ಯುಪಿಐ ಎಟಿಎಂನಿಂದ ಹಣ ವಿತ್ ಡ್ರಾ ಮಾಡೋ ವಿಡಿಯೋ ಹಂಚಿಕೊಂಡ ಕೇಂದ್ರ ಸಚಿವ, ಭೇಷ್ ಎಂದ ನೆಟ್ಟಿಗರು!
ಕೇಂದ್ರ ಸಚಿವ ಪಿಯೂಷ್ ಗೋಯಲ್ ಎಕ್ಸ್ ನಲ್ಲಿ ಹಂಚಿಕೊಂಡಿರುವ ಯುಪಿಐ ಬಳಸಿ ಎಟಿಎಂನಿಂದ ವ್ಯಕ್ತಿಯೊಬ್ಬ ಹಣ ವಿತ್ ಡ್ರಾ ಮಾಡುತ್ತಿರುವ ವಿಡಿಯೋಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉದ್ಯಮಿ ಆನಂದ್ ಮಹೀಂದ್ರಾ ಸೇರಿದಂತೆ ಅನೇಕರು ಇದನ್ನು ತಮ್ಮ ಖಾತೆಗಳಲ್ಲಿ ಕೂಡ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ, ನೆಟ್ಟಿಗರು ಭಾರತದ ಬ್ಯಾಂಕಿಂಗ್ ವಲಯದ ಡಿಜಿಟಲೀಕರಣದ ವೇಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಕೂಡ.
ನವದೆಹಲಿ (ಸೆ.8): ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಎಕ್ಸ್ ನಲ್ಲಿ ಹಂಚಿಕೊಂಡ ವಿಡಿಯೋಗೆ ನೆಟ್ಟಿಗರಿಂದ ಭಾರೀ ಸ್ಪಂದನೆ ಸಿಕ್ಕಿದ್ದು, ವೈರಲ್ ಆಗಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ನಗದು ವಿತ್ ಡ್ರಾ ಮಾಡಲು ಯುಪಿಐ-ಎಟಿಎಂ ಬಳಸುತ್ತಿದ್ದಾನೆ. ಈ ಯಂತ್ರದಿಂದ ನಗದು ವಿತ್ ಡ್ರಾ ಮಾಡಲು ಎಟಿಎಂ ಕಾರ್ಡ್ ಬೇಕಿಲ್ಲ ಬದಲಿಗೆ ಯುಪಿಐ ಬಳಸಿ ಮಾಡಬಹುದು. ಕೇಂದ್ರ ಸಚಿವರು ಈ ವಿಡಿಯೋ ಪೋಸ್ಟ್ ಮಾಡಿ 'ಯುಪಿಐ ಎಟಿಎಂ- ಫಿನ್ ಟೆಕ್ ಭವಿಷ್ಯ ಇಲ್ಲಿದೆ!' ಎಂಬ ಶೀರ್ಷಿಕೆ ನೀಡಿದ್ದರು. ಈ ವಿಡಿಯೋದಲ್ಲಿ ಯುಪಿಐ ಎಟಿಎಂನಿಂದ ನಗದು ಹೇಗೆ ವಿತ್ ಡ್ರಾ ಮಾಡೋದು ಎಂಬುದನ್ನು ತೋರಿಸಲಾಗಿದೆ. ಒಬ್ಬ ವ್ಯಕ್ತಿ ಈ ಪ್ರಕ್ರಿಯೆ ಬಗ್ಗೆ ವಿವರಣೆ ನೀಡುತ್ತಿದ್ದು, ಈ ಯಂತ್ರದಿಂದ ಯುಪಿಐ ಬಳಸಿ 500ರೂ. ವಿತ್ ಡ್ರಾ ಮಾಡೋದನ್ನು ಕೂಡ ತೋರಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುವ ಉದ್ಯಮಿ ಆನಂದ್ ಮಹೀಂದ್ರಾ ಕೂಡ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಅಲ್ಲದೆ, ಹಣಕಾಸು ಸೇವೆಗಳ ಡಿಜಿಟಲೀಕರಣದಲ್ಲಿ ಭಾರತದ ವೇಗದ ಬಗ್ಗೆ ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ.
