Asianet Suvarna News Asianet Suvarna News

ಸ್ವಿಸ್ ಬ್ಯಾಂಕಿನಲ್ಲಿರುವ ಭಾರತೀಯರ ಹಣದ ಪ್ರಮಾಣದ ನಿಖರ ಮಾಹಿತಿಯಿಲ್ಲ: ನಿರ್ಮಲಾ ಸೀತಾರಾಮನ್

*ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ವಿತ್ತ ಸಚಿವೆ
*2020ಕ್ಕೆ ಹೋಲಿಸಿದರೆ 2021ರಲ್ಲಿ ಸ್ವಿಸ್ ಬ್ಯಾಂಕುಗಳಲ್ಲಿನ ಭಾರತೀಯರ ಹಣದಲ್ಲಿ ಹೆಚ್ಚಳವಾಗಿರುವ ಬಗ್ಗೆ ವರದಿ
*ಸ್ವಿಸ್ ಬ್ಯಾಂಕಿನಲ್ಲಿ 30500 ಕೋಟಿ ರೂ.ಭಾರತೀಯರ ಹಣವಿದೆ ಎಂಬ ಬಗ್ಗೆ ಕಳೆದ ತಿಂಗಳು ಮಾಧ್ಯಮಗಳಲ್ಲಿ ವರದಿ

No official estimate of exact money deposited by Indian citizens companies in Swiss banks Nirmala Sitharaman
Author
Bangalore, First Published Jul 26, 2022, 5:48 PM IST

ನವದೆಹಲಿ (ಜು.26): ಭಾರತೀಯ ನಾಗರಿಕರು, ಕಂಪನಿಗಳು ಸ್ವಿಸ್ ಬ್ಯಾಂಕುಗಳಲ್ಲಿ ನಿಖರವಾಗಿ ಎಷ್ಟು ಮೊತ್ತದ ಹಣ ಇಟ್ಟಿದ್ದಾರೆ ಎಂಬ ಬಗ್ಗೆ ಯಾವುದೇ ಅಧಿಕೃತ ಅಂದಾಜು ಇಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಭಾರತೀಯರು ಸ್ವಿಸ್ ಬ್ಯಾಂಕುಗಳಲ್ಲಿ ಠೇವಣಿಯಿಟ್ಟಿರುವ ಹಣದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ನಿರ್ಮಲಾ ಸೀತಾರಾಮನ್ , 'ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯ ನಾಗರಿಕರು ಹಾಗೂ ಕಂಪನಿಗಳು ಠೇವಣಿಯಿಟ್ಟಿರುವ ಹಣದ ಮೊತ್ತದ ಬಗ್ಗೆ ಯಾವುದೇ ಅಧಿಕೃತ ಅಂದಾಜು ಇಲ್ಲ' ಎಂದಿದ್ದಾರೆ. 2020ಕ್ಕೆ ಹೋಲಿಸಿದರೆ 2021ರಲ್ಲಿ ಸ್ವಿಸ್ ಬ್ಯಾಂಕುಗಳಲ್ಲಿನ ಭಾರತೀಯರ ಹಣದಲ್ಲಿ ಹೆಚ್ಚಳವಾಗಿದೆ ಎಂದು ಇತ್ತೀಚಿನ ಕೆಲವು ಮಾಧ್ಯಮ ವರದಿಗಳು ಉಲ್ಲೇಖಿಸಿವೆ. ಆದರೆ, ಈ ಠೇವಣಿಗಳು ಭಾರತೀಯರು ಸ್ವಿಜರ್ಲೆಂಡ್ ನಲ್ಲಿಟ್ಟಿರುವ ಕಪ್ಪು ಹಣದ ಮೊತ್ತವನ್ನು ಸೂಚಿಸೋದಿಲ್ಲ ಎಂದು ಕೂಡ ಈ ಮಾಧ್ಯಮ ವರದಿಗಳು ತಿಳಿಸಿವೆ. ಸ್ವಿಸ್ ರಾಷ್ಟ್ರೀಯ ಬ್ಯಾಂಕಿನ (SNB) ವಾರ್ಷಿಕ ಬ್ಯಾಂಕಿಂಗ್ ಅಂಕಿಅಂಶಗಳನ್ನು ಭಾರತೀಯ ನಿವಾಸಿಗಳು ಸ್ವಿಜರ್ಲೆಂಡ್ ನಲ್ಲಿಟ್ಟಿರುವ ಠೇವಣಿಗಳ ವಿಶ್ಲೇಷಣೆಗೆ ಬಳಸಬಾರದು ಎಂದು ಸ್ವಿಸ್ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಈ ಸಂದರ್ಭದಲ್ಲಿ ಸಚಿವೆ ಮಾಹಿತಿ ನೀಡಿದ್ದಾರೆ.

