ಅಪ್ರಾಪ್ತ ಮಕ್ಕಳ ಭವಿಷ್ಯ ಭದ್ರ, ನಾಳೆಯಿಂದ ಶುರುವಾಗಲಿದೆ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ
ನರೇಂದ್ರ ಮೋದಿ ಸರ್ಕಾರ ಘೋಷಣೆ ಮಾಡಿರುವ ಮಕ್ಕಳ ಯೋಜನೆ ನಾಳೆಯಿಂದ ಜಾರಿಗೆ ಬರಲಿದೆ. ನಿಮ್ಮ ಮಕ್ಕಳು, ಭವಿಷ್ಯದಲ್ಲಿ ಆರ್ಥಿಕ ಸದೃಢತೆ ಸಾಧಿಸಬೇಕು ಅಂದ್ರೆ ನಾಳೆಯೇ ಹೂಡಿಕೆ ಶುರು ಮಾಡಿ. ವರ್ಷಕ್ಕೆ ಸಾವಿರ ಕಟ್ಟಿದ್ರೂ ನಿವೃತ್ತಿ ಟೈಂನಲ್ಲಿ ನೆಮ್ಮದಿಯಾಗಿರ್ತಾರೆ ಮಕ್ಕಳು.
ಕೇಂದ್ರ ಸರ್ಕಾರ ತನ್ನ ಬಜೆಟ್ 2024-25 (Central Government Budget 2024-25) ರಲ್ಲಿ ಎನ್ ಪಿಸಿ ವಾತ್ಸಲ್ಯ ಯೋಜನೆ (NPS Vatsalya Yojana) ಯ ಘೋಷಣೆ ಮಾಡಿತ್ತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಸೆಪ್ಟೆಂಬರ್ 18 ಅಂದ್ರೆ ನಾಳೆ ಎನ್ ಪಿಎಸ್ ವಾತ್ಸಲ್ಯ ಯೋಜನೆಯನ್ನು ಅಧಿಕೃತವಾಗಿ ಆರಂಭಿಸಲಿದ್ದಾರೆ. ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಿರ್ಮಲಾ ಸೀತಾರಾಮನ್, ಎನ್‌ಪಿಎಸ್ ವಾತ್ಸಲ್ಯದ ಸದಸ್ಯತ್ವ ಪಡೆಯಲು ಆನ್‌ಲೈನ್ ಪ್ಲಾಟ್ಫಾರ್ಮ್ ಶುರು ಮಾಡಲಿದ್ದಾರೆ. ಅಲ್ಲದೆ ಯೋಜನೆಯ ಕರಪತ್ರವನ್ನು ಬಿಡುಗಡೆ ಮಾಡಲಿದ್ದಾರೆ. ದೇಶದಾದ್ಯಂತ ಸುಮಾರು 75 ಸ್ಥಳಗಳಲ್ಲಿ ಎನ್‌ಪಿಎಸ್ ವಾತ್ಸಲ್ಯ ಕಾರ್ಯಕ್ರಮಗಳನ್ನು ಏಕಕಾಲದಲ್ಲಿ ಆಯೋಜಿಸಲಾಗಿದೆ.
ಮೋದಿ ಸರ್ಕಾರ (Modi Govt) ಶುರು ಮಾಡಲಿರುವ ಎನ್ ಪಿಎಸ್ ವಾತ್ಸಲ್ಯ ಯೋಜನೆ ಎಂದ್ರೇನು? : ಎನ್‌ಪಿಎಸ್ ವಾತ್ಸಲ್ಯ ಎಂಬುದು ಮೋದಿ ಸರ್ಕಾರದ ಮುಖ್ಯ ಯೋಜನೆಗಳಲ್ಲಿ ಒಂದಾಗಿದೆ. ಮಕ್ಕಳ ಆರ್ಥಿಕ ಭವಿಷ್ಯವನ್ನು ಸುಭದ್ರಗೊಳಿಸಲು ಈ ಯೋಜನೆಯನ್ನು ಪ್ರಾರಂಭಿಸಲಾಗ್ತಿದೆ . ಇದು ಭಾರತದ ಪಿಂಚಣಿ ವ್ಯವಸ್ಥೆಯಲ್ಲಿ ಒಂದು ಪ್ರಮುಖ ಹೆಜ್ಜೆಯಾಗಲಿದೆ. ಮಕ್ಕಳ ಈ ಯೋಜನೆಗೆ ಪೋಷಕರು ಹೂಡಿಕೆ ಮಾಡಬೇಕು. ಮಗು ವಯಸ್ಕನಾದಾಗ, ಈ ಯೋಜನೆ ಸುಲಭವಾಗಿ ಸಾಮಾನ್ಯ ಎನ್ ಪಿಎಸ್ (NPS) ಖಾತೆಯಾಗಿ ಪರಿವರ್ತನೆಯಾಗಲಿದೆ.
