ನವದೆಹಲಿ(ಫೆ.15): ಸತತ 6ನೇ ದಿನವಾದ ಭಾನುವಾರ ಕೂಡಾ ತೈಲ ಕಂಪನಿಗಳು ಪೆಟ್ರೋಲ್‌ ಬೆಲೆಯನ್ನು ಲೀ.ಗೆ 29 ಪೈಸೆ ಮತ್ತು ಡೀಸೆಲ್‌ ಬೆಲೆಯನ್ನು 32 ಪೈಸೆಯಷ್ಟುಏರಿಸಿವೆ. ಇದರೊಂದಿಗೆ ದೇಶದಲ್ಲಿ ಪೆಟ್ರೋಲ್‌ ದರ 100ರ ಗಡಿಗೆ ಬಂದಿದ್ದರೆ, ಡೀಸೆಲ್‌ 90ರ ಗಡಿ ದಾಟುವ ಮೂಲಕ ಗ್ರಾಹಕರ ಜೀವನವನ್ನು ಮತ್ತಷ್ಟುದುಬಾರಿಯಾಗಿಸಿದೆ.

ದೇಶದಲ್ಲೇ ರಾಜಸ್ಥಾನದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಅತಿ ಹೆಚ್ಚು ಅಂದರೆ ಶೇ.36ರಷ್ಟುವ್ಯಾಟ್‌ ಮತ್ತು ಪ್ರತಿ 1000 ಲೀ.ಗೆ 1500 ರು.ವರೆಗೆ ಸೆಸ್‌ ಹಾಕಲಾಗುತ್ತಿದೆ. ಇದರ ಪರಿಣಾಮವಾಗಿ ರಾಜ್ಯದ ಶ್ರೀಗಂಗಾನಗರದಲ್ಲಿ ಭಾನುವಾರ ಪೆಟ್ರೋಲ್‌ ದರ 99.29 ರು.ಗೆ ತಲುಪಿದ್ದರೆ, ಡೀಸೆಲ್‌ ದರ 91.17 ರು.ತಲುಪಿದೆ. ಇದು ದೇಶದಲ್ಲೇ ಎರಡೂ ಮಾದರಿಯ ತೈಲೋತ್ಪನ್ನಗಳ ಗರಿಷ್ಠ ದರವಾಗಿದೆ. ಇನ್ನು ಬ್ರಾಂಡೆಡ್‌ ಪೆಟ್ರೋಲ್‌ ದರ 102.07 ರು. ಮತ್ತು ಡೀಸೆಲ್‌ ದರ 94.83 ರು.ಗೆ ತಲುಪಿದೆ.

ಉಳಿದಂತೆ ಪೆಟ್ರೋಲ್‌ ದರ ಮುಂಬೈನಲ್ಲಿ 95.21 ರು.,ಬೆಂಗಳೂರಿನಲ್ಲಿ 91.70 ರು., ಚೆನ್ನೈನಲ್ಲಿ 90.96 ರು.,ಕೋಲ್ಕತಾದಲ್ಲಿ 90.01 ಮತ್ತು ದೆಹಲಿಯಲ್ಲಿ 88.73 ರು.ಗೆ ತಲುಪಿದೆ. ಇನ್ನು ಡೀಸೆಲ್‌ ದರ ಮುಂಬೈನಲ್ಲಿ 86.04 ರು. ಬೆಂಗಳೂರಿನಲ್ಲಿ 83.81 ರು.ಗೆ ಚೆನ್ನೈನಲ್ಲಿ 79.06 ರು.ಗೆ., ಕೋಲ್ಕತಾದಲ್ಲಿ 82.65 ರು.ಗೆ ಮತ್ತು ಚೆನ್ನೈನಲ್ಲಿ 84.16 ರು.ಗೆ ತಲುಪಿದೆ.

ಈ ನಡುವೆ ಮಹಾರಾಷ್ಟ್ರದ ಪ್ರಭಾನಿ ಜಿಲ್ಲೆಯಲ್ಲಿ ಎಂಜಿನ್‌ ಸ್ವಚ್ಛಕ್ಕೆ ಇರುವ ಮಿಶ್ರಣಗಳ ಜೊತೆ ಬರುವ ಪೆಟ್ರೋಲ್‌ ದರ ಲೀ.ಗೆ 1​01 ರು. ತಲುಪಿದೆ.