ನವದೆಹಲಿ(ಫೆ.02): 2030ರ ವೇಳೆಗೆ ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಮಾಣದ ಉದ್ಯೋಗ ವಯೋಮಾನದ ಜನಸಂಖ್ಯೆಯನ್ನು ಭಾರತ ಹೊಂದಲಿದೆ. ಈ ಸಮುದಾಯವು ಕೇವಲ ಶಿಕ್ಷಣ ಮಾತ್ರವಲ್ಲದೇ ಉದ್ಯೋಗ ಮತ್ತು ಜೀವನ ಕೌಶಲ್ಯದ ಅವಶ್ಯಕತೆಯನ್ನೂ ಹೊಂದಿದ್ದಾರೆ. 

ಈ ಸಂಬಂಧ ಈಗಾಗಲೇ ರಾಜ್ಯಗಳ ಶಿಕ್ಷಣ ಸಚಿವರು, ಸಂಸದರು ಸೇರಿದಂತೆ ಶೈಕ್ಷಣಿಕ ವಲಯದ ತಜ್ಞರ ಜೊತೆಗೆ ಸಮಾಲೋಚಿಸಿರುವ ಸರ್ಕಾರ, 2 ಲಕ್ಷಕ್ಕೂ ಹೆಚ್ಚು ಸಲಹೆಗಳನ್ನು ಸ್ವೀಕರಿಸಿದೆ. ಇವುಗಳೆಲ್ಲವನ್ನೂ ಕ್ರೋಢೀಕರಿಸಿ ಶೀಘ್ರವೇ ಹೊಸ ಶೈಕ್ಷಣಿಕ ನೀತಿಯನ್ನು ಪ್ರಕಟಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಿದೆ.

ಕೇಂದ್ರ ಬಜೆಟ್ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪ್ರಸಕ್ತ ಬಜೆಟ್‌ನಲ್ಲಿ ಶೈಕ್ಷಣಿಕ ವಲಯಕ್ಕೆ 99300 ಕೋಟಿ ರು. ಮತ್ತು ಕೌಶಲ್ಯಾಭಿವೃದ್ಧಿಗೆ 3000 ಕೋಟಿ ರು. ವಿನಿಯೋಗಿಸುವುದಾಗಿ ಪ್ರಕಟಿಸಿದೆ.

ಆನ್‌ಲೈನ್‌ ಡಿಗ್ರಿ:

ಉನ್ನತ ಶಿಕ್ಷಣ ಪಡೆಯುವುದರಿಂದ ವಂಚಿತರಾದ ಸಮಾಜದ ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆಂದೇ ಪದವಿಗೆ ತತ್ಸಮಾನವಾದ ಹೊಸ ಕೋರ್ಸ್‌ ಆರಂಭಿಸಲು ನಿರ್ಧರಿಸಿದೆ. ದೇಶದ ಟಾಪ್‌ 100 ರಾರ‍ಯಂಕಿಂಗ್‌ ಪಡೆದ ಶೈಕ್ಷಣಿಕ ಸಂಸ್ಥೆಗಳು ಈ ಕೋರ್ಸ್‌ ನೀಡಲು ಸರ್ಕಾರ ಅವಕಾಶ ಕಲ್ಪಿಸಲಿದೆ. ಆರಂಭಿಕ ಹಂತದಲ್ಲಿ ಕೆಲವು ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಈ ಅವಕಾಶ ಕಲ್ಪಿಸಲಾಗುವುದು.

2 ಹೊಸ ವಿವಿ:

ಪೊಲೀಸ್‌ ವಿಜ್ಞಾನ ಮತ್ತು ವಿಧಿವಿಜ್ಞಾನ ಪರೀಕ್ಷೆ ಮತ್ತು ಸೈಬರ್‌- ವಿಧಿವಿಜ್ಞಾನ ವಲಯದಲ್ಲಿನ ಹೊಸ ಉದ್ಯೋಗ ಸೃಷ್ಟಿಗೆ ನೆರವಾಗುವ ಮತ್ತು ಪರಿಣಿತರ ಸೃಷ್ಟಿನಿಟ್ಟಿನಲ್ಲಿ 2 ಹೊಸ ವಿವಿ ಸ್ಥಾಪಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ರಾಷ್ಟ್ರೀಯ ಪೊಲೀಸ್‌ ವಿಶ್ವವಿದ್ಯಾಲಯ ಮತ್ತು ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ಆರಂಭಿಸಲಾಗುವುದು ಎಂದು ಸರ್ಕಾರ ಹೇಳಿದೆ.

