ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಎಲ್‌ಪಿಜಿ ಕೊರತೆಯಿದೆ ಎಂಬ ವದಂತಿಗಳನ್ನು ಇಂಡಿಯನ್ ಆಯಿಲ್ ಕಾರ್ಪೊರೇಶನ್ ತಳ್ಳಿಹಾಕಿದೆ. ರಾಜ್ಯದಲ್ಲಿ ಸಾಕಷ್ಟು ಇಂಧನ ಲಭ್ಯವಿದ್ದು, ಪೂರೈಕೆ ಸರಪಳಿ ಸುಗಮವಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ವದಂತಿಗಳಿಂದ ಉಂಟಾಗಿದ್ದ ಪ್ಯಾನಿಕ್ ಬುಕ್ಕಿಂಗ್ ಇದೀಗ ನಿಯಂತ್ರಣಕ್ಕೆ ಬಂದಿದೆ.

ರಾಜ್ಯದಲ್ಲಿ ಇಂಧನ ಕೊರತೆ ಕುರಿತು ಹರಿದಾಡುತ್ತಿರುವ ವದಂತಿಗಳಿಗೆ ತೆರೆ ಎಳೆಯುವಂತೆ ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನ ಸ್ಟೇಟ್ ಕೋ-ಆರ್ಡಿನೇಟರ್ ಸಿದ್ದಾರ್ಥ್ ಅಗರವಾಲ್ ಸ್ಪಷ್ಟನೆ ನೀಡಿದ್ದಾರೆ. ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಎಲ್‌ಪಿಜಿ ಯಾವುದೇ ರೀತಿಯ ಅಭಾವ ಇಲ್ಲ ಎಂದು ಅವರು ಖಚಿತಪಡಿಸಿದ್ದಾರೆ.

ಕರ್ನಾಟಕದಲ್ಲಿ ವಾರ್ಷಿಕವಾಗಿ ಸುಮಾರು 15 ಮೆಟ್ರಿಕ್ ಟನ್ ಸಾಮರ್ಥ್ಯದ ಕಚ್ಚಾ ತೈಲ ಸಂಸ್ಕರಣಾ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಮಂಗಳೂರು, ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ಮೈಸೂರು, ಕಲಬುರಗಿ, ಕಾರವಾರ, ವಿಜಯಪುರ ಸೇರಿದಂತೆ ಪ್ರಮುಖ ನಗರಗಳಲ್ಲಿ ಒಟ್ಟು 10 ಟರ್ಮಿನಲ್‌ಗಳು ಸಕ್ರಿಯವಾಗಿವೆ. ಜೊತೆಗೆ ರಾಜ್ಯದ ವಿವಿಧ ಭಾಗಗಳಲ್ಲಿ 10 ಬಲ್ಕ್ ಡಿಪೋಗಳು ಕಾರ್ಯನಿರ್ವಹಿಸುತ್ತಿದ್ದು, ಇಂಧನ ವಿತರಣೆಯ ಸರಪಳಿ ಸುಗಮವಾಗಿ ನಡೆಯುತ್ತಿದೆ.

ಬುಕ್ಕಿಂಗ್ ಪ್ರಮಾಣವು 3.75 ಲಕ್ಷಕ್ಕೆ ಏರಿಕೆ

ಇತ್ತೀಚೆಗೆ ಕೆಲವೆಡೆ ಇಂಧನ ಲಭ್ಯವಿಲ್ಲ ಎಂಬ ವದಂತಿಗಳು ಹರಡಿದ ಹಿನ್ನೆಲೆಯಲ್ಲಿ ಜನರು ಪ್ಯಾನಿಕ್ ಬುಕ್ಕಿಂಗ್ ಮತ್ತು ಅನಗತ್ಯ ಸಂಗ್ರಹಣೆಗೆ ಮುಂದಾಗಿದ್ದರು. ಇದರ ಪರಿಣಾಮವಾಗಿ ಮಾರ್ಚ್ ತಿಂಗಳಲ್ಲಿ ದಿನನಿತ್ಯದ ಬುಕ್ಕಿಂಗ್ ಪ್ರಮಾಣವು 3.75 ಲಕ್ಷಕ್ಕೆ ಏರಿಕೆಯಾಗಿತ್ತು. ಆದರೆ ಇದೀಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ದಿನನಿತ್ಯದ ಬುಕ್ಕಿಂಗ್ 3.06 ಲಕ್ಷಕ್ಕೆ ಇಳಿಕೆಯಾಗಿದೆ. ಇದರಿಂದ ಜನರಲ್ಲಿ ಆತಂಕ ಕಡಿಮೆಯಾಗಿರುವುದು ಸ್ಪಷ್ಟವಾಗಿದೆ.

ಇನ್ನೊಂದು ಗಮನಾರ್ಹ ಅಂಶವೆಂದರೆ, ರಾಜ್ಯದಲ್ಲಿ ಸುಮಾರು 94.5 ಶೇಕಡಾ ಜನರು ಡಿಜಿಟಲ್ ಮಾಧ್ಯಮಗಳ ಮೂಲಕವೇ ಬುಕ್ಕಿಂಗ್ ಮಾಡುತ್ತಿದ್ದಾರೆ. ಇದು ತಂತ್ರಜ್ಞಾನ ಬಳಕೆಯ ಏರಿಕೆಯನ್ನು ತೋರಿಸುವುದರ ಜೊತೆಗೆ, ವಿತರಣಾ ವ್ಯವಸ್ಥೆಯನ್ನು ಇನ್ನಷ್ಟು ವೇಗವಾಗಿಸುವಲ್ಲಿ ಸಹಾಯಕವಾಗಿದೆ.

ಯಾವುದೇ ಸಮಸ್ಯೆ ಇಲ್ಲ

ಆಟೋ ಎಲ್‌ಪಿಜಿ ಸಮಸ್ಯೆ ಕುರಿತು ಮಾತನಾಡಿದ ಅಗರವಾಲ್, ಕೆಲವು ಖಾಸಗಿ ಬಂಕ್‌ಗಳ ಮುಂದೆ ವಾಹನಗಳು ಕ್ಯೂನಲ್ಲಿ ನಿಲ್ಲುತ್ತಿರುವುದು ಕಂಡುಬರುತ್ತಿದೆ. ಆದರೆ ಇದು ಸರಬರಾಜಿನ ಕೊರತೆಯಿಂದಲ್ಲ; ಬದಲಾಗಿ ವದಂತಿಗಳ ಪರಿಣಾಮವಾಗಿ ಜನರು ಅನಗತ್ಯವಾಗಿ ಕ್ಯೂನಲ್ಲಿ ನಿಲ್ಲುತ್ತಿರುವುದು ಎಂದು ತಿಳಿಸಿದ್ದಾರೆ. ವಿಶೇಷವಾಗಿ ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ ಈ ರೀತಿಯ ದೃಶ್ಯಗಳು ಕಂಡುಬಂದಿವೆ.

ಒಟ್ಟಾರೆ, ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಜನರು ವದಂತಿಗಳಿಗೆ ಕಿವಿಗೊಡದೆ, ಅಗತ್ಯವಿರುವಷ್ಟೇ ಇಂಧನ ಬಳಕೆ ಮಾಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.