* ವಿದೇಶಿ ಸಾಲದ ಸುಳಿಯಲ್ಲಿ ಪಾಕ್‌* ದಿವಾಳಿಯಾಗುತ್ತಿದೆ ಪಾಕಿಸ್ತಾನ!* ಪಾಕ್‌ ಖಜಾನೆ ಖಾಲಿ: ಅಂತಾರಾಷ್ಟ್ರೀಯ ನೆರವಿನತ್ತ ಪಾಕ್‌ ಕಣ್ಣು

ಇಸ್ಲಮಾಬಾದ್(ಡಿ,07): ಪಾಕಿಸ್ತಾನವನ್ನು (Pakistan) ‘ನಯಾ ಪಾಕಿಸ್ತಾನ’ ಮಾಡುತ್ತೇನೆಂದು ಭರವಸೆ ನೀಡಿ ಪ್ರಧಾನಿ ಪಟ್ಟಕ್ಕೇರಿದವರು ಇಮ್ರಾನ್‌ ಖಾನ್‌(Imran Khan). ಆದರೆ ಖಾನ್‌ ಪ್ರಧಾನಿಯಾದ ಬಳಿಕ ಉಗ್ರರ ಸ್ವರ್ಗ ಪಾಕಿಸ್ತಾನದ ಬೊಕ್ಕಸ ಬರಿದಾಗುತ್ತಲೇ ಇದೆ. ಸದ್ಯ ಪಾಕ್‌ನಲ್ಲಿ ಹಣದುಬ್ಬರ (Inflamation In Pakistan) ಮಿತಿ ಮೀರುತ್ತಿದ್ದು, ಶೇ.9.2ರಿಂದ ಶೇ.11.5ಕ್ಕೇರಿದೆ. ಈ ಮೂಲಕ 20 ತಿಂಗಳ ಗರಿಷ್ಠಕ್ಕೆ ಏರಿಕೆಯಾಗಿದೆ. ಹಣದುಬ್ಬರ ತಗ್ಗಿಸಲು ಪಾಕ್‌ ರಿಸರ್ವ್ ಬ್ಯಾಂಕ್‌ (Pakistan Reserve Bank) ಬಡ್ಡಿದರ ಏರಿಸಿದೆ. ಈ ನಡುವೆಯೇ ಸರ್ಕಾರಕ್ಕೆ ವೇತನ ಕೊಡಲೂ ಹಣವಿಲ್ಲದ ದುಸ್ಥಿತಿ ಎದುರಾಗಿದ್ದು, ಸರ್ಕಾರಿ ನೌಕರರೇ ಬಹಿರಂಗವಾಗಿ ಪಾಕ್‌ ಸರ್ಕಾರದ ಮಾನವನ್ನು ಹರಾಜು ಹಾಕಿದ್ದಾರೆ. ಇದು ಪಾಕಿಸ್ತಾನ ದಿವಾಳಿಯ ಅಂಚಿನಲ್ಲಿದೆ ಎನ್ನುವುದನ್ನು ಮತ್ತೆ ಸಾಬೀತು ಮಾಡಿದೆ. ಈ ಹಿನ್ನೆಲೆಯಲ್ಲಿ ನಿಜಕ್ಕೂ ಪಾಕಿಸ್ತಾನದಲ್ಲಿ ಏನಾಗ್ತಿದೆ? ಪಾಕ್‌ ದಿವಾಳಿ ಸ್ಥಿತಿಗೆ ಕಾರಣ ಏನು? ಈ ಕುರಿತ ಮಾಹಿತಿ ಇಲ್ಲಿದೆ.

ವಿದೇಶಿ ನೆರವೊಂದೇ ಗತಿ!

