ಪ್ಯಾನ್- ಆಧಾರ್ ಲಿಂಕ್ ಗೆ 2023ರ ಮಾರ್ಚ್ 31 ಗಡುವು; ಮತ್ತೊಮ್ಮೆ ನೆನಪಿಸಿದ ಐಟಿ ಇಲಾಖೆ
ಆಧಾರ್ ನೊಂದಿಗೆ ಪ್ಯಾನ್ ಲಿಂಕ್ ಮಾಡಲು 2023ರ ಮಾರ್ಚ್ ಅಂತಿಮ ಗಡುವು. ಇನ್ನೂ ಈ ಕೆಲಸ ಮಾಡದವರಿಗೆ ಆದಾಯ ತೆರಿಗೆ ಇಲಾಖೆ ಟ್ವೀಟ್ ಮೂಲಕ ಮತ್ತೊಮ್ಮೆ ನೆನಪಿಸಿದೆ. ಒಂದು ವೇಳೆ ಅಂತಿಮ ದಿನಾಂಕದೊಳಗೆ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡದಿದ್ರೆ ಪ್ಯಾನ್ ನಿಷ್ಕ್ರಿಯಗೊಳ್ಳಲಿದೆ. ಹಾಗಾದ್ರೆ ಆಧಾರ್ ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ.
ನವದೆಹಲಿ (ಡಿ.29): ಇನ್ನೂ ಆಧಾರ್ ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡದವರಿಗೆ ಆದಾಯ ತೆರಿಗೆ ಇಲಾಖೆ ಮತ್ತೊಮ್ಮೆ ಎಚ್ಚರಿಕೆ ನೀಡಿದೆ. 2023ರ ಮಾರ್ಚ್ ಕೊನೆಯೊಳಗೆ ಆಧಾರ್ ನೊಂದಿಗೆ ಲಿಂಕ್ ಮಾಡದ ಪ್ಯಾನ್ ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸಲಾಗೋದು ಎಂದು ಆದಾಯ ತೆರಿಗೆ ಇಲಾಖೆ ಡಿ.24ರಂದು ಟ್ವೀಟ್ ಮಾಡಿದೆ. ಈಗ ನೀವು ಆಧಾರ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡಲು 1000ರೂ. ದಂಡ ಪಾವತಿಸಬೇಕು. ದಂಡವಿಲ್ಲದೆ ಆಧಾರ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಸಿಬಿಡಿಟಿ 2022ರ ಮಾರ್ಚ್ 31ರ ತನಕ ಸಮಯಾವಕಾಶ ನೀಡಿತ್ತು. ಆ ಬಳಿಕ ಅಂದ್ರೆ 2022ರ ಏಪ್ರಿಲ್ 1ರ ಬಳಿಕ ಆಧಾರ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡಲು 500ರೂ. ಹಾಗೂ 2022ರ ಜುಲೈ 1ರ ಬಳಿಕ 1000ರೂ. ದಂಡವನ್ನು ಸಿಬಿಡಿಟಿ ನಿಗದಿಪಡಿಸಿದೆ. ಈಗಾಗಲೇ ಕೇಂದ್ರ ಸರ್ಕಾರ ಪ್ಯಾನ್ -ಆಧಾರ್ ಜೋಡಣೆ ಅಂತಿಮ ಗಡುವನ್ನುಅನೇಕ ಬಾರಿ ವಿಸ್ತರಿಸಿದೆ ಕೂಡ. ಒಮ್ಮೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ನಿಮಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಲು ಸಾಧ್ಯವಾಗೋದಿಲ್ಲ.ಅಲ್ಲದೆ, ಬ್ಯಾಂಕ್ ಖಾತೆ ತೆರೆಯಲು, ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಲು ಹಾಗೂ ಡಿಮ್ಯಾಟ್ ಖಾತೆ ತೆರೆಯಲು ಸಾಧ್ಯವಾಗೋದಿಲ್ಲ. ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು ಕೂಡ ತೊಂದರೆ ಎದುರಾಗಲಿದೆ.
