ಮಾಹಿತಿ ಮತ್ತು ಗುರುತಿನ ಚೀಟಿ ಇಲ್ಲದೇ 2000 ರು. ಮುಖಬೆಲೆಯ ನೋಟುಗಳ ಜಮೆ ಅಥವಾ ಬದಲಾವಣೆಗೆ ಅವಕಾಶ ನೀಡಬಾರದು ಎಂದು ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ನವದೆಹಲಿ: ಮಾಹಿತಿ ಮತ್ತು ಗುರುತಿನ ಚೀಟಿ ಇಲ್ಲದೇ 2000 ರು. ಮುಖಬೆಲೆಯ ನೋಟುಗಳ ಜಮೆ ಅಥವಾ ಬದಲಾವಣೆಗೆ ಅವಕಾಶ ನೀಡಬಾರದು ಎಂದು ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಮಾಹಿತಿ ಮತ್ತು ಗುರುತಿನ ಚೀಟಿ ಬೇಡ ಎಂಬ ಎಸ್‌ಬಿಐ ಮತ್ತು ಆರ್‌ಬಿಐನ ಹೇಳಿಕೆ ಏಕಪಕ್ಷೀಯ, ಅತಾರ್ಕಿಕ ಮತ್ತು ಸಂವಿಧಾನದ 14ನೇ ವಿಧಿಯ ಉಲ್ಲಂಘನೆ ಎಂದು ಹಿರಿಯ ವಕೀಲ ಅಶ್ವಿನಿ ಉಪಾಧ್ಯಾಯ ತಮ್ಮ ಅರ್ಜಿಯಲ್ಲಿ ವಾದಿಸಿದ್ದಾರೆ. ಮಾಹಿತಿ ಮತ್ತು ಗುರುತಿನ ಚೀಟಿ ಮೂಲಕವೇ ಹಣ ಜಮೆ ಮತ್ತು ಬದಲಾವಣೆಗೆ ಅವಕಾಶ ಮಾಡಿಕೊಟ್ಟರೆ, ಅದರಿಂದ ಕಾಳಧನಿಕರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸುಲಭವಾಗುತ್ತದೆ ಮತ್ತು ಜನಸಾಮಾನ್ಯರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಅನುವು ಮಾಡಿಕೊಡುತ್ತದೆ. ಹೀಗಾಗಿ ಈ ಎರಡು ದಾಖಲೆಗಳನ್ನು ಸಂಗ್ರಹಿಸಿದ ಬಳಿಕವೇ ನೋಟು ಜಮೆ ಮತ್ತು ಬದಲಾವಣೆಗೆ ಆರ್‌ಬಿಐ, ಎಸ್‌ಬಿಐಗೆ ಸೂಚಿಸಬೇಕು ಎಂದು ಕೋರಿದ್ದಾರೆ.

ಗುರುತಿನ ಚೀಟಿ ಇಲ್ಲದಿದ್ದರೆ ಕಪ್ಪುಹಣ ಪತ್ತೆ ಹೇಗೆ?

