ಬೆಂಗಳೂರಿನ ಒರಾಕಲ್ ಕಂಪನಿಯಿಂದ ಲೇ-ಆಫ್ ಆದ 14 ವರ್ಷಗಳ ಅನುಭವಿ ಉದ್ಯೋಗಿಯೊಬ್ಬರು, ಆತಂಕಪಡದೆ ತಮ್ಮ ಊರಿಗೆ ಮರಳಿದ್ದಾರೆ. ತಮ್ಮ ಉತ್ತಮ ಆರ್ಥಿಕ ಯೋಜನೆಯಿಂದಾಗಿ, ಅಂಚೆ ಕಚೇರಿ ಮತ್ತು ಬ್ಯಾಂಕ್ ಎಫ್‌ಡಿಗಳಿಂದ ತಿಂಗಳಿಗೆ ₹43,000 ನಿಷ್ಕ್ರಿಯ ಆದಾಯ ಗಳಿಸುತ್ತಿದ್ದು, ಸಾಲಮುಕ್ತರಾಗಿ ಹೊಸ ಜೀವನ ಆರಂಭಿಸಿದ್ದಾರೆ.

ಭುವನೇಶ್ವರ (ಏ.6): ಐಟಿ ಕ್ಷೇತ್ರದಲ್ಲಿ ಕೆಲಸ ಕಳೆದುಕೊಳ್ಳುವುದು ಎಂದರೆ ಬೆಟ್ಟವೇ ಕುಸಿದು ಬಿದ್ದಂತಾಗುವ ಇಂದಿನ ಕಾಲದಲ್ಲಿ, ಬೆಂಗಳೂರಿನಲ್ಲಿದ್ದ ಒರಾಕಲ್ ಉದ್ಯೋಗಿಯೊಬ್ಬರು ಕೆಲಸ ಹೋದ ತಕ್ಷಣವೇ ತೋರಿದ ಸಂಯಮ ಮತ್ತು ಅವರ ಆರ್ಥಿಕ ಯೋಜನೆ ಈಗ ಎಲ್ಲರ ಗಮನ ಸೆಳೆಯುತ್ತಿದೆ. 14 ವರ್ಷಗಳ ಅನುಭವವಿದ್ದರೂ ಲೇ-ಆಫ್‌ಗೆ ಬಲಿಯಾದ ಈ ವ್ಯಕ್ತಿ, ಯಾವುದೇ ಆತಂಕವಿಲ್ಲದೆ ತಮ್ಮ ತವರು ಮನೆ ಒಡಿಶಾದ ಭುವನೇಶ್ವರಕ್ಕೆ ಮರಳಿದ್ದಾರೆ. ಇವರ ಈ ಸ್ಫೂರ್ತಿದಾಯಕ ಕಥೆಯನ್ನು ಅವರ ಗೆಳೆಯ ನಾಯಕ್ ಸತ್ಯ ಎಂಬುವವರು 'X' (ಟ್ವಿಟರ್) ನಲ್ಲಿ ಹಂಚಿಕೊಂಡಿದ್ದಾರೆ.

ಸತ್ಯ ಅವರ ಪ್ರಕಾರ, "ಯಾವುದೇ ಪ್ಯಾನಿಕ್ ಇಲ್ಲ, ಒತ್ತಡವಿಲ್ಲ. ಅವರು ನೇರವಾಗಿ ತಮ್ಮ ಅವರ ಊರು ಭುವನೇಶ್ವರಕ್ಕೆ ಮರಳಿದರು." ಇಂತಹ ಶಾಂತ ನಿರ್ಧಾರಕ್ಕೆ ಕಾರಣವಾಗಿದ್ದು ವರ್ಷಗಳಿಂದ ಅವರು ಮಾಡುತ್ತಾ ಬಂದಿದ್ದ ಸಾಂಪ್ರದಾಯಿಕ ಉಳಿತಾಯ ಕ್ರಮ ಎಂದಿದ್ದಾರೆ.

ಹೇಗಿತ್ತು ವ್ಯಕ್ತಿಯ ಹೂಡಿಕೆ?

