ಕ್ವಾಲಾಲಂಪುರ್(ಜ.14): ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಕೇವಲ ಭಾರತ ಮಾತ್ರವಲ್ಲದೇ, ಹೊರ ದೇಶಗಳಲ್ಲೂ ಪ್ರಭಾವ ಬೀರುತ್ತಿದೆ. ಸಿಎಎ ಜಾರಿ ಸರಿಯಲ್ಲ ಎಂದು ಮಲೇಶಿಯಾ ಪ್ರಧಾನಿ ಮಹಾತಿರ್ ಮೊಹ್ಮದ್ ಅಭಿಪ್ರಾಯಪಟ್ಟಿದ್ದಾರೆ.

ಭಾರತದಲ್ಲಿ ಸಿಎಎ ಜಾರಿಯಿಂದ ಸಾಮಾಜಿಕ ಸಾಮರಸ್ಯ ಕದಡಲಿದೆ ಎಂದು ಮಲೇಶಿಯಾ ಪ್ರಧಾನಿ ಮಹಾತಿರ್ ಮೊಹ್ಮದ್ ಹೇಳಿಕೆ ನೀಡಿದ್ದರು. ಇದರಿಂದ ಕೆರಳಿರುವ ಭಾರತ, ಮಲೇಶಿಯಾದಿಂದ ಮಾಡಿಕೊಳ್ಳುತ್ತಿದ್ದ ತಾಳೆ ಎಣ್ಣೆ ಆಮದನ್ನು ತಡೆ ಹಿಡಿದಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಲೇಶಿಯಾ ಪ್ರಧಾನಿ ಮಹಾತಿರ್ ಮೊಹ್ಮದ್, ತಾವು ಸತ್ಯವನ್ನೇ ಹೇಳಿದ್ದು, ಇದೇ ಕಾರಣಕ್ಕೆ ಭಾರತ ತಮ್ಮ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಹರಿಹಾಯ್ದಿದ್ದಾರೆ.

ಝಾಕೀರ್ ಗಡೀಪಾರು: ಮೋದಿಗೆ ಉಲ್ಟಾ ಹೊಡೆದ ಮಲೇಷ್ಯಾ ಪಿಎಂ

ಖಾದ್ಯ ತೈಲಗಳನ್ನು ಆಮದು ಮಾಡಿಕೊಳ್ಳುವ ವಿಶ್ವದ ಅತೀ ದೊಡ್ಡ ರಾಷ್ಟ್ರವಾಗಿರುವ ಭಾರತ, ಕಳೆದ ವಾರವಷ್ಟೇ ಆಮದು ನೀತಿಯನ್ನು ಬದಲಾಯಿಸಿದೆ. ವಿಶ್ವದ ಎರಡನೇ ಅತೀ ದೊಡ್ಡ ತಳೆ ಎಣ್ಣೆ ರಫ್ತು ದೇಶವಾದ ಮಲೇಶಿಯಾದಿಂದ ತಾಳೆ ಎಣ್ಣೆ ಆಮದನ್ನು ಭಾರತ ನಿಲ್ಲಿಸಿದೆ.

ಧರ್ಮದ ಆಧಾರದ ಮೇಲೆ ಭಾರತದಲ್ಲಿ ಸಿಎಎ ಜಾರಿಗೆ ತರಲಾಗಿದ್ದು, ಇದನ್ನು ಮಲೇಶಿಯಾ ವಿರೋಧಿಸುವುದಾಗಿ ಪ್ರಧಾನಿ ಮಹಾತಿರ್ ಮೊಹ್ಮದ್ ಹೇಳಿಕೆ ನೀಡಿದ್ದರು.

ಮಲೇಶಿಯಾ ಪ್ರಧಾನಿ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಿದ್ದ ಭಾರತ, ದೇಶದ ಆಂತರಿಕ ವಿಚಾರದಲ್ಲಿ ಮಹಾತಿರ್ ಮೂಗು ತೂರಿಸುವ ಅವಶ್ಯಕತೆ ಇಲ್ಲ ಎಂದು ತಿರುಗೇಟು ನೀಡಿತ್ತು.

2018ರಲ್ಲಿ ಭಾರತ ಮಲೇಶಿಯಾದಿಂದ ಬರೋಬ್ಬರಿ 1.3 ಬಿಲಿಯನ್ ಯುಸ್ ಡಾಲರ್‌ನಷ್ಟು ತಾಳೆ ಎಣ್ಣೆಯನ್ನು ಆಮದು ಮಾಡಿಕೊಂಡಿದೆ.