ಹಿರಿಯ ನಾಗರಿಕರು ಎಫ್‌ಡಿಯಿಂದ ಗಳಿಸುವ 50 ಸಾವಿರ ರು. ಬಡ್ಡಿಗೆ ಈವರೆಗೆ ಶೇ.10ರಷ್ಟು ಟಿಡಿಎಸ್‌ ಕಡಿತವಾಗುತ್ತಿತ್ತು (ಪ್ಯಾನ್‌ ಕಾರ್ಡ್‌ ಇದ್ದರೆ). ಆ ಮಿತಿಯನ್ನು ಈಗ 1 ಲಕ್ಷ ರು.ಗೆ ಏರಿಸಲಾಗಿದೆ. ಬ್ಯಾಂಕ್‌, ಸಹಕಾರಿ ಸಂಸ್ಥೆ, ಅಂಚೆ ಕಚೇರಿಗಳಲ್ಲಿ ಇಟ್ಟಿರುವ ಹಣಕ್ಕೆ ಹೊಸ ನೀತಿ ಅನ್ವಯವಾಗಲಿದೆ.

ನವದೆಹಲಿ(ಫೆ.02): ಅತ್ಯಂತ ಸುರಕ್ಷಿತ ಹೂಡಿಕೆ ಎಂಬ ಕಾರಣಕ್ಕೆ ಬ್ಯಾಂಕುಗಳ ನಿಶ್ಚಿತ ಠೇವಣಿ (ಫಿಕ್ಸ್ಡ್‌ ಡಿಪಾಸಿಟ್‌- ಎಫ್‌ಡಿ)ಗಳಲ್ಲಿ ಹಣ ಹೂಡಿಕೆ ಮಾಡುವವರಿಗೆ ಸಂತಸದ ಸುದ್ದಿ. ಎಫ್‌ಡಿಯಿಂದ ಲಭಿಸುವ 50 ಸಾವಿರ ರು.ವರೆಗಿನ ಬಡ್ಡಿ ಆದಾಯಕ್ಕೂ ಇನ್ನು ಶೇ.10 ಟಿಡಿಎಸ್‌ ಕಡಿತ ಆಗುವುದಿಲ್ಲ. ಟಿಡಿಎಸ್‌ ಕಡಿತಕ್ಕೆ ಹಾಲಿ ಇರುವ 40 ಸಾವಿರ ರು. ಮಿತಿಯನ್ನು 50 ಸಾವಿರ ರು.ಗೆ ಹೆಚ್ಚಳ ಮಾಡಿರುವುದೇ ಇದಕ್ಕೆ ಕಾರಣ. ಏ.1ರಿಂದ ಈ ನೀತಿ ಜಾರಿಗೆ ಬರಲಿದೆ.

ಹಿರಿಯ ನಾಗರಿಕರು ಎಫ್‌ಡಿಯಿಂದ ಗಳಿಸುವ 50 ಸಾವಿರ ರು. ಬಡ್ಡಿಗೆ ಈವರೆಗೆ ಶೇ.10ರಷ್ಟು ಟಿಡಿಎಸ್‌ ಕಡಿತವಾಗುತ್ತಿತ್ತು (ಪ್ಯಾನ್‌ ಕಾರ್ಡ್‌ ಇದ್ದರೆ). ಆ ಮಿತಿಯನ್ನು ಈಗ 1 ಲಕ್ಷ ರು.ಗೆ ಏರಿಸಲಾಗಿದೆ. ಬ್ಯಾಂಕ್‌, ಸಹಕಾರಿ ಸಂಸ್ಥೆ, ಅಂಚೆ ಕಚೇರಿಗಳಲ್ಲಿ ಇಟ್ಟಿರುವ ಹಣಕ್ಕೆ ಹೊಸ ನೀತಿ ಅನ್ವಯವಾಗಲಿದೆ.

ಕೇಂದ್ರ ಬಜೆಟ್‌ 2025: ಹಳೆ ತೆರಿಗೆ ಪದ್ಧತಿ ರದ್ದಾಗುತ್ತಾ?

ಏನಿದು ಟಿಡಿಎಸ್‌?:

ಟಿಡಿಎಸ್‌ ಅಂದರೆ ಟ್ಯಾಕ್ಸ್‌ ಡಿಡಕ್ಟಡ್‌ ಅಟ್‌ ಸೋರ್ಸ್‌. ಮೂಲದಲ್ಲೇ ತೆರಿಗೆ ಮುರಿದುಕೊಳ್ಳುವುದು ಎಂದರ್ಥ. ಬ್ಯಾಂಕಿನಲ್ಲಿ ಯಾರಾದರೂ ಠೇವಣಿ ಇಟ್ಟರೆ, ಅದಕ್ಕೆ ಒಂದು ವರ್ಷದಲ್ಲಿ ಬರುವ ಬಡ್ಡಿ ಆದಾಯ ಇಂತಿಷ್ಟು ಮೀರಿದರೆ ಟಿಡಿಎಸ್‌ ವಿಧಿಸಬೇಕು ಎಂಬ ನಿಯಮವಿದೆ. ಹಿರಿಯ ನಾಗರಿಕರು ಹಾಗೂ ಇತರೆ ನಾಗರಿಕರಿಗೆ ಈ ಮಿತಿ ಬೇರೆ ಇದೆ. ಪ್ಯಾನ್‌ ಹೊಂದಿದ್ದರೆ ಶೇ.10, ಇಲ್ಲದಿದ್ದರೆ ಶೇ.20 ಟಿಡಿಎಸ್‌ ಅನ್ನು ಬ್ಯಾಂಕುಗಳು ಮುರಿದುಕೊಳ್ಳುತ್ತವೆ.