'ಆದಾಯ ತೆರಿಗೆ ಕಾಯ್ದೆ 1961ರ ಪ್ರಕಾರ ವಿನಾಯ್ತಿ ವರ್ಗಕ್ಕೆ ಸೇರದ ಎಲ್ಲ ಪ್ಯಾನ್ ಕಾರ್ಡ್ ದಾರರು ಪ್ಯಾನ್ ಕಾರ್ಡ್ ಅನ್ನು ಆಧಾರ್ ನೊಂದಿಗೆ 31.3.2023ರೊಳಗೆ ಲಿಂಕ್ ಮಾಡೋದು ಕಡ್ಡಾಯ. 1.04.2023ರಿಂದ ಲಿಂಕ್ ಆಗದ ಪ್ಯಾನ್ ನಿಷ್ಕ್ರಿಯವಾಗಲಿದೆ. ಯಾವುದು ಕಡ್ಡಾಯವೋ ಅದು ಅಗತ್ಯ ಕೂಡ. ಹಾಗಾಗಿ ತಡ ಮಾಡಬೇಡಿ, ಇಂದೇ ಲಿಂಕ್ ಮಾಡಿ' ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ.
ಸರ್ಟಿಫಿಕೇಟ್ ಆಫ್ ಕವರೇಜ್ ಅಂದ್ರೇನು? ಆನ್ ಲೈನ್ ಅರ್ಜಿ ಸಲ್ಲಿಕೆ ಹೇಗೆ?
ಯಾರಿಗೆ ವಿನಾಯ್ತಿ ಇದೆ?
ಕೇಂದ್ರ ಹಣಕಾಸು ಸಚಿವಾಲಯ ಮೇ 2017ರಲ್ಲಿ ಹೊರಡಿಸಿದ ಅಧಿಸೂಚನೆ ಪ್ರಕಾರ ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ ಹಾಗೂ ಮೇಘಾಲಯದಲ್ಲಿ ವಾಸಿಸುವ ವ್ಯಕ್ತಿಗಳು ವಿನಾಯ್ತಿ ವರ್ಗದಡಿಯಲ್ಲಿ ಬರುತ್ತಾರೆ. ಆದಾಯ ತೆರಿಗೆ ಕಾಯ್ದೆ 1961ರ ಅನ್ವಯ ಇವರನ್ನು ಅನಿವಾಸಿಗಳು ಎಂದು ಪರಿಗಣಿಸಲಾಗಿದೆ. ಇನ್ನು 80 ವರ್ಷ ಅಥವಾ ಮೇಲ್ಪಟ್ಟ ಹಾಗೂ ಭಾರತದ ನಾಗರಿಕರಲ್ಲದವರನ್ನು ಕೂಡ ವಿನಾಯ್ತಿ ವರ್ಗದಲ್ಲಿ ಸೇರಿಸಲಾಗಿದೆ.
ಆಧಾರ್ ಕಾರ್ಡ್‌ನೊಂದಿಗೆ ಪ್ಯಾನ್ ಲಿಂಕ್ ಹೇಗೆ?
* ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್ ಸೈಟ್ https://www.incometaxindiaefiling.gov.in ಲಾಗಿನ್ ಆಗಿ.
* ಹೋಮ್ ಪೇಜ್ ನಲ್ಲಿ' Quick Links'ಅಡಿಯಲ್ಲಿ 'Link Aadhaar'ಆಯ್ಕೆ ಮೇಲೆ ಕ್ಲಿಕ್ ಮಾಡಿ.
* ಈಗ ಹೊಸ ಪುಟ ತೆರೆದುಕೊಳ್ಳುತ್ತದೆ. ಇದರಲ್ಲಿ ಪಾನ್ ನಂಬರ್, ಆಧಾರ್ ಸಂಖ್ಯೆ ಮತ್ತು ಪೂರ್ಣ ಹೆಸರನ್ನು ನಮೂದಿಸಿ (ಆಧಾರ್ ಕಾರ್ಡ್‌ನಲ್ಲಿ ನೀಡಿರುವಂತೆ).
