ನವದೆಹಲಿ[ನ.23]: ರೈಲ್ವೆಯನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸಲಾಗುತ್ತಿಲ್ಲ. ಆದರೆ, ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ವಾಣಿಜ್ಯ ಮತ್ತು ರೈಲಿನೊಳಗಿನ ಕೆಲ ಸೇವೆಗಳನ್ನು ಮಾತ್ರ ಹೊರಗುತ್ತಿಗೆ ನೀಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ರೈಲ್ವೆಯನ್ನು ಖಾಸಗೀಕರಣ ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ ರಾಜ್ಯಸಭೆಯಲ್ಲಿ ಉತ್ತರಿಸಿದ ರೈಲ್ವೆ ಸಚಿವ ಪೀಯೂಷ್‌ ಗೋಯಲ್‌, ಖಾಸಗಿ ಸಂಸ್ಥೆಗಳಿಗೆ ರೈಲು ಓಡಿಸುವ ಅವಕಾಶ ಕಲ್ಪಿಸಿದರೂ, ರೈಲುಗಳ ಸುರಕ್ಷತೆ ಇಲಾಖೆ ಬಳಿಯೇ ಇರುತ್ತದೆ. ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ ಆಯ್ದ ಮಾರ್ಗಗಳಲ್ಲಿ ರೈಲು ಓಡಿಸುವ ಖಾಸಗಿ ಕಂಪನಿಗಳಿಗೆ ಅತ್ಯಾಧುನಿಕ ಬೋಗಿ ಅಳವಡಿಸಲೂ ಅನುಮತಿ ನೀಡಲಾಗುತ್ತದೆ. ಆದರೆ ರೈಲುಗಳ ಕಾರ್ಯನಿರ್ವಹಣೆ ಹಾಗೂ ಸುರಕ್ಷತೆಯನ್ನು ರೈಲ್ವೆ ಇಲಾಖೆಯೇ ನೋಡಿಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.

ರೈಲು ಪ್ರಯಾಣ ವೇಳೆ ಮನೆ ಕಳ್ಳತನವಾದರೆ 1 ಲಕ್ಷ ರು. ವಿಮೆ!

150 ರೈಲು ಹಾಗೂ 50 ನಿಲ್ದಾಣಗಳನ್ನು ಕಾಲಮಿತಿಯಲ್ಲಿ ಖಾಸಗಿ ಸಂಸ್ಥೆಗಳಿಗೆ ವಹಿಸುವ ಸಂಬಂಧ ನೀಲನಕ್ಷೆ ಸಿದ್ಧಪಡಿಸಲು ರೈಲ್ವೆ ಇಲಾಖೆ ಕಾರ್ಯಪಡೆಯೊಂದನ್ನು ರಚಿಸುತ್ತಿದೆ ಎಂದು ನೀತಿ ಆಯೋಗ ಹೇಳಿತ್ತು. ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯ ಖಾಸಗೀಕರಣ ಕುರಿತ ಕಳವಳ ಕೇಳಿಬಂದಿದ್ದವು.

ರೈಲುಗಳ ಕಾರ್ಯಾಚರಣೆಗೆ ಮುಂದಿನ 12 ವರ್ಷಗಳಲ್ಲಿ ಅಂದಾಜು 50 ಲಕ್ಷ ಕೋಟಿ ರು. ಅಗತ್ಯವಿದೆ. ಇಷ್ಟುಪ್ರಮಾಣದ ಮೊತ್ತವನ್ನು ಸರ್ಕಾರ ಹೊಂದಿಸುವುದು ತ್ರಾಸದಾಯಕ. ರೈಲ್ವೆಯ ಕೆಲ ಸೇವೆಗಳನ್ನು ಖಾಸಗಿಗೆ ನೀಡುವುದರಿಂದ ಪ್ರಯಾಣಿಕರಿಗೆ ಉತ್ತಮ ಸೇವೆ ಲಭಿಸಲಿದೆ. ರೈಲ್ವೆ ಇನ್ನು ಮುಂದೆಯೂ ಭಾರತ ಸರ್ಕಾರದ ಭಾಗವಾಗಿರಲಿದೆ ಎಂದು ತಿಳಿಸಿದರು.

ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ ನೀಡುವುದು ಮತ್ತು ಸಾವಿರಾರು ಹೊಸ ರೈಲುಗಳ ಕಾರ್ಯಾರಂಭಕ್ಕೆ ಅಧಿಕ ಹಣದ ಹೂಡಿಕೆ ಅಗತ್ಯವಿದೆ. ರೈಲ್ವೆಯಲ್ಲಿ ಖಾಸಗಿದಾರರ ಹೂಡಿಕೆಯಿಂದ ಇದನ್ನು ನಿಭಾಯಿಸಲು ಸಾಧ್ಯ. ಈ ಕಾರಣಕ್ಕಾಗಿ ಕೆಲ ಸೇವೆಗಳನ್ನು ಹೊರಗುತ್ತಿಗೆ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ಚೆನ್ನೈ ರೈಲು ನಿಲ್ದಾಣದಲ್ಲಿ ಎಚ್ಚರಿಕೆ ನೀಡುತ್ತೆ ಈ ಶ್ವಾನ!