ಕ್ವಾಲಾಲಂಪುರ್(ಜ.21): ಸಿಎಎ ವಿರೋಧಿ ಹೇಳಿಕೆಯಿಂದ ಪೇಚಿಗೆ ಸಿಲುಕಿರುವ ಮಲೇಷ್ಯಾ ಪ್ರಧಾನಿ ಮಹತೀರ್ ಮೊಹ್ಮದ್, ತಾಳೆ ಎಣ್ಣೆ ಆಮದನ್ನು ನಿಲ್ಲಿಸಿರುವ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ನಾವು ತುಂಬ ಚಿಕ್ಕವರು ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಸಿಎಎ ಅನಾವಶ್ಯಕ ಎಂದು ಹೇಳಿದ್ದ ಮಹತೀರ್ ಮೊಹ್ಮದ್ ವಿರುದ್ಧ ಗರಂ ಆಗಿದ್ದ ಭಾರತ, ಮಲೇಷ್ಯಾದಿಂದ ತಾಳೆ ಎಣ್ಣೆ ಆಮದನ್ನು ನಿಲ್ಲಿಸಿತ್ತು. ಭಾರತದ ಈ ಅನಿರೀಕ್ಷಿತ ಹೊಡೆತದಿಂದ ಮಲೇಷ್ಯಾ ಕಂಗಾಲಾಗಿದ್ದು, ತನ್ನ ಪ್ರಮುಖ ವ್ಯಾಪಾರಿ ಗೆಳೆಯನನ್ನು ಕಳೆದುಕೊಂಡು ಪರದಾಡುತ್ತಿದೆ.

ಸಿಎಎ ವಿರೋಧಿಸಿದ ದೇಶದಿಂದ 'ಎಣ್ಣೆ' ಆಮದು ನಿಲ್ಲಿಸಿದ ಭಾರತ: ಸತ್ಯ ಹೇಳಿದ್ದಕ್ಕೆ 'ಶಿಕ್ಷೆ'?

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಹತೀರ್ ಮೊಹ್ಮದ್, ತಾಳೆ ಎಣ್ಣೆ ಆಮದನ್ನು ನಿಲ್ಲಿಸಿದ ಭಾರತದ ವಿರುದ್ಧ ಯಾವುದೇ ವಾಣಿಜ್ಯ ಕ್ರಮಕ್ಕೆ ಮುಂದಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ನಾವು ತುಂಬ ಚಿಕ್ಕವರಾಗಿದ್ದು, ತನ್ನ ನಿರ್ಧಾರವನ್ನು ಪರಿಶೀಲಿಸುವಂತೆ ಭಾರತಕ್ಕೆ ಮನವಿ ಮಾಡಿಕೊಳ್ಳುತ್ತೇವೆ ಎಂದು ಮಹತೀರ್ ಹೇಳಿದ್ದಾರೆ.

ಸದ್ಯ ಎದುರಾಗಿರುವ ಸಮಸ್ಯೆಯನ್ನು ನಿವಾರಿಸಲು ಹಾಗೂ ಅದರಿಂದ ಹೊರಬರಲು ಮಾರ್ಗಗಳನ್ನು ಕಂಡುಹಿಡಿಯಬೇಕಾಗಿದ್ದು, ಮಾತುಕತೆಯ ಮೂಲಕ ಮಸ್ಯೆ ನಿವಾರಣೆ ಸಾಧ್ಯ ಎಂದು ಮಲೇಷ್ಯಾ ಪ್ರಧಾನಿ ಮಹತೀರ್ ಮೊಹ್ಮದ್ ಅಭಿಪ್ರಾಯಪಟ್ಟಿದ್ದಾರೆ.