ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (NSE) ತನ್ನ ಬಹುನಿರೀಕ್ಷಿತ ಐಪಿಒ ಬಿಡುಗಡೆಗೆ ಸಜ್ಜಾಗಿದೆ. ಈ ಐಪಿಒ ಮೂಲಕ, ಎಸ್‌ಬಿಐ ಸೇರಿದಂತೆ ಹಲವು ಸರ್ಕಾರಿ ಸ್ವಾಮ್ಯದ ಹಣಕಾಸು ಸಂಸ್ಥೆಗಳು ತಮ್ಮ ಆರಂಭಿಕ ಅತಿ ಕಡಿಮೆ ಹೂಡಿಕೆಗೆ ಸಾವಿರಾರು ಕೋಟಿ ರೂಪಾಯಿಗಳ ಬೃಹತ್ ಲಾಭ ಗಳಿಸಲಿವೆ.

ಮುಂಬೈ (ಜೂ.18): ದೇಶದ ಅತಿದೊಡ್ಡ ಶೇರು ಮಾರುಕಟ್ಟೆಯಾದ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (NSE) ಬಹುಕಾಲದಿಂದ ನಿರೀಕ್ಷಿಸುತ್ತಿದ್ದ ಆರಂಭಿಕ ಸಾರ್ವಜನಿಕ ಕೊಡುಗೆ (IPO) ಬಿಡುಗಡೆಗೆ ಸಜ್ಜಾಗಿದೆ. ಈ ಐಪಿಒ ಮೂಲಕ ಭಾರತದ ಸರ್ಕಾರಿ ಸ್ವಾಮ್ಯದ ಹಣಕಾಸು ಸಂಸ್ಥೆಗಳು ಆರಂಭಿಕ ದಿನಗಳಲ್ಲಿ ಮಾಡಿದ್ದ ಹೂಡಿಕೆಗೆ ಹಿಂದೆಂದೂ ಕಾಣದ ಅತ್ಯಂತ ಲಾಭದಾಯಕ ರಿಟರ್ನ್ಸ್ ಸಿಗುವುದು ಖಚಿತವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎನ್‌ಎಸ್‌ಇ ಸಲ್ಲಿಸಿರುವ ಡ್ರಾಫ್ಟ್‌ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ (DRHP) ಮಾಹಿತಿ ಪ್ರಕಾರ, ಐಪಿಒನಲ್ಲಿ ಪ್ರತಿ ಷೇರಿನ ಬೆಲೆಯನ್ನು ₹2,000 ಎಂದು ಅಂದಾಜಿಸಿದರೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸುಮಾರು ₹4,950 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಲಿದೆ. ವಿಶೇಷವೆಂದರೆ, ಈ ಒಟ್ಟು ಷೇರುಗಳನ್ನು ಎಸ್‌ಬಿಐ ಖರೀದಿಸಿದ್ದ ಸರಾಸರಿ ವೆಚ್ಚ ಕೇವಲ ₹1.98 ಕೋಟಿ ಮಾತ್ರ! ಈ ಡ್ರಾಫ್ಟ್‌ ವಿವರಗಳು ಕಳೆದ ಮೂರು ದಶಕಗಳಲ್ಲಿ ಭಾರತದ ಅತಿದೊಡ್ಡ ಶೇರು ಮಾರುಕಟ್ಟೆ ಸೃಷ್ಟಿಸಿರುವ ಅಗಾಧ ಸಂಪತ್ತಿನ ಅಪರೂಪದ ಚಿತ್ರಣವನ್ನು ತೆರೆದಿಟ್ಟಿವೆ.

ಎಸ್‌ಬಿಐ ಪಾಲಿಗೆ ಚಿನ್ನದ ಮೊಟ್ಟೆ ಇಟ್ಟ ಕೋಳಿ!

ಆಫರ್ ಫಾರ್ ಸೇಲ್ (OFS) ಮೂಲಕ ಎಸ್‌ಬಿಐ ಒಟ್ಟು 2.475 ಕೋಟಿ ಷೇರುಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಯೋಜಿಸಿದೆ. ಕಳೆದ ಮೂರು ದಶಕಗಳಲ್ಲಿ ನಡೆದ ಹಲವು ಷೇರು ವಿತರಣೆಗಳು, ಬೋನಸ್ ಷೇರುಗಳ ಹಂಚಿಕೆ ಮತ್ತು ಬಂಡವಾಳ ಮರುರಚನೆಯ (Capital Restructuring) ಕಾರಣದಿಂದಾಗಿ, ಎಸ್‌ಬಿಐ ಹೊಂದಿರುವ ಷೇರುಗಳ ಸರಾಸರಿ ಖರೀದಿ ವೆಚ್ಚ ಪ್ರತಿ ಷೇರಿಗೆ ಕೇವಲ ₹0.80 (80 ಪೈಸೆ) ಆಗಿರುವುದು ವಿಶೇಷ! ಈಗ ಐಪಿಒನಲ್ಲಿ ಪ್ರತಿ ಷೇರಿಗೆ ₹2,000 ದರ ನಿಗದಿಯಾದರೆ, ಎಸ್‌ಬಿಐ ಮಾರಾಟ ಮಾಡಲಿರುವ ಒಟ್ಟು ಪಾಲಿನ ಮೌಲ್ಯ ₹4,950 ಕೋಟಿ ತಲುಪಲಿದ್ದು, ಅಂದಾಜು ₹4,948 ಕೋಟಿಯಷ್ಟು ಬೃಹತ್ ಲಾಭ ಬ್ಯಾಂಕಿನ ಪಾಲಾಗಲಿದೆ.

