕುರಿತು ತಜ್ಞರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಈ ಹಿನ್ನೆಲೆಯಲ್ಲಿ ದೇಶದ ಆರ್ಥಿಕಾಭಿವೃದ್ಧಿಗೆ ಸಂಬಂಧಿಸಿದಂತೆ ಸಲಹೆಗಳಿಗಾಗಿ ತಜ್ಞರಿಗೆ ಪ್ರಧಾನಿ ಮೋದಿ ಅವರು ಅಭಿನಂದನೆ ಸಲ್ಲಿಸಿದರು ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.

ಟಿಸಿಎಸ್‌ ಕಂಪನಿ ಮುಖ್ಯಸ್ಥ ಎನ್‌. ಚಂದ್ರಶೇಖರನ್‌, ಟಾಟಾ ಸ್ಟೀಲ್‌ ಎಂಡಿ ಟಿ.ವಿ. ನರೇಂದ್ರನ್‌, ವೇದಾಂತ ಕಂಪನಿ ಮುಖ್ಯಸ್ಥ ಅನಿಲ್‌ ಅಗರ್‌ವಾಲ್ ಐಟಿಸಿ ಕಂಪನಿ ಸಿಎಂಡಿ ಸಂಜೀವ್‌ ಪುರಿ, ಪೇಟಿಎಂ ಸಿಇಒ ವಿಜಯಶೇಖರ್‌ ಶರ್ಮಾ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.