Asianet Suvarna News Asianet Suvarna News

PM Jan Dhan OD Limit:ಜನ್ ಧನ್ ಖಾತೆಯಲ್ಲಿ ಶೂನ್ಯ ಬ್ಯಾಲೆನ್ಸ್ ಇದ್ರೂ ಸಿಗುತ್ತೆ 10 ಸಾವಿರ; ಹೇಗೆ ಗೊತ್ತಾ?

*OD ಸೌಲಭ್ಯ  5 ಸಾವಿರ ರೂ. ನಿಂದ 10 ಸಾವಿರ ರೂ.ಗೆ ಏರಿಕೆ
*ಎರಡು ಸಾವಿರ ರೂ.ತನಕ ಓವರ್ ಡ್ರಾಫ್ಟ್ ಸೌಲಭ್ಯ ಪಡೆಯಲು ಯಾವುದೇ ನಿಯಮ ಇಲ್ಲ
*OD ಸೌಲಭ್ಯ ಪಡೆಯಲು ಗರಿಷ್ಠ ವಯೋಮಿತಿಯನ್ನು60 ವರ್ಷದಿಂದ 65ಕ್ಕೆ ಹೆಚ್ಚಿಸಲಾಗಿದೆ.

PM Jan Dhan account holders can avail benefit of Rs 10 thousand without any balance how here is information anu
Author
Bangalore, First Published Dec 23, 2021, 6:06 PM IST

ನವದೆಹಲಿ (ಡಿ.23):  ಓದು-ಬರಹ ಬಾರದ ಗ್ರಾಮೀಣ ಭಾಗದ ಜನರನ್ನು ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ಕರೆತಂದ ಕೀರ್ತಿ ಪ್ರಧಾನ ಮಂತ್ರಿ ಜನ್ ಧನ್ ಯೋಜನೆಗೆ (PMJDY)ಸಲ್ಲುತ್ತದೆ. ಬ್ಯಾಂಕಿಂಗ್ ಸೇವೆಗಳ ಜೊತೆಗೆ ಈ ಖಾತೆ ತೆರೆದ ವ್ಯಕ್ತಿಗೆ ಅನೇಕ ಆರ್ಥಿಕ ನೆರವುಗಳು ಕೂಡ ಸಿಗುತ್ತವೆ. ಈ ಖಾತೆಯಿಂದ ಓವರ್ ಡ್ರಾಫ್ಟ್ (OD)ಸೌಲಭ್ಯವನ್ನು ಕೂಡ ಪಡೆಯಬಹುದು. ನಿಮ್ಮ ಜನ್ ಧನ್ ಖಾತೆಯಲ್ಲಿ ಶೂನ್ಯ ಬ್ಯಾಲೆನ್ಸ್ (zero balance)ಇದ್ದರೂ ನೀವು 10 ಸಾವಿರ ರೂ. ತನಕ ಓವರ್ ಡ್ರಾಫ್ಟ್ ಸೌಲಭ್ಯ ಪಡೆಯಲು ಸರ್ಕಾರ ಈಗ ಅವಕಾಶ ಕಲ್ಪಿಸಿದೆ. ಈ ಹಿಂದೆ 5,000ರೂ. ತನಕ ಮಾತ್ರ ಓವರ್ ಡ್ರಾಫ್ಟ್ ಸೌಲಭ್ಯ ಪಡೆಯಲು ಅವಕಾಶವಿದ್ದು, ಈಗ ಆ ಮಿತಿಯನ್ನು ಹೆಚ್ಚಿಸಲಾಗಿದೆ.