ಇತರ ಬ್ಯಾಂಕ್, ಹಣಕಾಸು ಸಂಸ್ಥೆಗಳಿಗೂ ಭರ್ಜರಿ ಲಾಭ

ಈ ಬಂಪರ್ ಲಾಭ ಕೇವಲ ಎಸ್‌ಬಿಐಗೆ ಮಾತ್ರ ಸೀಮಿತವಾಗಿಲ್ಲ. ಎನ್‌ಎಸ್‌ಇ ಆರಂಭದ ದಿನಗಳಲ್ಲಿ ಅದಕ್ಕೆ ಬೆನ್ನೆಲುಬಾಗಿ ನಿಂತಿದ್ದ ಹಲವು ಸಾರ್ವಜನಿಕ ವಲಯದ ಸಂಸ್ಥೆಗಳು ಇಂದು ಅನಿರೀಕ್ಷಿತ ಪ್ರಮಾಣ ಲಾಭ ಪಡೆದುಕೊಳ್ಳಲಿವೆ.

ಬ್ಯಾಂಕ್ ಆಫ್ ಬರೋಡಾ (BoB): ಬ್ಯಾಂಕ್ ಆಫ್ ಬರೋಡಾದ ಷೇರು ಖರೀದಿ ವೆಚ್ಚ ಪ್ರತಿ ಷೇರಿಗೆ ಕೇವಲ ₹0.54 (54 ಪೈಸೆ) ಆಗಿದೆ. ಕೇವಲ ₹59 ಲಕ್ಷದ ಹೂಡಿಕೆ ಮಾಡಿದ್ದ ಬ್ಯಾಂಕ್, ಈಗ ₹2,197 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಲಿದೆ.

ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್: ಪ್ರತಿ ಷೇರನ್ನು ಕೇವಲ ₹0.46 (46 ಪೈಸೆ) ವೆಚ್ಚದಲ್ಲಿ ಖರೀದಿಸಿದ್ದ ಈ ಸಂಸ್ಥೆ, ತನ್ನ ಅಂದಾಜು ₹50 ಲಕ್ಷದ ಹೂಡಿಕೆಯಿಂದ ಬರೋಬ್ಬರಿ ₹2,178 ಕೋಟಿ ಮೌಲ್ಯದ ಷೇರುಗಳನ್ನು ನಗದೀಕರಿಸಿಕೊಳ್ಳಲು ಮುಂದಾಗಿದೆ.

ವಿಮಾ ಕಂಪನಿಗಳಿಗೂ ಒಲಿದ ಅದೃಷ್ಟ

ವಿಮಾ ವಲಯದ ಪ್ರಮುಖ ಸಂಸ್ಥೆಗಳಾದ 'ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ' ಮತ್ತು 'ನ್ಯಾಷನಲ್ ಇನ್ಶೂರೆನ್ಸ್ ಕಂಪನಿ'ಗಳು ಪ್ರತಿ ಷೇರನ್ನು ಕೇವಲ ₹0.32 (32 ಪೈಸೆ) ಸರಾಸರಿ ವೆಚ್ಚದಲ್ಲಿ ಖರೀದಿಸಿದ್ದವು. ಈಗಿನ ಅಂದಾಜು ಐಪಿಒ ದರದ ಪ್ರಕಾರ ನ್ಯೂ ಇಂಡಿಯಾ ಅಶ್ಯೂರೆನ್ಸ್ ಆಫರ್ ಮಾಡುತ್ತಿರುವ ಷೇರುಗಳ ಮೌಲ್ಯ ಸುಮಾರು ₹2,100 ಕೋಟಿ ತಲುಪಲಿದೆ. ನ್ಯಾಷನಲ್ ಇನ್ಶೂರೆನ್ಸ್ ಸಂಸ್ಥೆಯ ಪಾಲು ಸುಮಾರು ₹1,200 ಕೋಟಿ ರೂಪಾಯಿ ಆಗಿದೆ.

ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ ಪ್ರತಿ ಷೇರಿಗೆ ₹0.50 (50 ಪೈಸೆ) ಖರೀದಿ ವೆಚ್ಚ ಹೊಂದಿದ್ದು, ಅದು ಕೂಡ ಸುಮಾರು ₹1,200 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಲಿದೆ.