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇಂಟರ್ನ್‌ಶಿಪ್‌:

ವೃತ್ತಿ ಅನುಭವ ಪಡೆಯಲು ನೆರವಾಗುವ ನಿಟ್ಟಿನಲ್ಲಿ ದೇಶಾದ್ಯಂತ ಇರುವ ನಗರ ಸ್ಥಳೀಯ ಸಂಸ್ಥೆಗಳು ಹೊಸ ಎಂಜಿನಿಯರ್‌ ಪದವೀಧರರಿಗೆ ಒಂದು ವರ್ಷಗಳ ಕಾಲ ಇಂಟರ್ನ್‌ಶಿಪ್‌ ಮಾಡಲು ಅವಕಾಶ ಮಾಡಿಕೊಡಲಿವೆ.

ಸ್ಟಡಿ ಇನ್‌ ಇಂಡಿಯಾ:

ಭಾರತವನ್ನು ಶೈಕ್ಷಣಿಕ ಹಬ್‌ ಆಗಿ ಮಾಡುವ ಉದ್ದೇಶದಿಂದ ‘ಸ್ಟಡಿ ಇನ್‌ ಇಂಡಿಯಾ’ ಯೋಜನೆಗೆ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಏಷ್ಯಾ ಮತ್ತು ಆಫ್ರಿಕಾ ದೇಶಗಳಲ್ಲಿನ ವಿದ್ಯಾರ್ಥಿಗಳಿಗಾಗಿ ಇಂಡ್‌-ಸ್ಯಾಟ್‌ ಎಂಬ ಪರೀಕ್ಷೆ ಆಯೋಜಿಸಲಾಗುವುದು. ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಭಾರತದಲ್ಲಿ ಉನ್ನತ ಶಿಕ್ಷಣ ಪಡೆಯಲು ಅರ್ಹತೆ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುವುದು.

ಆಸ್ಪತ್ರೆಗಳೊಂದಿಗೆ ಕಾಲೇಜು ಸಂಯೋಜನೆ:

ಪ್ರಸಕ್ತ ದೇಶದಲ್ಲಿ ನುರಿತ ವೈದ್ಯರು ಮತ್ತು ತಜ್ಞ ವೈದ್ಯರ ಕೊರತೆ ಇದೆ. ಈ ಕೊರತೆ ನಿವಾರಿಸುವ ನಿಟ್ಟಿನಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಇರುವ ವೈದ್ಯಕೀಯ ಕಾಲೇಜುಗಳನ್ನು ಪಿಪಿಪಿ ಮಾದರಿಯಲ್ಲಿ ಸ್ಥಳೀಯ ಜಿಲ್ಲಾಸ್ಪತ್ರೆಗಳೊಂದಿಗೆ ಸಂಯೋಜಿಸಲಾಗುವುದು. ಯಾವ ರಾಜ್ಯಗಳು, ತಮ್ಮ ಆಸ್ಪತ್ರೆಗಳ ಎಲ್ಲಾ ಸೌಲಭ್ಯಗಳನ್ನು ವೈದ್ಯಕೀಯ ಕಾಲೇಜುಗಳಿಗೆ ಬಳಸಿಕೊಳ್ಳಲು ಅವಕಾಶ ಕಲ್ಪಿಸುವುದೋ ಮತ್ತು ಭೂಮಿಯನ್ನು ಅಗ್ಗದ ದರದಲ್ಲಿ ನೀಡಲು ಮುಂದಾಗಲಿವೆಯೋ ಅಂಥ ರಾಜ್ಯಗಳು ಕಾರ್ಯಸಾಧು ಕೊರತೆ ಹಣವನ್ನು ಪಡೆದುಕೊಳ್ಳುವ ಅವಕಾಶವನ್ನು ಪಡೆಯಲಿವೆ.

ಆಸ್ಪತ್ರೆಗಳಿಗೆ ಪದವಿ ಅವಕಾಶ:

ಪ್ರಸಕ್ತ ರಾಷ್ಟ್ರೀಯ ಪರೀಕ್ಷಾ ಮಂಡಳಿಯು ಸ್ನಾತಕೋತ್ತರ ವೈದ್ಯಕೀಯ ಪದವಿ, ಡಿಪ್ಲಮೋ ಮತ್ತು ಫೆಲೋಶಿಪ್‌ಗಳನ್ನು ನೀಡುತ್ತಿವೆ. ಮುಂದಿನ ದಿನಗಳಲ್ಲಿ ಎಲ್ಲಾ ಸೌಕರ್ಯಗಳನ್ನು ಹೊಂದಿರುವ ಆಸ್ಪತ್ರೆಗಳಿಗೂ ಸ್ಥಾನಿಕ ವೈದ್ಯರಿಗೆ ಡಿಎನ್‌ಬಿ/ ಎಫ್‌ಎನ್‌ಬಿ ಕೋರ್ಸ್‌ ನಡೆಸಲು ಅವಕಾಶ ಮಾಡಿಕೊಡಲಾಗುವುದು.

