ಆ್ಯಪ್‌ನಲ್ಲಿ ಕಾಯ್ದಿರಿಸದ ರೈಲು ಟಿಕೆಟ್‌ ಬುಕ್ಕಿಂಗ್‌ ವ್ಯಾಪ್ತಿ 20 ಕಿ.ಮೀ.ಗೆ ವಿಸ್ತರಣೆಯಾಗಿದೆ. ಯುಟಿಎಸ್‌ ಆ್ಯಪ್‌ನಲ್ಲಿ ಇನ್ನು 20 ಕಿ.ಮೀ. ದೂರದಿಂದಲೂ ರೈಲು ಟಿಕೆಟ್‌ ಬುಕ್ಕಿಂಗ್‌ ಮಾಡಬಹುದಾಗಿದ್ದು, ಮತ್ತಷ್ಟು ಪ್ರಯಾಣಿಕ ಸ್ನೇಹಿಯಾಗಿದೆ. 

ನವದೆಹಲಿ: ಪ್ರಯಾಣಿಕರ ಅನುಕೂಲತೆಗಾಗಿ ರೈಲ್ವೆ ಇಲಾಖೆಯು (Railway Department) ಕಾಯ್ದಿರಿಸದ ಟಿಕೆಟ್‌ಗಳನ್ನು ಯುಟಿಎಸ್‌ ಮೊಬೈಲ್‌ ಆ್ಯಪ್‌ (UTS Mobile App) ಮೂಲಕ ನಗರಗಳಲ್ಲಿ ರೈಲ್ವೆ ನಿಲ್ದಾಣದಿಂದ (Railway Station) 20 ಕಿ.ಮೀ. ದೂರದಿಂದಲೇ ಬುಕ್‌ ಮಾಡಲು ಅನುಮತಿ ನೀಡಿದೆ. ಈವರೆಗೆ ಕೇವಲ 5 ಕಿ.ಮೀ. ಅಂತರದಿಂದ ಮಾತ್ರ ಟಿಕೆಟ್‌ ಬುಕ್ಕಿಂಗ್‌ (Ticket Booking) ಮಾಡಲು ಅವಕಾಶವಿತ್ತು. ಇದರೊಂದಿಗೆ ಉಪನಗರಗಳಲ್ಲೂ ಯುಟಿಎಸ್‌ ಆ್ಯಪ್‌ ಮೂಲಕ ಟಿಕೆಟ್‌ ಬುಕ್ಕಿಂಗ್‌ ವ್ಯಾಪ್ತಿಯನ್ನು 2 ಕಿ.ಮೀ.ನಿಂದ 5 ಕಿ.ಮೀ.ಗೆ ವಿಸ್ತರಿಸಿದೆ. ಇದು ಪ್ರಯಾಣಿಕ ರೈಲಿನ ಜನರಲ್‌ ಬೋಗಿಗಳಲ್ಲಿ (General Coaches) ಪ್ರಯಾಣಿಸುವ ಜನರಿಗೆ ವರದಾನವಾಗಲಿದೆ ಎಂದು ರೈಲ್ವೆ ತಿಳಿಸಿದೆ. ನವೆಂಬರ್‌ 7ರಂದು ರೈಲ್ವೆ ಮಂಡಳಿ ಎಲ್ಲ ವಲಯ ಕಚೇರಿಗಳಿಗೂ ಇದನ್ನು ಜಾರಿಗೆ ತರುವಂತೆ ಸೂಚನೆಗಳನ್ನು ಹೊರಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯುಟಿಎಸ್‌ ಆ್ಯಪ್‌:
ಯುಟಿಎಸ್‌ (ಕಾಯ್ದಿರಿಸದ ಟಿಕೆಟ್‌ ಬುಕ್ಕಿಂಗ್‌ ವ್ಯವಸ್ಥೆ) ಆ್ಯಪ್‌ ಮೂಲಕ ಸೀಸನಲ್‌ ಟಿಕೆಟ್‌, ಮಾಸಿಕ ಪಾಸ್‌, ಪ್ಲಾಟಫಾರ್ಮ್‌ ಟಿಕೆಟ್‌ಗಳನ್ನು ಬುಕ್‌ ಮಾಡಬಹುದಾಗಿದೆ. ಇದು ಟಿಕೆಟ್‌ಗಾಗಿ ಪ್ರಯಾಣಿಕರು ಸರತಿ ಸಾಲಲ್ಲಿ ನಿಲ್ಲುವುದನ್ನು ತಪ್ಪಿಸಿ ಸಮಯ ಉಳಿತಾಯ ಮಾಡಲು ನೆರವಾಗುತ್ತದೆ. ಈ ಮೊಬೈಲ್‌ ಆ್ಯಪ್‌ ಅನ್ನು ಆ್ಯಂಡ್ರಾಯ್ಡ್‌, ಐಒಎಸ್‌ ಸೇರಿ ಎಲ್ಲ ಸ್ಮಾರ್ಟ್‌ ಫೋನುಗಳಲ್ಲಿ ಉಚಿತವಾಗಿ ಡೌನ್ಲೋಡ್‌ ಮಾಡಿಕೊಳ್ಳಬಹುದಾಗಿದೆ. ಆ್ಯಪ್‌ನಲ್ಲಿ ಆರ್‌-ವಾಲೆಟ್‌, ಪೇಟಿಎಂ, ಮೊಬಿಕ್ವಿಕ್‌, ಇಂಟರ್‌ನೆಟ್‌ ಬ್ಯಾಂಕಿಂಗ್‌ ಮೂಲಕ ಹಣ ಪಾವತಿಸಬಹುದಾಗಿದೆ.

ಇದನ್ನು ಓದಿ: Indian Railways: ಮಹಿಳೆಯರಿಗಿನ್ನು ರೈಲಿನಲ್ಲಿ ಸೀಟು ಮೀಸಲು