ಮತ್ತೊಮ್ಮೆ ನೆರೆಯ ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು (Economic Crisis in Pakistan) ತೀವ್ರವಾಗಿದೆ. ದೇಶದ ಖಜಾನೆ ಬರಿದಾಗಿದೆ. ಅಭಿವೃದ್ಧಿ ಕಾರ‍್ಯಗಳು ಪಕ್ಕಕ್ಕಿರಲಿ, ನಿತ್ಯದ ಖರ್ಚುಗಳನ್ನು ನಿಭಾಯಿಸಲೂ ಹಣವಿಲ್ಲದಂತಾಗಿದೆ. ಸರ್ಕಾರಿ ನೌಕರರು ಮೂರು ತಿಂಗಳಿಂದ ವೇತನವಾಗಿಲ್ಲ ಎಂದು ಬಹಿರಂಗವಾಗಿ ಅಂಗಲಾಚುತ್ತಿದ್ದಾರೆ. ಈ ನಡುವೆ ಪಾಕಿಸ್ತಾನಕ್ಕೆ ಮುಂದಿನ ಎರಡು ವರ್ಷದಲ್ಲಿ 51.6 ಬಿಲಿಯನ್‌ ಡಾಲರ್‌ (3.83 ಲಕ್ಷ ಕೋಟಿ) ಮೌಲ್ಯದ ವಿದೇಶಿ ನೆರವು ತೀರಾ ಅಗತ್ಯವಿದೆ. 2021-22ರಲ್ಲಿ 23.6 ಬಿಲಿಯನ್‌ ಡಾಲರ್‌ (1.77 ಲಕ್ಷ ಕೋಟಿ ರು.) ಮತ್ತು 2022-23ರಲ್ಲಿ 28 ಬಿಲಿಯನ್‌ ಡಾಲರ್‌ (2.10 ಲಕ್ಷ ಕೋಟಿ) ನಷ್ಟು ಹಣಕಾಸಿನ ನೆರವು ಅಗತ್ಯವಿದೆ ಎಂದು ವಿಶ್ವ ಹಣಕಾಸು ಸಂಸ್ಥೆ ಅಂದಾಜಿಸಿದೆ.

Pakistan: ಶ್ರೀಲಂಕಾ ಪ್ರಜೆಯನ್ನು ಕೊಂದು ಸುಟ್ಟ ಘಟನೆ, 100 ಕ್ಕೂ ಹೆಚ್ಚು ಜನರನ್ನು ಬಂಧಿಸಿದ ಪಾಕ್

ಸಾಲ ಕೇಳಲೂ ಅರ್ಹತೆ ಕಳೆದುಕೊಂಡ ಪಾಕ್‌!

ಇತ್ತೀಚೆಗೆ ವಿಶ್ವ ಬ್ಯಾಂಕ್‌ (World Bank) ಅಂತಾರಾಷ್ಟ್ರೀಯ ಸಾಲದ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ ಅತಿ ಹೆಚ್ಚು ವಿದೇಶಿ ಸಾಲ ಪಡೆದ ಟಾಪ್‌ 10 ದೇಶಗಳ ಪೈಕಿ ಪಾಕಿಸ್ತಾನವೂ ಒಂದು. ಅಂದರೆ ದ್ವಿಪಕ್ಷೀಯ ಸಾಲಗಾರರು ಸೀಮಿತ ಅವಧಿಯಲ್ಲಿ, ಸಾಲ ಸೇವೆಗಳನ್ನು ಸ್ಥಗಿತಗೊಳಿಸಲು ಪಾಕಿಸ್ತಾನ ಅರ್ಹವಾಗಿದೆ.

ಪಾಕ್‌ ವಿದೇಶಿ ಸಾಲ ಎಷ್ಟಿದೆ?

2020 108.53 ಬಿಲಿಯನ್‌ ಡಾಲರ್‌ (8.15 ಲಕ್ಷ ಕೋಟಿ)

2019 100.83 ಬಿಲಿಯನ್‌ ಡಾಲರ್‌ (7.57 ಲಕ್ಷ ಕೋಟಿ)

ಕುಸಿದ ಕ್ರೆಡಿಟ್‌ ರೇಟ್‌

ಸಾಲದ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನಕ್ಕೆ ಕ್ರೆಡಿಟ್‌ ರೇಟಿಂಗ್‌ ಏಜೆನ್ಸಿಗಳು ಅತ್ಯಂತ ಕಡಿಮೆ ರೇಟಿಂಗ್ಸ್‌ ನೀಡುವ ಸಾಧ್ಯತೆ ಇದೆ. ಇದರಿಂದಾಗಿ ನಗದು ಕೊರತೆಯಿರುವ ದೇಶಕ್ಕೆ ಅಂತಾರಾಷ್ಟ್ರೀಯ ಬಾಂಡ್‌ ವಿತರಣೆಯ ಮೂಲಕ ಹಣ ಸಂಗ್ರಹಿಸಲೂ ಕಷ್ಟವಾಗುತ್ತದೆ. ಜೊತೆಗೆ ಹೂಡಿಕೆ ಮೇಲೂ ನೇತ್ಯಾತ್ಮಕ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ.