ಬ್ರಿಡ್ಜ್‌ ಕೋರ್ಸ್‌:

ಪ್ರಸಕ್ತ ಶಿಕ್ಷಕರು, ನರ್ಸ್‌ಗಳು, ಅರೆವೈದ್ಯಕೀಯ ಸಿಬ್ಬಂದಿ, ಪಾಲಕರ ಹುದ್ದೆಗಳಿಗೆ ಭಾರೀ ಬೇಡಿಕೆ ಇದೆ. ಆದರೆ ಹಲವು ಸಂದರ್ಭದಲ್ಲಿ ಇವರು ಹೊಂದಿರುವ ಕೌಶಲ್ಯಗಳು, ಉದ್ಯಮದ ಬೇಡಿಕೆ ಪೂರೈಸುವ ಸ್ಥಿತಿಯಲ್ಲಿ ಇರುವುದಿಲ್ಲ. ಹೀಗಾಗಿ ಇಂಥ ಕೊರತೆ ನಿವಾರಿಸಲು ಕೇಂದ್ರ ಆರೋಗ್ಯ ಸಚಿವಾಲಯ, ಕೌಶಲ್ಯ ಅಭಿವೃದ್ಧಿ ಸಚಿವಾಲಯ ಮತ್ತು ವೃತ್ತಿಪರ ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ಬ್ರಿಡ್ಜ್‌ ಕೋರ್ಸ್‌ ಆರಂಭಿಸಿ ತರಬೇತಿ ನೀಡಲಾಗುವುದು. ಈ ಮೂಲಕ ಈ ವಲಯದಲ್ಲಿ ಉದ್ಯೋಗ ಬಯಸುವವರು ವಿದೇಶಕ್ಕೆ ತೆರಳಿದಾಗ ಎದುರಿಸಬಹುದಾದ ಭಾಷಾ ಸಮಸ್ಯೆ, ಕೌಶಲ್ಯದ ಸಮಸ್ಯೆಯನ್ನು ನಿವಾರಿಸಲಾಗುವುದು.

* ದುರ್ಬಲ ಸಮುದಾಯದ ವಿದ್ಯಾರ್ಥಿಗಳಿಗಾಗಿ ಆನ್‌ಲೈನ್‌ ಡಿಗ್ರಿ ಕೋರ್ಸ್‌
* ಶೀಘ್ರವೇ ಹೊಸ ಶೈಕ್ಷಣಿಕ ನೀತಿ ಜಾರಿಗೆ ಕೇಂದ್ರ ಸರ್ಕಾರ ನಿರ್ಧಾರ
* ಶೈಕ್ಷಣಿಕ ವಲಯಕ್ಕೆ 99300 ಕೋಟಿ ರು. ಕೌಶಲ್ಯಾಭಿವೃದ್ಧಿಗೆ 3000 ಕೋಟಿ ರು. ನಿಗದಿ
* ಶೈಕ್ಷಣಿಕ ವಲಯದಲ್ಲೂ ಎಫ್‌ಡಿಐ, ವಿದೇಶಿ ಸಾಲ ಪಡೆಯಲು ಕೇಂದ್ರದ ಅವಕಾಶ
* ನಗರ ಸ್ಥಳೀಯ ಸಂಸ್ಥೆಗಳ ಮೂಲಕವೂ ಎಂಜಿನಿಯರ್‌ಗಳಿಗೆ ಇಂಟರ್ನ್‌ಶಿಪ್‌ಗೆ ಚಾನ್ಸ್‌
* ಸ್ಟಡಿ ಇನ್‌ ಇಂಡಿಯಾ ಯೋಜನೆ ಮೂಲಕ ವಿದೇಶಿ ವಿದ್ಯಾರ್ಥಿಗಳ ಸೆಳೆಯಲು ಯೋಜನೆ
* ರಾಷ್ಟ್ರೀಯ ಪೊಲೀಸ್‌ ವಿವಿ, ರಾಷ್ಟ್ರೀಯ ವಿಧಿವಿಜ್ಞಾನ ವಿವಿ ಸ್ಥಾಪನೆಗೂ ಕೇಂದ್ರದ ನಿರ್ಧಾರ
* ಪಿಪಿಪಿ ಮಾದರಿ ಜಿಲ್ಲಾ ಆಸ್ಪತ್ರೆಗಳೊಂದಿಗೆ ಮೆಡಿಕಲ್‌ ಕಾಲೇಜು ಸಂಯೋಜನೆಗೆ ನಿರ್ಧಾರ
* ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿಗೆ ವಿದೇಶಕ್ಕೆ ತೆರಳಲು ನೆರವಾಗಲು ಬ್ರಿಡ್ಜ್‌ ಕೋರ್ಸ್‌