ಬಹಿರಂಗಪಡಿಸದ ವಿದೇಶಿ ಆಸ್ತಿಗಳು
ಬಹಿರಂಗಪಡಿಸದ ವಿದೇಶಿ ಆಸ್ತಿಗಳು ಹಾಗೂ ಆದಾಯದ ಮೇಲೆ ತೆರಿಗೆ ವಿಧಿಸಲು ಸರ್ಕಾರ  ಈಗಾಗಲೇ ಅನೇಕ ಕ್ರಮಗಳನ್ನು ಕೈಗೊಂಡಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಇದರಲ್ಲಿ ಕಪ್ಪು ಹಣ  ಕಾಯ್ದೆ ರೂಪಿಸೋದು ಹಾಗೂ ತೆರಿಗೆ ಕಾಯ್ದೆ  2015ರ ಜಾರಿ ಸೇರಿದೆ ಎಂದು ವಿತ್ತ ಸಚಿವೆ ತಿಳಿಸಿದ್ದಾರೆ. ಈ ಕಾಯ್ದೆ ಪರಿಣಾಮಕಾರಿ ಜಾರಿಗೆ ಭಾರತದಾದ್ಯಂತ ಆದಾಯ ತೆರಿಗೆ (ತನಿಖೆ) ನಿರ್ದೇಶನಾಲಯದ ಅಡಿಯಲ್ಲಿ 29 ವಿದೇಶಿ ಆಸ್ತಿಗಳ ತನಿಖಾ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು  ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ.

ನೀವು ಉಳಿತಾಯ ಖಾತೆ ಹೊಂದಿದ್ದೀರಾ? ಹಾಗಾದ್ರೆ 10,000ರೂ. ತೆರಿಗೆ ಉಳಿಸಬಹುದು, ಹೇಗೆ ? ಇಲ್ಲಿದೆ ಮಾಹಿತಿ

ಸ್ವಿಸ್ ಬ್ಯಾಂಕಿನಲ್ಲಿರುವ ಭಾರತೀಯರ ಹಣ 30500 ಕೋಟಿ ರೂ.
ಭಾರತದಲ್ಲಿನ ಸ್ವಿಜರ್ಲೆಂಡ್‌ ಮೂಲದ ಬ್ಯಾಂಕ್‌ಗಳು ಮತ್ತು ಸ್ವಿಜರ್ಲೆಂಡಿನಲ್ಲಿರುವ ಬ್ಯಾಂಕ್‌ಗಳಲ್ಲಿ ಭಾರತೀಯರು ಮತ್ತು ಭಾರತೀಯ ಮೂಲದ ಸಂಸ್ಥೆಗಳು ಇಟ್ಟಿರುವ ಹಣದ ಮೊತ್ತ 30500 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಜೂನ್ ನಲ್ಲಿ ವರದಿಯಾಗಿತ್ತು. ಇದು ಕಳೆದ 14 ವರ್ಷಗಳಲ್ಲೇ ಗರಿಷ್ಠ ಎಂದು ಸ್ವಿಸ್‌ ಸೆಂಟ್ರಲ್‌ ಬ್ಯಾಂಕಿನ ವಾರ್ಷಿಕ ವರದಿಯು ತಿಳಿಸಿದೆ. 2020ರಲ್ಲಿ ಭಾರತೀಯರ ನಿಧಿಯ ಮೌಲ್ಯ 20,700 ಕೋಟಿ ರೂ.ಗಳಷ್ಟಿತ್ತು. 2006ರಲ್ಲಿ ಭಾರತೀಯರ ಸ್ವಿಸ್‌ ಖಾತೆಗಳಲ್ಲಿ 50,000 ಕೋಟಿ ರೂ.ಗಳಷ್ಟು ಹಣ ಠೇವಣಿಗಳ ರೂಪದಲ್ಲಿತ್ತು. ನಂತರ ಇದರ ಪ್ರಮಾಣದಲ್ಲಿ ಸತತ ಇಳಿಕೆ ಕಂಡುಬಂದಿತ್ತು.

