Asianet Suvarna News Asianet Suvarna News

Twitch ಮಾಜಿ ಸಿಇಒ ಎಮ್ಮೆಟ್ ಶಿಯರ್ ಒಪನ್ ಎಐ ನೂತನ ಸಾರಥಿ; ಮೈಕ್ರೋಸಾಫ್ಟ್ ಸೇರಿದ ಸ್ಯಾಮ್ ಆಲ್ಟ್‌ಮನ್

ಚಾಟ್ ಜಿಪಿಟಿ ಸೃಷ್ಟಿಕರ್ತ ಸಂಸ್ಥೆ  ಓಪನ್‌ಎಐಯಲ್ಲಿ ಕಳೆದ ಮೂರು ದಿನಗಳಿಂದ ಅನೇಕ ಬದಲಾವಣೆಗಳು ನಡೆದಿದ್ದು,  ಟ್ವಿಚ್ ಸಂಸ್ಥೆ ಮಾಜಿ ಸಿಇಒ ಎಮ್ಮೆಟ್ ಶಿಯರ್ ಅವರನ್ನು ಹಂಗಾಮಿ ಸಿಇಒ ಆಗಿ ನೇಮಕ ಮಾಡಲಾಗಿದೆ. ಇನ್ನು ಸಿಇಒ ಹುದ್ದೆಯಿಂದ ವಜಾಗೊಂಡಿದ್ದ ಸ್ಯಾಮ್ ಆಲ್ಟ್‌ಮನ್ ಇಂದು ಮೈಕ್ರೋಸಾಫ್ಟ್ ಸೇರಿದ್ದಾರೆ. 

OpenAI is hiring former Twitch CEO Emmett Shear to run company Sam Altman to join Microsoft anu
Author
First Published Nov 20, 2023, 3:41 PM IST

Business Desk: ಚಾಟ್ ಜಿಪಿಟಿ ಮೂಲಕ ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿ ಸದ್ದು ಮಾಡಿದ್ದ ಓಪನ್‌ಎಐ ಸಂಸ್ಥೆಯಲ್ಲಿ ಮೂರು ದಿನಗಳಿಂದ ಕ್ಷಿಪ್ರ ಗತಿಯ ಬೆಳವಣಿಗೆಗಳು ನಡೆಯುತ್ತಿವೆ. ಕಂಪನಿಯ ಸಹ-ಸಂಸ್ಥಾಪಕ ಹಾಗೂ ಸಿಇಒ ಸ್ಯಾಮ್ ಆಲ್ಟ್‌ಮನ್ ಅವರನ್ನು ಶುಕ್ರವಾರ ತಡರಾತ್ರಿ ಇದ್ದಕ್ಕಿದ್ದಂತೆ ಹುದ್ದೆಯಿಂದ ವಜಾ ಮಾಡಲಾಗಿದೆ. ಆ ಬಳಿಕ ಕಂಪನಿಯ ಮುಖ್ಯ ತಂತ್ರಜ್ಞಾನ ಅಧಿಕಾರಿ (ಸಿಟಿಒ) ಮೀರಾ ಮುರತಿ ಅವರನ್ನು ಹಂಗಾಮಿ ಸಿಇಒ ಆಗಿ ನೇಮಿಸಲಾಗಿತ್ತು. ಆದರೆ, ಈಗ ಟ್ವಿಚ್ ಸಂಸ್ಥೆ ಮಾಜಿ ಸಿಇಒ ಎಮ್ಮೆಟ್ ಶಿಯರ್ ಅವರನ್ನು ಹಂಗಾಮಿ ಸಿಇಒ ಆಗಿ ನೇಮಕ ಮಾಡಲು ನಿರ್ಧರಿಸಿದೆ. ಎಮ್ಮೆಟ್ ಶಿಯರ್  ಎರಡು ದಿನಗಳ ಹಿಂದಷ್ಟೇ ಹಂಗಾಮಿ ಸಿಇಒ ಆಗಿ ನೇಮಕಗೊಂಡಿರುವ ಮೀರಾ ಮೂರತಿ ಅವರಿಂದ ಅಧಿಕಾರ ಸ್ವೀಕರಿಸಲಿದ್ದಾರೆ. ಮೀರಾ ಮೂರತಿ ಸ್ಯಾಮ್ ಆಲ್ಟ್‌ಮನ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರೋ ಕಾರಣ ಅವರ ಸ್ಥಾನಕ್ಕೆ ಎಮ್ಮೆಟ್ ಶಿಯರ್  ಅವರನ್ನು ಕರೆ ತರಲಾಗುತ್ತಿದೆ ಎಂದು ಕಂಪನಿಯ ಬೆಳವಣಿಗೆಗಳ ಬಗ್ಗೆ ಮಾಹಿತಿ ಹೊಂದಿರೋರು ತಿಳಿಸಿದ್ದಾರೆ. ಈ ನಡುವೆ ಸ್ಯಾಮ್ ಆಲ್ಟ್‌ಮನ್ ಹಾಗೂ ಓಪನ್‌ಎಐ ಕಂಪನಿ ಅಧ್ಯಕ್ಷ ಗ್ರೆಗ್ ಬ್ರೋಕ್ ಮನ್ ಮೈಕ್ರೋಸಾಫ್ಟ್ ಸೇರಲಿದ್ದಾರೆ ಎಂಬ ಮಾಹಿತಿಯನ್ನು ಆ ಕಂಪನಿ ಸಿಇಒ ಸತ್ಯ ನಾಡೆಲ್ಲ ಹಂಚಿಕೊಂಡಿದ್ದಾರೆ.

