ಕೋವಿಡ್ ಸಂಕಷ್ಟ ನಿರ್ವಹಣೆಗೆ ನೋಟು ಮುದ್ರಣ ಇಲ್ಲ: ಸಚಿವೆ ನಿರ್ಮಲಾ ಸ್ಪಷ್ಟನೆ!
* ಕೋವಿಡ್-19ನಿಂದಾಗಿ ದೇಶ ಎದುರಿಸುತ್ತಿರುವ ಸಮಸ್ಯೆ
* ಕೋವಿಡ್ ಸಂಕಷ್ಟ ನಿರ್ವಹಣೆಗೆ ನೋಟು ಮದ್ರಣ ಇಲ್ಲ
* ಸಂಸತ್ತಿಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸ್ಪಷ್ಟನೆ
ನವದೆಹಲಿ(ಜು,27): ಕೋವಿಡ್-19ನಿಂದಾಗಿ ದೇಶ ಎದುರಿಸುತ್ತಿರುವ ಸಮಸ್ಯೆ ನಿರ್ವಹಣೆಗಾಗಿ ನೋಟು ಮುದ್ರಿಸುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ಸಂಸತ್ತಿಗೆ ಮಾಹಿತಿ ನೀಡಿದೆ.
ಕೋವಿಡ್‌ನಿಂದಾಗಿ ಎದುರಾಗಿರುವ ಸಂಕಷ್ಟಗಳ ನಿವಾರಣೆ ಮತ್ತು ಉದ್ಯೋಗಳನ್ನು ಉಳಿಸುವ ಸಲುವಾಗಿ ಹೆಚ್ಚೆಚ್ಚು ನೋಟುಗಳನ್ನು ಮುದ್ರಿಸಿ ಆರ್ಥಿಕತೆಗೆ ಬಿಡುಗಡೆ ಮಾಡುವ ಬಗ್ಗೆ ಹಲವು ಆರ್ಥಿಕ ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದರು. ಅದರ ಬೆನ್ನಲ್ಲೇ ಇಂಥ ಪ್ರಸ್ತಾಪ ಇದೆಯೇ ಎಂದು ಸರ್ಕಾರಕ್ಕೆ ಸಂಸತ್ತಿನಲ್ಲಿ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ‘ಇಲ್ಲ’ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಉತ್ತರಿಸಿದ್ದಾರೆ.
‘2020-21ನೇ ಸಾಲಿನಲ್ಲಿ ದೇಶದ ಜಿಡಿಪಿ ಶೇ.7.3ರಷ್ಟುಕುಸಿತ ಕಂಡಿದೆ. ಇದು ಕೋವಿಡ್ ಮತ್ತು ಅದನ್ನು ನಿರ್ವಹಿಸಲು ಜಾರಿಗೊಳಿಸಲಾದ ಕಠಿಣ ಕ್ರಮಗಳು ಆರ್ಥಿಕತೆ ಮೇಲೆ ಬೀರಿರುವ ಅಳಿಸಲಾಗದ ಪರಿಣಾಮಗಳನ್ನು ತೋರಿಸುತ್ತಿದೆ. ಆದರೆ ದೇಶದ ಆರ್ಥಿಕತೆಯ ಮೂಲಬೇರುಗಳು ಸುಭದ್ರವಾಗಿರುವ ಕಾರಣ, ನಾವು ನಿಧಾನವಾಗಿ ಚೇತರಿಕೆಯ ಹಂತದತ್ತ ಸಾಗುತ್ತಿದ್ದೇವೆ. ಜೊತೆಗೆ ಆತ್ಮನಿರ್ಭರ ಭಾರತ ಯೋಜನೆಯು ಆರ್ಥಿಕತೆಯನ್ನು ಮತ್ತೆ ಸರಿದಾರಿಗೆ ತರುತ್ತಿದೆ’ ಎಂದು ಹೇಳಿದ್ದಾರೆ.
ಜೊತೆಗೆ ದೇಶದ ಆರ್ಥಿಕತೆಗೆ ನೆರವಾಗಲು ಬಜೆಟ್‌ನಲ್ಲಿ ಹಲವು ಕ್ರಮಗಳನ್ನು ಘೋಷಿಸಲಾಗಿದೆ. ಜೊತೆಗೆ ಇತರೆ ಹಲವು ಪ್ಯಾಕೇಜ್‌ಗಳ ಮೂಲಕ ಪರಿಸ್ಥಿತಿಯನ್ನು ಎದುರಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.