ದಿನಕ್ಕೆ 7ರೂ.ಗಳಿಸುತ್ತಿದ್ದ ವ್ಯಕ್ತಿ ಈಗ 3 ಕೋಟಿ ವಹಿವಾಟು ನಡೆಸೋ ಸಂಸ್ಥೆ ಒಡೆಯ;ಈತನ ಕಥೆ ಸಿನಿಮಾಕ್ಕಿಂತಲೂ ರೋಚಕ
ಹೋಟೆಲ್ ನಲ್ಲಿ ವೇಯ್ಟರ್ ಆಗಿ ಕೆಲಸ ಮಾಡುತ್ತ ದಿನಕ್ಕೆ 7ರೂ. ಗಳಿಸುತ್ತಿದ್ದ ಬಿಹಾರದ ಬಡ ಕುಟುಂಬದ ಹುಡುಗನೊಬ್ಬ ಇಂದು 3 ಕೋಟಿ ವಹಿವಾಟು ನಡೆಸೋ ಸಂಸ್ಥೆಯ ಮಾಲೀಕನಾಗಿದ್ದಾನೆ. ಈತನ ಬದುಕಿನ ಕಥೆ ಯಾವ ಸಿನಿಮಾ ಕಥೆಗಿಂತಲೂ ಕಡಿಮೆಯಿಲ್ಲ.
Business Desk:ಬಾಲ್ಯ ಅನ್ನೋದು ಕೋಮಲ, ಸುಂದರ. ಆದರೆ, ಕೆಲವರಿಗೆ ಮಾತ್ರ ಬಾಲ್ಯ ಕೂಡ ಕಷ್ಟ-ಕಾರ್ಪಣ್ಯಗಳ ಸರಮಾಲೆಯನ್ನೇ ಹೊದ್ದಿರುತ್ತದೆ. ಆದರೆ, ಆ ದಿನಗಳ ಸಂಘರ್ಷವೇ ಭವಿಷ್ಯದ ಯಶಸ್ಸಿಗೆ ಮುನ್ನುಡಿ ಆಗಿರುತ್ತದೆ. ಈತ ಕೂಡ ಅಷ್ಟೇ, ಬಾಲ್ಯದಲ್ಲಿ ಬರೀ ಕಷ್ಟವನ್ನೇ ಉಂಡು ಮಲಗಿದವನು. ಸೂರ್ಯ ಹುಟ್ಟಿದ ತಕ್ಷಣ ಹೋಟೆಲ್ ನಲ್ಲಿ ದುಡಿಯಲು ಆರಂಭಿಸಿದ್ರೆ ಸೂರ್ಯ ದಿಗಂತದಿಂದ ಕೆಳಗೆ ಜಾರುವ ತನಕ ಈತನ ಕಾಯಕ ಮುಂದುವರಿಯುತ್ತಿತ್ತು. ಈ ಇಡೀ ದಿನದ ದುಡಿಮೆಗೆ ಸಿಗುತ್ತಿದ್ದ ಸಂಬಳ ಬರೀ 7ರೂಪಾಯಿ. ಅದರಿಂದಲೇ ಜೀವನ ನಿರ್ವಹಣೆ ಮಾಡಬೇಕಾದ ಅನಿವಾರ್ಯತೆ. ಆದರೂ ಶಿಕ್ಷಣ ಮುಂದುವರಿಸಿದೀತ ಮುಂದೆ ಸ್ವಂತ ಉದ್ಯಮ ಸ್ಥಾಪಿಸುವ ಮೂಲಕ ಇಂದು ವಾರ್ಷಿಕ 3 ಕೋಟಿ ರೂ. ವಹಿವಾಟು ನಡೆಸೋ ಸಂಸ್ಥೆಯ ಮಾಲೀಕನಾಗಿದ್ದಾನೆ. ದೇವಾಲಯಗಳಲ್ಲಿ ಬಳಸಿದ ಹೂಗಳಿಂದ ಊದಿನ ಕಡ್ಡಿ ಸಿದ್ಧಪಡಿಸುವ ಈತನ ಉದ್ಯಮ ಸಾಕಷ್ಟು ಜನಪ್ರಿಯತೆ ಗಳಿಸಿದೆ ಕೂಡ. ಬಿಹಾರದ ಬಡ ಕುಟುಂಬದಲ್ಲಿ ಜನಿಸಿದ ಈತನ ಹೆಸರು ಅಮರ್ ದೀಪ್ ಕುಮಾರ್. ಈತನ ಬದುಕು, ಸಾಧನೆ ಹಲವರಿಗೆ ದಾರಿದೀಪ.
