ಬೆಂಗಳೂರು, (ಫೆ.19): ಸಹಕಾರ ಇಲಾಖೆಯಲ್ಲಿ ಅನಗತ್ಯ ತೊಡಕನ್ನುಂಟು ಮಾಡುವ ಕಾನೂನುಗಳು, ಸುಗಮ ಆಡಳಿತಕ್ಕೆ ತೊಡಕಾಗುವ ಕಾಯ್ದೆಗಳಿದ್ದರೆ, ನನ್ನ ಅಥವಾ ಇಲಾಖೆ ಗಮನಕ್ಕೆ ತಂದರೆ ಅದನ್ನು ಈ ಬಾರಿ ಸದನದಲ್ಲಿ ಚರ್ಚೆಗೆ ತಂದು ತಿದ್ದುಪಡಿ ಮಾಡಲಾಗುವುದು ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಬೆಂಗಳೂರು ನಗರದ ಕೆ.ಆರ್ ರಸ್ತೆ ಬಳಿಯ ಗಾಯನ ಸಮಾಜದಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾ ಕೇಂದ್ರ ಸಹಕಾರಿ (ಬಿ.ಡಿ.ಸಿ.ಸಿ.) ಬ್ಯಾಂಕ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಾಲ ವಿತರಣಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ಈಗಾಗಲೇ ಕೆಲವು ತೊಡಕುಗಳು ನನ್ನ ಗಮನಕ್ಕೆ ಬಂದಿದ್ದು, ಅವುಗಳ ತಿದ್ದುಪಡಿಗೆ ಕ್ರಮವಹಿಸಲಾಗಿದೆ ಎಂದರು.

21 ಡಿಸಿಸಿ ಬ್ಯಾಂಕ್ ಗಳಿಗೆ ಸರ್ಕಾರದ ಷೇರು
21 ಡಿಸಿಸಿ ಬ್ಯಾಂಕ್ ಗಳಿಗೆ ಸರ್ಕಾರದ ಷೇರು ಬಂಡವಾಳ ಹೂಡಲು ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ. ಪ್ರತಿ ಬ್ಯಾಂಕ್ ಗಳಿಗೆ ತಲಾ 10 ಲಕ್ಷ ರೂಪಾಯಿ ಹೂಡಿಕೆ ಮಾಡುವ ಚಿಂತನೆ ಇದ್ದು, ಶೀಘ್ರದಲ್ಲಿ ನಿರ್ಧಾರ ತಿಳಿಸಲಾಗುವುದು ಎಂದು ಹೇಳಿದರು.

5 ಸಾವಿರ ಜನರಿಗೆ ಉದ್ಯೋಗ
ಹಾಲು ಒಕ್ಕೂಟ ಸೇರಿದಂತೆ ಹಲವು ಸಹಕಾರ ಇಲಾಖೆಯ ಅಂಗ ಸಂಸ್ಥೆಗಳಿಂದ ಕೋವಿಡ್ ಸಂದರ್ಭದಲ್ಲಿ 5 ಸಾವಿರ ಉದ್ಯೋಗ ಸೃಷ್ಟಿ ಮಾಡಬೇಕೆಂದು ಆದೇಶ ಕೊಟ್ಟಿದ್ದೆ. ಈಗ ಬೆಂಗಳೂರು ಹಾಲು ಒಕ್ಕೂಟದಿಂದ 279 ಹುದ್ದೆಗಳಿಗೆ ಅರ್ಜಿ ಆಹ್ವಾನುಸಲಾಗಿದೆ. ಇದೇ ರೀತಿ ಹಲವು ಕಡೆ ಒಂದೊಂದಾಗಿ ಹುದ್ದೆಗಳ ನೆಮಕಾತಿಗೆ ಅರ್ಜಿ ಆಹ್ವಾನಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

2021-22ಕ್ಕೆ 20 ಲಕ್ಷ ಕೋಟಿ ರೂ. ಸಾಲ ವಿತರಣೆ ಗುರಿ
2021-22ನೇ ಸಾಲಿಗೆ 28 ಲಕ್ಷ ರೈತರಿಗೆ 20 ಲಕ್ಷ ಕೋಟಿ ರೂ. ಅಲ್ಪಾವಧಿ, ಮಧ್ಯಮಾವಧಿ ಸೇರಿದಂತೆ ಬೆಳೆ ಸಾಲ ವಿತರಣೆ ಗುರಿಯನ್ನು ಮುಖ್ಯಮಂತ್ರಿಗಳು ಹಾಕಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಹೆಚ್ಚಿನ ಅನುದಾನಕ್ಕಾಗಿ ನಬಾರ್ಡ್ ಗೆ ಸಹ ಮನವಿ ಸಲ್ಲಿಸಲಾಗಿದೆ. ಇದರಿಂದ ಹೆಚ್ಚಿನ ರೈತರಿಗೆ ಅನುಕೂಲವಾಗಲಿದೆ ಎಂದರು.

ಡಿಸಿಸಿ ಬ್ಯಾಂಕ್ ಗಳಿಂದ ಉತ್ತಮ ಪ್ರಗತಿ
21 ಡಿಸಿಸಿ ಬ್ಯಾಂಕ್ ಗಳು ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ಬಡವರ ಬಂಧು, ಕಾಯಕ, ಎಸ್ಸಿ ಎಸ್ಟಿ ಯೋಜನೆಗಳು ಹೆಚ್ಚೆಚ್ಚು ಜನರಿಗೆ ತಲುಪುವಂತಾಗಬೇಕು. ಈ ನಿಟ್ಟಿನಲ್ಲಿ ಎಲ್ಲಾ ಡಿಸಿಸಿ ಬ್ಯಾಂಕ್ ಗಳು ಕಾರ್ಯನಿರ್ವಹಣೆ ಮಾಡುತ್ತಿವೆ. ಬಡವರ ಬಂಧು ಯೋಜನೆ ಯಡಿ ತುಮಕೂರು ಡಿಸಿಸಿ ಬ್ಯಾಂಕ್ ಅತ್ಯುತ್ತಮವಾಗಿ ಸಾಲ ವಿತರಣೆ ಮಾಡುತ್ತಿದ್ದು, ಉಳಿದ ಬ್ಯಾಂಕ್ ಗಳು ಉತ್ತಮ ಪ್ರಗತಿಯನ್ನು ಸಾಧಿಸಿವೆ ಸಂತಸ ವ್ಯಕ್ತಪಡಿಸಿದರು.

ಗುಲ್ಬರ್ಗ ಡಿಸಿಸಿ ಬ್ಯಾಂಕ್ ಹೊರತುಪಡಿಸಿ ಉಳಿದ ಎಲ್ಲ ಬ್ಯಾಂಕ್ ಗಳೂ ಸಹ ರೈತರಿಗೆ ಸಮರ್ಪಕವಾಗಿ ಸಾಲ ನೀಡುವ ಹಾಗೂ ಇನ್ನಿತರ ಯೋಜನೆಗಳನ್ನು ತಲುಪಿಸುವ ಕಾರ್ಯವನ್ನು ಮಾಡುತ್ತಿದ್ದು ಇದೀಗ ಗುಲ್ಬರ್ಗ ಡಿಸಿಸಿ ಬ್ಯಾಂಕ್ ಗೆ ಸುಮಾರು 200 ಕೋಟಿ ರೂಪಾಯಿ ಅನುದಾನವನ್ನು ನೀಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ ಈ ಮೂಲಕ ರೈತರಿಗೆ ಯೋಜನೆ ತಲುಪಲು ಸಾಧ್ಯವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.