OD ಸೌಲಭ್ಯ ಪಡೆಯಲು ಅರ್ಹತೆಗಳೇನು?
ಎರಡು ಸಾವಿರ ರೂ. ತನಕ ಓವರ್ ಡ್ರಾಫ್ಟ್ ಸೌಲಭ್ಯ ಪಡೆಯಲು ಯಾವುದೇ ನಿಯಮ ಅಥವಾ ನಿರ್ಬಂಧಗಳನ್ನು ವಿಧಿಸಲಾಗಿಲ್ಲ. ಆದ್ರೆ ಅದಕ್ಕಿಂತ ಹೆಚ್ಚಿನ OD ಸೌಲಭ್ಯ ಪಡೆಯಲು ನೀವು ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕು. ನೀವು ಜನ್ ಧನ್ ಖಾತೆ ತೆರೆದು ಕನಿಷ್ಠ 6 ತಿಂಗಳಾಗಿದ್ರೆ ಮಾತ್ರ 10 ಸಾವಿರ ರೂ. OD ಸೌಲಭ್ಯ ಪಡೆಯಬಹುದು. ಒಂದು ವೇಳೆ ಆರು ತಿಂಗಳಾಗದಿದ್ರೆ 2000ರೂ. ತನಕ ಮಾತ್ರ OD ಸೌಲಭ್ಯ ಪಡೆಯಲು ಸಾಧ್ಯ. ಇನ್ನು OD ಸೌಲಭ್ಯ ಪಡೆಯಲು ಈ ಹಿಂದೆ 60 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿತ್ತು. ಆದ್ರೆ ಈಗ ಆ ಗರಿಷ್ಠ ವಯೋಮಿತಿಯನ್ನು 65 ವರ್ಷಕ್ಕೆ ಹೆಚ್ಚಿಸಲಾಗಿದೆ.

Changes In GST:ಜನವರಿ 1ರಿಂದ ಪರೋಕ್ಷ ತೆರಿಗೆ ಪದ್ಧತಿ ಬಿಗಿ; ಜಿಎಸ್ ಟಿಯಲ್ಲಿ 12 ಬದಲಾವಣೆಗಳು

ಈ ಖಾತೆಗೆ ಯಾವೆಲ್ಲ ಸರ್ಕಾರಿ ಯೋಜನೆಗಳ ಪ್ರಯೋಜನ ಸಿಗುತ್ತೆ?
- ಸರ್ಕಾರದ ವಿವಿಧ ಯೋಜನೆಗಳ ಧನಸಹಾಯವನ್ನು ನೇರವಾಗಿ ಫಲಾನುಭವಿಯ ಜನ್ ಧನ್ ಖಾತೆಗೆ ಜಮಾ ಮಾಡಲಾಗುತ್ತದೆ. ನೀವು ಸರ್ಕಾರದ ಯಾವುದಾದ್ರೂ ಯೋಜನೆ ಫಲಾನುಭವಿಯಾಗಿದ್ರೆ ಈಗ ಈ ಹಿಂದಿನಂತೆ ಹಣಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡಬೇಕಾದ ಅಗತ್ಯವಿಲ್ಲ. ಬದಲಿಗೆ ಹಣ ನೇರವಾಗಿ ನಿಮ್ಮ ಜನ್ ಧನ್ ಖಾತೆಗೆ ಜಮೆ ಆಗುತ್ತದೆ. 
-ಪಿಎಂಜಿಡಿವೈ ಖಾತೆಗಳಿಗೆ ನೇರ ಲಾಭ ವರ್ಗಾವಣೆ (DBT), ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY), ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY,ಅಟಲ್ ಪಿಂಚಣಿ ಯೋಜನೆ (APY),ಕಿರು ಘಟಕ ಅಭಿವೃದ್ಧಿ ಹಾಗೂ ಮರುಹಣಕಾಸು ಏಜೆನ್ಸಿ ಬ್ಯಾಂಕ್ (MUDRA)ಯೋಜನೆಯ ಪ್ರಯೋಜನಗಳು ಸಿಗುತ್ತವೆ. 
-ಜನ್‍ಧನ್ ಖಾತೆ ತೆರೆದವರಿಗೆ ರುಪೇ ಡೆಬೆಟ್ ಕಾರ್ಡ್ ನೀಡಲಾಗುತ್ತದೆ. ಇದರ ಮೂಲಕ ನೀವು ಎಟಿಎಂ ಕೇಂದ್ರಗಳಲ್ಲಿ ನಿಮ್ಮ ಖಾತೆಯಿಂದ ಹಣ ಡ್ರಾ ಮಾಡಿಕೊಳ್ಳಬಹುದು. ಅಲ್ಲದೆ, ಆನ್‍ಲೈನ್ ಅಥವಾ ಶಾಪ್‍ಗಳಲ್ಲಿ ವಸ್ತುಗಳನ್ನು ಖರೀದಿಸಿದ ಬಳಿಕ ರುಪೇ ಕಾರ್ಡ್ ಬಳಸಿ ಪೇಮೆಂಟ್ ಮಾಡಬಹುದಾಗಿದೆ.
-2018 ಆಗಸ್ಟ್ 28ರ ಬಳಿಕ ತೆರೆದ ಖಾತೆಗಳಿಗೆ ಆಕಸ್ಮಿಕ ವಿಮೆ ಸೌಲಭ್ಯ ಕಲ್ಪಿಸಲಾಗಿದೆ.
--ಈ ಖಾತೆ ಹೊಂದಿರೋರಿಗೆ 2ಲಕ್ಷ ರೂ. ತನಕ ಅಪಘಾತ ವಿಮೆ ಕವರೇಜ್ ನೀಡಲಾಗಿದೆ.
-ಖಾತೆದಾರ ಮೃತ್ಯುವಾದ್ರೆ 30ಸಾವಿರ ರೂ. ಜೀವ ವಿಮೆ ನೀಡಲಾಗುತ್ತದೆ. ಆದ್ರೆ ಈ ಸೌಲಭ್ಯ ಪಡೆಯಲು ಕೆಲವು ಷರತ್ತುಗಳಿದ್ದು, ಅವರ ಮೃತ್ಯು ಅದಕ್ಕೆ ಅನುಗುಣವಾಗಿ ಆಗಿದ್ರೆ ಮಾತ್ರ ವಿಮೆ ಹಣ ಸಿಗುತ್ತೆ.
-ಈ ಖಾತೆ ಹೊಂದಿರೋರು ದೇಶಾದ್ಯಂತ ಯಾವುದೇ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಬಹುದು.

