ಇಸ್ಲಮಬಾದ್‌[ಆ.26]: ಹೊಟ್ಟೆಗೆ ಹಿಟ್ಟಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಎನ್ನುವ ಹಾಗಿದೆ ಪಾಕಿಸ್ತಾನದ ಪರಿಸ್ಥಿತಿ. ಭಾರತದೊಂದಿಗೆ ಯುದ್ಧೋತ್ಸಾಹದೊಂದಿಗೆ ಇರುವ ಪಾಕಿಸ್ತಾನ ಆರ್ಥಿಕ ಹೊಡೆತಕ್ಕೆ ತತ್ತರಿಸಿ ಪಾತಾಳಕ್ಕೆ ಕುಸಿದು ಬಿಟ್ಟಿದೆ. ಎಷ್ಟರ ಮಟ್ಟಿಗೆ ಅಂದರೆ ಸರ್ಕಾರಿ ಕಚೇರಿಗಳಲ್ಲಿ ಒಂದಕ್ಕಿಂತ ಹೆಚ್ಚು ದಿನ ಪತ್ರಿಕೆ ತರಿಸಬಾರದು ಎಂದು ಇಲಾಖೆಗಳಿಗೆ ಆದೇಶ ನೀಡಿದೆ.

ಸರ್ಕಾರಿ ಇಲಾಖೆಯಲ್ಲಿ ವೆಚ್ಚ ಕಡಿಮೆ ಮಾಡಲು ಮುಂದಾಗಿರುವ ಇಮ್ರಾನ್‌ ಖಾನ್‌ ನೇತೃತ್ವದ ತೆಹ್ರಿಕ್‌-ಎ-ಇನ್ಸಾಫ್‌ ಸರ್ಕಾರ, ಇಲಾಖೆಗಳಲ್ಲಿ ಹೊಸ ಉದ್ಯೋಗ ಸೃಷ್ಟಿ, ವಾಹನ ಖರೀದಿ, ಕಚೇರಿ ನವೀಕರಣ ಹಾಗೂ ಒಂದಕ್ಕಿಂತ ಹೆಚ್ಚು ದಿನಪತ್ರಿಕೆ ತರಿಸಬಾರದು ಎಂದು ಕಟ್ಟಪ್ಪಣೆ ಹೊರಡಿಸಿದ್ದು, ಇದು ತಕ್ಷಣದಿಂದ ಜಾರಿಗೆ ಬರಲಿದೆ ಎಂದು ವಿತ್ತ ಸಚಿವಾಲಯ ಹೇಳಿದೆ.

ಅಲ್ಲದೇ ಗ್ಯಾಸ್‌, ವಿದ್ಯುತ್‌, ದೂರವಾಣಿ ಬಿಲ್‌ ಆದಷ್ಟೂಕಡಿಮೆ ಮಾಡುವಂತೆ ಸೂಚನೆ ನೀಡಲಾಗಿದ್ದು, ಅಧೀಕೃತ ಸಂವಹನಕ್ಕೆ ಬಳಸುವ ಪೇಪರ್‌ಗಳ ಎರಡೂ ಬದಿಯಲ್ಲೂ ಪ್ರಿಂಟ್‌ ಮಾಡಬೇಕು ಎಂದು ಆದೇಶ ನೀಡಲಾಗಿದೆ.