UPI ವಹಿವಾಟುಗಳ ಮೇಲೆ ವ್ಯಾಪಾರಿ ರಿಯಾಯಿತಿ ದರಗಳನ್ನು (MDR) ಪುನಃ ಪರಿಚಯಿಸುವ ವದಂತಿಗಳ ಹಿನ್ನೆಲೆಯಲ್ಲಿ Paytm ನ ಪೋಷಕ ಕಂಪನಿ One97 ಕಮ್ಯುನಿಕೇಷನ್ಸ್ ಷೇರುಗಳು ಶೇ. 10 ರಷ್ಟು ಕುಸಿದಿವೆ. ಹಣಕಾಸು ಸಚಿವಾಲಯ ಈ ವದಂತಿಗಳನ್ನು ತಳ್ಳಿಹಾಕಿದೆ.
ಮುಂಬೈ (ಜೂ.12): ಡಿಜಿಟಲ್ ಪೇಮೆಂಟ್ ಫ್ಲಾಟ್‌ಫಾರ್ಮ್ ಪೇಟಿಎಂನ ಪೋಷಕ ಕಂಪನಿಯಾದ One97 ಕಮ್ಯುನಿಕೇಷನ್ಸ್ ಷೇರುಗಳು ಗುರುವಾರ (ಜೂನ್ 12) ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಶೇ. 10 ರಷ್ಟು ಕುಸಿದು 864.20 ಕ್ಕೆ ತಲುಪಿದ್ದು, ಕಳೆದೊಂದು ವರ್ಷದಲ್ಲಿ ಒಂದೇ ದಿನದಲ್ಲಿ ಅತ್ಯಂತ ತೀವ್ರ ಕುಸಿತ ಇದಾಗಿದೆ.
ಏಕೀಕೃತ ಪಾವತಿ ಇಂಟರ್ಫೇಸ್ (UPI) ವಹಿವಾಟುಗಳ ಮೇಲೆ ವ್ಯಾಪಾರಿ ರಿಯಾಯಿತಿ ದರಗಳನ್ನು (MDR) ಪುನಃ ಪರಿಚಯಿಸುವ ಸಾಧ್ಯತೆಯ ಕುರಿತು ಹಲವಾರು ಸುದ್ದಿ ವರದಿಗಳನ್ನು ಹಣಕಾಸು ಸಚಿವಾಲಯ ತಳ್ಳಿಹಾಕಿದ ನಂತರ ಈ ಕುಸಿತ ಕಂಡುಬಂದಿದೆ. MDR ಅಥವಾ ಮರ್ಚೆಂಟ್ ಡಿಸ್ಕೌಂಟ್ ರೇಟ್ ಎಂದರೆ ವ್ಯಾಪಾರಿಗಳು ಡೆಬಿಟ್/ಕ್ರೆಡಿಟ್ ಕಾರ್ಡ್ ಅಥವಾ UPI ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಲು ಬ್ಯಾಂಕುಗಳು ಅಥವಾ ಪಾವತಿ ಸೇವಾ ಪೂರೈಕೆದಾರರಿಗೆ ಪಾವತಿಸುವ ಹಣ.
'ಎಕ್ಸ್' ನಲ್ಲಿ ಪೋಸ್ಟ್ ಮಾಡಿರುವ ಹಣಕಾಸು ಸಚಿವಾಲಯ, ಯುಪಿಐ ವಹಿವಾಟುಗಳ ಮೇಲೆ ಯಾವುದೇ ಎಂಡಿಆರ್ ಅನ್ನು ಪರಿಚಯಿಸಿಲ್ಲ ಎಂದು ಪುನರುಚ್ಚರಿಸಿದ್ದು, ನಡೆಯುತ್ತಿರುವ ಊಹಾಪೋಹಗಳನ್ನು ಅಲ್ಲಗಳೆದಿದೆ.
"ಯುಪಿಐ ವಹಿವಾಟುಗಳ ಮೇಲೆ ಎಂಡಿಆರ್ ವಿಧಿಸಲಾಗುತ್ತದೆ ಎಂಬ ಊಹಾಪೋಹಗಳು ಮತ್ತು ಹೇಳಿಕೆಗಳು ಸಂಪೂರ್ಣವಾಗಿ ಸುಳ್ಳು, ಆಧಾರರಹಿತ ಮತ್ತು ದಾರಿತಪ್ಪಿಸುವಂಥವು. ಇಂತಹ ಆಧಾರರಹಿತ ಮತ್ತು ಸೆನ್ಸೇಷನ್ ಉಂಟುಮಾಡುವ ಊಹಾಪೋಹಗಳು ನಮ್ಮ ನಾಗರಿಕರಲ್ಲಿ ಅನಗತ್ಯ ಅನಿಶ್ಚಿತತೆ, ಭಯ ಮತ್ತು ಅನುಮಾನವನ್ನು ಉಂಟುಮಾಡುತ್ತವೆ" ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ. "ಯುಪಿಐ ಮೂಲಕ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ" ಎಂದು ಅದು ಹೇಳಿದೆ.
