PM Kisan Samman Nidhi:ಈ ದಿನ ರೈತರ ಖಾತೆಗೆ ಬರಲಿದೆ 15ನೇ ಕಂತಿನ ಹಣ, ಅರ್ಜಿ ಸಲ್ಲಿಕೆ ಹೇಗೆ?
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 15ನೇ ಕಂತಿನ ಹಣ ಶೀಘ್ರದಲ್ಲೇ ರೈತರ ಖಾತೆಗೆ ಬರಲಿದೆ. 14ನೇ ಕಂತಿನ ಹಣವನ್ನು ಕೇಂದ್ರ 2023ರ ಜುಲೈ 27ರಂದು ಬಿಡುಗಡೆ ಮಾಡಿತ್ತು. ಈ ಯೋಜನೆಗೆ ಸೇರ್ಪಡೆಗೊಳ್ಳುವುದು ಹೇಗೆ? ಫಲಾನುಭವಿ ಪಟ್ಟಿ ಪರಿಶೀಲನೆ ಹೇಗೆ? ಇಲ್ಲಿದೆ ಮಾಹಿತಿ.
ನವದೆಹಲಿ (ಸೆ.23): ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್) ಯೋಜನೆ 15ನೇ ಕಂತಿನ ಹಣಕ್ಕಾಗಿ ಲಕ್ಷಾಂತರ ರೈತರು ಕಾಯುತ್ತಿದ್ದಾರೆ. ಅವರಿಗೆ ಶುಭ ಸುದ್ದಿಯೊಂದು ಇದೆ. 15ನೇ ಕಂತಿನ ಹಣವನ್ನು ನವೆಂಬರ್ ಹಾಗೂ ಡಿಸೆಂಬರ್ ತಿಂಗಳ ನಡುವೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಆದರೆ, ಈ ಬಗ್ಗೆ ಕೇಂದ್ರ ಸರ್ಕಾರ ಈ ತನಕ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. 14ನೇ ಕಂತಿನ ಹಣವನ್ನು ಕೇಂದ್ರ 2023ರ ಜುಲೈ 27ರಂದು ಬಿಡುಗಡೆ ಮಾಡಿತ್ತು. ಈ ವರ್ಷದಲ್ಲಿ ಫೆಬ್ರವರಿ 27 ರಂದು 13ನೇ ಕಂತಿನ ಹಣ ಬಂದಿತ್ತು. ಈ ಯೋಜನೆಯಡಿಯಲ್ಲಿ ಅರ್ಹ ರೈತರು ಮೂರು ಕಂತುಗಳಲ್ಲಿ ತಲಾ 2 ಸಾವಿರ ರೂ.ನಂತೆ ವಾರ್ಷಿಕ ಒಟ್ಟು 6000 ರೂ.ಪಡೆಯುತ್ತಾರೆ. ಕೇಂದ್ರ ಸರ್ಕಾರವು ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಖರೀದಿ ಸೇರಿದಂತೆ ಆರ್ಥಿಕವಾಗಿ ನೆರವಾಗುವ ದೃಷ್ಟಿಯಿಂದ 2019ರಲ್ಲಿ ಡಿಬಿಟಿ ಮೂಲಕ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿಗೆ ತಂದಿತ್ತು.
ಏನಿದು ಪಿಎಂ ಕಿಸಾನ್ ಯೋಜನೆ?
ಇದು ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡಲು ಇದನ್ನು ಪ್ರಾರಂಭಿಸಲಾಯಿತು. ಈ ಯೋಜನೆಯಡಿ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತದೆ. 2019ರ ಫೆಬ್ರವರಿ 24ರಂದು ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯಡಿ 11 ಕೋಟಿ ರೈತರಿಗೆ ಒಟ್ಟು 2.59 ಲಕ್ಷ ಕೋಟಿ ರೂ.ಗೂ ಅಧಿಕ ಹಣವನ್ನು ನೀಡಲಾಗಿದೆ.
ಸೆ.30ರೊಳಗೆ ಈ ಒಂದು ಕೆಲಸ ಮಾಡದಿದ್ರೆ ನಿಷ್ಕ್ರಿಯಗೊಳ್ಳುತ್ತೆ ನಿಮ್ಮ ಡಿಮ್ಯಾಟ್ ಖಾತೆ!
ಈ ಯೋಜನೆಗೆ ಯಾರು ಅರ್ಹರು?
ಭೂಮಿಯನ್ನು ಹೊಂದಿರುವ ಎಲ್ಲ ರೈತರು ಪಿಎಂ ಕಿಸಾನ್ ಯೋಜನೆಯ ಪ್ರಯೋಜನ ಪಡೆಯಲು ಅರ್ಹತೆ ಹೊಂದಿದ್ದಾರೆ. ಈ ವರ್ಷದ ಜುಲೈ 27ರಂದು ಪ್ರಧಾನಿ ನರೇಂದ್ರ ಮೋದಿ, 8.5 ಕೋಟಿ ರೈತರಿಗೆ ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಅಂದಾಜು 17 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದ್ದರು.
ಈ ರೈತರಿಗೆ ಪ್ರಯೋಜನ ಸಿಗಲ್ಲ
-ಒಂದು ಕುಟುಂಬದ ಯಾವುದೇ ಸದಸ್ಯ ಆದಾಯ ತೆರಿಗೆ ಪಾವತಿಸುತ್ತಿದ್ರೆ ಅಂಥ ಕುಟುಂಬದ ರೈತನಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಫಲಾನುಭವಿಯಾಗಲು ಸಾಧ್ಯವಿಲ್ಲ.
