Asianet Suvarna News Asianet Suvarna News

ಇನ್ಮುಂದೆ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ಕೂಡ ಇ-ರುಪಿ ವೋಚರ್ ವಿತರಿಸಬಹುದು: ಆರ್ ಬಿಐ

ಡಿಜಿಟಲ್ ಕರೆನ್ಸಿಯನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಆರ್ ಬಿಐ ಮಹತ್ವದ ಉಪಕ್ರಮವೊಂದನ್ನು ಕೈಗೊಂಡಿದೆ.ಇಲ್ಲಿಯ ತನಕ ಬ್ಯಾಂಕ್ ಗಳಲ್ಲಿ ಮಾತ್ರ ಸಿಗುತ್ತಿದ್ದ ಇ-ರುಪಿ ವೋಚರ್ ಗಳು ಇನ್ನು ಮುಂದೆ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳಲ್ಲಿ ಕೂಡ ಲಭಿಸಲಿವೆ ಎಂದು ಆರ್ ಬಿಐ ತಿಳಿಸಿದೆ. 

Non Bank Companies Can Issue E RUPI Vouchers Reserve Bank Of India anu
Author
First Published Jun 9, 2023, 1:42 PM IST

ನವದೆಹಲಿ (ಜೂ.9): ಇ-ರುಪಿ ವೋಚರ್ ಗಳು ಜನರಿಗೆ ಸುಲಭವಾಗಿ ದೊರಕುವಂತಾಗಲಿ ಎಂಬ ಉದ್ದೇಶದಿಂದ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳಿಗೂ ಇ-ರುಪಿ ವೋಚರ್ ಗಳನ್ನು ವಿತರಿಸಲು ಅವಕಾಶ ನೀಡಲಾಗುವುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ)  ಗವರ್ನರ್ ಶಕ್ತಿಕಾಂತ ದಾಸ್ ಗುರುವಾರ ಎಂಪಿಸಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಈ ಕ್ರಮದಿಂದ ದೇಶದಲ್ಲಿ ಇ-ರುಪಿ ಡಿಜಿಟಲ್ ವೋಚರ್ ಪ್ರಯೋಜನಗಳು ದೊಡ್ಡ ಪ್ರಮಾಣದ ಬಳಕೆದಾರರಿಗೆ ಸಿಗಲಿದೆ ಹಾಗೂ ಇದರಿಂದ ಮುಂದೆ ದೇಶದಲ್ಲಿ ಡಿಜಿಟಲ್ ಪಾವತಿಗಳ ಪ್ರಮಾಣ ಇನ್ನಷ್ಟು ಹೆಚ್ಚಲಿದೆ ಎಂದು ಈ ಸಂದರ್ಭದಲ್ಲಿ ಶಕ್ತಿಕಾಂತ ದಾಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಡಿಜಿಟಲ್ ಕರೆನ್ಸಿ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶದಿಂದ ಆರ್ ಬಿಐ ಈ ಕ್ರಮ ಕೈಗೊಂಡಿದೆ. ಈ ತನಕ ಇ-ರುಪಿ ವೋಚರ್ ಗಳನ್ನು ಕೇವಲ ಬ್ಯಾಂಕ್ ಗಳು ಮಾತ್ರ ವಿತರಿಸಬಹುದಾಗಿತ್ತು. ಈಗ ಇದರ ವ್ಯಾಪ್ತಿ ಹೆಚ್ಚಿಸಲು ಆರ್ ಬಿಐ ಮೂರು ಪ್ರಮುಖ ಕ್ರಮಗಳನ್ನು ಕೈಗೊಂಡಿದೆ. ಒಂದು ಈಗಲೇ ತಿಳಿಸಿರುವಂತೆ ಇ-ರುಪಿ ವೋಚರ್ ಗಳ ವಿತರಣೆಗೆ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳಿಗೆ ಅವಕಾಶ. ಎರಡನೆಯದು, ವ್ಯಕ್ತಿಗಳ ಪರವಾಗಿ ಇ-ರುಪಿ ವೋಚರ್ ಗಳ ವಿತರಣೆಗೆ ಅವಕಾಶ. ಇನ್ನು ಮೂರನೆಯದು ಇ-ರುಪಿ ವಿತರಣೆ ಹಾಗೂ  ಬಳಕೆ ಪ್ರಕ್ರಿಯೆ ಸರಳಗೊಳಿಸುವುದು.

ಇ-ರುಪಿ ಅಂದ್ರೇನು?
ಇದು ಖಾಸಗಿ ವಲಯದ ಬಿಟ್‌ಕಾಯಿನ್‌ ರೀತಿಯಲ್ಲೇ, ಆರ್‌ಬಿಐ ಬಿಡುಗಡೆ ಮಾಡಿರುವ ಡಿಜಿಟಲ್‌ ಕರೆನ್ಸಿ. ಡಿಜಿಟಲ್‌ ಕರೆನ್ಸಿ ಕೂಡಾ ನೋಟು ಮತ್ತು ನಾಣ್ಯಗಳ ರೀತಿಯಲ್ಲೇ ಮೌಲ್ಯ ಮತ್ತು ಕಾನೂನಿನ ಎಲ್ಲಾ ಬೆಂಬಲ ಹೊಂದಿರುತ್ತದೆ. ಇದನ್ನು ಯಾವುದೇ ವಸ್ತು ಖರೀದಿಗೆ, ಯಾರಿಗಾದರೂ ಹಣ ಪಾವತಿಗೆ ಬಳಸಬಹುದು. ನೋಟಿನಷ್ಟೇ ವಿಶ್ವಾಸ, ಸುರಕ್ಷತೆ ಇದಕ್ಕೂ ಇದೆ. ಇ-ರುಪಿ ವೋಚರ್ ಅನ್ನು ಕ್ಯೂಆರ್ ಕೋಡ್ ಅಥವಾ ಎಸ್ ಎಂಎಸ್ ರೂಪದಲ್ಲಿ ಮೊಬೈಲ್ ಗೆ ಕಳುಹಿಸಲಾಗುತ್ತದೆ. ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸಹಾಯಧನವನ್ನು ವಿತರಿಸಲು ಇ-ರುಪಿ ವೋಚರ್ ನೆರವು ನೀಡಲಿದೆ. 