ನೋಟು ಬದಲಾಯಿಸಿಕೊಳ್ಳಬೇಕಾದರೆ ಯಾವುದೇ ಗುರುತಿನ ಚೀಟಿ ಬೇಡ ಎಂಬ ಎಸ್‌ಬಿಐನ ಸ್ಪಷ್ಟನೆಗೆ ಪ್ರತಿಕ್ರಿಯೆ ನೀಡಿರುವ ಶಕ್ತಿಕಾಂತ್‌ ದಾಸ್‌, ನೋಟು ಬದಲಾವಣೆ ಸಂಬಂಧ, ಹಾಲಿ ಜಾರಿಯಲ್ಲಿರುವ ನೀತಿಯನ್ನೇ ಮುಂದುವರೆಸುವಂತೆ ನಾವು ಈಗಾಗಲೇ ಬ್ಯಾಂಕ್‌ಗಳಿಗೆ ಸೂಚಿಸಿದ್ದೇವೆ. ಇದರ ಹೊರತಾಗಿ ಯಾವುದೇ ವಿಶೇಷ ಬದಲಾವಣೆಗೆ ನಾವು ಸೂಚಿಸಿಲ್ಲ. 50000 ರು.ಗಿಂತ ಹೆಚ್ಚಿನ ಹಣ ಜಮೆ ಮಾಡಬೇಕಾದಲ್ಲಿ ಯಾವುದೇ ಗ್ರಾಹಕರು ಆಧಾರ್‌ ಸಂಖ್ಯೆ ನಮೂದಿಸಬೇಕಿದೆ. ಅದು ಮುಂದುವರೆಯಲಿದೆ ಎಂದರು. ಜೊತೆಗೆ ಯಾವುದೇ ವ್ಯಕ್ತಿ ಭಾರೀ ಪ್ರಮಾಣದಲ್ಲಿ ಹಣ ಜಮೆ ಮಾಡಿದರೆ ಅದರ ಬಗ್ಗೆ ಆರ್‌ಬಿಐ ಗಮನ ಹರಿಸುವುದಿಲ್ಲ. ಅದು ಆದಾಯ ತೆರಿಗೆ ಅಧಿಕಾರಿಗಳ ಕೆಲಸ. ಇಂಥ ಜಮೆ ಬಗ್ಗೆ ಮಾಹಿತಿ ನೀಡುವ ವ್ಯವಸ್ಥೆಯನ್ನು ಬ್ಯಾಂಕ್‌ಗಳು ಹೊಂದಿವೆ. ಅವು ಅದನ್ನು ನೋಡಿಕೊಳ್ಳುತ್ತವೆ ಎಂದರು.

ಮೋದಿಗೂ ಇಷ್ಟವಿರಲಿಲ್ಲ 2000 ರು. ನೋಟು : ನೋಟುಗಳ ಹಿಂತೆಗೆತ ಅಪನಗದೀಕರಣ ಅಲ್ಲ: ನೃಪೇಂದ್ರ

1000 ರು. ಮುಖಬೆಲೆ ನೋಟು ಬಿಡುಗಡೆ ಇಲ್ಲ

2000 ರು.ನೋಟು ವಾಪಸ್‌ ಬೆನ್ನಲ್ಲೇ, ಸರ್ಕಾರ 1000 ರು.ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡಲಿದೆ ಎಂಬ ವರದಿಗಳನ್ನು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ತಳ್ಳಿಹಾಕಿದ್ದಾರೆ. ಇವೆಲ್ಲಾ ಕೇವಲ ಊಹಾಪೋಹ. ಇಂಥ ಯಾವುದೇ ಪ್ರಸ್ತಾಪ ಸದ್ಯ ನಮ್ಮ ಮುಂದೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ವಿದೇಶದಲ್ಲಿರುವ 2000 ರು. ವಾಪಸ್‌ಗೆ ವಿಶೇಷ ಕ್ರಮ

ಹಾಲಿ ವಿದೇಶದಲ್ಲಿ ಇರುವ ಭಾರತೀಯರ ಬಳಿ ಇರುವ 2000 ರು.ಮುಖ ಬೆಲೆಯ ನೋಟುಗಳನ್ನು ಬದಲಾಯಿಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಶಕ್ತಿಕಾಂತ್‌ ದಾಸ್‌, ಈ ಕಳವಳವನ್ನು ನಿವಾರಿಸಲು ಶೀಘ್ರವೇ ನಾವು ಹೊಸ ಪರಿಹಾರವನ್ನು ಪ್ರಕಟಿಸಲಿದ್ದೇವೆ ಎಂದು ಭರವಸೆ ನೀಡಿದರು.

2000 ರು.ನ ನೋಟು ಬದಲಾವಣೆ ಬಗ್ಗೆ ಆತಂಕ ಬೇಡ

ಚಲಾವಣೆಯಿಂದ ಹಿಂದಕ್ಕೆ ಪಡೆಯಲು ನಿರ್ಧರಿಸಲಾಗಿರುವ 2000 ರು. ಮುಖಬೆಲೆಯ ನೋಟುಗಳನ್ನು ಬದಲಾಯಿಸುವ ವಿಷಯದ ಕುರಿತು ಸಾರ್ವಜನಿಕರು ಆತಂಕ ಪಡಬೇಕಿಲ್ಲ. ನೋಟುಗಳನ್ನು ಬದಲಾಯಿಸಲು ಬ್ಯಾಂಕ್‌ಗಳಿಗೆ ದೌಡಾಯಿಸಬೇಕಾದ ಅಗತ್ಯವೂ ಇಲ್ಲ. ಇದಕ್ಕಾಗಿ 4 ತಿಂಗಳ ಸುದೀರ್ಘ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಗವರ್ನರ್‌ ಶಕ್ತಿಕಾಂತ್‌ ದಾಸ್‌ ಅಭಯ ನೀಡಿದ್ದಾರೆ.