'ಈ ಯುಪಿಐ ಎಟಿಎಂ ಮುಂಬೈನಲ್ಲಿ ಸೆಪ್ಟೆಂಬರ್ 5ರಂದು ನಡೆದ ಜಾಗತಿಕ ಫಿನ್ ಟೆಕ್ ಸಮಾವೇಶದಲ್ಲಿ ಅನಾವರಣಗೊಂಡಿತ್ತು. ಹಣಕಾಸು ಸೇವೆಗಳನ್ನು ಭಾರತ ಡಿಜಿಟಲೀಕರಣಗೊಳಿಸುತ್ತಿರುವ ವೇಗ ಹಾಗೂ ಅವುಗಳನ್ನು ಕಾರ್ಪೋರೇಟ್ ಕೇಂದ್ರೀಕೃತ ಕ್ಕೆ ಕ್ರೆಡಿಟ್ ಕಾರ್ಡ್ ಕಂಪನಿಗಳಿಗೆ ಎಚ್ಚರಿಕೆ ಕರೆಗಂಟೆ) ವಿರುದ್ಧವಾಗಿ ಗ್ರಾಹಕ ಕೇಂದ್ರೀಕೃತ ವ್ಯವಸ್ಥೆಯನ್ನಾಗಿ ರೂಪಿಸುತ್ತಿರುವುದು ನಿಜಕ್ಕೂ ಬೆರಗುಗೊಳಿಸುತ್ತಿದೆ' ಎಂದು ಎಕ್ಸ್ ನಲ್ಲಿ ಆನಂದ್ ಮಹೀಂದ್ರಾ ಬರೆದುಕೊಂಡಿದ್ದಾರೆ.
ಭಾರತದಲ್ಲಿ UPI ಎಟಿಎಂ ಕ್ರಾಂತಿ, ಡೆಬಿಟ್ ಕಾರ್ಡ್ ಇಲ್ಲದೆ ಸ್ಕ್ಯಾನ್ ಮೂಲಕ ಹಣ ವಿಥ್‌ಡ್ರಾ ಮಾಡಿ!
ಯುಪಿಐ ಎಟಿಎಂ ವಿಡಿಯೋ ವೈರಲ್
ಈ ವಿಡಿಯೋ ಪೋಸ್ಟ್ ಆದ ಕೆಲವೇ ಗಂಟೆಗಳಲ್ಲಿ 7.1 ಲಕ್ಷಕ್ಕಿಂತಲೂ ಹೆಚ್ಚು ಬಾರಿ ವೀಕ್ಷಿಸಲ್ಪಟ್ಟಿದೆ. ಇನ್ನು 18 ಸಾವಿರ ಲೈಕ್ಸ್ ಸಿಕ್ಕಿದೆ. ಜನರು ಈ ವಿಡಿಯೋಗೆ ನಾನಾ ರೀತಿಯ ಕಾಮೆಂಟ್ ಗಳನ್ನು ಕೂಡ ಪೋಸ್ಟ್ ಮಾಡಿದ್ದಾರೆ.
ಎಕ್ಸ್ ಬಳಕೆದಾರರು ಯುಪಿಐ ಎಟಿಎಂ ಬಗ್ಗೆ ಏನ್ ಹೇಳಿದ್ದಾರೆ?
ಎಕ್ಸ್ ಬಳಕೆದಾರರು ಯುಪಿಐ ಎಟಿಎಂ ಬಗ್ಗೆ ದೊಡ್ಡ ಪ್ರಮಾಣದಲ್ಲಿ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. 'ಫಿನ್ ಟೆಕ್ ನಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಇದು ದೊಡ್ಡ ಹೆಜ್ಜೆ' ಎಂದು ಒಬ್ಬರುಎಕ್ಸ್ ಬಳಕೆದಾರರು ಹೇಳಿದ್ದಾರೆ. 'ಯುಪಿಐ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಇದು ಹೊಸ ಹೆಜ್ಜೆಯಾಗಿದೆ. ಈ ಹೊಸ ವ್ಯವಸ್ಥೆ ಯಾವುದೇ ಭೌತಿಕ ಕಾರ್ಡ್ ಇಲ್ಲದೆ ಯಾವುದೇ ಸಮಯದಲ್ಲಿ ಹಣ ವಿತ್ ಡ್ರಾ ಮಾಡಲು ನಿಮಗೆ ನೆರವು ನೀಡುತ್ತದೆ' ಎಂದು ಇನ್ನೊಬ್ಬರು ಹೇಳಿದ್ದಾರೆ. 'ಇದು ನಿಜಕ್ಕೂ ಅದ್ಭುತ' ಎಂದಿದ್ದಾರೆ ಮತ್ತೊಬ್ಬರು. 'ಮಹತ್ವದ ಸುದ್ದಿ' ಎಂದು ಇನ್ನೊಬ್ಬರು ಬರೆದಿದ್ದಾರೆ.
ಏನಿದು ಯುಪಿಐ-ಎಟಿಎಂ?