ಮೂರು ದಿನ ಮೂರು ಸಿಇಒ
ಮೂರು ದಿನಗಳಲ್ಲಿ ನಡೆದ ಬೆಳವಣಿಗೆಗಳಿಂದ ಒಪನ್ ಎಐ ಸಂಸ್ಥೆಗೆ ಮೂರು ದಿನಗಳಲ್ಲಿ ಮೂರು ಸಿಇಒಗಳು ನೇಮಕವಾಗಿದ್ದಾರೆ. ಸ್ಯಾಮ್ ಆಲ್ಟ್‌ಮ್ಯಾನ್ ಅವರನ್ನು ಸಿಇಒ ಹುದ್ದೆಯಿಂದ ವಜಾಗೊಳಿಸಿದ ಬೆನ್ನಲ್ಲೇ ಮೀರಾ ಮೂರತಿ ಅವರನ್ನು ಆ ಹುದ್ದೆಗೆ ನೇಮಕ ಮಾಡಲಾಗಿತ್ತು. ಆದರೆ, ಈಗ ಅವರನ್ನು ಕೂಡ ಆ ಹುದ್ದೆಯಿಂದ ಕೆಳಗಿಳಿಸಿ ಎಮ್ಮೆಟ್ ಶಿಯರ್  ಅವರನ್ನು ನೇಮಕ ಮಾಡಲು ನಿರ್ಧರಿಸಲಾಗಿದೆ. ಶನಿವಾರ ಸ್ಯಾಮ್ ಆಲ್ಟ್‌ಮ್ಯಾನ್ 'ಎಕ್ಸ್' ನಲ್ಲಿ (ಟ್ವಿಟ್ಟರ್) 'ಒಪನ್ ಎಐ ತಂಡವನ್ನು ನಾನು ತುಂಬಾ ಪ್ರೀತಿಸುತ್ತೇನೆ' ಎಂದು ಬರೆದುಕೊಂಡಿದ್ದರು. ಇದಕ್ಕೆ ಒಪನ್ ಎಐ ಸಂಸ್ಥೆ ಅನೇಕ ಉದ್ಯೋಗಿಗಳು 'ಹೃದಯ' ಚಿಹ್ನೆಯೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಮೀರಾ ಮೂರತಿ ಕೂಡ ಪ್ರತಿಕ್ರಿಯಿಸಿದ್ದರು. ಇದೇ ಕಾರಣಕ್ಕೆ ಅವರನ್ನು ಹಂಗಾಮಿ ಸಿಇಒ ಹುದ್ದೆಯಿಂದ ಕೆಳಗಿಳಿಸಲಾಗಿದೆ ಎಂದು ಹೇಳಲಾಗಿದೆ.

ಮೈಕ್ರೋಸಾಫ್ಟ್‌ ಸಿಇಒ ಸತ್ಯ ನಾದೆಲ್ಲ ಬೆಂಬಲ: ವಜಾ ಆಗಿದ್ದ ಆಲ್ಟ್‌ಮನ್‌ಗೆ ಮತ್ತೆ ಓಪನ್‌ ಎಐ ಸಿಇಒ ಸ್ಥಾನ?