ಇ-ರುಪೀ ಬಳಕೆಗೆ ಇಂಟರ್ ನೆಟ್ ಬೇಕಾ? ಬ್ಯಾಂಕ್ ಬಡ್ಡಿ ನೀಡುತ್ತಾ? ಇಲ್ಲಿದೆ ಮಾಹಿತಿ

ಇ-ರುಪಿ ವೋಚರ್ ಅನ್ನು ನಗದಿಗೆ ಪರಿವರ್ತಿಸಿಕೊಳ್ಳಬಹುದು, ಠೇವಣಿ ಇಡಲು ಬಳಸಬಹುದು. ಆದರೆ ಇದನ್ನು ಕೈಯಲ್ಲಿ ನೋಟಿನ ರೀತಿಯಲ್ಲಿ ಇಟ್ಟುಕೊಳ್ಳಲು ಬರುವುದಿಲ್ಲ. ಜೊತೆಗೆ ಬ್ಯಾಂಕ್‌ನಲ್ಲಿ ನಗದು ಇಟ್ಟರೆ ಅದಕ್ಕೆ ಸಿಗುವ ರೀತಿಯ ಬಡ್ಡಿ ಸಿಗುವುದಿಲ್ಲ. 2022ರ ಕೇಂದ್ರ ಬಜೆಟ್ ಪ್ರಸ್ತುತ ಪಡಿಸುವ ವೇಳೆ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಕೇಂದ್ರೀಯ ಬ್ಯಾಂಕ್ ತನ್ನ ಡಿಜಿಟಲ್ ಕರೆನ್ಸಿಯನ್ನು ಬಿಡುಗಡೆ ಮಾಡಲಿದೆ ಎಂದು ಘೋಷಿಸಿದ್ದರು.

ಈ ವೋಚರ್ ಅನ್ನು ಯಾವುದೇ ಕಾರ್ಡ್, ಡಿಜಿಟಲ್ ಪಾವತಿ ಅಪ್ಲಿಕೇಷನ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯವಿಲ್ಲದೆ ಬಳಸಬಹುದು. ಯಾವುದೇ ಸಂಸ್ಥೆ ಅಥವಾ ಸರ್ಕಾರದ ನಿಗದಿತ ಯೋಜನೆಯ ಫಲಾನುಭವಿಗಳಿಗೆ ಎಸ್ ಎಂಎಸ್ ಅಥವಾ ಕ್ಯುಆರ್ ಕೋಡ್ ಮೂಲಕ ಇ-ರುಪಿ ಹಂಚಿಕೆ ಮಾಡಲಾಗುತ್ತದೆ. ಈ ಸಂಪರ್ಕರಹಿತ ಇ-ರುಪಿ  ಫಲಾನುಭವಿಗಳ ಮಾಹಿತಿಯನ್ನು ಸಂಪೂರ್ಣವಾಗಿ ರಹಸ್ಯವಾಗಿಡುವ ಕಾರಣ ಇದರ ಬಳಕೆ ಸುಲಭ, ಸುರಕ್ಷಿತ ಹಾಗೂ ಭದ್ರತೆಯಿಂದ ಕೂಡಿರುತ್ತದೆ.

ಶೀಘ್ರ ಬರಲಿದೆ ಆರ್‌ಬಿಐ Digital Currency: ಇ - ರುಪಿ ಬಗ್ಗೆ ಇಲ್ಲಿದೆ ವಿವರ..

ಸರ್ಕಾರದ ವಿವಿಧ ಯೋಜನೆಗಳ ಜೊತೆಗೆ ಖಾಸಗಿ ವಲಯದಲ್ಲಿ ಕೂಡ ಇ-ರುಪಿ ವೋಚರ್ ಬಳಕೆ ಮಾಡಬಹುದು. ಖಾಸಗಿ ಕಂಪನಿಗಳಲ್ಲಿ ಉದ್ಯೋಗಿಗಳಿಗೆ ಆಹಾರ, ಪ್ರಯಾಣ ಭತ್ಯೆ ಇತ್ಯಾದಿಯನ್ನು ಇ-ರುಪಿ ವೋಚರ್ ರೂಪದಲ್ಲಿ ನೀಡಬಹುದಾಗಿದೆ. ಇನ್ನು ಇ- ವೋಚರ್ ವಹಿವಾಟು ಪ್ರಕ್ರಿಯೆ ವೇಗವಾಗಿರುವ ಜೊತೆಗೆ ನಂಬಿಕಾರ್ಹ ಕೂಡ. ಅಗತ್ಯವಿರುವ ಮೊತ್ತ ಈಗಾಗಲೇ ಈ ವೋಚರ್ ನಲ್ಲಿ ಸಂಗ್ರಹವಾಗಿರುವ ಕಾರಣ ಬಳಕೆಯಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. 

Follow Us:
Download App:
  • android
  • ios