ಪೆಟ್ರೋಲ್ ಬೆಲೆ 99.99 ರೂ. ಗಿಂತ ಜಾಸ್ತಿ ಯಾಕಾಗಲ್ಲಾ?! ಸಾಮಾಜಿಕ ಜಾಲತಾಣಗಳಲ್ಲಿ ಹೊಸದೊಂದು ಚಾಲೆಂಜ್! ಪೆಟ್ರೋಲ್ ದರ 100 ರೂ. ಗಡಿ ದಾಟೋದಿಲ್ವಾ?!ಮಶೀನ್‌ಗಳಲ್ಲಿ 3 ಅಂಕಿ ತೈಲದರ ತೋರಿಸಲು ಸಾಧ್ಯವಿಲ್ಲ!ಮಶೀನ್‌ಗಳಲ್ಲಿ ಕೇವಲ 2 ಅಂಕಿ ತೈಲದರ ಮಾತ್ರ ತೋರಿಸಲು ಸಾಧ್ಯ
ನವದೆಹಲಿ(ಸೆ.15): ತೈಲದರ ಏರಿಕೆಯಿಂದ ಜನಸಾಮಾನ್ಯ ಕಂಗಾಲಾಗಿರೋದು ಸತ್ಯ. ದಿನೇ ದಿನೇ ಏರುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆ ಕಂಡು ಸಾಮಾನ್ಯ ನಾಗರಿಕ ದಂಗಾಗಿ ಹೋಗಿದ್ದಾನೆ. ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಹೊಸದೊಂದು ಚಾಲೆಂಜ್ ಹರಿದಾಡುತ್ತಿದ್ದು, ಪೆಟ್ರೋಲ್ ದರ 99.99 ರೂ ಗಿಂತ ಜಾಸ್ತಿಯಾಗಲ್ಲ ಎಂದು ಹಲವರು ಹೇಳುತ್ತಿದ್ದಾರೆ.
ಯಾಕೆ ಪೆಟ್ರೋಲ್ ದರ 100 ರೂ. ಆಗಲ್ಲ?:
ಇಂತದ್ದೊಂದು ಚಾಲೆಂಜ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಕಾರಣವೂ ಇದೆ. ಒಂದು ವೇಳೆ ಪೆಟ್ರೋಲ್ ದರ 100 ರೂ. ತಲುಪಿದರೂ ಪೆಟ್ರೋಲ್ ಬಂಕ್ ಗಳಲ್ಲಿರುವ ಸದ್ಯದ ಮಶೀನ್‌ಗಳು ಲೀಟರ್ ಪೆಟ್ರೋಲ್ ದರ 100 ರೂ. ಎಂದು ತೋರಿಸಲು ಸಾಧ್ಯವಿಲ್ಲ.
ಕಾರಣ ಸದ್ಯದ ಮಶೀನ್‌ಗಳು ಕೇವಲ 2 ಅಂಕಿ (ಉದಾಹರಣೆಗೆ- 83.94 ರೂ.) ಮಾತ್ರ ತೋರಿಸಲು ಶಕ್ತವಾಗಿವೆ. ಒಂದು ವೇಳೆ ಪೆಟ್ರೋಲ್ ಬೆಲೆ 100 ರೂ. ತಲುಪಿದರೆ (ಉದಾಹರಣೆಗೆ- 100.33 ರೂ.) ಸದ್ಯದ ಮಶೀನ್‌ಗಳು ಪೆಟ್ರೋಲ್ ದರವನ್ನು ಕೇವಲ ಲೀಟರ್‌ಗೆ 0.33 ಎಂದಷ್ಟೇ ತೋರಿಸುತ್ತವೆ.
ಹೀಗಾಗಿ ಒಂದು ವೇಳೆ ತೈಲದರ 100 ರೂ. ತಲುಪಿದರೆ ತೈಲದರ ಬಿತ್ತರಿಸುವ ಪೆಟ್ರೋಲ್ ಬಂಕ್ ಮಶೀನ್‌ಗಳನ್ನು ಅಪ್ಡೇಟ್ ಮಾಡಬೇಕಾಕುತ್ತದೆ ಎಂಬುದು ಪೆಟ್ರೋಲ್ ಬಂಕ್ ಮಾಲೀಕರ ಅಂಬೋಣ.
ವಿಶೇಷ ಪೆಟ್ರೋಲ್ ಕತೆ ಏನು?:
ಇನ್ನು ಸಾಮಾನ್ಯ ಪೆಟ್ರೋಲ್ ಬೆಲೆಯೇ ರಾಜಧಾನಿ ನವದೆಹಲಿಯಲ್ಲಿ 81.63 ರೂ ಆಗಿದೆ. ಇನ್ನು ಹಿಂದೂಸ್ಥಾನ್ ಪೆಟ್ರೋಲಿಯಂ 99 ಆಕ್ಟೇನ್ ಎಂಬ ವಿಶೇಷ ಪೆಟ್ರೋಲ್ ನ್ನು ಸಾಮಾನ್ಯ ಪೆಟ್ರೋಲ್ ದರಕ್ಕಿಂತ 20 ರೂ . ಹೆಚ್ಚಿನ ದರದಲ್ಲಿ ಮಾರುತ್ತಿದೆ.
ಅಂದರೆ ಈ ವಿಶೇಷ ಪೆಟ್ರೋಲ್ ಬೆಲೆ ಈಗಾಗಲೇ 100 ರೂ. ಗಡಿ ದಾಟಿದೆ. ಆದರೆ ಪೆಟ್ರೋಲ್ ಬಂಕ್ ಮಶೀನ್‌ಗಳಲ್ಲಿ ಇದರ ಬೆಲೆ ತೋರಿಸಲು ಸಾಧ್ಯವಿರದ ಕಾರಣ ಕೆಲವು ಪೆಟ್ರೋಲ್ ಬಂಕ್‌ಗಳು ತಮ್ಮ ಮಶೀನ್‌ಗಳನ್ನು ಅಪ್ಡೇಟ್ ಮಾಡಿ 3 ಅಂಕಿಗಳ ತೈಲದರವನ್ನು ತೋರಿಸುತ್ತಿವೆ.
