ನೀವು ಉಳಿತಾಯ ಖಾತೆ ಹೊಂದಿದ್ದೀರಾ? ಹಾಗಾದ್ರೆ 10,000ರೂ. ತೆರಿಗೆ ಉಳಿಸಬಹುದು, ಹೇಗೆ ? ಇಲ್ಲಿದೆ ಮಾಹಿತಿ
2022-23ನೇ ಸಾಲಿನ ಮೌಲ್ಯಮಾಪನ ವರ್ಷಕ್ಕೆ ಐಟಿಆರ್ ಸಲ್ಲಿಕೆ ಗಡುವು ಸಮೀಪಿಸಿದೆ. ಹೀಗಿರುವಾಗ ನೀವು ಉಳಿತಾಯ ಖಾತೆ ಹೊಂದಿದ್ರೆ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 80ಟಿಟಿಎ ಅಡಿಯಲ್ಲಿ ಗರಿಷ್ಠ 10,000ರೂ. ತೆರಿಗೆ ಕಡಿತದ ಪ್ರಯೋಜನ ಪಡೆಯಲು ಅವಕಾಶವಿದೆ. ಅದು ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ.
Business Desk: 2022-23ನೇ ಸಾಲಿನ ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆಗೆ ಜುಲೈ 31 ಅಂತಿಮ ಗಡುವು. ಹಳೆಯ ತೆರಿಗೆ ಪದ್ಧತಿಯಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡೋ ತೆರಿಗೆದಾರರು ಅನೇಕ ತೆರಿಗೆ ಕಡಿತಗಳು ಹಾಗೂ ವಿನಾಯ್ತಿಗಳನ್ನು ಪಡೆಯಲು ಅರ್ಹರಾಗಿದ್ದಾರೆ. ನಿಮ್ಮ ಬ್ಯಾಂಕ್ ಉಳಿತಾಯ ಖಾತೆಗಳ ಮೇಲೆ ಪಡೆದ ಬಡ್ಡಿಗೆ 10,000ರೂ. ತನಕ ತೆರಿಗೆ ಕಡಿತವನ್ನು ನೀವು ಕ್ಲೇಮ್ ಮಾಡಿಕೊಳ್ಳಬಹುದು. ಉಳಿತಾಯ ಖಾತೆ ಮೇಲೆ ಗಳಿಸಿರುವ ಬಡ್ಡಿ ಮೇಲಿನ ತೆರಿಗೆ ಕಡಿತಕ್ಕೆ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 80ಟಿಟಿಎ ಅಡಿಯಲ್ಲಿ ಅವಕಾಶವಿದೆ. ಈ ಕೆಳಗಿನ ಮೂಲಗಳಿಂದ ಸ್ವೀಕರಿಸಿದ ಬಡ್ಡಿ ಆದಾಯಕ್ಕೆ ಕಡಿತ ಕ್ಲೇಮ್ ಮಾಡಲು ತೆರಿಗೆದಾರರು ಅರ್ಹರಾಗಿದ್ದಾರೆ- ಎ.ಬ್ಯಾಂಕಿನ ಉಳಿತಾಯ ಖಾತೆ, ಬಿ.ಕೋಆಪರೇಟಿವ್ ಸೊಸೈಟಿ ಅಥವಾ ಬ್ಯಾಂಕಿನ ಉಳಿತಾಯ ಖಾತೆ ಸಿ.ಅಂಚೆ ಕಚೇರಿ ಉಳಿತಾಯ ಯೋಜನೆಗಳು. ಒಂದು ಅಥವಾ ಹೆಚ್ಚಿನ ಸಂಖ್ಯೆಯ ಖಾತೆಗಳಿಂದ ಗಳಿಸಿದ ಬಡ್ಡಿ ಹಣಕ್ಕೆ ತೆರಿಗೆ ಕಡಿತದ ಪ್ರಯೋಜನ ಪಡೆಯಲು ಅವಕಾಶವಿದೆ. ಸೆಕ್ಷನ್ 80ಟಿಟಿಎ ಅಡಿಯಲ್ಲಿ ಗರಿಷ್ಠ 10,000ರೂ. ತನಕ ತೆರಿಗೆ ಕಡಿತಕ್ಕೆ ಅವಕಾಶವಿದೆ. ಹಾಗಾದ್ರೆ ಸೆಕ್ಷನ್ 80ಟಿಟಿಎ ಪ್ರಯೋಜನಗಳನ್ನು ತೆರಿಗೆದಾರ ಹೇಗೆ ಪಡೆಯಬಹುದು? ಇಲ್ಲಿದೆ ಮಾಹಿತಿ.