ವಿಮೆ ಕಮೀಷನ್, ಲಾಟರಿ ಹಣಕ್ಕೂ ಮಿತಿ ಹೆಚ್ಚಳ

ವೈಯಕ್ತಿಕ ಷೇರುದಾರರು ಡಿವಿಡೆಂಡ್‌ ಮೂಲಕ ಗಳಿಸುವ ಆದಾಯ 5000 ರು. ದಾಟಿದರೆ ಟಿಡಿಎಸ್‌ ಕಡಿತಗೊಳ್ಳುತ್ತಿತ್ತು. ಅದನ್ನು ಈಗ 10 ಸಾವಿರ ರು.ಗೆ ಏರಿಸಲಾಗಿದೆ. ವಿಮಾ ಕಮಿಷನ್‌ 15 ಸಾವಿರ ರು. ದಾಟಿದರೆ ಮುರಿದುಕೊಳ್ಳುತ್ತಿದ್ದ ಟಿಡಿಎಸ್‌ ಅನ್ನು 20 ಸಾವಿರ ರು.ವರೆಗೆ ವಿಸ್ತರಿಸಲಾಗಿದೆ. ಲಾಟರಿ ಟಿಕೆಟ್‌ನಿಂದ ಗೆಲ್ಲುವ 15 ಸಾವಿರ ರು.ವರೆಗಿನ ಮೊತ್ತಕ್ಕೆ ಕಡಿತಗೊಳಿಸಲಾಗುತ್ತಿದ್ದ ಟಿಡಿಎಸ್‌ ಮಿತಿಯನ್ನು 20 ಸಾವಿರ ರು.ಗೆ ಏರಿಸಲಾಗಿದೆ. ಬಾಡಿಗೆ ಆದಾಯದ ಟಿಡಿಎಸ್‌ ಮಿತಿಯನ್ನು 2.40 ಲಕ್ಷ ರು.ನಿಂದ 6 ಲಕ್ಷ ರು.ಗೆ ಹೆಚ್ಚಿಸಲಾಗಿದೆ.

ಈ ಬಾರಿಯ ಕೇಂದ್ರ ಬಜೆಟ್‌ ಮಧ್ಯಮವರ್ಗದವರನ್ನು ಓಲೈಸುವಂತಿದೆ. ದೇಶದ ಸಾಮಾನ್ಯ ಜನರಿಗೆ, ಅದರಲ್ಲೂ ವಿಶೇಷವಾಗಿ ದುಡಿಯುವ ವರ್ಗದವರಿಗೆ ಅನುಕೂಲವಾಗುವಂತೆ ತೆರಿಗೆ ವಿನಾಯಿತಿ ಮಿತಿಗಳಲ್ಲಿ ಹೆಚ್ಚಳ ಮಾಡಿರುವುದು ಬಜೆಟ್‌ನ ಕೊಡುಗೆಗಳಲ್ಲಿ ಪ್ರಮುಖವಾಗಿದೆ.

ಬಡವರು, ಮಧ್ಯಮ ವರ್ಗ, ರೈತರಿಗೆ ಅನುಕೂಲಕರ ಬಜೆಟ್: ಜೋಶಿ

2025ರ ಕೇಂದ್ರ ಬಜೆಟ್‌ನಲ್ಲಿ ಜನಸಾಮಾನ್ಯರಿಗೆ ನೀಡಲಾದ 10 ಕೊಡುಗೆಗಳು:

