* ದೇಶದ ರೈತರಿಗೆ ವಾರ್ಷಿಕ 6,000 ರು. ಸಹಾಯಧನವನ್ನು ಒದಗಿಸುವ ಪಿಎಂ ಕಿಸಾನ್ ಯೋಜನೆ* ಕೆವೈಸಿ ಮಾಡಿಸಿಕೊಳ್ಳುವ ಅಂತಿಮ ಗಡುವನ್ನು ಕೇಂದ್ರ ಸರ್ಕಾರ ಜು. 31ರವರೆಗೆ ವಿಸ್ತರಿಸಿದೆ* ಇ-ಕೆವೈಸಿ ಒಟಿಪಿ ಆಧಾರಿತವಾಗಿರುತ್ತದೆ
ನವದೆಹಲಿ(ಜು.06): ದೇಶದ ರೈತರಿಗೆ ವಾರ್ಷಿಕ 6,000 ರು. ಸಹಾಯಧನವನ್ನು ಒದಗಿಸುವ ಪಿಎಂ ಕಿಸಾನ್ ಯೋಜನೆಯ ಕೆವೈಸಿ ಮಾಡಿಸಿಕೊಳ್ಳುವ ಅಂತಿಮ ಗಡುವನ್ನು ಕೇಂದ್ರ ಸರ್ಕಾರ ಜು. 31ರವರೆಗೆ ವಿಸ್ತರಿಸಿದೆ.
ಕೇಂದ್ರ ಸರ್ಕಾರ ಪಿಎಂ ಕಿಸಾನ್‌ನ 11ನೇ ಕಂತಿನಲ್ಲಿ 10 ಕೋಟಿ ರೈತರಿಗಾಗಿ 21,000 ಕೋಟಿ ರು. ಸಹಾಯಧನ ಬಿಡುಗಡೆ ಮಾಡಿರುವುದಾಗಿ ಘೋಷಿಸಿದೆ. ಪಿಎಂ ಕಿಸಾನ್ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ರೈತರು ಇ-ಕೆವೈಸಿ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಇ-ಕೆವೈಸಿ ಒಟಿಪಿ ಆಧಾರಿತವಾಗಿರುತ್ತದೆ.
ಕೆವೈಸಿ ಮಾಡಿಸಿಕೊಳ್ಳುವ ಅಂತಿಮ ಗಡುವು ಮೇ 31 ರಿಂದ ಜು. 31ಕ್ಕೆ ವಿಸ್ತರಿಸಲಾಗಿದೆ ಎಂದು ಪಿಎಂ ಕಿಸಾನ್ ಪೋರ್ಟಲ್ ತಿಳಿಸಿದೆ.
ರೈತರಿಗೆ ಪ್ರಮುಖ ಮಾಹಿತಿ
ಈ ಹಿಂದೆ ಏಪ್ರಿಲ್-ಜುಲೈ ಕಂತು ಏಪ್ರಿಲ್ 1 ರಿಂದ ಜುಲೈ 31 ರ ನಡುವೆ, ಆಗಸ್ಟ್-ನವೆಂಬರ್ ಕಂತು ಆಗಸ್ಟ್ 1 ರಿಂದ ನವೆಂಬರ್ 30 ರ ನಡುವೆ, ಡಿಸೆಂಬರ್-ಮಾರ್ಚ್ ಕಂತು ಡಿಸೆಂಬರ್ 1 ರಿಂದ ಮಾರ್ಚ್ 31 ರ ನಡುವೆ ವರ್ಗಾವಣೆಯಾಗಿತ್ತು. ಪ್ರತಿ ನಾಲ್ಕು ತಿಂಗಳಿಗೊಮ್ಮೆ ಮೂರು ಸಮಾನ ಕಂತಿನಲ್ಲಿ ಹಣ ಬಿಡುಗಡೆಯಾಗುತ್ತದೆ.
ನೋಟುಗಳ ಮುದ್ರಣಕ್ಕೆ ಸರ್ಕಾರದಿಂದ 4.5 ಸಾವಿರ ಕೋಟಿ ಖರ್ಚು, ಪ್ರತಿ ಮುಖಬೆಲೆಯ ನೋಟಿಗೆ ಆಗುವ ಖರ್ಚೆಷ್ಟು!