ಯುಪಿಐ-ಎಟಿಎಂ ಸೇವೆಯನ್ನು ಇಂಟರ್ ಆಪರೇಬಲ್ ಕಾರ್ಡ್ ರಹಿತ ನಗದು ವಿತ್ ಡ್ರಾವಲ್ (ICCW) ಎಂದು ಕರೆಯಲಾಗುತ್ತದೆ. ಭಾರತೀಯ ರಾಷ್ಟ್ರೀಯ ಪಾವತಿಗಳ ನಿಗಮದ (ಎನ್ ಪಿಸಿಐ) ಸಹಭಾಗಿತ್ವದಲ್ಲಿ ಹಿಟ್ಯಾಚಿ ಪೇಮೆಂಟ್ ಸರ್ವೀಸ್ ಭಾರತದ ಮೊದಲ ಯುಪಿಐ-ಎಟಿಎಂ ಅನ್ನು ಸೆಪ್ಟೆಂಬರ್ 5ರಂದು ಬಿಡುಗಡೆಗೊಳಿಸಿತ್ತು. ಈ ಯಂತ್ರದ ಮೂಲಕ ನಿರ್ದಿಷ್ಟ ಬ್ಯಾಂಕ್ ಗಳ ಗ್ರಾಹಕರು 'ಕ್ಯುಆರ್ ಆಧಾರಿತ ನಗದುರಹಿತ ವಿತ್ ಡ್ರಾ' ಕೂಡ ಮಾಡಬಹುದಾಗಿದೆ.
ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದಿದ್ದರೂ ಕ್ರೆಡಿಟ್ ಕಾರ್ಡ್ ರೀತಿಯಲ್ಲೇ ಯುಪಿಐ ಪಾವತಿ ಸಾಧ್ಯ; ಆರ್ ಬಿಐ ಸುತ್ತೋಲೆ
ನಗದು ವಿತ್ ಡ್ರಾ ಹೇಗೆ?
UPI ಪೇಮೆಂಟ್ ಬಳಕೆ ಮಾಡುತ್ತಿರುವ ಗ್ರಾಹಕರು ಯಾವುದೇ ಎಟಿಎಂ ಕಾರ್ಡ್ ಇಲ್ಲದೆ ಎಟಿಎಂನಿಂದ ಸುಲಭವಾಗಿ ಹಣ ಪಡೆದುಕೊಳ್ಳಬಹುದು. UPI ATM ಮಶಿನ್ ಬಳಿ ತೆರಳಿ ಹಣ ವಿತ್‌ಡ್ರಾ ಆಯ್ಕೆ ಕ್ಲಿಕ್ ಮಾಡಬೇಕು. ಈ ವೇಳೆ ವಿತ್‌ಡ್ರಾ ಮಾಡಬೇಕಿರುವ ಹಣ ಎಷ್ಟು ಅನ್ನೋದನ್ನು ಮಶಿನ್ ಕೇಳಲಿದೆ. ಇದರ ಜೊತೆಗೆ ಆಯ್ಕೆಯನ್ನೂ ನೀಡಲಿದೆ. 500, 1000, 2000 ರೂಪಾಯಿ ಆಯ್ಕೆ ನೀಡಲಿದೆ. ಈ ಆಯ್ಕೆಯಲ್ಲಿ ಪಡೆಯಬೇಕಾಗಿರುವ ಹಣ ಕ್ಲಿಕ್ ಮಾಡಿದಾಗ ಸ್ಕ್ಯಾನ್ ಕೋಡ್ ತೆರೆದುಕೊಳ್ಳಲಿದೆ.
ಈ ವೇಳೆ ನಿಮ್ಮ ಮೊಬೈಲ್‌ನಲ್ಲಿರುವ ಯುಪಿಐ ಸ್ಕ್ಯಾನರ್ ಒಪನ್ ಮಾಡಿ ಸ್ಕ್ಯಾನ್ ಮಾಡಬೇಕು. ಇದು ಮರ್ಚೆಂಟ್ ಸ್ಕ್ಯಾನ್ ರೀತಿ ಇರುವುದಿಲ್ಲ. UPI ATM ಸ್ಕ್ಯಾನ್ ಕೋಡ್ ಸ್ಕ್ಯಾನ್ ಮಾಡಿದ ಬೆನ್ನಲ್ಲೇ ನೀವು ನಗದು ಹಣ ಪಡೆಯುತ್ತಿದ್ದೀರಿ ಅನ್ನೋನೋಟಿಫಿಕೇಶನ್ ನಿಮಗೆ ಕಾಣಲಿದೆ. ನೀವು UPI ATM ಮಶಿನ್‌ನಲ್ಲಿ ಎಷ್ಟುರೂಪಾಯಿ ಬೇಕೆಂದು ಕ್ಲಿಕ್ ಮಾಡಿದ್ದೀರೋ, ಅಷ್ಟು ಹಣವನ್ನು ನಮೂದಿಸಿ. ಬಳಿಕ UPI ಪಿನ್ ಕೋಡ್ ಹಾಕಿದರೆ ನಿಮ್ಮ ಹಣ UPI ATM ಮಶಿನ್‌ಗೆ ವರ್ಗಾವಣೆಯಾಗಲಿದೆ. ಕ್ಷಣಾರ್ಧದಲ್ಲೇ UPI ATM ಮಶಿನ್ ನಿಮಗೆ ಹಣ ನೀಡಲಿದೆ.