ಅಂಚೆ ಕಚೇರಿಯಲ್ಲಿ ಅನೇಕ ಪೋಸ್ಟಲ್ ಫಿಕ್ಸೆಡ್ ಡೆಪಾಸಿಟ್ (FD) ಗಳಲ್ಲಿ ಹೂಡಿಕೆ ಮಾಡಿದ್ದರು. ಪೋಷಕರೊಂದಿಗೆ ಜಂಟಿ ಖಾತೆಯಲ್ಲಿ 15 ಲಕ್ಷ ರೂ. ಮತ್ತು ಪತ್ನಿಯೊಂದಿಗೆ 15 ಲಕ್ಷ ರೂ.ಗಳ ಎರಡು ಜಂಟಿ ಖಾತೆಗಳನ್ನು ಹೊಂದಿದ್ದರು. ಇದರ ಜೊತೆಗೆ ಮಗುವಿನ ಹೆಸರಿನಲ್ಲಿಯೂ ಠೇವಣಿ ಇರಿಸಿದ್ದರು. ಈ ಎಲ್ಲಾ ಅಂಚೆ ಉಳಿತಾಯಗಳಿಂದ ಅವರಿಗೆ ಮಾಸಿಕ ಸುಮಾರು 28,000 ರೂಪಾಯಿ ಬಡ್ಡಿ ಬರುತ್ತಿದೆ. ಭಾರತೀಯ ಬ್ಯಾಂಕ್‌ಗಳಲ್ಲಿ ಸುಮಾರು 30 ಲಕ್ಷ ರೂ.ಗಳ ಫಿಕ್ಸೆಡ್ ಡೆಪಾಸಿಟ್ ಹೊಂದಿದ್ದು, ಅದರಿಂದ ತಿಂಗಳಿಗೆ 15,000 ರೂಪಾಯಿ ಆದಾಯ ಬರುತ್ತಿದೆ.

ಅಂದರೆ, ಕೆಲಸವಿಲ್ಲದಿದ್ದರೂ ಪ್ರತಿ ತಿಂಗಳು ಸುಮಾರು 43,000 ರೂಪಾಯಿ ನಿರಂತರ 'ಪ್ಯಾಸಿವ್ ಇನ್ಕಮ್' (Passive Income) ಬರುವಂತೆ ಅವರು ಮೊದಲೇ ಯೋಜನೆ ರೂಪಿಸಿದ್ದರು.

ಈಗಿನ ಜೀವನ ಶೈಲಿ

ಭುವನೇಶ್ವರಕ್ಕೆ ಮರಳಿದ ಅವರು ಈಗ ತಮ್ಮ ಪೋಷಕರ ಜೊತೆ ವಾಸಿಸುತ್ತಿದ್ದಾರೆ. ಯಾವುದೇ ಇಎಂಐ (EMI) ಅಥವಾ ಸಾಲದ ಹೊರೆ ಇಲ್ಲದ ಕಾರಣ, ಅವರು ಈಗ ತಮ್ಮ ಬಿಡುವಿನ ವೇಳೆಯಲ್ಲಿ 'ಉಬರ್' (Uber) ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಕುಟುಂಬದ ಬೆಂಬಲದೊಂದಿಗೆ ಸಣ್ಣ ಉದ್ಯಮವನ್ನು ಪ್ರಾರಂಭಿಸುವ ಬಗ್ಗೆಯೂ ಅವರು ಈಗ ಯೋಚಿಸುತ್ತಿದ್ದಾರೆ.

ಈ ಬಗ್ಗೆ ಬರೆದಿರುವ ಸತ್ಯ ಅವರು, "ಇದು ಸಂಪೂರ್ಣ 'ಓಲ್ಡ್ ಸ್ಕೂಲ್' ಸ್ಟೈಲ್. ಅವರು ಯಾವುದೇ ಹೊಸ ಟ್ರೆಂಡ್‌ಗಳ ಹಿಂದೆ ಬೀಳದೆ ಸಾಂಪ್ರದಾಯಿಕ ಉಳಿತಾಯವನ್ನು ನಂಬಿದ್ದರು. ಹಾಗಾಗಿ ನೀವು ಮುಂಚಿತವಾಗಿಯೇ ಯೋಜನೆ ರೂಪಿಸಿ, ಆಗ ಸಂಕಷ್ಟದ ಸಮಯದಲ್ಲಿ ನೀವು ಎಂದಿಗೂ ತಡಕಾಡಬೇಕಾಗಿಲ್ಲ," ಎಂದು ಸಲಹೆ ನೀಡಿದ್ದಾರೆ.

Scroll to load tweet…