ನವದೆಹಲಿ[ಜೂ.13]: ಕಳೆದ 11 ವರ್ಷಗಳಲ್ಲಿ ದೇಶದಲ್ಲಿ ವಿವಿಧ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳಿಗೆ 2.05 ಲಕ್ಷ ಕೋಟಿ ರು. ಮೊತ್ತದ ವಂಚನೆ ಎಸಗಿದ 50000ಕ್ಕೂ ಹೆಚ್ಚು ಘಟನೆಗಳು ನಡೆದಿದೆ ಎಂಬ ಮಾಹಿತಿಯನ್ನು ಆರ್‌ಬಿಐ ನೀಡಿದೆ. ಈ ಪೈಕಿ ಐಸಿಐಸಿಐ, ಎಸ್‌ಬಿಐ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳು ಹೆಚ್ಚಿನ ವಂಚನೆಗೆ ಗುರಿಯಾಗಿವೆ.

2008-09ರಿಂದ 2018-19ರ ಅವಧಿಯಲ್ಲಿ ದೇಶಾದ್ಯಂತ ಒಟ್ಟು 53,334 ವಂಚನೆ ಪ್ರಕರಣಗಳು ನಡೆದಿವೆ. ಈ ಪ್ರಕರಣಗಳ ಮೂಲಕ ನಡೆದಿರುವ ವಂಚನೆಯ ಮೊತ್ತ 2.05 ಲಕ್ಷ ಕೋಟಿ ರು. ಈ ಪೈಕಿ ಅತಿ ಹೆಚ್ಚು ವಂಚನೆ ಅಂದರೆ 6811 ಪ್ರಕರಣಗಳು ಐಸಿಐಸಿಐ ಬ್ಯಾಂಕ್‌ನಲ್ಲಿ ನಡೆದಿದೆ. ಈ ಪ್ರಕರಣಗಳಲ್ಲಿ ಬ್ಯಾಂಕ್‌ಗೆ ವಂಚಿಸಲಾಗಿರುವ ಮೊತ್ತ 5033 ಕೋಟಿ ರು. ಎಂದು ಆರ್‌ಬಿಐ ಮಾಹಿತಿ ನೀಡಿದೆ.

ಇನ್ನು ಎಸ್‌ಬಿಐನಲ್ಲಿ 23734 ಕೋಟಿ ರು. ಅವ್ಯವಹಾರದ 6793 ಪ್ರಕರಣ, ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ 1200 ಕೋಟಿ ರು. ಅವ್ಯವಹಾರದ 2497 ಪ್ರಕರಣ, ಬ್ಯಾಂಕ್‌ ಆಫ್‌ ಬರೋಡಾದಲ್ಲಿ 12962 ಕೋಟಿ ರು. ಅವ್ಯವಹಾರದ 2160 ಪ್ರಕರಣ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿ 28700 ಕೋಟಿ ರು. ಅವ್ಯವಹಾರದ 2047 ಪ್ರಕರಣ, ಆ್ಯಕ್ಸಿಸ್‌ ಬ್ಯಾಂಕ್‌ನಲ್ಲಿ 5301 ಕೋಟಿ ರು. ಅವ್ಯವಹಾರದ 1944 ಪ್ರಕರಣ ನಡೆದಿದೆ.

ಉಳಿದಂತೆ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ 12358 ಕೋಟಿ ರು. ಅವ್ಯವಹಾರದ 1872 ಪ್ರಕರಣ, ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ 5830 ಕೋಟಿ ರು. ಅವ್ಯವಹಾರದ 1783 ಪ್ರಕರಣ, ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ 9041 ಕೋಟಿ ರು. ಅವ್ಯವಹಾರದ 1613 ಪ್ರಕರಣ ನಡೆದಿದೆ ಎಂದು ಆರ್‌ಬಿಐ ಹೇಳಿದೆ.