ಈಗ 40ವರ್ಷ ವಯಸ್ಸಿನ ಅಮರ್ ದೀಪ್ ಬದುಕಿನ ಹಾದಿಯಲ್ಲಿ ಕಲ್ಲುಮುಳ್ಳುಗಳೇ ತುಂಬಿದ್ದವು. ಆದರೂ ಅಂಜದೆ ಮುನ್ನಡೆದ ಅಮರ್ ದೀಪ್ ಇಂದು ಕೋಟ್ಯಂತರ ರೂಪಾಯಿ ವಹಿವಾಟು ನಡೆಸೋ ಸಂಸ್ಥೆಯ ಮಾಲೀಕ. ಈತನ ಜೀವನದ ಕಥೆ ಯಾವುದೇ ಸಿನಿಮಾಗಿಂತಲೂ ಕಡಿಮೆಯಿಲ್ಲ. ಗ್ರಾಮದ ಹೋನಲ್ಲಿ ವೇಯ್ಟರ್ ಆಗಿ ಕೆಲಸಕ್ಕೆ ಸೇರಿದ ಅಮರ್ ದೀಪ್, ಅಲ್ಲಿ ಪಾತ್ರೆ ತೊಳೆಯೋದ್ರಿಂದ ಹಿಡಿದು ಎಲ್ಲ ಕೆಲಸಗಳನ್ನು ಮಾಡಿದರು. ಬೆಳಗ್ಗೆ ಸೂರ್ಯ ಮೂಡುತ್ತಿದ್ದಂತೆ ಪ್ರಾರಂಭವಾಗುತ್ತಿದ್ದ ಈತನ ದಿನಚರಿ ಸೂರ್ಯ ಮುಳುಗುವ ತನಕ ನಡೆಯುತ್ತಿತ್ತು. ಬಿಡುವಿಲ್ಲದ ದುಡಿಮೆಗೆ ಪ್ರತಿಫಲವಾಗಿ ಸಿಗುತ್ತಿದ್ದದ್ದು ದಿನಕ್ಕೆ ಬರೀ ರೂ. ಆದರೂ ಅಮರ್ ದೀಪ್ ಶಿಕ್ಷಣದ ಕಸನು ಕಂಡರು.
ಕುಡಿದು ಮನೆಯಲ್ಲಿಟ್ಟಿದ್ದ ಖಾಲಿ ಬಿಯರ್ ಬಾಟಲಿ ಮಾರಿಯೇ ಕೋಟ್ಯಾಧಿಪತಿಯಾದ!
ಸಂಕಷ್ಟದಲ್ಲೇ ಎಸ್ ಎಸ್ಎಲ್ ಸಿ ಉತ್ತೀರ್ಣ
ಹೋಟೆಲ್ ನಲ್ಲೇ ದುಡಿಯುತ್ತಲೇ 1989 ಹಾಗೂ 1996ರ ನಡುವಿನ ಸಂಕಷ್ಟದ ಸಮಯದಲ್ಲೇ ಅಮರ್ ದೀಪ್ ಎಸ್ ಎಸ್ ಎಲ್ ಸಿ ಉತ್ತೀರ್ಣರಾದರು. ಅಷ್ಟೇ ಅಲ್ಲ, ಅನೇಕ ಯುವಜನರಿಗೆ ಟ್ಯೂಷನ್ ಕೂಡ ನೀಡಲು ಪ್ರಾರಂಭಿಸಿದರು. ಅಮರ್ ದೀಪ್ ಅಷ್ಟಕ್ಕೆ ತೃಪ್ತರಾಗಲಿಲ್ಲ. ಇನ್ನಷ್ಟು ಶಿಕ್ಷಣ ಪಡೆಯುವ ಹಂಬಲದಿಂದ ಪಟ್ನಾಗೆ ತೆರಳಿದರು. ಅಲ್ಲಿಂದ ಆ ಬಳಿಕ ದೆಹಲಿಗೆ ತೆರಳಿದರು. ಅಲ್ಲಿ ನಾಗರಿಕ ಸೇವಾ ಪರೀಕ್ಷೆಗೆ ತರಬೇತಿ ನೀಡುವ ಸಂಸ್ಥೆ ಸೇರಿದರು. ಆದರೆ, ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಅವರಿಗೆ ಯಶಸ್ಸು ಸಿಗಲಿಲ್ಲ.