-ಯಾರ ಬಳಿ ಕೃಷಿಯೋಗ್ಯ ಭೂಮಿಯಿಲ್ಲವೋ ಅಂಥವರು ಕೂಡ ಈ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಿಲ್ಲ.
-ಒಂದು ವೇಳೆ ಕೃಷಿ ಭೂಮಿ ನಿಮ್ಮ ಹೆಸರಿನಲ್ಲಿ ಇಲ್ಲದಿದ್ರೆ ಅಂದ್ರೆ ನಿಮ್ಮ ತಾತಾ ಅಥವಾ ಅಪ್ಪನ ಹೆಸರಿನಲ್ಲಿದ್ರೆ ನೀವು ಈ ಯೋಜನೆ ವ್ಯಾಪ್ತಿಗೆ ಒಳಪಡೋದಿಲ್ಲ.
-ಒಂದು ವೇಳೆ ನೀವು ಕೃಷಿ ಭೂಮಿ ಹೊಂದಿದ್ದು, ಸರ್ಕಾರಿ ನೌಕರಿಯಲ್ಲಿದ್ರೆ ನಿಮಗೆ ಈ ಯೋಜನೆ ಲಾಭ ಸಿಗೋದಿಲ್ಲ.
-ನೋಂದಾಯಿತ ವೈದ್ಯ, ಇಂಜಿನಿಯರ್, ನ್ಯಾಯವಾದಿ ಹಾಗೂ ಸಿಎ ಅಂಥ ಹುದ್ದೆಯಲ್ಲಿರೋ ವ್ಯಕ್ತಿ ಹೆಸರಿನಲ್ಲಿ ಕೃಷಿ ಭೂಮಿ ಇದ್ದರೂ ಆತ ಈ ಯೋಜನೆ ಫಲಾನುಭವಿಯಾಗಲು ಸಾಧ್ಯವಿಲ್ಲ.
-ಯಾವುದೇ ರೈತನಿಗೆ ಮಾಸಿಕ 10 ಸಾವಿರ ರೂ. ಪಿಂಚಣಿ ದೊರೆಯುತ್ತಿದ್ರೆ, ಅಂಥವರು ಕೂಡ ಈ ಯೋಜನೆ ಫಲಾನುಭವಿಯಾಗಲು ಸಾಧ್ಯವಿಲ್ಲ.
ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ಸೇರ್ಪಡೆಗೊಳ್ಳೋದು ಹೇಗೆ?
- ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಅಧಿಕೃತ ವೆಬ್ ಸೈಟ್ www.pmkisan.gov.in. ಭೇಟಿ ನೀಡಿ.
-ಮುಖಪುಟದಲ್ಲಿ ಕಾಣಿಸೋ 'Farmers Corner'ಎಂಬ ಆಯ್ಕೆ ಮೇಲೆ ಕ್ಲಿಕಿಸಿ.
-ಈಗ 'New Farmer Registration'ಮೇಲೆ ಕ್ಲಿಕ್ ಮಾಡಿ.
-ಈಗ ನೋಂದಣಿ ಅರ್ಜಿ ತೆರೆದುಕೊಳ್ಳುತ್ತದೆ. ಇದ್ರಲ್ಲಿ ಕೇಳಿರೋ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿ.
-ಬಳಿಕ submit ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಆಧಾರ್ ಸಂಖ್ಯೆ ಇದ್ದರೆ ಸಾಕು ತಕ್ಷಣ ಪ್ಯಾನ್ ಕಾರ್ಡ್ ಪಡೆಯಬಹುದು, ಅದು ಹೇಗೆ? ಇಲ್ಲಿದೆ ಮಾಹಿತಿ
ಫಲಾನುವಿ ಪಟ್ಟಿ ಪರಿಶೀಲಿಸೋದು ಹೇಗೆ?
-ಮೊದಲಿಗೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಅಧಿಕೃತ ವೆಬ್ ಸೈಟ್ https://pmkisan.gov.in/ ಭೇಟಿ ನೀಡಿ.
-ಈಗ ಮುಖಪುಟದಲ್ಲಿ 'Farmers Corner'ಎಂಬ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
-ಇಲ್ಲಿ ‘Beneficiary Status’ ಮೇಲೆ ಕ್ಲಿಕ್ ಮಾಡಿದ್ರೆ ಹೊಸ ಪುಟ ತೆರೆದುಕೊಳ್ಳುತ್ತದೆ.
-ಈ ಪುಟದಲ್ಲಿ ನಿಮ್ಮ ಆಧಾರ್ ಸಂಖ್ಯೆ ಅಥವಾ ಬ್ಯಾಂಕ್ ಖಾತೆ ಸಂಖ್ಯೆ ನಮೂದಿಸಿ.
-ಆ ಬಳಿಕ‘Get Data’ ಆಯ್ಕೆ ಮೇಲೆ ಕ್ಲಿಕಿಸಿ. ಈಗ ನಿಮಗೆ ಫಲಾನುಭವಿಗಳ ಪಟ್ಟಿ ಸಿಗುತ್ತದೆ. ಇದ್ರಲ್ಲಿ ನಿಮ್ಮ ಹೆಸರಿದೆಯೇ ಎಂಬುದನ್ನು ಪರಿಶೀಲಿಸಿ.