ಮೈಕ್ರೋಸಾಫ್ಟ್ ಸೇರಿದ ಸ್ಯಾಮ್ ಆಲ್ಟ್‌ಮ್ಯಾನ್
ಎರಡು ದಿನಗಳ ಹಿಂದಷ್ಟೇ ಓಪನ್‌ಎಐ ಸಂಸ್ಥೆ ಸಿಇಒ ಹುದ್ದೆಯಿಂದ ವಜಾಗೊಂಡಿದ್ದ  ಸ್ಯಾಮ್ ಆಲ್ಟ್‌ಮನ್ ಮೈಕ್ರೋಸಾಫ್ಟ್ ಸೇರಿದ್ದಾರೆ. ಇನ್ನು  ಗ್ರೆಗ್ ಬ್ರೋಕ್ ಮನ್ ಕೂಡ ಮೈಕ್ರೋಸಾಫ್ಟ್ ಸೇರಲಿದ್ದಾರೆ ಎಂದು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲ ಎಕ್ಸ್ ಪೋಸ್ಟ್ ನಲ್ಲಿ ಮಾಹಿತಿ ನೀಡಿದ್ದಾರೆ. ಇಂದಿನ (ನ.20) ಪೋಸ್ಟ್ ನಲ್ಲಿ ನಾಡೆಲ್ಲ, ಸ್ಯಾಮ್ ಆಲ್ಟ್‌ಮನ್  ಹಾಗೂ ಗ್ರೆಗ್ ಬ್ರೋಕ್ ಮನ್ ಮೈಕ್ರೋಸಾಫ್ಟ್ ಸೇರಲಿದ್ದು, ಹೊಸ ಮುಂದುವರಿದ ಎಐ ಸಂಶೋಧನಾ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ. 

ಚಾಟ್‌ಜಿಪಿಟಿಯ ಹಿಂದಿರುವ ಕಂಪನಿಯಾದ ಓಪನ್‌ಎಐ ಸಹ-ಸಂಸ್ಥಾಪಕ ಮತ್ತು ಸಿಇಒ ಸ್ಯಾಮ್ ಆಲ್ಟ್‌ಮನ್ ಅವರನ್ನು ಶುಕ್ರವಾರ ಹುದ್ದೆಯಿಂದ ವಜಾ ಮಾಡಲಾಗಿದೆ. ಮಂಡಳಿಗೆ ಇನ್ನು ಮುಂದೆ ಅವರ ಸಾಮರ್ಥ್ಯದ ಮೇಲೆ ವಿಶ್ವಾಸವಿಲ್ಲ,ಆದ್ದರಿಂದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು OpenAI ಕಂಪನಿ ತಿಳಿಸಿತ್ತು.

ಚಾಟ್‌ಜಿಪಿಟಿ ಖ್ಯಾತಿಯ ತಂತ್ರಜ್ಞನನ್ನೇ ವಜಾಗೊಳಿಸಿದ ಓಪನ್‌ ಎಐ ಕಂಪನಿ

ಮೈಕ್ರೋಸಾಫ್ಟ್‌ ಓಪನ್‌ ಎಐ ಸಂಸ್ಥೆಯಲ್ಲಿ ಶೇ.49ರಷ್ಟು ಷೇರು ಹೊಂದಿದ್ದು, ಮೈಕ್ರೋಸಾಫ್ಟ್‌ ಸೇರಿದಂತೆ ಎಲ್ಲ ಷೇರುದಾರರು ಆಲ್ಟ್‌ಮನ್‌ರನ್ನು ಮರು ನೇಮಕ ಮಾಡುವಂತೆ ನಿರ್ದೇಶಕ ಮಂಡಳಿಯ ಮೇಲೆ ಒತ್ತಡ ಹಾಕಿದ್ದರು. ಕಳೆದ ವರ್ಷ ಚಾಟ್‌ಜಿಪಿಟಿ ಬಿಡುಗಡೆ ಮೂಲಕ ವಿಶ್ವಾದ್ಯಂತ ಓಪನ್‌ ಎಐ ಕಂಪನಿ ಗಮನಸೆಳೆದಿತ್ತು. 

Follow Us:
Download App:
  • android
  • ios