ನವದೆಹಲಿ[ಸೆ.19]: ಸೌದಿ ಅರೇಬಿಯಾದ ಕಚ್ಚಾತೈಲ ಘಟಕ ಮತ್ತು ಸಂಸ್ಕರಣಾ ಘಟಕಗಳ ಮೇಲಿನ ಇತ್ತೀಚಿನ ಡ್ರೋನ್‌ ದಾಳಿಯಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಭಾರೀ ಪ್ರಮಾಣದಲ್ಲಿ ಏರಿಕೆ ಕಾಣಬಹುದು ಎಂಬ ಭೀತಿ ನಿಜವಾಗುವಂತೆ ಕಾಣುತ್ತಿದೆ.

ಬುಧವಾರ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಕ್ರಮವಾಗಿ ಲೀ.ಗೆ 24 ಪೈಸೆ ಮತ್ತು 25 ಪೈಸೆ ಏರಿಕೆಯಾಗಿದೆ. ಈ ಏರಿಕೆ ಪ್ರಮಾಣ ಅತ್ಯಲ್ಪ ಎನ್ನಿಸಿದರೂ, ದರ ಏರಿಕೆಯ ಪರ್ವ ಆರಂಭವಾಗಿರುವುದರ ಸೂಚಕ ಇದು ಎಂದು ಹೇಳಲಾಗಿದೆ. ಜೊತೆಗೆ ಇದು ಕಳೆದ ಜುಲೈ 5ರ ಬಳಿಕ ಆದಂಥ ಗರಿಷ್ಠ ಏರಿಕೆಯಾಗಿದೆ. ಬಜೆಟ್‌ನಲ್ಲಿ ಇಂಧನ ಮೇಲಿನ ಸುಂಕವನ್ನು 2.50ಕ್ಕೆ ಹೆಚ್ಚಿಸಿದ ಬಳಿಕ ಇದೇ ಮೊದಲ ಬಾರಿಗೆ ಇಂಧನ ದರ ಹೆಚ್ಚಳ ಮಾಡಲಾಗಿದೆ.

ವಿಶ್ವದಲ್ಲೇ ಅತ್ಯಂತ ದೊಡ್ಡ ತೈಲ ಬಾವಿ ಮತ್ತು ಸಂಸ್ಕರಣಾ ಘಟಕಗಳಿಗೆ ಬೆಂಕಿ ಬಿದ್ದ ಬಳಿಕ, ಕಚ್ಚಾ ತೈಲ ಉತ್ಪಾದನೆ ಕಡಿಮೆ ಆಗಿದೆ. ಹೀಗಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಶೇ.20ರಷ್ಟುಭಾರೀ ಏರಿಕೆ ಕಂಡಿತ್ತು.