ಹಿಂಡೆನ್ ಬರ್ಗ್ ವರದಿ ಹಿನ್ನೆಲೆಯಲ್ಲಿ ಅದಾನಿ ಗ್ರೂಪ್ ವಿರುದ್ಧ ಭಾರೀ ಆರೋಪಗಳನ್ನು ಮಾಡುತ್ತ ಬಂದಿರುವ ಕಾಂಗ್ರೆಸ್, ತನ್ನ ಆಡಳಿತವಿರುವ ರಾಜ್ಯಗಳಲ್ಲಿ ಮಾತ್ರ ಹೂಡಿಕೆಗೆ ಅವಕಾಶ ನೀಡುತ್ತಿದೆ. ಕರ್ನಾಟಕದಲ್ಲಿ ಕೂಡ ಅದಾನಿ ಗ್ರೂಪ್ ಹೂಡಿಕೆಗೆ ಮುಕ್ತ ಅವಕಾಶ ನೀಡೋದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಅದಾನಿ ಗ್ರೂಪ್ ಬಗ್ಗೆ ಇಬ್ಬಗೆಯ ನೀತಿ ಅನುಸರಿಸುತ್ತಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ನವದೆಹಲಿ (ಜೂ.16): ರಾಜ್ಯದಲ್ಲಿ ಹೂಡಿಕೆ ಮಾಡಲು ಪ್ರಸ್ತಾವನೆ ಸಲ್ಲಿಸುವಂತೆ ಅದಾನಿ ಗ್ರೂಪ್ ಗೆ ಸಮಯಾವಕಾಶ ನೀಡೋದಾಗಿ ಕರ್ನಾಟಕ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಖಾಸಗಿ ಚಾನೆಲ್ ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ. ಈ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಹೂಡಿಕೆ ವಿಚಾರದಲ್ಲಿ ಯಾರೊಂದಿಗೆ ಬೇಕಾದರೂ ರಾಜೀ ಮಾಡಿಕೊಳ್ಳಬಲ್ಲದು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಇದು ಕರ್ನಾಟಕದಲ್ಲಿ ಮಾತ್ರವಲ್ಲ, ಕಾಂಗ್ರೆಸ್ ಹಾಗೂ ಕೇಂದ್ರ ಸರ್ಕಾರ ವಿರುದ್ಧ ಕಿಡಿಕಾರುವ ಇತರ ಪ್ರತಿಪಕ್ಷಗಳು ಆಡಳಿತ ನಡೆಸುವ ಅನೇಕ ರಾಜ್ಯಗಳಲ್ಲಿ ಕೂಡ ಅದಾನಿ ಗ್ರೂಪ್ ಗೆ ಹೂಡಿಕೆಗೆ ಅವಕಾಶ ನೀಡಲಾಗಿದೆ. ಹಿಂಡೆನ್ ಬರ್ಗ್ ವರದಿ ಆರೋಪದ ಬೆನ್ನಲ್ಲೇ ಅದಾನಿ ಗ್ರೂಪ್ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಆಂದೋಲನಕ್ಕೆ ಕರೆ ನೀಡಿದ್ದರು. ಹೀಗಾಗಿ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಅದಾನಿ ಗ್ರೂಪ್ ಹೂಡಿಕೆಯನ್ನು ಆಹ್ವಾನಿಸಿರೋದು ಕಾಂಗ್ರೆಸ್ ನ ಇಬ್ಬಗೆಯ ನೀತಿಯನ್ನು ತೋರಿಸುತ್ತದೆ ಎಂದು ಬಿಜೆಪಿಯ ಮಾಜಿ ಶಾಸಕ ಸಿ.ಟಿ.ರವಿ ಆರೋಪಿಸಿದ್ದಾರೆ.
'ಎಷ್ಟು ಹೂಡಿಕೆ ಮಾಡಬೇಕು (2022ನೇ ಸಮಿತಿಯಲ್ಲಿ ನಿರ್ಧರಿಸಿದಂತೆ) ಎಂಬುದರ ಬಗ್ಗೆ ನಾವು ಸ್ಪಷ್ಟ ನೀತಿ ಕೈಗೊಳ್ಳುತ್ತೇವೆ. ಆ ಬಗ್ಗೆ ಮುಂದಿನ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಯಾವಾಗ ಯಾವುದೇ ಒಬ್ಬ ಕೈಗಾರಿಕೋದ್ಯಮಿ ಕೈಗಾರಿಕೆ ಸ್ಥಾಪಿಸಲು ಮುಂದಾದರೆ, ಆಗ ನಾವು ಅವರ ಪ್ರಸ್ತಾವನೆಗಳನ್ನು ಸ್ವೀಕರಿಸುತ್ತೇವೆ. ಅವರು (ಅದಾನಿ ಗ್ರೂಪ್) ಯಾವುದೇ ಆಶ್ವಾಸನೆ ನೀಡಿಲ್ಲ. ಪ್ರಸ್ತಾವನೆಗಳ ಜೊತೆಗೆ ಬರುವಂತೆ ನಾವು ಅವರಿಗೆ ಸಮಯ ನೀಡುತ್ತೇವೆ' ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದರು.
ಭಾರತ ಕಂಡ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ, ಗೌತಮ್ ಅದಾನಿ, ರತನ್ ಟಾಟಾ ಅಲ್ಲವೇ ಅಲ್ಲ; ಮತ್ತ್ಯಾರು?