ಡಿಜಿಟಲ್ ಪಾವತಿಗಳನ್ನು ಅಳವಡಿಸಿಕೊಳ್ಳಲು ಸರ್ಕಾರ ನೀಡಿದ ಆದೇಶದ ಮೇರೆಗೆ, ಜನವರಿ 2020 ರಿಂದ UPI ವಹಿವಾಟುಗಳಿಗೆ ಶೂನ್ಯ MDR ಪದ್ಧತಿ ಜಾರಿಯಲ್ಲಿದೆ. ಕಡಿಮೆ ಮೌಲ್ಯದ ವಹಿವಾಟುಗಳನ್ನು ಮತ್ತಷ್ಟು ಉತ್ತೇಜಿಸಲು, ಸರ್ಕಾರವು ಮಾರ್ಚ್ 2019 ರಲ್ಲಿ ಪ್ರೋತ್ಸಾಹಕ ಯೋಜನೆಯನ್ನು ಪರಿಚಯಿಸಿತು, 2,000 ರೂ.ಗಿಂತ ಕಡಿಮೆ UPI ಪಾವತಿಗಳಿಗೆ 0.15% ಪ್ರೋತ್ಸಾಹಕವನ್ನು ನೀಡಿತು.
ಮಾರ್ಚ್‌ನಲ್ಲಿ, ಡಿಜಿಟಲ್ ಪಾವತಿ ಸಂಸ್ಥೆಗಳನ್ನು ಪ್ರತಿನಿಧಿಸುವ ಸಂಸ್ಥೆಯಾದ ಪೇಮೆಂಟ್ಸ್ ಕೌನ್ಸಿಲ್ ಆಫ್ ಇಂಡಿಯಾ, ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು, ಯುಪಿಐ ಮತ್ತು ರುಪೇ ಡೆಬಿಟ್ ಕಾರ್ಡ್ ವಹಿವಾಟುಗಳ ಮೇಲೆ ಎಂಡಿಆರ್ ಅನ್ನು ಮತ್ತೆ ಪರಿಚಯಿಸುವಂತೆ ಒತ್ತಾಯಿಸಿತು. ದೊಡ್ಡ ವ್ಯಾಪಾರಿಗಳಿಗೆ ಮಾಡುವ ಯುಪಿಐ ಪಾವತಿಗಳ ಮೇಲೆ 0.3% ಎಂಡಿಆರ್ ಮತ್ತು ಎಲ್ಲಾ ವ್ಯಾಪಾರಿ ವರ್ಗಗಳಲ್ಲಿ ರುಪೇ ಡೆಬಿಟ್ ಕಾರ್ಡ್ ವಹಿವಾಟುಗಳ ಮೇಲೆ ನಾಮಮಾತ್ರ ಎಂಡಿಆರ್ ಅನ್ನು ಕೌನ್ಸಿಲ್ ಪ್ರಸ್ತಾಪಿಸಿತು.
PhonePe ಮತ್ತು Google Pay ಪ್ರಸ್ತುತ ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದರೆ, Navi, BHIM, Super.Money, ಮತ್ತು CRED ನಂತಹ ಹೊಸ ಸಂಸ್ಥೆಗಳು ಕ್ಯಾಶ್‌ಬ್ಯಾಕ್ ಬಹುಮಾನಗಳು ಮತ್ತು ಇತರ ಬಳಕೆದಾರ ಪ್ರೋತ್ಸಾಹಕಗಳನ್ನು ನೀಡುವ ಮೂಲಕ ನಿಧಾನವಾಗಿ ತಮ್ಮ ಹೆಜ್ಜೆಗುರುತನ್ನು ವಿಸ್ತರಿಸುತ್ತಿವೆ.
ಪೇಟಿಎಂ ಇತ್ತೀಚೆಗೆ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದ್ದು, ಬಳಕೆದಾರರು ತಮ್ಮ ಫೋನ್ ಸಂಖ್ಯೆಗಳನ್ನು ಬಹಿರಂಗಪಡಿಸದೆಯೇ ಪಾವತಿಗಳನ್ನು ಮಾಡಲು ಅನುವು ಮಾಡಿಕೊಡುವ ಮೂಲಕ ವೈಯಕ್ತಿಕಗೊಳಿಸಿದ UPI ಐಡಿಗಳನ್ನು ರಚಿಸಲು ಅನುಮತಿಸುತ್ತದೆ. UPI ವಹಿವಾಟುಗಳ ಸಮಯದಲ್ಲಿ ಬಳಕೆದಾರರ ಗೌಪ್ಯತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಈ ಕ್ರಮ ಹೊಂದಿದೆ. ಒನ್ 97 ಕಮ್ಯುನಿಕೇಷನ್ಸ್ ಲಿಮಿಟೆಡ್ ಷೇರುಗಳು ಪ್ರಸ್ತುತ ಶೇ. 5.71 ರಷ್ಟು ಇಳಿಕೆಯಾಗಿ ರೂ. 902.80 ಕ್ಕೆ ವಹಿವಾಟು ನಡೆಸುತ್ತಿವೆ.