* ಪುಟದಲ್ಲಿ ಕಾಣಿಸುವ ಕ್ಯಾಪ್ಚಾ ಕೋಡ್ ನಮೂದಿಸಿ
* ಸಂಬಂಧಿತ ಆಯ್ಕೆಯನ್ನು ಆರಿಸಿ ಮತ್ತು ವೆಬ್‌ಪುಟದ ಕೆಳಭಾಗದಲ್ಲಿರುವ 'ಲಿಂಕ್ ಆಧಾರ್' ಬಟನ್ ಅನ್ನು ಕ್ಲಿಕ್ ಮಾಡಿ.
ಜ.1ರಿಂದ ಹೊಸ ವಿಮಾ ನಿಯಮ ಜಾರಿ; ವಿಮೆ ಖರೀದಿಗೆ ಕೆವೈಸಿ ಕಡ್ಡಾಯ
ದಂಡ ಪಾವತಿಸೋದು ಹೇಗೆ?
ಆಧಾರ್ -ಪ್ಯಾನ್ ಲಿಂಕ್ ಮಾಡುವ ಮನವಿ ಸಲ್ಲಿಕೆಯಾಗುವ ಮುನ್ನ ದಂಡ ಕಟ್ಟಬೇಕು. ನೀವು ಈಗ ಆಧಾರ್ -ಪ್ಯಾನ್ ಲಿಂಕ್ ಮಾಡೋದಾದ್ರೆ 1000 ರೂ. ವಿಳಂಬ ಶುಲ್ಕ ಪಾವತಿಸಬೇಕು.
ಹಂತ 1: ಆಧಾರ್-ಪ್ಯಾನ್ ಲಿಂಕ್ ಮನವಿ ಸಲ್ಲಿಕೆ ಪ್ರಕ್ರಿಯೆ ಮುಂದುವರಿಸಲು https://onlineservices.tin.egov-nsdl.com/etaxnew/tdsnontds.jsp ಭೇಟಿ ನೀಡಿ.
ಹಂತ 2: ಆಧಾರ್-ಪ್ಯಾನ್ ಲಿಂಕ್ ಮನವಿ ಸಲ್ಲಿಕೆಗೆ ಚಲನ್ ಸಂಖ್ಯೆ/ಐಟಿಎನ್ ಎಸ್ 280 ಅಡಿಯಲ್ಲಿಪ್ರಕ್ರಿಯೆ ಮುಂದುವರಿಕೆ (Proceed under CHALLAN NO./ITNS 280) ಮೇಲೆ ಕ್ಲಿಕ್ ಮಾಡಿ.
ಹಂತ3: ಈಗ tax applicable ಆಯ್ಕೆ ಮಾಡಿ.
ಹಂತ 4: ಒಂದೇ ಚಲನ್ ನಲ್ಲಿ ಶುಲ್ಕ ಪಾವತಿಯನ್ನು ಮೈನರ್ ಹೆಡ್ 500 (ಶುಲ್ಕ) ಹಾಗೂ ಮೇಜರ್ ಹೆಡ್ 0021 (ಕಂಪನಿಗಳನ್ನು ಹೊರತುಪಡಿಸಿದ ಆದಾಯ ತೆರಿಗೆ ) ಅಡಿಯಲ್ಲಿ ಮಾಡಿರೋದನ್ನು ಖಚಿತಪಡಿಸಿ.
ಹಂತ 5: ಈಗ ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ನಲ್ಲಿ ಯಾವುದು ನಿಮ್ಮ ಪಾವತಿ ವಿಧಾನ ಎಂಬುದನ್ನು ಆಯ್ಕೆ ಮಾಡಿ.