ಇನ್ನಷ್ಟು ಜ್ಞಾನ ಗಳಿಸಬೇಕೆಂಬ ಹಂಬಲ ಅಮರ್ ದೀಪ್ ಅವರನ್ನು ದಕ್ಷಿಣ ಕೊರಿಯಾ ಹಾಗೂ ಥೈಲ್ಯಾಂಡ್ ಮುಂತಾದ ರಾಷ್ಟ್ರಗಳಿಗೆ ಕರೆದುಕೊಂಡು ಹೋಯ್ತು. ಬೆಂಗಳೂರಿನಲ್ಲಿ ಕಾರ್ಪೋರೇಟ್ ವಲಯದಲ್ಲಿ ಕಾರ್ಯನಿರ್ವಹಿಸುವ ಸಮಯದಲ್ಲಿ ಅವರೊಳಗಿನ ಸೇವಾ ಮನೋಭಾವ ಜಾಗೃತವಾಯಿತು. ಏನಾದರೂ ಹೊಸತನ್ನು ಮಾಡಬೇಕೆಂಬ ತುಡಿತ ಹೆಚ್ಚಿತು. ಸ್ಥಳೀಯ ಸಾಮಾಜಿಕ ಸೇವಾ ಕಾರ್ಯಕರ್ತರಿಂದ ಪ್ರೇರಣೆಗೊಂಡು ಬಡವರ್ಗದ ಜನರಿಗೆ ನೆರವು ನೀಡಬೇಕೆಂದು ನಿರ್ಧರಿಸಿದರು. ಇದೇ ಸಮಯದಲ್ಲಿ ಅವರ ಪತ್ನಿ ಬಯೋಕೆಮಿಸ್ಟ್ರಿಯಲ್ಲಿ ಪಿಎಚ್ ಡಿ ಪದವಿ ಹೊಂದಿರುವ ಡಾ.ಹೇಮಲತಾ ಸಿಂಗ್ ಅವರನ್ನು ಹುಟ್ಟೂರಿಗೆ ಮರಳುವಂತೆ ಒತ್ತಾಯಿಸಿದರು.
ಮನೆಯಲ್ಲಿ ಟಾಯ್ಲೆಟ್ ಇದ್ರೂ ತೋಟಕ್ಕೆ ಗೆಸ್ಟ್ ಕಳಿಸುವ ಈಕೆ ಅದಕ್ಕೂ ಹಣ ಪಡೆಯೋದ್ಯಾಕೆ?
6ಲಕ್ಷ ಹೂಡಿಕೆಯಿಂದ ಉದ್ಯಮ ಸ್ಥಾಪನೆ
ಹುಟ್ಟೂರಾದ ರಾಮಪುರ್ ಸಂಥುಗೆ ಹಿಂತಿರುಗಿದ ಅಮರ್ ದೀಪ್ ಹಾಗೂ ಅವರ ಪತ್ನಿ ಎನ್ ಜಿಒ ಸ್ಥಾಪಿಸಿದರು. ಆ ಬಳಿಕ 2019ರಲ್ಲಿ 'ಮೊರಂಗ್ ದೇಶ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್' ಎಂಬ ಸಂಸ್ಥೆ ಪ್ರಾರಂಭಿಸಿದರು. ಬರೀ 6 ಲಕ್ಷ ರೂ. ಹೂಡಿಕೆಯೊಂದಿಗೆ ಊದಿನ ಕಡ್ಡಿ ಉತ್ಪಾದಿಸುವ ಸಂಸ್ಥೆ ಸ್ಥಾಪಿಸಿದರು. ಇದರ ಮೂಲಕ ಸ್ಥಳೀಯ 100ಕ್ಕೂ ಅಧಿಕ ಜನರಿಗೆ ಉದ್ಯೋಗ ಒದಗಿಸಿದ್ದಾರೆ. ಅಲ್ಲದೆ, ಇವರ ಊದಿನ ಕಡ್ಡಿ ಸಂಸ್ಥೆ ಇತರ ಸಂಸ್ಥೆಗಳಿಗಿಂತ ಭಿನ್ನವಾಗಿದೆ. ಇವರು ದೇವಾಲಯಗಳಲ್ಲಿ ಬಳಸಿದ ಹೂಗಳನ್ನು ಊದಿನ ಕಡ್ಡಿ ಉತ್ಪಾದನೆಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಈ ಮೂಲಕ ಪರಿಸರ ಕಾಳಜಿಯನ್ನು ಕೂಡ ಉತ್ತೇಜಿಸುತ್ತಿದ್ದಾರೆ.
ಪ್ರಸ್ತುತ ಅಮರ್ ದೀಪ್ ಅವರ ಸಂಸ್ಥೆ ವಾರ್ಷಿಕ ಮೂರು ಕೋಟಿ ರೂ. ವಹಿವಾಟು ನಡೆಸುತ್ತಿದೆ. ಮುಂದಿನ ದಿನಗಳಲ್ಲಿ 10 ಕೋಟಿ ರೂ. ವಹಿವಾಟು ನಡೆಸುವ ಗುರಿಯನ್ನು ಅಮರ್ ದೀಪ್ ಹೊಂದಿದ್ದಾರೆ.