Pakistan Embassy: 3 ತಿಂಗಳಿಂದ ವೇತನ ಸಿಕ್ಕಿಲ್ಲ, ಪಾಕ್ ಪ್ರಧಾನಿ ಇಮ್ರಾನ್‌ಗೆ ರಾಯಭಾರ ಕಚೇರಿಯಿಂದ 'ಪೂಜೆ'!

ಯಾಕೆ ದಿವಾಳಿಯಾಗಿದೆ?

ದಿವಾಳಿ ಹೆಸರು ಪಾಕಿಸ್ತಾನಕ್ಕೆ ಹೊಸದೇನಲ್ಲ. ಆಡಳಿತದಲ್ಲಿ ದೊಡ್ಡಮಟ್ಟದ ಭ್ರಷ್ಟಾಚಾರ, ದೂರದೃಷ್ಟಿಯಿಲ್ಲದ ಆರ್ಥಿಕ ನೀತಿ ಹಾಗೂ ಅತಿ ಕಡಿಮೆ ತೆರಿಗೆ ಆದಾಯವೇ ಪಾಕ್‌ ದುಸ್ಥಿತಿಗೆ ಕಾರಣ. ಸರ್ವಾಧಿಕಾರಿ ಆಡಳಿತದಡಿ ಇರುವ ಆರ್ಥಿಕ ತಜ್ಞರು ಸರ್ಕಾರದ ಮೂಗಿನ ನೇರಕ್ಕೆ ಆರ್ಥಿಕ ನೀತಿಗಳನ್ನು ನಿರೂಪಿಸಿರುವುದರಿಂದ, ವಾಸ್ತವ ಅರ್ಥವಾಗುವ ಮುನ್ನವೇ ಬೊಕ್ಕಸ ಬೋರಲಾಗಿದೆ. ಪಕ್ಕದ ದೇಶ ಭಾರತದೊಂದಿಗೆ ಸೌಹಾರ್ದ ಸಂಬಂಧ ಕಾಯ್ದುಕೊಳ್ಳದೆ, ಸದಾ ಯುದ್ಧದ ಭೀತಿಯನ್ನು ಹೊಂದಿದೆ ಹಾಗೂ ಆದಾಯದ ಬಹುಪಾಲನ್ನು ರಕ್ಷಣಾ ವೆಚ್ಚಕ್ಕೆ ವಿನಿಯೋಗಿಸುತ್ತಿದೆ. ಅಮೆರಿಕ- ಚೀನಾ ಮುಂತಾದ ದೇಶಗಳು ನೀಡಿದ ಧನಸಹಾಯ ಭಯೋತ್ಪಾದಕ ಸಂಘಟನೆಗಳಿಗೆ ವಿನಿಯೋಗವಾಗಿರುವ ಶಂಕೆ ಇದೆ. ಅದರ ಜೊತೆಗೆ ಕೋವಿಡ್‌ ಹೆಮ್ಮಾರಿ ಪಾಕ್‌ ಅನ್ನು ಇನ್ನಷ್ಟುದುಸ್ಥಿತಿಗೆ ತಳ್ಳಿದೆ.

ಬೂದು ಪಟ್ಟಿಗೆ ಪಾಕಿಸ್ತಾನ

ಈ ವರ್ಷವೂ ಪಾಕಿಸ್ತಾನವನ್ನು ಜಾಗತಿಕ ಆರ್ಥಿಕ ಟಾಸ್ಕ್‌ ಫೋರ್ಸ್‌ನ ‘ಬೂದು ಪಟ್ಟಿ’ಗೆ ಸೇರಿಸಲಾಗಿದೆ. ಈ ಬೂದು ಪಟ್ಟಿ, ಭಯೋತ್ಪಾದಕರಿಗೆ ಹಣಕಾಸಿನ ನೆರವು ನೀಡುತ್ತಿರುವ ಶಂಕಿತ ರಾಷ್ಟ್ರಗಳ ಪಟ್ಟಿ. ಒಂದು ರಾಷ್ಟ್ರವನ್ನು ಈ ಪಟ್ಟಿಗೆ ಸೇರಿಸುವುದು ಎಂದರೆ ಆ ರಾಷ್ಟ್ರಕ್ಕೆ ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಸಿಗಬಹುದಾದ ಆರ್ಥಿಕ ನೆರವಿಗೆ ಕಡಿವಾಣ ಬಿದ್ದಂತೆ.