ಭಾರತ ಹೊರತುಪಡಿಸಿ ಏಷ್ಯಾದ 14 ರಾಷ್ಟ್ರದಲ್ಲಿ ಆರ್ಥಿಕ ಹಿಂಜರಿತ, ಬ್ಲೂಮ್‌ಬರ್ಗ್ ಸಮೀಕ್ಷಾ ವರದಿ!

ಇನ್ನು ಭಾರತೀಯರ ಉಳಿತಾಯ ಖಾತೆಯ ಠೇವಣಿ 4,800 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಇದು ಕಳೆದ 7 ವರ್ಷಗಳ ಗರಿಷ್ಠ. 15.61 ಸಾವಿರ ಕೋಟಿ ರೂ.ಗಳಷ್ಟು ಮೌಲ್ಯದ ಬಾಂಡ್‌, ಭದ್ರತೆಗಳನ್ನು ಭಾರತೀಯರ ಗ್ರಾಹಕರ ಹೆಸರಿನಲ್ಲಿ ಸ್ವಿಸ್‌ ಬ್ಯಾಂಕಿನಲ್ಲಿಡಲಾಗಿದೆ ಎಂದು ವರದಿ ತಿಳಿಸಿದೆ. ಈ ಮೌಲ್ಯವನ್ನು ಭಾರತೀಯರು ಸ್ವಿಸ್‌ ಬ್ಯಾಂಕುಗಳಲ್ಲಿಟ್ಟ ಕಪ್ಪುಹಣದ ಪ್ರಮಾಣ ಎಂಬಂತೆ ಬಿಂಬಿಸಬಾರದು. ಜೊತೆಗೆ ಅನಿವಾಸಿ ಭಾರತೀಯರು ಹಾಗೂ ಇನ್ನೊಂದು ದೇಶದ ನಿವಾಸಿಯ ಹೆಸರಿನಲ್ಲಿ ಭಾರತೀಯರು ಠೇವಣಿ ಮಾಡಿದ ಹಣವನ್ನು ಇದು ಒಳಗೊಂಡಿಲ್ಲ. ಭಾರತದಲ್ಲಿರುವ ಸ್ವಿಸ್‌ ಬ್ಯಾಂಕ್‌ ಶಾಖೆ ಹಾಗೂ ಭಾರತೀಯ ಬ್ಯಾಂಕ್‌ ಹಾಗೂ ಸ್ವಿಸ್‌ ಬ್ಯಾಂಕ್‌ ನಡುವಿನ ವ್ಯವಹಾರ ಹೆಚ್ಚಳವಾದ ಕಾರಣದಿಂದ ಠೇವಣಿಯಲ್ಲಿ ಏರಿಕೆಯಾಗಿದೆ ಎಂದು ವರದಿ ಹೇಳಿದೆ.

Latest Videos
Follow Us:
Download App:
  • android
  • ios