ನವದೆಹಲಿ(ಫೆ.01):  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮಧ್ಯಂತರ ಬಜೆಟ್ ನ್ನು ಹಂಗಾಮಿ ವಿತ್ತ ಸಚಿವ ಪಿಯೂಷ್ ಗೋಯೆಲ್ ಮಂಡಿಸುತ್ತಿದ್ದಾರೆ.

ಬಜೆಟ್ ಮಂಡನೆ ಆರಂಭವಾಗುತ್ತಿದ್ದಂತೇ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ನೆನೆದ ಗೋಯೆಲ್, ಜೇಟ್ಲಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು.

ನಂತರ ಕೇಂದ್ರ ಸರ್ಕಾರದ 5 ವರ್ಷಗಳ ಸಾಧನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಗೋಯೆಲ್, ಕಳೆದ 5 ವರ್ಷಗಳಲ್ಲಿ ಭಾರತದ ಅಭಿವೃದ್ಧಿಯ ನಾಗಾಲೋಟಕ್ಕೆ ಜಗತ್ತು ಬೆರಗಾಗಿದೆ ಎಂದು ಹೇಳಿದರು. ಪ್ರತಿಯೊಂದೂ ಕ್ಷೇತ್ರದಲ್ಲೂ ಭಾರತ ಅಭಿವೃದ್ಧಿ ಹೊಂದುತ್ತಿದ್ದು, ನವ ಭಾರತದ ನಿರ್ಮಾಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.

ಎನ್‌ಡಿಎ ಸರ್ಕಾರ ಜಾರಿಗೆ ತಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಸುಧಾರಣೆಗಳು ದೇಶದ ಅರ್ಥ ವ್ಯವಸ್ಥೆಯ ಗತಿಯನ್ನೇ ಬದಲಾಯಿಸಿದ್ದು, ಅರ್ಥ ವ್ಯವಸ್ಥೆಯ ಬೀಗ ಇದೀಗ ಜನಸಾಮಾನ್ಯರ ಕೈಯಲ್ಲಿದೆ ಎಂದು ಹಂಗಾಮಿ ವಿತ್ತ ಸಚಿವರು ಹೇಳಿದರು.

ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವಲ್ಲಿ ಎನ್‌ಡಿಎ ಸರ್ಕಾರ ಯಶಸ್ವಿಯಾಗಿದ್ದು, ಪೈಸೆ ಪೈಸೆ ಕೂಡ ದೇಶದ ಅಭಿವೃದ್ಧಿಗೆ ವ್ಯಯವಾಗುತ್ತಿದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು.

ಹಂಗಾಮಿ ವಿತ್ತ ಸಚಿವರಿಂದ ಬಜೆಟ್ ಮಂಡನೆ ಮುಂದುವರೆದಿದೆ.