ಬಿಕ್ಕಟ್ಟಿನ ವಿರುದ್ಧ ಪಾಕ್‌ ಹೇಗೆ ಹೋರಾಡಲಿದೆ?

ದೇಶದಲ್ಲಿ ಉದ್ಭವಿಸಿರುವ ಆರ್ಥಿಕ ಬಿಕ್ಕಟ್ಟನ್ನು ಸರಿದೂಗಿಸಲು ವಿದೇಶಿ ನೆರವು ಪಡೆಯಲು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌)ಯೊಂದಿಗೆ ಒಪ್ಪಂದಕ್ಕೆ ಮುಂದಾಗಿದೆ. ಅಸ್ತಿತ್ವದಲ್ಲಿರುವ 6 ಬಿಲಿಯನ್‌ ಡಾಲರ್‌ (45 ಸಾವಿರ ಕೋಟಿ ರು.) ವಿಸ್ತೃತ ನಿಧಿ ಸೌಲಭ್ಯ (ಇಎಫ್‌ಎಫ್‌)ದ ಅಡಿಯಲ್ಲಿ ಸಾಲ ಪಡೆಯಲು ಐಎಂಎಫ್‌ನ ಬೆಂಬಲವಿಲ್ಲದೆ ಪಾಕ್‌ ಒದ್ದಾಡುತ್ತಿದೆ. ವಿಸ್ತೃತ ನಿಧಿ ಸೌಲಭ್ಯವು (ಇಎಫ್‌ಎಫ್‌) ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಸಾಲ ಸೌಲಭ್ಯ. ಮಧ್ಯಮ ಮತ್ತು ದೀರ್ಘಾವಧಿಯ ಪಾವತಿ ಸಮಸ್ಯೆಗಳನ್ನು ಪರಿಹರಿಸಲು ದೇಶಗಳಿಗೆ ಸಹಾಯ ಮಾಡಲು ಇದನ್ನು 1974ರಲ್ಲಿ ಸ್ಥಾಪಿಸಲಾಗಿದೆ. ಆದರೆ ಈಗಾಗಲೇ ಪಡೆದಿರುವ ವಿದೇಶಿ ಸಾಲವನ್ನು ತೀರಿಸದೆ ಪಾಕ್‌ ಮಾನ ಹರಾಜಾಗಿದೆ. ಸತತ ವಿದೇಶಿ ಸಾಲದಿಂದ ಬಳಲುತ್ತಿರುವ ಪಾಕಿಸ್ತಾನ ಸಾಲದ ಬಡ್ಡಿ ಪಾವತಿಸಲೂ ಹೆಣಗಾಡುತ್ತಿದೆ. ಜೊತೆಗೆ ವಿಶ್ವ ಬ್ಯಾಂಕ್‌ ಮತ್ತು ಏಷ್ಯಾ ಅಭಿವೃದ್ಧಿ ಬ್ಯಾಂಕುಗಳು ಪಾಕಿಸ್ತಾನ ಭಯೋತ್ಪಾದನೆಗೆ ಬೆಂಬಲ ನೀಡುವ ಕಾರಣ ಸಾಲ ನೀಡುವುದನ್ನು ರದ್ದು ಮಾಡಿವೆ. ಹೀಗಾಗಿ ದಿವಾಳಿಯಿಂದ ಹೊರಬರುವುದು ಪಾಕ್‌ಗೆ ದೊಡ್ಡ ಸವಾಲಾಗಿದೆ.

ಪಾಕ್‌ ಮುಖಭಂಗದ ಸನ್ನಿವೇಶಗಳು 

* ಎಮ್ಮೆ ಕೋಣ ಹರಾಜು!

ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅಧಿಕಾರದಲ್ಲಿದ್ದಾಗ ಶೋಕಿಗಾಗಿ ಪ್ರಧಾನಿ ನಿವಾಸದಲ್ಲಿ ಕೆಲ ಎಮ್ಮೆಗಳನ್ನು ಸಾಕಿದ್ದರು. ರಾಷ್ಟ್ರ ಆರ್ಥಿಕ ಸಂಕಷ್ಟದಿಂದ ದಿವಾಳಿಯಾಗುವ ಎಲ್ಲಾ ಸಾಧ್ಯತೆಗಳಿದ್ದ ಕಾರಣ ಆಗಷ್ಟೇ ಪ್ರಧಾನಿ ಹುದ್ದೆ ಅಲಂಕರಿಸಿದ್ದ ವರ್ಷದಲ್ಲಿ ಇಮ್ರಾನ್‌ ಖಾನ್‌, ಪ್ರಧಾನಿ ನಿವಾಸದಲ್ಲಿದ್ದ 8 ಎಮ್ಮೆಗಳನ್ನು ಹರಾಜು ಹಾಕಿದ್ದರು. ಜೊತೆಗೆ ಇನ್ನಿತರ ಪ್ರಮುಖ ಐಷಾರಾಮಿ ವಸ್ತುಗಳನ್ನೂ ಹರಾಜು ಹಾಕಿದ್ದರು.