ಬ್ಯಾಂಕ್ ಖಾತೆ ಇಲ್ಲದವರು 2000ರೂ. ನೋಟು ವಿನಿಮಯ ಮಾಡಿಕೊಳ್ಳುವುದು ಹೇಗೆ? ಎಲ್ಲಿ?

ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದಾಸ್‌, ‘ನೋಟು ಬದಲಾವಣೆ, ವಾಪಸ್‌ ಇವೆಲ್ಲಾ ಸಾಮಾನ್ಯ ಪ್ರಕ್ರಿಯೆ. ಅದೇ ರೀತಿ ಇದೀಗ 2000 ರು.ಮುಖಬೆಲೆಯ ನೋಟು ವಾಪಸ್‌ಗೆ ನಿರ್ಧರಿಸಲಾಗಿದೆ. ಇದನ್ನು ಬದಲಾಯಿಸಿಕೊಡಲು ಅಗತ್ಯವಾದ ಪ್ರಮಾಣಕ್ಕಿಂತ ಹೆಚ್ಚಿನ ನೋಟುಗಳು ಈಗಾಗಲೇ ಬ್ಯಾಂಕ್‌ಗಳಲ್ಲಿ ಲಭ್ಯವಿದೆ. ಹೀಗಾಗಿ ಜನರು ಆತಂಕದಿಂದ ಬ್ಯಾಂಕ್‌ಗಳಿಗೆ ದೌಡಾಯಿಸಬೇಕಾದ ಅಗತ್ಯವಿಲ್ಲ. ಇದಕ್ಕಾಗಿ ಸೆ.30ರವರೆಗೆ 4 ತಿಂಗಳ ಕಾಲಾವಕಾಶ ನೀಡಲಾಗಿದೆ. ಜನರು ಈ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿ, ಬ್ಯಾಂಕ್‌ಗಳಿಗೆ ನೋಟು ಮರಳಿಸಲಿ ಎನ್ನುವ ಕಾರಣಕ್ಕಾಗಿ ಕಾಲಮಿತಿ ನಿಗದಿಪಡಿಸಲಾಗಿದೆ’ ಎಂದರು.

ಇದೇ ವೇಳೆ ಸೆ.30ರ ಬಳಿಕವೂ ನೋಟು ತನ್ನ ಮಾನ್ಯತೆ ಹೊಂದಿದೆ ಎಂದು ದಾಸ್‌ ಹೇಳಿದರಾದರೂ, ಇಟ್ಟುಕೊಂಡವರ ಕಥೆ ಏನು? ಆಮೇಲೆ ನೋಟು ಬದಲಾಯಿಸಬಹುದೇ ಎಂಬ ಪ್ರಶ್ನೆಗಳಿಗೆ ಉತ್ತರ ನೀಡಲು ನಿರಾಕರಿಸಿದರು. ಜೊತೆಗೆ ಹಾಲಿ ಚಲಾವಣೆಯಲ್ಲಿರುವ 2000 ರು.ಮುಖಬೆಲೆಯ ನೋಟುಗಳ ಮೌಲ್ಯವು, ಒಟ್ಟು ಚಲಾವಣೆಯಲ್ಲಿರುವ ಎಲ್ಲಾ ಮುಖಬೆಲೆಯ ನೋಟುಗಳ ಶೇ.10ರಷ್ಟು ಮಾತ್ರವೇ ಇದೆ. ಹೀಗಾಗಿ ಇದನ್ನು ಹಿಂದಕ್ಕೆ ಪಡೆಯುವುದರಿಂದ ಆರ್ಥಿಕತೆ ಮೇಲೆ ಯಾವುದೇ ಪರಿಣಾಮ ಬೀರದು ಎಂದು ವಿಶ್ವಾಸ ವ್ಯಕ್ತಪಡಿಸಿದರು.