Business 2021: ಕೊರೋನಾ ಕಲಿಸಿದ ಪಾಠ; ಆರೋಗ್ಯ ವಿಮೆ, ಟರ್ಮ್ ಇನ್ಯುರೆನ್ಸ್ ಗೆ ಭಾರೀ ಬೇಡಿಕೆ

ಈ ಯೋಜನೆ ಪ್ರಾರಂಭಗೊಂಡಿದ್ದು ಯಾವಾಗ?
ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ 2014ರ ಆಗಸ್ಟ್  15ರಂದು ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಪ್ರಕಟಿಸಿದರು. ಆ ಬಳಿಕ ಅದೇ ವರ್ಷ ಆಗಸ್ಟ್ 28ರಂದು ಈ ಯೋಜನೆಯನ್ನು ಜಾರಿ ಮಾಡಲಾಯಿತು. ಆರ್ಥಿಕ ಸೇವೆಗಳಾದ ಬ್ಯಾಂಕಿಂಗ್, ವಿಮೆ, ಪಿಂಚಣಿ ಮುಂತಾದವು ಜನರಿಗೆ ಸುಲಭವಾಗಿ ಲಭಿಸಬೇಕೆಂಬ ಉದ್ದೇಶದಿಂದ ಜನ್ ಧನ್ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. 

ಉಚಿತವಾಗಿ ಖಾತೆ ತೆರೆಯಬಹುದು
ಸಾಮಾನ್ಯವಾಗಿ ಯಾವುದೇ ಬ್ಯಾಂಕ್‍ನಲ್ಲಿ ನೀವು ಖಾತೆ ತೆರೆಯಬೇಕೆಂದ್ರೆ ನಿರ್ದಿಷ್ಟ ಶುಲ್ಕ ಪಾವತಿಸಬೇಕಿರುತ್ತದೆ. ಅಲ್ಲದೆ, ಖಾತೆಯಲ್ಲಿ ಕನಿಷ್ಠ ಇಂತಿಷ್ಟು ಹಣ (ಮಿನಿಮಮ್ ಬ್ಯಾಲೆನ್ಸ್) ಇರಲೇಬೇಕು ಎಂಬ ನಿಯಮವಿರುತ್ತೆ. ಆದ್ರೆ ಜನ್‍ಧನ್ ಯೋಜನೆಯಡಿಯಲ್ಲಿ ನೀವು ಬ್ಯಾಂಕ್ ಖಾತೆಯನ್ನು ಉಚಿತವಾಗಿ ತೆರೆಯಬಹುದು. ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇರಲೇಬೇಕು ಎಂದೇನಿಲ್ಲ. ಅಂದ್ರೆ ಶೂನ್ಯ ಬ್ಯಾಲೆನ್ಸ್ ಹಾಗೂ ಶೂನ್ಯ ಶುಲ್ಕಕ್ಕೆ ಖಾತೆ ತೆರೆಯಬಹುದು. ಕೆವೈಸಿ (ನೋ ಯುವರ್ ಕಸ್ಟಮರ್) ಕೂಡ ಸರಳವಾಗಿದೆ. 

Follow Us:
Download App:
  • android
  • ios