ಇನ್ನು ಪಾರದರ್ಶಕವಾಗಿರುವ ಹೂಡಿಕೆಗಳು ಹಾಗೂ ರಾಜ್ಯದ ಹಿತಾಸಕ್ತಿ ದೃಷ್ಟಿಯಿಂದ ಅದಾನಿ ಗ್ರೂಪ್ ಹೂಡಿಕೆಯನ್ನು ಕೂಡ ಸ್ವಾಗತಿಸುವ ವಿಚಾರದಲ್ಲಿ ರಾಜ್ಯದ ಬಹುತೇಕ ಕಾಂಗ್ರೆಸ್ ಮುಖಂಡರು ಸ್ಪಷ್ಟತೆ ಹೊಂದಿದ್ದಾರೆ ಎಂದು ಹೇಳಲಾಗಿದೆ. ಹಿಂಡೆನ್ ಬರ್ಗ್ ವರದಿ ಬಳಿಕ ಅದಾನಿ ಗ್ರೂಪ್ ವಿರುದ್ಧ ಕಾಂಗ್ರೆಸ್ ತನಿಖೆಗೆ ಆಗ್ರಹಿಸುವ ಜೊತೆಗೆ ಸಂಸತ್ತಿನಲ್ಲಿ ಸಾಕಷ್ಟು ಗದ್ದಲವನ್ನು ಕೂಡ ಸೃಷ್ಟಿಸಿತ್ತು. ಅದಾನಿ ಗ್ರೂಪ್ ವಿರುದ್ಧ ರಾಹುಲ್ ಗಾಂದಿ ಆಂದೋಲನಕ್ಕೆ ಕರೆ ನೀಡಿದ್ದರು ಕೂಡ. ಆದರೆ, ಪ್ರತಿಪಕ್ಷ ಕಾಂಗ್ರೆಸ್ ಆಡಳಿತದ ಅನೇಕ ರಾಜ್ಯಗಳಲ್ಲಿ ಅದಾನಿ ಗ್ರೂಪ್ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿದೆ.
ಕಳೆದ ವರ್ಷ ರಾಜಸ್ಥಾ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ 'ಇನ್ವೆಸ್ಟ್ ರಾಜಸ್ಥಾನ ಸಮಿತ್' ನಲ್ಲಿ ಗೌತಮ್ ಅದಾನಿ ಅವರನ್ನು ಹೊಗಳಿದ್ದರು. 'ಗುಜರಾತ್ ಧೀರೂಬಾಯಿ ಅಂಬಾನಿ ಹಾಗೂ ಗೌತಮ್ ಅದಾನಿ ಅವರಂತಹ ಮಹಾನ್ ಕೈಗಾರಿಕೋದ್ಯಮಿಗಳು ಹಾಗೂ ಉದ್ಯಮಿಗಳನ್ನು ಸೃಷ್ಟಿಸಿದೆ' ಎಂದು ಹೇಳಿದ್ದರು. ಅದಾನಿ ಅಥವಾ ಅಂಬಾನಿ ಅಥವಾ ಗೃಹ ಮಂತ್ರಿ ಅಮಿತ್ ಶಾ ಅವರ ಪುತ್ರ ಜೈ ಶಾ ಯಾರೇ ಆಗಿರಲಿ, ರಾಜಸ್ಥಾನ ಎಲ್ಲರನ್ನೂ ಸ್ವಾಗತಿಸುತ್ತದೆ. ಏಕೆಂದರೆ ರಾಜಸ್ಥಾನ ಹೂಡಿಕೆ ಹಾಗೂ ಉದ್ಯೊಗವನ್ನು ಬಯಸುತ್ತದೆ' ಎಂದು ಅವರು ಹೇಳಿದ್ದರು.
ಕರ್ನಾಟಕದಲ್ಲಿ ಕೈಗಾರಿಕಾಭಿವೃದ್ಧಿಗೆ ಪ್ರತ್ಯೇಕ ವಿಷನ್ ಗ್ರೂಪ್: ಸಚಿವ ಎಂ.ಬಿ. ಪಾಟೀಲ್
ಇನ್ನು ತನ್ನ ಹೇಳಿಕೆಯನ್ನು ಆಧಾರವಾಗಿಸಿಕೊಂಡು ಕಾಂಗ್ರೆಸ್ ಅನ್ನು ಟೀಕಿಸುತ್ತಿದ್ದ ಬಿಜೆಪಿಗೆ ಗೆಹ್ಲೋಟ್ ಸರಿಯಾಗಿ ತಿರುಗೇಟು ನೀಡಿದ್ದರು ಕೂಡ. 'ಇದು ಖಾಸಗಿ ಕಾರ್ಯಕ್ರಮವಲ್ಲ. ಇದು ಹೂಡಿಕೆದಾರರ ಸಮ್ಮೇಳನ. ಇಲ್ಲಿರುವ 3,000 ಅತಿಥಿಗಳು ಕೂಡ ಕಾಂಗ್ರೆಸ್ ನವರಾ? ಎಂದು ಪ್ರಶ್ನಿಸಿದ್ದರು.
ಇನ್ನು ಈ ವರ್ಷ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ಅದಾಇ ಗ್ರೂಪ್ ವಿರುದ್ಧ ಆರೋಪಗಳನ್ನು ಮಾಡೋದರಿಂದ ದೂರ ಉಳಿಯಲು ಪ್ರಯತ್ನಿಸಿತ್ತು. ಇನ್ನು ಅದಾನಿ ಗ್ರೂಪ್ ಕಾಂಗ್ರೆಸ್ ಆಡಳಿತದ ರಾಜ್ಯಗಳಾದ ಛತ್ತೀಸ್ ಗಢ ಹಾಗೂ ರಾಜಸ್ಥಾನದಲ್ಲಿ ಕೂಡ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿದೆ.
