ನವದೆಹಲಿ [ಡಿ.08]: ಕುಸಿದಿರುವ ಆರ್ಥಿಕತೆಯನ್ನು ಮೇಲಕ್ಕೆತ್ತುವ ಉದ್ದೇಶದಿಂದ ಕಾರ್ಪೋರೆಟ್‌ ತೆರಿಗೆ ದರಗಳನ್ನು ಕಡಿತಗೊಳಿಸಿದ್ದ ಕೇಂದ್ರ ಸರ್ಕಾರ ಇದೀಗ ವೈಯಕ್ತಿಕ ಆದಾಯ ತೆರಿಗೆ ದರಗಳನ್ನು ಇಳಿಸುವ ಕುರಿತು ಗಂಭೀರ ಚಿಂತನೆಯಲ್ಲಿ ತೊಡಗಿದೆ. ಈ ಕುರಿತು ಸ್ವತಃ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್‌ ಅವರೇ ಸುಳಿವು ನೀಡಿದ್ದಾರೆ.

ಹಲವು ವಿಚಾರಗಳ ಬಗ್ಗೆ ಸರ್ಕಾರ ಗಮನಹರಿಸುತ್ತಿದೆ. ಅದರಲ್ಲಿ ಆದಾಯ ತೆರಿಗೆ ದರ ಕಡಿತವೂ ಒಂದು ಎಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶನಿವಾರ ನಿರ್ಮಲಾ ಅವರು ತಿಳಿಸಿದರು. ಅದು ಎಷ್ಟುಬೇಗ ಆಗಬಹುದು ಎಂಬ ಪ್ರಶ್ನೆಗೆ, ಬಜೆಟ್‌ವರೆಗೂ ಕಾಯಿರಿ ಎಂದು ಉತ್ತರ ನೀಡಿದರು.

ಲಾಸ್ಟ್ ಮಿನಿಟ್ ಟ್ವಿಸ್ಟ್, ಉಪಚುನಾವಣೆ ಪ್ರಭಾವಿ ಅಭ್ಯರ್ಥಿ ಮನೆ ಮೇಲೆ ಐಟಿ ದಾಳಿ...

ಇದರಿಂದಾಗಿ ಬರುವ ಫೆ.1ರಂದು ಮಂಡನೆಯಾಗಲಿರುವ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ವೈಯಕ್ತಿಕ ಆದಾಯ ತೆರಿಗೆ ದರಗಳನ್ನು ಕಡಿತಗೊಳಿಸುವುದು ಖಚಿತ ಎಂಬ ನಿರೀಕ್ಷೆ ಗರಿಗೆದರುವಂತೆ ಮಾಡಿದೆ.

ದೇಶದ ಒಟ್ಟು ಆರ್ಥಿಕಾಭಿವೃದ್ಧಿ ದರ ಜುಲೈ- ಸೆಪ್ಟೆಂಬರ್‌ ಅವಧಿಯಲ್ಲಿ ಆರು ವರ್ಷಗಳ ಕನಿಷ್ಠವಾದ ಶೇ.4.5ಕ್ಕೆ ಇಳಿಕೆಯಾಗಿದೆ. ಹೀಗಾಗಿ ವೈಯಕ್ತಿಕ ಆದಾಯ ತೆರಿಗೆ ದರಗಳನ್ನು ಕಡಿತಗೊಳಿಸುವ ಮೂಲಕ ಜನರ ಕೈಗೆ ಹಣ ಸಿಗುವಂತೆ ಮಾಡಬೇಕು. ತನ್ಮೂಲಕ ಅದು ವೆಚ್ಚವಾಗುವಂತೆ ನೋಡಿಕೊಳ್ಳಬೇಕು ಎಂಬ ಸಲಹೆಗಳು ವ್ಯಕ್ತವಾಗಿದ್ದವು.