*2020-21ನೇ ಹಣಕಾಸು ಸಾಲಿನ ಕಾರ್ಪೋರೇಟ್ ITR ಸಲ್ಲಿಕೆಗೆ ಮಾ.15 ಅಂತಿಮ ಗಡುವು*ಆದಾಯ ತೆರಿಗೆ ಇಲಾಖೆ ಇ-ಪೋರ್ಟಲ್ ಮೂಲಕ ITR ಸಲ್ಲಿಕೆ*ಕಳೆದ ಸಾಲಿಗೆ ಹೋಲಿಸಿದ್ರೆ ಈ ವರ್ಷ 16.7 ಲಕ್ಷಕ್ಕೂ ಅಧಿಕ ITRs ಫೈಲ್
ನವದೆಹಲಿ (ಮಾ.17): 2020-21ನೇ ಹಣಕಾಸು ಸಾಲಿಗೆ (Fiscal Year) ಸಂಬಂಧಿಸಿ ಮಾರ್ಚ್ 15ರ ತನಕ 6.63 ಕೋಟಿಗೂ ಅಧಿಕ ಆದಾಯ ತೆರಿಗೆ ರಿಟರ್ನ್ಸ್ (ITRs) ಸಲ್ಲಿಕೆಯಾಗಿವೆ. ಕಳೆದ ಸಾಲಿಗೆ ಹೋಲಿಸಿದ್ರೆ ಈ ವರ್ಷ 16.7 ಲಕ್ಷಕ್ಕೂ ಅಧಿಕ ಆದಾಯ ತೆರಿಗೆ ರಿಟರ್ನ್ಸ್ (ITR) ಫೈಲ್ ಆಗಿವೆ ಎಂದು ಆದಾಯ ತೆರಿಗೆ ಇಲಾಖೆ (Income Tax Department) ಮಾಹಿತಿ ನೀಡಿದೆ.
ಲೆಕ್ಕ ಪರಿಶೋಧನ (Audit) ವರದಿ (Report) ಸಲ್ಲಿಸಬೇಕಾದ ಕಾರ್ಪೋರೇಟ್ ಹಾಗೂ ಇತರ ತೆರಿಗೆ ಪಾವತಿದಾರರಿಗೆ 2020-21ನೇ ಹಣಕಾಸು ಸಾಲಿಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಮಾ.15 ಅಂತಿಮ ದಿನಾಂಕವಾಗಿದೆ. ಇನ್ನು ವೈಯಕ್ತಿಕ ಐಟಿಆರ್ ಸಲ್ಲಿಕೆಗೆ 2021 ಡಿಸೆಂಬರ್ 31 ಕೊನೆಯ ದಿನಾಂಕವಾಗಿತ್ತು.
SBI Customers Alert:ಮಾರ್ಚ್ 31ರೊಳಗೆ ನೀವು ಈ ಕೆಲ್ಸ ಮಾಡದಿದ್ರೆ ಬ್ಯಾಂಕಿಂಗ್ ಸೇವೆ ಸ್ಥಗಿತ!
ಆದಾಯ ತೆರಿಗೆ ಇಲಾಖೆ ಇ-ಪೋರ್ಟಲ್ (e-portal) ಮೂಲಕ ಮಾ.15ರ ತನಕ 6.63 ಕೋಟಿ ಐಟಿಆರ್ (ITR)ಸಲ್ಲಿಕೆಯಾಗಿರೋ ಬಗ್ಗೆ ಆದಾಯ ತೆರಿಗೆ ಇಲಾಖೆ ಮಾಹಿತಿ ನೀಡಿದೆ. ಅಂತಿಮ ದಿನಾಂಕವಾದ ಮಾ.15ರಂದೇ 5.43ಲಕ್ಷಕ್ಕೂ ಅಧಿಕ ಐಟಿಆರ್ ಗಳು ಸಲ್ಲಿಕೆಯಾಗಿವೆ. ಕಳೆದ ಸಾಲಿನಲ್ಲಿ ಅಂತಿಮ ದಿನಾಂಕದಂದು 4.77 ಲಕ್ಷ ಐಟಿಆರ್ ಗಳು ಸಲ್ಲಿಕೆಯಾಗಿದ್ದವು. ಕಳೆದ ಐದು ದಿನಗಳಲ್ಲಿ 13.84 ಲಕ್ಷಕ್ಕೂ ಅಧಿಕ ಐಟಿಆರ್ ಗಳು ಫೈಲ್ ಆಗಿವೆ. ಕಳೆದ ಸಾಲಿನಲ್ಲಿ ಕೊನೆಯ 5 ದಿನಗಳಲ್ಲಿ 11.87 ಲಕ್ಷ ಐಟಿಆರ್ ಗಳು ಸಲ್ಲಿಕೆಯಾಗಿದ್ದವು. 2020-21ನೇ ಹಣಕಾಸು ಸಾಲಿಗೆ ಸಂಬಂಧಿಸಿ ಸಲ್ಲಿಕೆಯಾದ 6.63 ಕೋಟಿ ಐಟಿಆರ್ ಗಳಲ್ಲಿ ಶೇ.46 ಐಟಿಆರ್ -1(3.03 ಕೋಟಿ), ಶೇ.9 ಐಟಿಆರ್-2( 57.6ಲಕ್ಷ), ಶೇ.15 ಐಟಿಆರ್ -3(1.02 ಕೋಟಿ), ಶೇ.26 ಐಟಿಆರ್ -4 (1.75 ಕೋಟಿ), ಶೇ.2 ಐಟಿಆರ್-5 (15.1ಲಕ್ಷ), ಐಟಿಆರ್ -6 (9.3 ಲಕ್ಷ) ಹಾಗೂ ಐಟಿಆರ್ -7 (2.18ಲಕ್ಷ).