ನಮ್ಮ ಮೆಟ್ರೋದಲ್ಲಿ ಈಗ QR ಕೋಡ್ ಟಿಕೆಟ್ ಬುಕ್ ಮಾಡಿ ರಿಯಾಯಿತಿ ಪಡೆಯಿರಿ!
ಎನ್ ಪಿಎಸ್ ವಾತ್ಸಲ್ಯ ಯೋಜನೆ ಹೂಡಿಕೆ ಎಷ್ಟು? : ಜನಸಾಮಾನ್ಯರಿಗೆ ಅನುಕೂಲವಾಗಲು ಈ ಯೋಜನೆ ಶುರು ಮಾಡಿದ್ದು, ಮಕ್ಕಳ ಭವಿಷ್ಯಕ್ಕಾಗಿ ಬಡವರು ಕೂಡ ಇದ್ರಲ್ಲಿ ಹೂಡಿಕೆ ಮಾಡಬಹುದು. ಎನ್ ಪಿಎಸ್ ವಾತ್ಸಲ್ಯ ಯೋಜನೆ ಅಡಿ, ಪಾಲಕರು ಮಗುವಿನ ಹೆಸರಿನಲ್ಲಿ ವಾರ್ಷಿಕವಾಗಿ 1,000 ರೂಪಾಯಿ ಹೂಡಿಕೆ ಮಾಡಿದ್ರೆ ಸಾಕು. ಈ ಯೋಜನೆ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಅಡಿಯಲ್ಲಿ ಬರುತ್ತದೆ.
ಎನ್ ಪಿಎಸ್ ವಾತ್ಸಲ್ಯ ಯೋಜನೆಯಿಂದ ಆಗುವ ಲಾಭಗಳು : ಎನ್‌ಪಿಎಸ್-ವಾತ್ಸಲ್ಯ ಯೋಜನೆ ಅಪ್ರಾಪ್ತ ಮಕ್ಕಳ ಪರವಾಗಿ ಪಾಲಕರು ಅಥವಾ ಪೋಷಕರು ಮಾಡಬಹುದಾದ ಹಣಕಾಸಿನ ಹೂಡಿಕೆಯಾಗಿದೆ. ಇದು ಮಕ್ಕಳು, ಸ್ವಂತ ಗಳಿಸಲು ಅಥವಾ ಹೂಡಿಕೆ ಮಾಡಲು ಅರ್ಹವಾಗುವವರೆಗೆ ಅವರಿಗೆ ಆರ್ಥಿಕ ಬೆಂಬಲವನ್ನು ನೀಡುತ್ತದೆ.
ಚಿಕ್ಕ ವಯಸ್ಸಿನಲ್ಲಿ ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡುವುದ್ರಿಂದ ಮಕ್ಕಳು ದೊಡ್ಡವರಾದಾಗ ದೊಡ್ಡ ಮೊತ್ತದ ಹಣ ಅವರ ಕೈ ಸೇರುತ್ತದೆ. ಮಗು ನಿವೃತ್ತಿಯಾಗುವಷ್ಟು ವಯಸ್ಸು ತಲುಪಿದಾಗ ದೊಡ್ಡ ನಿವೃತ್ತಿ ನಿಧಿಯನ್ನು ಹೊಂದಿರುತ್ತಾರೆ. ಚಿಕ್ಕಂದಿನಿಂದಲೇ ಮಕ್ಕಳಲ್ಲಿ ಉಳಿತಾಯದ ಹವ್ಯಾಸವನ್ನು ಬೆಳೆಸಲು ಇದು ಸಹಕಾರಿಯಾಗಿದೆ. ದೀರ್ಘಕಾಲೀನ ಬಜೆಟ್‌ನ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಲು ಮಕ್ಕಳಿಗೆ ಇದು ಸಹಾಯ ಮಾಡುತ್ತದೆ ಎಂದು ಸರ್ಕಾರ ನಂಬಿದೆ.
