ಇನ್ನೂ 10 ವರ್ಷ ಪೆಟ್ರೋಲ್‌ ಜಿಎಸ್‌ಟಿಗಿಲ್ಲ: ಸುಶೀಲ್‌| ಜಿಎಸ್‌ಟಿ ಪರಿಧಿಗೆ ತಂದರೆ ರಾಜ್ಯಗಳಿಗೆ 2 ಲಕ್ಷ ಕೋಟಿ ನಷ್ಟ

ನವದೆಹಲಿ(ಮಾ.25): ಪೆಟ್ರೋಲ್‌ ಹಾಗೂ ಡೀಸೆಲ್‌ ಅನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ತರಲು ಇನ್ನೂ 8ರಿಂದ 10 ವರ್ಷಗಳ ಕಾಲ ಆಗುವುದಿಲ್ಲ. ಏಕೆಂದರೆ ರಾಜ್ಯ ಸರ್ಕಾರಗಳು ವಾರ್ಷಿಕ 2 ಲಕ್ಷ ಕೋಟಿ ರು. ಆದಾಯ ಕಳೆದುಕೊಳ್ಳಲು ಸಿದ್ಧವಿಲ್ಲ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಹಾಗೂ ಜಿಎಸ್‌ಟಿ ಮಂಡಳಿ ಮಾಜಿ ಸಂಚಾಲಕ ಸುಶೀಲ್‌ ಕುಮಾರ್‌ ಮೋದಿ ತಿಳಿಸಿದ್ದಾರೆ.

ಪೆಟ್ರೋಲ್‌, ಡೀಸೆಲ್‌ ಬೆಲೆ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಈ ತೈಲಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು ಎಂಬ ಬೇಡಿಕೆ ವ್ಯಕ್ತವಾಗುತ್ತಿದೆ. ಅಲ್ಲದೆ, ಮುಂದಿನ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಗಳವಾರ ಹೇಳಿದ್ದರು. ಆದ್ದರಿಂದ ಸುಶೀಲ್‌ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಹಣಕಾಸು ಮಸೂದೆಯ ಪರವಾಗಿ ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಯಿಂದ ಕೇಂದ್ರ- ರಾಜ್ಯ ಸರ್ಕಾರಗಳಿಗೆ ವಾರ್ಷಿಕ 5 ಲಕ್ಷ ಕೋಟಿ ರು. ಆದಾಯ ಬರುತ್ತಿದೆ. ಒಂದು ವೇಳೆ ಈ ತೈಲವನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಗರಿಷ್ಠ ಶೇ.28ರಷ್ಟುತೆರಿಗೆ ವಿಧಿಸಬೇಕಾಗುತ್ತದೆ. ಸದ್ಯ ಲೀಟರ್‌ ತೈಲದ ಬೆಲೆ 60 ರು. ತೆರಿಗೆ ಇದೆ. ಅದನ್ನು 14 ರು.ಗೆ ಇಳಿಸಬೇಕಾಗುತ್ತದೆ. ಇದರಿಂದ ಸರ್ಕಾರಕ್ಕೆ ತೆರಿಗೆ ಸಂಪನ್ಮೂಲ ಕಡಿಮೆಯಾಗುತ್ತದೆ ಎಂದು ವಿವರಿಸಿದರು.

ಕೆಲವರು ಜಿಎಸ್‌ಟಿಯನ್ನು ಗಬ್ಬರ್‌ ಸಿಂಗ್‌ ಟ್ಯಾಕ್ಸ್‌ ಎಂದು ಲೇವಡಿ ಮಾಡುತ್ತಾರೆ. ಎಲ್ಲ ಪಕ್ಷಗಳ ಸರ್ಕಾರಗಳೂ ಜಿಎಸ್‌ಟಿ ಮಂಡಳಿಯಲ್ಲಿವೆ. ಆದರೆ ಅದರ ವಿನ್ಯಾಸವನ್ನೇಕೆ ಯಾವುದೇ ಸರ್ಕಾರ ವಿರೋಧಿಸಿಲ್ಲ ಎಂದು ಪ್ರಶ್ನಿಸಿದರು.