1 ಹೊಸ ತೆರಿಗೆ ಪದ್ಧತಿಯಡಿ 12 ಲಕ್ಷ ರು. ವರೆಗೆ ಆದಾಯ ತೆರಿಗೆ ಇಲ್ಲ.
2 ತೆರಿಗೆ ದರ ಬದಲಾವಣೆಯಡಿ 1 ಲಕ್ಷ ಕೋಟಿ ರು. ವರೆಗೆ ನೇರ ಹಾಗೂ 2,600 ಕೋಟಿ ರು. ವರೆಗೆ ಪರೋಕ್ಷ ತೆರಿಗೆ ಇಲ್ಲ.
3 ವಾರ್ಷಿಕ 25 ಲಕ್ಷ ರು. ಆದಾಯ ಹೊಂದಿರುವವರು 1.10 ಲಕ್ಷ ರು., 18 ಲಕ್ಷ ರು. ವಾರ್ಷಿಕ ಆದಾಯ ಪಡೆಯುವವರು 70 ಸಾವಿರ ರು. ತೆರಿಗೆ ಲಾಭ ಪಡೆಯುತ್ತಾರೆ.
4 ಮೊಬೈಲ್‌ಗಳ ಬ್ಯಾಟರಿ ಉತ್ಪಾದನೆಗೆ ಅವಶ್ಯಕವಾದ 28 ಹೆಚ್ಚುವರಿ ಸರಕುಗಳು ತೆರಿಗೆ ವ್ಯಾಪ್ತಿಯಿಂದ ಹೊರಗೆ.
5 ತೆರಿಗೆ ಲಾಭಗಳನ್ನು ಪಡೆಯಲು, ಸ್ಟಾರ್ಟ್‌ಅಪ್‌ಗಳು ತಮ್ಮನ್ನು ತಾವು ಕಂಪನಿ ಎಂದು ನೋಂದಾಯಿಸಿಕೊಳ್ಳುವ ಅವಧಿಯನ್ನು 5 ವರ್ಷ ವಿಸ್ತರಿಸಲಾಗಿದೆ.
6 ಗಿಗ್‌ ಕಾರ್ಮಿಕರನ್ನು ಇ-ಶ್ರಮ್‌ ಪೋರ್ಟಲ್‌ನಲ್ಲಿ ನೊಂದಾಯಿಸಿ, ಗುರುತಿನ ಚೀಟಿಗಳನ್ನು ನೀಡಲಾಗುವುದು. ಅವರಿಗೆ ಪಿಎಂ ಜನ್‌ ಆರೋಗ್ಯ ಯೋಜನೆಯಡಿ ಆರೋಗ್ಯ ಸೇವೆಗಳನ್ನು ಒದಗಿಸಲಾಗುವುದು. ಇದರಿಂದ ಸುಮಾರು 1 ಕೋಟಿ ಗಿಗ್‌ ಕಾರ್ಮಿಕರಿಗೆ ಅನುಕೂಲವಾಗಲಿದೆ.
7 ಸ್ಥಗಿತಗೊಂಡ ವಸತಿ ಯೋಜನೆಗಳನ್ನು ಪೂರ್ಣಗೊಳಿಸಲು ಪರಿಚಯಿಸಲಾದ ಸ್ವಾಮಿ(ಎಸ್‌ಡಬ್ಲ್ಯುಎಎಂಐಎಚ್‌) ಯೋಜನೆಯಡಿ 50 ಸಾವಿರ ಮನೆ ನಿರ್ಮಾಣ ಸಂಪನ್ನ. 2025ರಲ್ಲಿ ಇನ್ನೂ 40 ಸಾವಿರ ಮನೆಗಳು ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಅಂತೆಯೇ, ಬಾಡಿಗೆ ಹಾಗೂ ಇಎಂಐ ಹೊರೆಯಿಂದ ತಪ್ಪಿಸಿಕೊಳ್ಳಲು ಮಧ್ಯಮವರ್ಗದವರಿಗೆ ಹೆಚ್ಚುವರಿ 1 ಲಕ್ಷ ಮನೆ ನಿರ್ಮಾಣಕ್ಕೆ ಸ್ವಾಮಿ ನಿಧಿ-2ರ ಅಡಿಯಲ್ಲಿ 15 ಸಾವಿರ ಕೋಟಿ ರು. ಮೀಸಲಿಡಲಾಗಿದೆ.
8 ನಿಗದಿತ ಹಣಕಾಸು ಸಂಸ್ಥೆಗಳಿಂದ ಪಡೆದ 10 ಲಕ್ಷ ರು. ವರೆಗಿನ ಶಿಕ್ಷಣ ಸಾಲಗಳ ಮೇಲಿನ ಟಿಸಿಎಸ್‌(ಟ್ಯಾಕ್ಸ್‌ ಕಲೆಕ್ಷನ್‌ ಅಟ್‌ ಸೋರ್ಸ್‌) ತೆಗೆದುಹಾಕಲಾಗಿದೆ.
9 ಬಾಡಿಗೆ ಮೇಲಿನ ಟಿಡಿಎಸ್‌(ಟ್ಯಾಕ್ಸ್‌ ಡಿಡಕ್ಷನ್‌ ಅಟ್‌ ಸೋರ್ಸ್‌) ಮಿತಿಯನ್ನು 2.4 ಲಕ್ಷ ರು.ನಿಂದ 6 ಲಕ್ಷ ರು.ಗೆ ಏರಿಕೆ.
10 ಹಿರಿಯ ನಾಗರಿಕರಿಗೆ ಎಫ್‌ಡಿ ಮೇಲಿನ ಬಡ್ಡಿಗೆ ಟಿಡಿಎಸ್‌ ಕಡಿತ ಮಿತಿಯನ್ನು 1ಲಕ್ಷ ರು.ಗೆ ಏರಿಸಲಾಗಿದೆ.