ಮಾರುಕಟ್ಟೆಗೆ ಕೊಂಚ ತಡವಾಗಿ ಹಾಗೂ ಹೆಚ್ಚಿನ ಬೆಲೆಗೆ ಪ್ರವೇಶ ಪಡೆದ ಹೂಡಿಕೆದಾರರೂ ಕೂಡ ದೊಡ್ಡ ಲಾಭವನ್ನೇ ಗಳಿಸಲಿದ್ದಾರೆ. ಉದಾಹರಣೆಗೆ, ಜನರಲ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (GIC) ಪ್ರತಿ ಷೇರಿಗೆ ಸರಾಸರಿ ₹5.26 ವೆಚ್ಚದಲ್ಲಿ ಒಟ್ಟು ₹5.6 ಕೋಟಿ ಹೂಡಿಕೆ ಮಾಡಿತ್ತು. ಈಗ ಅದು ₹2,131 ಕೋಟಿಗೂ ಅಧಿಕ ಮೌಲ್ಯದ ಷೇರುಗಳನ್ನು ನಗದೀಕರಿಸಿಕೊಳ್ಳಲಿದೆ.

ವಿದೇಶಿ ಹೂಡಿಕೆದಾರರಿಗೂ ಮಲ್ಟಿಬ್ಯಾಗರ್ ರಿಟರ್ನ್ಸ್

ಎನ್‌ಎಸ್‌ಇ ಬೆಳವಣಿಗೆಯ ನಂತರದ ಹಂತಗಳಲ್ಲಿ ಪ್ರವೇಶಿಸಿದ ವಿದೇಶಿ ಹೂಡಿಕೆದಾರರ ಖರೀದಿ ವೆಚ್ಚ ಹೆಚ್ಚಿದ್ದರೂ, ₹2,000 ಐಪಿಒ ದರದಲ್ಲಿ ಅವರಿಗೆ 'ಮಲ್ಟಿಬ್ಯಾಗರ್' (ಹಲವು ಪಟ್ಟು) ಲಾಭ ಸಿಗಲಿದೆ.

ಎಮ್‌ಎಸ್ ಸ್ಟ್ರಾಟೆಜಿಕ್ (ಮಾರಿಷಸ್) ಲಿಮಿಟೆಡ್: ಪ್ರತಿ ಷೇರಿಗೆ ಸರಾಸರಿ ₹66.54 ವೆಚ್ಚದಲ್ಲಿ ಹೂಡಿಕೆ ಮಾಡಿದೆ.

ಅರಂಡಾ ಇನ್ವೆಸ್ಟ್‌ಮೆಂಟ್ಸ್ (ಮಾರಿಷಸ್) ಪ್ರೈವೇಟ್ ಲಿಮಿಟೆಡ್: ಪ್ರತಿ ಷೇರಿಗೆ ₹62.38 ಪಾವತಿಸಿದೆ.

ಕೆನಡಾ ಪೆನ್ಷನ್ ಪ್ಲಾನ್ ಇನ್ವೆಸ್ಟ್‌ಮೆಂಟ್ ಬೋರ್ಡ್ (CPPIB): ಮಾರಾಟ ಪ್ರಕ್ರಿಯೆಯಲ್ಲಿರುವ ಹೂಡಿಕೆದಾರರ ಪೈಕಿ ಅತಿ ಹೆಚ್ಚು ಅಂದರೆ ಪ್ರತಿ ಷೇರಿಗೆ ₹324.13 ಖರೀದಿ ವೆಚ್ಚವನ್ನು ಹೊಂದಿದೆ.

ಐಪಿಒ ಅಧಿಕೃತವಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಾಗ ಅಂತಿಮ ಮೌಲ್ಯಮಾಪನ ನಿರ್ಧಾರವಾಗಲಿದೆ. ಆದರೆ, ಡ್ರಾಫ್ಟ್‌ನಲ್ಲಿ ಬಹಿರಂಗವಾಗಿರುವ ಈ ಹೂಡಿಕೆ ವೆಚ್ಚದ ವಿವರಗಳು, ಕಳೆದ ಮೂರು ದಶಕಗಳಲ್ಲಿ ಭಾರತೀಯ ಬಂಡವಾಳ ಮಾರುಕಟ್ಟೆಯ ಬೆಳವಣಿಗೆಯೊಂದಿಗೆ ಎನ್‌ಎಸ್‌ಇ ಎಷ್ಟು ಬೃಹತ್ ಪ್ರಮಾಣದ ಆಸ್ತಿ ಮತ್ತು ಮೌಲ್ಯವನ್ನು ಸೃಷ್ಟಿಸಿದೆ ಎಂಬುದನ್ನು ಸ್ಪಷ್ಟಪಡಿಸುತ್ತವೆ. ಎಸ್‌ಬಿಐ ಸೇರಿದಂತೆ ಹಲವು ಆರಂಭಿಕ ಸಾಂಸ್ಥಿಕ ಹೂಡಿಕೆದಾರರ ಪಾಲಿಗೆ ಈ ಐಪಿಒ, ಭಾರತೀಯ ಹಣಕಾಸು ವಲಯದ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ದೀರ್ಘಾವಧಿ ಕಾರ್ಯತಂತ್ರದ ಹೂಡಿಕೆಯಾಗಿ ದಾಖಲಾಗಲಿದೆ.