* ದೇಶಾದ್ಯಂತ ಪೆಟ್ರೋಲ್‌ 6ರೂ., ಡೀಸೆಲ್‌ 12ರಷ್ಟುಇಳಿಕೆ* ಕೇಂದ್ರ ಇಳಿಕೆ ಮಾಡಿದ್ದಕ್ಕಿಂತ ಹೆಚ್ಚು ದರ ಕಡಿತ* ಹೆಚ್ಚು ತೆರಿಗೆ ಇರುವ ರಾಜ್ಯಗಳಲ್ಲಿ ಹೆಚ್ಚು ಇಳಿಕೆ

ನವದೆಹಲಿ(ನ.05): ಕೇಂದ್ರ ಸರ್ಕಾರ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕ ಇಳಿಸಿದ ಬೆನ್ನಲ್ಲೇ, 8 ಬಿಜೆಪಿ ಆಡಳಿತಾರೂಢ ರಾಜ್ಯಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಮೌಲ್ಯ ವರ್ಧಿತ ತೆರಿಗೆಗಳನ್ನು ಇಳಿಕೆ ಮಾಡಲಾಗಿದೆ.

ಈ ಪ್ರಕಾರ ತ್ರಿಪುರ, ಮಣಿಪುರ, ಅಸ್ಸಾಂ, ಗೋವಾ, ಉತ್ತರಾಖಂಡ, ಕರ್ನಾಟಕ ರಾಜ್ಯಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು 7 ರು.ನಷ್ಟುಕಡಿತ ಮಾಡುವುದಾಗಿ ಘೋಷಣೆ ಮಾಡಿವೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್‌ ಠಾಕೂರ್‌, ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಮೌಲ್ಯವರ್ಧಿತ ತೆರಿಗೆ ಇಳಿಕ ಕುರಿತ ಅಧಿಸೂಚನೆಯನ್ನು ಶೀಘ್ರವೇ ಹೊರಡಿಸಲಾಗುತ್ತದೆ ಎಂದಿದ್ದಾರೆ. ಮತ್ತೊಂದೆಡೆ ಈ ಬಗ್ಗೆ ಬುಧವಾರ ಟ್ವೀಟ್‌ ಮಾಡಿರುವ ಬಿಜೆಪಿ ಸಂಸದ ಸುಶಿಲ್‌ ಕುಮಾರ್‌ ಮೋದಿ, ಬಿಹಾರದಲ್ಲೂ ಪೆಟ್ರೋಲ್‌ ದರ 1.50 ರು. ಮತ್ತು ಡೀಸೆಲ್‌ ದರವನ್ನು 1.90 ರು.ನಷ್ಟುಇಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಆದರೆ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್‌, ದೇಶದ ಜನತೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ತೆರಿಗೆ ಪರಾವಲಂಬನೆ ಕುರಿತಾದ ಸತ್ಯದ ಕನ್ನಡಿಯನ್ನು ಹಿಡಿದಿದ್ದಾರೆ. ಹಾಗಾಗಿ ದರ ಇಳಿಸಿದೆ ಎಂದು ಟೀಕಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿದ ಕಾಂಗ್ರೆಸ್‌ ಪ್ರಧಾನ ವಕ್ತಾರ ರಣದೀಪ್‌ ಸುರ್ಜೇವಾಲ, ‘ಮೋದಿ ಸರ್ಕಾರದ ತೆರಿಗೆ ಪರಾವಲಂಬನೆ ಕುರಿತ ಸತ್ಯದ ಕನ್ನಡಿಯನ್ನು ಹಿಡಿದ ದೇಶದ ಜನತೆಗೆ ಧನ್ಯವಾದಗಳು. ಆದರೆ 2014ರಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರೆಲ್‌ ಕಚ್ಚಾತೈಲ ಬೆಲೆ 105.71 ಡಾಲರ್‌ ಇದ್ದಾಗ ದೇಶದಲ್ಲಿ ಪೆಟ್ರೋಲ್‌ ಬೆಲೆ 71.41 ರು. ಹಾಗೂ ಡೀಸೆಲ್‌ ದರ 55.49 ರು ಇತ್ತು. ಇದೀಗ ಕಚ್ಚಾತೈಲ ಬೆಲೆ 82 ಡಾಲರ್‌ಗೆ ಲಭ್ಯವಾಗುತ್ತಿದೆ’ ಎಂದು ಹೇಳಿದ್ದಾರೆ.\

16 ರಾಜ್ಯಗಳಲ್ಲೂ ತೈಲ ಸುಂಕ ಇಳಿಕೆ

ಕೇಂದ್ರ ಸರ್ಕಾರ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಪೆಟ್ರೋಲ್‌ಗೆ 5 ರು. ಹಾಗೂ ಡೀಸೆಲ್‌ಗೆ 10 ರು. ಇಳಿಕೆ ಮಾಡಿದ ಬೆನ್ನಲ್ಲೇ, ಬಿಜೆಪಿ ಆಡಳಿತದ 15 ರಾಜ್ಯ, ಎನ್‌ಡಿಎ ಆಡಳಿತದ 1 ರಾಜ್ಯ ಹಾಗೂ ಇತರೆ 1 ರಾಜ್ಯ ಅಬಕಾರಿ ಸುಂಕ ಕಡಿಮೆ ಮಾಡಿವೆ.

ಬಿಜೆಪಿ ಆಡಳಿತದಲ್ಲಿರುವ ಅಸ್ಸಾಂ, ತ್ರಿಪುರ, ಮಣಿಪುರ, ಕರ್ನಾಟಕ, ಗೋವಾ, ಗುಜರಾತ್‌, ಸಿಕ್ಕಿಂ, ಮಿಜೋರಾಂ, ಉತ್ತರ ಪ್ರದೇಶ, ಹರ್ಯಾಣ, ಪುದುಚೆರಿ ರಾಜ್ಯಗಳು ಅಬಕಾರಿ ಸುಂಕವನ್ನು ಲೀಟರ್‌ಗೆ 7 ರು. ಕಡಿಮೆ ಮಾಡಿವೆ. ಅರುಣಾಚಲ ಪ್ರದೇಶ ಶೇ.5.5ರಷ್ಟು, ಉತ್ತರಾಖಂಡ ಸರ್ಕಾರ 2 ರು.,ಮಧ್ಯಪ್ರದೇಶ ಸರ್ಕಾರ 1.50 ರು.ನಷ್ಟುಕಡಿತ ಮಾಡಿದೆ. ಇನ್ನು ಎನ್‌ಡಿಎ ಆಡಳಿತವಿರುವ ಬಿಹಾರದಲ್ಲಿ 3 ರು. ಕಡಿಮೆ ಮಾಡಲಾಗಿದೆ. ಇನ್ನು ಒಡಿಶಾ ಸರ್ಕಾರ ಲೀ.ಗೆ 3 ರು.ನಷ್ಟುತೆರಿಗೆ ಕಡಿತ ಮಾಡಿದೆ.

ಬಿಜೆಪಿ ಆಡಳಿತದ ರಾಜ್ಯಗಳ ಪೈಕಿ ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ಮಾತ್ರ ಇನ್ನೂ ಕಡಿತ ಆಗಿಲ್ಲ.