ಇಸ್ಲಾಮಾಬಾದ್(ಜ.27): ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿಮಾನ ಹತ್ತಿ ವಿದೇಶಕ್ಕೆ ಹಾರಿದರೆ ಸಾಕು, ಸಾಲ ಕೇಳಲು ಹೊರಟಿದ್ದಾರೆ ಎಂತಲೇ ಇಡೀ ವಿಶ್ವ ಮಾತನಾಡಿಕೊಳ್ಳುತ್ತದೆ.

ಆದರೆ ಪಾಪ ಇಮ್ರಾನ್ ಖಾನ್ ತಾನೇ ಏನು ಮಾಡಿಯಾರು?. ದೇಶದ ಆರ್ಥಿಕ ಪರಿಸ್ಥಿತಿ ಅವರನ್ನು ಸಾಲಕ್ಕಾಗಿ ವಿದೇಶಗಳಿಗೆ ಮನವಿ ಮಾಡಿಕೊಳ್ಳುವ ಪರಿಸ್ಥಿತಿಗೆ ದೂಡಿದೆ.

ಅದಂತೆ ಇತ್ತೀಚಿಗೆ ಸಂಯುಕ್ತ ಅರಬ್ ರಾಷ್ಟ್ರಕ್ಕೆ ಭೇಟಿ ನೀಡಿದ್ದ ಇಮ್ರಾನ್, ಪಾಕಿಸ್ತಾನವನ್ನು ಆರ್ಥಿಕ ದಿವಾಳಿಯಿಂದ ಪಾರು ಮಾಡಬೇಕಿದ್ದು ದಯವಿಟ್ಟು ಸಹಾಯ ಮಾಡಿ ಎಂದು ಮನವಿ ಮಾಡಿದ್ದರು.

ಆಯ್ತು ಬಿಡಿ ಎಂದು ಹೇಳಿ ಕಳುಹಿಸಿದ್ದ ಯುಎಇ, ಇದೀಗ ಪಾಕಿಸ್ತಾನಕ್ಕೆ ಬರೋಬ್ಬರಿ 1 ಬಿಲಿಯನ್ ಯುಎಸ್ ಡಾಲರ್ ಆರ್ಥಿಕ ನೆರವು ಘೋಷಿಸಿದೆ.

ಅಲ್ಲದೇ ಈ 1 ಬಿಲಿಯನ್ ಯುಸ್ ಡಾಲರ್ ಈಗಾಗಲೇ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನಕ್ಕೆ ತಲುಪಿದ್ದು, ಹಲವು ವರ್ಷಗಳ ಬಳಿಕ ಇಷ್ಟೊಂದು ಅಗಾಧ ಪ್ರಮಾಣದ ಹಣ ತನ್ನ ಖಾತೆಯಲ್ಲಿ ನೋಡಿ ಖುದ್ದು ಬ್ಯಾಂಕ್ ಕೂಡ ಕುಣಿದಾಡುತ್ತಿದೆ.

ಎರಡೂ ದೇಶಗಳ ನಡುವಿನ ಒಪ್ಪಂದದ ಪ್ರಕಾರ ಪಾಕಿಸ್ತಾನಕ್ಕೆ ಒಟ್ಟು 3 ಬಿಲಿಯನ್ ಯುಎಸ್ ಡಾಲರ್ ನೆರವು ಬರಬೇಕಿದೆ. ಇದೀಗ ಮೊದಲ ಕಂತು ಬಂದು ತಲುಪಿದ್ದು. ಇನ್ನು 2 ಬಿಲಿಯನ್ ಯುಎಸ್ ಡಾಲರ್ ಬರಬೇಕಿದೆ. ಆದರೆ ಈ ಹಣವನ್ನು ಪಾಕಿಸ್ತಾನ ಯಾತಕ್ಕಾಗಿ ಖರ್ಚು ಮಾಡಲಿದೆ ಎಂಬುದು ಕುತೂಹಲ ಕೆರಳಿಸಿದೆ.

ಅಂದಹಾಗೆ ಪಾಕಿಸ್ತಾನದ ಚಾಲ್ತಿ ಖಾತೆ ಕೊರತೆ 7.9 ಬಿಲಿಯನ್ ಯುಎಸ್ ಡಾಲರ್‌ಗೆ ತಲುಪಿದ್ದು, ವಿದೇಶಗಳಿಂದ ಬರುತ್ತಿರುವ ನೆರವಿನ ಹಣವನ್ನು ಈ ಮೊದಲಿನಂತೆ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸುವ ಶಕ್ತಿ ಪಾಕಿಸ್ತಾನಕ್ಕೆ ಉಳಿದಿಲ್ಲ ಎನ್ನಲಾಗುತ್ತಿದೆ.

ಪಾಕ್‌ಗೆ ಯುಎಇ ಹೆಲ್ಪ್: ಕಂತೆ ಕಂತೆ ದುಡ್ಡು ಇಮ್ರಾನ್ ಜೇಬಿಗೆ!