ರೈತರಿಗೆ ಮೋದಿ ಬಂಪರ್ ಕೊಡುಗೆ!
- ಭತ್ತರ, ಜೋಳ, ರಾಗಿ, ತೊಗರಿ, ಹತ್ತಿ, ಶೇಂಗಾ ಬೆಂಬಲ ಬೆಲೆ ಹೆಚ್ಚಳ
- 14 ಬೆಳೆಗಳ ಬೆಂಬಲ ಬೆಲೆ ಹೆಚ್ಚಳಕ್ಕೆ ಕೇಂದ್ರ ಸಂಪುಟ ನಿರ್ಧಾರ
- ಮುಂಗಾರು, ಹಿಂಗಾರು ಹಂಗಾಮಿನಲ್ಲಿ ರೈತರಿಗೆ ನೆರವು
ನವದೆಹಲಿ(ಜೂ.09): ಮುಂಗಾರು ಹಂಗಾಮು ಆರಂಭವಾಗುತ್ತಿದ್ದಂತೆಯೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರಿಗೆ ಶುಭ ಸುದ್ದಿ ನೀಡಿದೆ. ಭತ್ತ, ಜೋಳ, ರಾಗಿ, ಹತ್ತಿ, ಶೇಂಗಾ ಸೇರಿ 14 ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು 2022-23ನೇ ಹಂಗಾಮಿನಲ್ಲಿ ಹೆಚ್ಚಿಸಿ ಕೇಂದ್ರ ಸಚಿವ ಸಂಪುಟ ಮಹತ್ವದ ನಿರ್ಣಯ ಕೈಗೊಂಡಿದೆ.
ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಬುಧವಾರ ಕ್ವಿಂಟಾಲ್ ಭತ್ತಕ್ಕೆ 100 ರು., ಜೋಳಕ್ಕೆ 232 ರು., ರಾಗಿಗೆ 201 ರು. ಮೆಕ್ಕೆಜೋಳಕ್ಕೆ 92 ರು. ಶೇಂಗಾಗೆ 300 ರು., ತೊಗರಿಗೆ 300 ಸೂರ್ಯಕಾಂತಿಗೆ 385 ರು., ಎಳ್ಳಿಗೆ 523ರು. ನಷ್ಟುಬೆಂಬಲ ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಸಭೆಯ ಬಳಿಕ ಕೇಂದ್ರ ವಾರ್ತಾ ಹಾಗೂ ಪ್ರಸಾರ ಸಚಿವ ಅನುರಾಗ್ ಠಾಕೂರ್ ಹೇಳಿದರು.
ಈ 14 ಬೆಳೆಗಳ ಪೈಕಿ ಎಳ್ಳಿನ ಕನಿಷ್ಠ ಬೆಂಬಲ ಬೆಲೆಯನ್ನು 523 ರು.ನಷ್ಟುಹೆಚ್ಚಿಸಲಾಗಿದ್ದು, ಇದು ಅತ್ಯಧಿಕ ಏರಿಕೆಯಾಗಿದೆ. ಇನ್ನು ಮೆಕ್ಕೆ ಜೋಳಕ್ಕೆ 92 ರು. ಹೆಚ್ಚಿಸಲಾಗಿದ್ದು, ಅತಿ ಕಮ್ಮಿ ಬೆಲೆ ಏರಿಕೆ.
ಇನ್ನು 2014ಕ್ಕೆ ಹೋಲಿಸಿದರೆ (ಯುಪಿಎ ಸರ್ಕಾರದ ಅವಧಿ), ಈಗಿನ ಬೆಂಬಲ ಬೆಲೆ ಶೇ.46ರಿಂದ ಶೇ.131ರಷ್ಟುಹೆಚ್ಚಳವಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.
ಈ ಬೆಳೆಗಳು ದೇಶದ ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಪ್ರಮುಖ ಬೆಳೆಗಳಾಗಿವೆ. ಈ ಬಾರಿ ಉತ್ತಮ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಳಾಖೆ ನೀಡಿರುವ ಹಿನ್ನೆಲೆಯಲ್ಲಿ ಉತ್ತಮ ಬೆಳೆ ಬರುವ ಸಾಧ್ಯತೆ ಇದೆ. ಸಂಪುಟದ ನಿರ್ಣಯದಿಂದ ಉತ್ತಮ ಬೆಲೆಯ ಆಶಾಭಾವನೆಯೂ ರೈತರಿಗೆ ಉಂಟಾಗಿದೆ. ಈ ಬೆಳೆಗಳನ್ನು ಕರ್ನಾಟಕದಲ್ಲಿ ಹೆಚ್ಚು ಬೆಳೆಯಲಾಗುತ್ತಿದ್ದು, ರೈತರಿಗೆ ವರದಾನವಾಗಿದೆ.
ಬೆಂಬಲ ಬೆಲೆ ಏರಿಕೆ ಎಷ್ಟು? (ಕ್ವಿಂಟಲ್‌ನಲ್ಲಿ)
ಬೆಳೆ ಬೆಲೆ (ಕ್ವಿಂಟಾಲ್‌ಗೆ) ಹೆಚ್ಚಳ ಪ್ರಮಾಣ
ಭತ್ತ (ಸಾಮಾನ್ಯ) 2040 100
ಭತ್ತ (ಎ ದರ್ಜೆ) 2060 100
ಜೋಳ (ಹೈಬ್ರೀಡ್) 2970 232
ಬಿಳಿಜೋಳ 2990 232
ರಾಗಿ 3578 201
ಮೆಕ್ಕೆಜೋಳ 1962 92
ಶೇಂಗಾ 5850 300
ತೊಗರಿ 6600 300
ಉದ್ದು 6600 300
ಹೆಸರು 7755 480
ಸೂರ್ಯಕಾಂತಿ 6400 385
ಹತ್ತಿ (ಸಣ್ಣ ಎಳೆ) 6080 354
ಹತ್ತಿ (ಉದ್ದ ಎಳೆ) 6380 355
ಎಳ್ಳು 7830 523