* ಕತ್ತೆ ರಫ್ತು!

ದಿವಾಳಿತನದಿಂದ ಹೊರಬರಲು ಪಾಕ್‌ ಹರಸಾಹಸ ಮಾಡುತ್ತಿದೆ. ಇಲ್ಲಿ ಇತರ ಪ್ರಾಣಿಗಳಿಗಿಂತ ಕತ್ತೆಗಳು ಹೆಚ್ಚಿವೆ. ಇದನ್ನೇ ಬಂಡವಾಳ ಮಾಡಿಕೊಂಡ ಪಾಕ್‌ ಇತ್ತೀಚೆಗೆ ಕತ್ತೆಗಳನ್ನು ರಫ್ತು ಮಾಡುವ ಕೆಲಸಕ್ಕೆ ಇಳಿದಿದ್ದು, ಇಲ್ಲಿ ಎರಡು ಕತ್ತೆ ಫಾಮ್‌ರ್‍ಗಳನ್ನು ಆರಂಭಿಸಲು ಚೀನಾ ಹಣ ಹೂಡಿಕೆ ಮಾಡಿದೆ. ಅಲ್ಲಿ ಕತ್ತೆಗಳನ್ನು ಸಾಕಿ ಬೆಳೆಸಿ ಬಳಿಕ ಚೀನಾಕ್ಕೆ ರಫ್ತು ಮಾಡಲಾಗುತ್ತದೆ.

* ಪಾಕ್‌ ಪ್ರಧಾನಿ ನಿವಾಸ ಬಾಡಿಗೆಗೆ!

ಹದಗೆಟ್ಟಆರ್ಥಿಕತೆಯನ್ನು ಮೇಲೆತ್ತಲು ಪ್ರಧಾನಿ ಇಮ್ರಾನ್‌ ಖಾನ್‌ ಮಾಡಿದ ಪ್ರಯತ್ನ ಒಂದೆರಡಲ್ಲ. ಇತ್ತೀಚೆಗೆ ಪ್ರಧಾನಿ ವಾಸಕ್ಕೆಂದೇ ಮೀಸಲಿರುವ ಭಂಗಲೆಯನ್ನೇ ಬಾಡಿಗೆಗೆ ಮೀಸಲಿಟ್ಟಿದ್ದಾರೆ. ವಿಸ್ತಾರ ನಿವಾಸದ ನಿರ್ವಹಣೆಗೆ ವಾರ್ಷಿಕ 47 ಕೋಟಿ ರು. ವೆಚ್ಚವಾಗುತ್ತಿದೆ. ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ಇದನ್ನು ಭರಿಸುವ ಶಕ್ತಿ ಇಲ್ಲ. ಹೀಗಾಗಿ ಸಾಂಸ್ಕೃತಿಕ, ಶೈಕ್ಷಣಿಕ, ರಾಜಕೀಯ ಕಾರ‍್ಯಕ್ರಮಗಳನ್ನು ನಡೆಸಲು ಪ್ರಧಾನಿ ನಿವಾಸವನ್ನು ಬಾಡಿಗೆ ನೀಡಲು ನಿರ್ಧರಿಸಲಾಗಿದೆ. 2019ರಲ್ಲಿ ಪ್ರಧಾನಿ ನಿವಾಸವನ್ನು ವಿಶ್ವವಿದ್ಯಾಲಯವಾಗಿ ಪರಿವರ್ತಿಸುವುದಾಗಿ ಹೇಳಿತ್ತು. ಆದರೆ 2019ರಲ್ಲಿ ಮದುವೆ ಹಾಲ್‌ ಆಗಿ ಪರಿವರ್ತನೆಯಾಗಿ ರಾಜಕೀಯ ನಾಯಕರ ಕುಟುಂಬಗಳ ಮದುವೆಗೂ ಸಾಕ್ಷಿಯಾಗಿತ್ತು.