ಮಗುವಿಗೆ 18 ವರ್ಷ ತುಂಬಿದಾಗ, ಖಾತೆಯನ್ನು ಸುಲಭವಾಗಿ ಸಾಮಾನ್ಯ NPS ಖಾತೆಯಾಗಿ ಪರಿವರ್ತಿಸಬಹುದು. ಕೆಲವು ಆದಾಯ ತೆರಿಗೆ ನಿಬಂಧನೆಗಳ ಅಡಿಯಲ್ಲಿ ಎನ್ ಪಿಎಸ್ ಹೂಡಿಕೆ ಮೂಲಕ ತೆರಿಗೆಯಲ್ಲಿ ವಿನಾಯಿತಿ ಪಡೆಯಬಹುದು. ನಾಳೆ ನಿರ್ಮಲಾ ಸೀತಾರಾಮನ್ ಬಿಡುಗಡೆ ಮಾಡಲಿರುವ ಆನ್ಲೈನ್ ಪ್ಲಾಟ್ಫಾರ್ಮ್ ನಲ್ಲಿ ಮಕ್ಕಳ ಪಾಲಕರು ರಿಜಿಸ್ಟ್ರೇಷನ್ ಮಾಡ್ಬೇಕು. ಇದು ಪೂರ್ಣಗೊಂಡ ಮೇಲೆ ಖಾತೆಯ ಸಂಖ್ಯೆ ಜಾರಿಗೆ ಬರುತ್ತದೆ.
ಫೋರ್ಬ್ಸ್ ಲಿಸ್ಟಲ್ಲಿರುವ ವಿಶ್ವದ ಅತ್ಯಂತ ದುಬಾರಿ ಐಷಾರಾಮಿ ಮನೆಗಳಿವು ಅಂಬಾನಿ ಮನೆಗೆ ಎಷ್ಟನೇ ಸ್ಥಾನ?
ಎನ್ ಪಿಎಸ್ ವಾತ್ಸಲ್ಯ ಯೋಜನೆಗೆ ಅರ್ಹತಾ ಮಾನದಂಡಗಳು : ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಅರ್ಹತಾ ಮಾನದಂಡಗಳನ್ನು ತಿಳಿದಿರಬೇಕು. ಪೋಷಕರು ಮತ್ತು ಮಕ್ಕಳು ಇಬ್ಬರೂ ಭಾರತೀಯ ನಾಗರಿಕರು ಮತ್ತು ಅನಿವಾಸಿ ಭಾರತೀಯರಾಗಿರಬೇಕು. ಒಸಿಐಗಳು (OCI ) ಸಹ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಅರ್ಹರಾಗಿರುತ್ತಾರೆ. ಎನ್‌ಪಿಎಸ್ ವಾತ್ಸಲ್ಯ ಯೋಜನೆಯ ಸಂಪೂರ್ಣ ವಿವರಗಳನ್ನು ಸರ್ಕಾರ ಇನ್ನೂ ಬಿಡುಗಡೆ ಮಾಡಿಲ್ಲ. ಕೆಲ ಮಾಹಿತಿ ಪ್ರಕಾರ, ಎನ್‌ಪಿಎಸ್ ವಾತ್ಸಲ್ಯ ಯೋಜನೆ ಅಡಿಯಲ್ಲಿ, ಮಗುವಿಗೆ 18 ವರ್ಷ ತುಂಬುವವರೆಗೆ ಮೊತ್ತವನ್ನು ಪಾಲಕರು ಠೇವಣಿ ಇಡಬೇಕಾಗುತ್ತದೆ.