ಯಾವುದಕ್ಕೆ ಸೆಕ್ಷನ್ 80ಟಿಟಿಎ ಅಡಿ ವಿನಾಯ್ತಿ ಇಲ್ಲ?
ಸ್ಥಿರ ಠೇವಣಿ ಅಥವಾ ರಿಕರಿಂಗ್ ಡೆಫಾಸಿಟ್ (RD) ಅಥವಾ ಯಾವುದೇ ಸಮಯಾವಧಿ ಠೇವಣಿಗಳಿಂದ ಬರುವ ಬಡ್ಡಿ ಆದಾಯದ ಮೇಲೆ ಸೆಕ್ಷನ್ 80ಟಿಟಿಎ ( Section 80TTA) ಅಡಿಯಲ್ಲಿ ತೆರಿಗೆ ಕಡಿತದ (Tax Deduction) ಸೌಲಭ್ಯ ಪಡೆಯಲು ಅವಕಾಶವಿಲ್ಲ. ಇನ್ನು ಬ್ಯಾಂಕಿಂಗೇತರ ಫೈನಾನ್ಸ್ ಕಂಪನಿಗಳಲ್ಲಿನ (NBCSs) ಠೇವಣಿಗಳ ಮೇಲಿನ ಬಡ್ಡಿಗೆ ಕೂಡ ಸೆಕ್ಷನ್ 80ಟಿಟಿಎ ಅಡಿ ತೆರಿಗೆ ಪ್ರಯೋಜನ ಪಡೆಯಲು ಅವಕಾಶವಿಲ್ಲ.
LIC Policy:ಎಲ್ಐಸಿಯ ಈ ಪಾಲಿಸಿಯಲ್ಲಿ ಹೂಡಿಕೆ ಮಾಡಿದ್ರೆ 22 ಲಕ್ಷ ರೂ. ಗಳಿಸಬಹುದು, ಹೇಗೆ?
ಯಾರು ಸೆಕ್ಷನ್ 80ಟಿಟಿಎ ಪ್ರಯೋಜನ ಪಡೆಯಬಹುದು?