PM ಕಿಸಾನ್ ಟೋಲ್ ಫ್ರೀ ಸಂಖ್ಯೆ: 18001155266
ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ:155261
PM ಕಿಸಾನ್ ಸ್ಥಿರ ದೂರವಾಣಿ ಸಂಖ್ಯೆಗಳು: 011-23381092, 23382401
ಸಹಾಯವಾಣಿ: 011-24300606
ಸಹಾಯವಾಣಿ: 0120-6025109
ಇ-ಮೇಲ್ ಐಡಿ: pmkisan-ict@gov.in
eKYC ಮಾಡೋದು ಹೇಗೆ? ಇಲ್ಲಿದೆ ಪ್ರಕ್ರಿಯೆ
ಹಂತ 1- ಮೊದಲು pmkisan.gov.in ಮೂಲಕ ಪಿಎಂ ಕಿಸಾನ್ ಯೋಜನೆಯ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ.
ಹಂತ 2- ನಂತರ ಮುಖಪುಟದ ಬಲಭಾಗದಲ್ಲಿರುವ ಇ-ಕೆವೈಸಿ ಲಿಂಕ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 3- ನಂತರ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಮತ್ತು ಸರ್ಚ್ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 4- ನಂತರ ಅದನ್ನು ಪರಿಶೀಲಿಸಲು ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಸಂಪರ್ಕಗೊಂಡಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಲು ಕೇಳಲಾಗುತ್ತದೆ.
ಹಂತ 5- ಮೊಬೈಲ್ ನಂಬರ್ ನಮೂದಿಸಿ ಒಟಿಪಿ ಪಡೆಯಲು ಕ್ಲಿಕ್ ಮಾಡಿ. ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಕೇಳಿದ ಸ್ಥಳದಲ್ಲಿ OTP ಅನ್ನು ನಮೂದಿಸಿ.
ಹಂತ 6- ನಂತರ ಆಧಾರ್ ದೃಢೀಕರಣಗೊಳಿಸಲು ಇರುವ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 7- ಬಳಿಕ ನಿಮ್ಮ ಫೋನ್‌ಗೆ ಬಂದ OTPಯನ್ನು ನಮೂದಿಸಿ.
ಹಂತ 8- ಇದರ ನಂತರ, ನೀವು ಕೇಳಿದ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿದರೆ ಇ-ಕೆವೈಸಿ ಪೂರ್ಣಗೊಳಿಸುವಿಕೆಯ ಸಂದೇಶ ಸಿಗುತ್ತದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಬಗ್ಗೆ ಕೆಲ ಪ್ರಮುಖ ವಿಚಾರಗಳು
ಪಿಎಂ-ಕಿಸಾನ್ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿದೆ. ಇದು ಫೆಬ್ರವರಿ 24, 2019 ರಂದು ಪ್ರಾರಂಭವಾಯಿತು. ಈ ಯೋಜನೆಯು ಆರಂಭದಲ್ಲಿ 2 ಹೆಕ್ಟೇರ್‌ವರೆಗೆ ಭೂಮಿಯನ್ನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ (SMFs) ಉದ್ದೇಶಿಸಲಾಗಿತ್ತು, ಆದರೆ 01.06.2019 ರಿಂದ ಜಾರಿಗೆ ಬರುವಂತೆ, ಎಲ್ಲಾ ಭೂಹಿಡುವಳಿ ರೈತರನ್ನು ಒಳಗೊಳ್ಳಲು ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಲಾಯಿತು. ಯೋಜನೆಯ ಪ್ರಕಾರ, ಪ್ರತಿ ನಾಲ್ಕು ತಿಂಗಳಿಗೊಮ್ಮೆ ಮೂರು ಸಮಾನ ಕಂತುಗಳಲ್ಲಿ ರೂ.6000/- ಆರ್ಥಿಕ ಲಾಭವನ್ನು ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ದೇಶಾದ್ಯಂತದ ರೈತ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ, ಫೆಬ್ರವರಿ 22, 2022 ರವರೆಗೆ ಸುಮಾರು 11.78 ಕೋಟಿ ರೈತರಿಗೆ ಪ್ರಯೋಜನಗಳನ್ನು ಒದಗಿಸಲಾಗಿದೆ. ಭಾರತದಾದ್ಯಂತ ಈ ಯೋಜನೆಯ ಅರ್ಹ ಫಲಾನುಭವಿಗಳಿಗೆ ವಿವಿಧ ಕಂತುಗಳಲ್ಲಿ 1.82 ಲಕ್ಷ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಈ ಪೈಕಿ ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕ ಅವಧಿಯಲ್ಲಿ 1.29 ಲಕ್ಷ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.