ಐಟಿಆರ್ ಅರ್ಜಿ 1 (ಸಹಜ್) ಹಾಗೂ ಐಟಿಆರ್ ಅರ್ಜಿ 4 (ಸುಗಮ್) ಸರಳ ಅರ್ಜಿಗಳಾಗಿದ್ದು, ದೊಡ್ಡ ಸಂಖ್ಯೆಯಲ್ಲಿ ಸಣ್ಣ ಹಾಗೂ ಮಧ್ಯಮ ತೆರಿಗೆ ಪಾವತಿದಾರರಿಗೆ ವಿತರಿಸಲಾಗುತ್ತದೆ. 50 ಲಕ್ಷ ರೂ. ತನಕ ಆದಾಯ ಇರೋ ಹಾಗೂ ವೇತನ, ಮನೆ ಅಥವಾ ಇತರ ಮೂಲಗಳಿಂದ ಆದಾಯ ಪಡೆಯೋ ವ್ಯಕ್ತಿ ಸಹಜ್ ಅರ್ಜಿ ಭರ್ತಿ ಮಾಡಬಹುದು. ಸುಗಮ್ ಅರ್ಜಿ ನಮೂನೆಯನ್ನು 50 ಲಕ್ಷ ರೂ.ತನಕ ಆದಾಯ ಹೊಂದಿರೋ ಸಂಸ್ಥೆಗಳು ಹಾಗೂ ಉದ್ಯಮ ಮತ್ತು ವೃತ್ತಿಯಿಂದ ಆದಾಯ ಗಳಿಸೋರು ಭರ್ತಿ ಮಾಡಬಹುದು.
ವಿಳಂಬ ಐಟಿಆರ್ (belated ITR) ಸಲ್ಲಿಕೆ
ಡಿಸೆಂಬರ್ 31ರೊಳಗೆ ಐಟಿಆರ್ ಸಲ್ಲಿಕೆ ಮಾಡಲು ಸಾಧ್ಯವಾಗದ ತೆರಿಗೆದಾರರು (ಕಾರ್ಪೋರೇಟ್ ಹಾಗೂ ಇತರ ತೆರಿಗೆ ಪಾವತಿದಾರರನ್ನು ಹೊರತುಪಡಿಸಿ) ವಿಳಂಬ ಐಟಿಆರ್ ಸಲ್ಲಿಕೆ ಮಾಡಬಹುದಾಗಿದ್ದು, ಮಾರ್ಚ್ 31 ಅಂತಿಮ ಗಡುವಾಗಿದೆ. ಆದ್ರೆ ವಿಳಂಬ ಐಟಿಆರ್ ಸಲ್ಲಿಕೆ ಮಾಡೋ ತೆರಿಗೆದಾರರು ತಡವಾಗಿರೋದಕ್ಕೆ ದಂಡ ಶುಲ್ಕ ಕಟ್ಟಬೇಕು.
ಹವ್ಯಾಸವನ್ನೇ ಉದ್ಯಮ ಮಾಡಿ ಗೆದ್ದು ತೋರಿಸಿದ ದೀಪ್ತಿ
ಪರಿಷ್ಕೃತ ಐಟಿಆರ್ ಸಲ್ಲಿಕೆಗೆ ಗಡುವು
ಒಂದು ವೇಳೆ ನೀವು ಡಿ.31ರೊಳಗೆ ಐಟಿಆರ್ ಸಲ್ಲಿಕೆ ಮಾಡಿದ್ದು, ಕೆಲವೊಂದು ತಿದ್ದುಪಡಿಗಳೊಂದಿಗೆ ಮತ್ತೆ ಸಲ್ಲಿಕೆ ಮಾಡಲು ಬಯಸಿದ್ರೆ ಮಾರ್ಚ್ 31ರೊಳಗೆ ಸಲ್ಲಿಕೆ ಮಾಡಬಹುದು. ಪರಿಷ್ಕೃತ ಐಟಿಆರ್ (revised return) ಸಲ್ಲಿಕೆಗೆ ಯಾವುದೇ ದಂಡ ಕಟ್ಟಬೇಕಾಗಿಲ್ಲ. ಈ ಹಿಂದೆ ಪರಿಷ್ಕೃತ ಐಟಿಆರ್ ಸಲ್ಲಿಕೆಗೆ ಡಿಸೆಂಬರ್ 31ಕೊನೆಯ ದಿನಾಂಕವಾಗಿತ್ತು. ಆದ್ರೆ 2020-21ನೇ ಆರ್ಥಿಕ ಸಾಲಿನಲ್ಲಿ ಕೊರೋನಾ ವೈರಸ್ ಕಾರಣಕ್ಕೆ ಸರ್ಕಾರ ಐಟಿಆರ್ ಸಲ್ಲಿಕೆ ಗಡುವನ್ನು ಡಿಸೆಂಬರ್ 31ಕ್ಕೆ ವಿಸ್ತರಿಸಿದ ಕಾರಣ ಈ ವರ್ಷ ಪರಿಷ್ಕೃತ ಐಟಿಆರ್ ಸಲ್ಲಿಕೆಗೆ ಮಾರ್ಚ್ 31 ಅಂತಿಮ ದಿನಾಂಕವಾಗಿದೆ.