ಭಾರತದಲ್ಲಿ ನೆಲೆಸಿರುವ ಒಬ್ಬ ತೆರಿಗೆದಾರ ಹಾಗೂ ಹಿಂದು ಅವಿಭಜಿತ ಕುಟುಂಬ (HUF) ಸೆಕ್ಷನ್ 80ಟಿಟಿಎ ( Section 80TTA) ಅಡಿಯಲ್ಲಿ ತೆರಿಗೆ ಪ್ರಯೋಜನ ಪಡೆಯಲು ಅರ್ಹರಾಗಿದ್ದಾರೆ. ಅನಿವಾಸಿ ಭಾರತೀಯರು (NRIs) ಕೂಡ ತಮ್ಮ ಎನ್ ಆರ್ ಒ ಉಳಿತಾಯ ಖಾತೆಗಳಿಗೆ (NRO savings accounts) ಸೆಕ್ಷನ್ 80ಟಿಟಿಎ ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಪಡೆಯಹುದು. ಎನ್ ಆರ್ ಐಗಳು ಭಾರತದಲ್ಲಿ ಎನ್ ಆರ್ ಇ (NRE) ಹಾಗೂ ಎನ್ ಆರ್ ಒ ಉಳಿತಾಯ ಖಾತೆಗಳನ್ನು ಮಾತ್ರ ಹೊಂದಲು ಅವಕಾಶವಿದೆ. ಎನ್ ರ್ ಇಉಳಿತಾಯ ಖಾತೆಗಳು ಈಗಾಗಲೇ ತೆರಿಗೆ ಮುಕ್ತವಾಗಿವೆ. ಹೀಗಾಗಿ ಸೆಕ್ಷನ್ 80ಟಿಟಿಎ ಎನ್ ಆರ್ ಒ ಉಳಿತಾಯ ಖಾತೆ ಮೇಲೆ ಗಳಿಸಿದ ಬಡ್ಡಿಗೆ ಮಾತ್ರ ಅನ್ವಯಿಸುತ್ತದೆ. ಇನ್ನು 60 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಸೆಕ್ಷನ್ 80ಟಿಟಿಎ ಅಡಿ ತೆರಿಗೆ ಕಡಿತದ ಪ್ರಯೋಜನ ಪಡೆಯಲು ಅವಕಾಶವಿಲ್ಲ. ಇನ್ನು ಸೆಕ್ಷನ್ 115BAC ಅಡಿಯಲ್ಲಿ ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಂಡವರು ಕೂಡ ಸೆಕ್ಷನ್ 80ಟಿಟಿಎ ಅಡಿ ತೆರಿಗೆ ಪ್ರಯೋಜನಗಳನ್ನು ಪಡೆಯುವಂತಿಲ್ಲ.
ಭಾರತ ಹೊರತುಪಡಿಸಿ ಏಷ್ಯಾದ 14 ರಾಷ್ಟ್ರದಲ್ಲಿ ಆರ್ಥಿಕ ಹಿಂಜರಿತ, ಬ್ಲೂಮ್‌ಬರ್ಗ್ ಸಮೀಕ್ಷಾ ವರದಿ!
ಸೆಕ್ಷನ್ 80ಟಿಟಿಎ ಅಡಿಯಲ್ಲಿ ಕ್ಲೇಮ್ ಮಾಡೋದು ಹೇಗೆ?
ತೆರಿಗೆದಾರರು ನೆನಪಿಡಬೇಕು, ಇದು ಕಡಿತ ಮಾತ್ರ, ವಿನಾಯ್ತಿ ಅಲ್ಲ. ಹೀಗಾಗಿ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವಾಗ 'ಇತರ ಮೂಲಗಳಿಂದ ಬಂದ ಆದಾಯ' ಶೀರ್ಷಿಕೆಯಡಿಯಲ್ಲಿ ಒಟ್ಟು ಬಡ್ಡಿ ಆದಾಯವನ್ನು ನಮೂದಿಸಬೇಕು. ಆ ಬಳಿಕ ಒಟ್ಟು ಆದಾಯವನ್ನು ಆ ಆರ್ಥಿಕ ಸಾಲಿನ ಆದಾಯ ಶೀರ್ಷಿಕೆಯಡಿಯಲ್ಲಿ ನಮೂದಿಸಬೇಕು. ಆ ಬಳಿಕ ಅದನ್ನು ಸೆಕ್ಷನ್ 80ಟಿಟಿಎ ಅಡಿಯಲ್ಲಿ ಕಡಿತವೆಂದು ತೋರಿಸಬೇಕು. ಐಟಿಆರ್ ಫೈಲ್ ಮಾಡೋವಾಗ ಆ ಆರ್ಥಿಕ ಸಾಲಿನಲ್ಲಿ ಗಳಿಸಿದ ಎಲ್ಲ ಆದಾಯದ ಮಾಹಿತಿ ನೀಡಬೇಕು. ಇಲ್ಲವಾದರೆ ದಂಡ ಬೀಳುವ ಸಾಧ್ಯತೆ ಇರುತ್ತದೆ.