ಫಲಾನುಭವಿಗಳ ಪಟ್ಟಿ
ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಗ್ರಾಮ ಪಂಚಾಯತ್ ಗಳ ನೋಟಿಸ್ ಬೋರ್ಡ್ ಗಳಲ್ಲಿ ಪ್ರಕಟಿಸಲಾಗುತ್ತದೆ. ಹೀಗಾಗಿ ಈ ಯೋಜನೆಯ ಪ್ರಯೋಜನ ಪಡೆಯುವ ರೈತ ಕುಟುಂಬಗಳು ಗ್ರಾಮ ಪಂಚಾಯತ್ ಗೆ ಭೇಟಿ ನೀಡಿ ಪರಿಶೀಲಿಸಬಹುದು. ಇಲ್ಲವೇ ಆನ್ ಲೈನ್ ನಲ್ಲಿ ಕೂಡ ಫಲಾನುಭವಿಗಳ ಪಟ್ಟಿಯನ್ನು ಚೆಕ್ ಮಾಡಬಹುದು. ಇವೆರಡರ ಹೊರತಾಗಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಕೂಡ ಅರ್ಹ ರೈತರಿಗೆ ಎಸ್ ಎಂಎಸ್ ಅಲರ್ಟ್ ಕಳುಹಿಸುತ್ತವೆ.
ಆನ್ ಲೈನ್ ನಲ್ಲಿ ಪರಿಶೀಲಿಸೋದು ಹೇಗೆ?
ಹಂತ 1: ಪಿಎಂ ಕಿಸಾನ್ ಸಮ್ಮಾನ್ ನಿಧಿಯ ವೆಬ್‌ಸೈಟ್ pmkisan.gov.inಗೆ ಭೇಟಿ ನೀಡಿ.
ಹಂತ 2: ಮುಖಪುಟದಿಂದ ನಿಮಗೆ ರೈತರ ಕಾರ್ನರ್ (Farmers Corner) ಎಂಬ ಪ್ರತ್ಯೇಕ ವಿಭಾಗ ಕಾಣಿಸುತ್ತದೆ.
ಹಂತ 3: ರೈತರ ಕಾರ್ನರ್ ವಿಭಾಗದಲ್ಲಿ 'ಫಲಾನುಭವಿ ಸ್ಥಿತಿ' (Beneficiary Status) ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
ಹಂತ 4: ಇಲ್ಲವೇ ನೀವು ನೇರವಾಗಿ https://pmkisan.gov.in/BeneficiaryStatus.aspx ಲಿಂಕ್ ಗೆ ಭೇಟಿ ನೀಡಬಹುದು.
ಹಂತ 5: ಈಗ ನೀವು ಆಧಾರ್ ಸಂಖ್ಯೆ, ಪಿಎಂ ಕಿಸಾನ್ ಖಾತೆ ಸಂಖ್ಯೆ ಅಥವಾ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ -ಇವುಗಳಲ್ಲಿ ಯಾವುದಾದರೂ ಒಂದು ಮಾಹಿತಿಯನ್ನು ಆಯ್ಕೆ ಮಾಡಿ ಭರ್ತಿ ಮಾಡಿ.
ಹಂತ 6: ಮಾಹಿತಿಗಳನ್ನು ಭರ್ತಿ ಮಾಡಿದ ಬಳಿಕ 'ಡೇಟಾ ಪಡೆಯಿರಿ' (Data option) ಆಯ್ಕೆ ಮೇಲೆ ಕ್ಲಿಕ್ ಮಾಡಿ. ಈಗ ನಿಮಗೆ ಫಲಾನುಭವಿ ಸ್ಥಿತಿ ಬಗ್ಗೆ ಮಾಹಿತಿ ಸಿಗುತ್ತದೆ.
ನೀವು ಪಿಎಂ ಕಿಸಾನ್ ಯೋಜನೆ ಪ್ರಯೋಜನ ಪಡೆಯಲು ಅರ್ಹರಾಗಿದ್ದು, ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿದ್ದರು ಕೂಡ ಒಂದು ವೇಳೆ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ಸರ್ಕಾರಕ್ಕೆ ನೇರವಾಗಿ ದೂರು ನೀಡಬಹುದು.
