2008ರ ಪರಿಸ್ಥಿತಿ ಗೊತ್ತಿದೆ ತಾನೆ, ಎಲ್ಲರೂ ದೂರ ಸರಿಯುತ್ತಾರೆ. ಇದು ಮತ್ತೊಂದು ದುರಂತಕ್ಕೆ ನಾಂದಿ ಹಾಡಲಿದೆ ಎಂದು ಝೆರೊಧ ಸಿಇಒ ನಿತಿಮ್ ಕಾಮತ್ ಎಚ್ಚರಿಸಿದ್ದಾರೆ. ಅಷ್ಟಕ್ಕೂ ನಿತಿನ್ ಕಾಮತ್ ನೀಡಿದ್ದ ಎಚ್ಚರಿಕೆ ಏನು? ಯಾರಿಗೆ ಸೂಚನೆ ಕೊಟ್ಟಿದ್ದಾರೆ. 

ನವದೆಹಲಿ(ಏ.09) ಭಾರತದ ಪ್ರಮುಖ ಉದ್ಯಮಿಗಳು ಮೇಲಿಂದ ಮೇಲೆ ಹಲವು ಎಚ್ಚರಿಕೆ ನೀಡುತ್ತಿದ್ದಾರೆ. ಇದೀಗ ಝೆರೋಧಾ ಸಿಇಒ ನಿತಿನ್ ಕಾಮತ್ ನೀಡಿದ ಎಚ್ಚರಿಕೆ ಹಲವರನ್ನು ಬಡಿದೆಬ್ಬಿಸಿದೆ.ಒಂದಷ್ಟು ಮಂದಿಯಲ್ಲಿ ಆತಂಕ ಸೃಷ್ಟಿಸಿದೆ, ಮುಂದಿನ ದಿನಗಳ ಕುರಿತು ಭೀತಿ ಎದುರಾಗುತ್ತಿದೆ. ಕಾರಣ 2008ರಂತೆ ಎಲ್ಲರೂ ದೂರ ಸರಿಯುತ್ತಾರೆ. 2008ರ ಪರಿಸ್ಥಿತಿ ಮತ್ತೆ ಬರುವ ಸಾಧ್ಯತೆ ಇದೆ ಎಂದಿದ್ದಾರೆ. ಅಷ್ಟಕ್ಕೂ ನಿತಿನ್ ಕಾಮತ್ ನೀಡಿದ ಎಚ್ಚರಿಕೆ ಇತ್ತೀಚೆಗೆ ಷೇರು ಮಾರುಕಟ್ಟೆ ಕಂಡ ಕುಸಿತದಿಂದ ಆದ ಪರಿಣಾಮ. ಷೇರು ಮಾರುಕಟ್ಟೆ ಇದೇ ರೀತಿ ರಕ್ತಪಾತವಾದರೆ 2008ರಲ್ಲಿ ಎದುರಾದ ಆರ್ಥಿಕ ಹಿಂಜರಿತ ಎದುರಾಗಲಿದೆ. ಎಲ್ಲರೂ ಷೇರುಮಾರುಕಟ್ಟೆಯಿಂದ ದೂರ ಉಳಿಯುತ್ತಾರೆ. ಇದು ಮತ್ತೊಂದು ಆರ್ಥಿಕ ದುರಂತಕ್ಕೆ ಕಾರಣವಾಗಲಿದೆ ಎಂದು ನಿತಿನ್ ಕಾಮತ್ ಎಚ್ಚರಿಸಿದ್ದಾರೆ.

ಷೇರು ಮಾರುಕಟ್ಟೆಯಲ್ಲಿ ತೀವ್ರ ಕುಸಿತ ಉಂಟಾದರೆ, ಹೂಡಿಕೆದಾರರು ಮಾರುಕಟ್ಟೆಯಿಂದ ದೀರ್ಘಕಾಲ ದೂರ ಉಳಿಯಬಹುದು ಎಂದು ಅವರು ಹೇಳಿದ್ದಾರೆ. 2008ರಲ್ಲಿ ಆರ್ಥಿಕ ಬಿಕ್ಕಟ್ಟಿನ ನಂತರ ರಿಟೇಲ್ ಹೂಡಿಕೆದಾರರು ಹೇಗೆ ದೂರ ಸರಿದರೋ ಹಾಗೆ ಆಗಬಹುದು.ಝೆರೋಧದ ನಿತಿನ್ ಕಾಮತ್ ಅವರು ಸಾಮಾಜಿಕ ಮಾಧ್ಯಮ ವೇದಿಕೆ Xನಲ್ಲಿ ಕೆಲವು ಅಂಕಿಅಂಶಗಳನ್ನು ಹಂಚಿಕೊಂಡು, 2008 ರಿಂದ 2014 ರ ನಡುವೆ ಇಕ್ವಿಟಿ ಓರಿಯೆಂಟೆಡ್ ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ನಿವ್ವಳ ಹರಿವು ತೀವ್ರವಾಗಿ ಕುಸಿದಿದೆ ಎಂದು ಹೇಳಿದ್ದಾರೆ. ಕಳೆದ 5 ವರ್ಷಗಳಲ್ಲಿ ರಿಟೇಲ್ ಹೂಡಿಕೆದಾರರು ಷೇರು ಮಾರುಕಟ್ಟೆಯಲ್ಲಿ ನಿರಂತರವಾಗಿ ಖರೀದಿಸುತ್ತಿದ್ದಾರೆ. ಬಾಹ್ಯ ಅಪಾಯಗಳು ಮತ್ತು ಜಾಗತಿಕ ಅಡೆತಡೆಗಳ ನಡುವೆಯೂ 'ಕುಸಿತದಲ್ಲಿ ಖರೀದಿ' ಮಾಡಿದ ನಂತರ, ರಿಟೇಲ್ ಹೂಡಿಕೆದಾರರು 2020 ರಿಂದ 2024 ರ ನಡುವೆ ಭಾರತೀಯ ಷೇರು ಮಾರುಕಟ್ಟೆಯ ಏರಿಕೆಗೆ ಬೆನ್ನೆಲುಬಾಗಿದ್ದಾರೆ. ಆದಾಗ್ಯೂ, ಮಾರುಕಟ್ಟೆಯಲ್ಲಿ ನಡೆಯುತ್ತಿರುವ ತೀವ್ರ ಕುಸಿತದಿಂದ ಅವರು ದೀರ್ಘಕಾಲದವರೆಗೆ ದೂರವಿರಬಹುದು. ಎಂದಿದ್ದಾರೆ.

ಟ್ರಂಪ್ ತೆರಿಗೆ ನೀತಿಯಿಂದ ಭಾರತದ ಷೇರುಮಾರುಕಟ್ಟೆಯಲ್ಲಿ ತಲ್ಲಣ, 13 ಲಕ್ಷ ಕೋಟಿ ನಷ್ಟ

2008ರ ಆರ್ಥಿಕ ಬಿಕ್ಕಟ್ಟು ಏಕೆ ಬಂತು?
ಅಮೆರಿಕದಲ್ಲಿ ಲೆಹ್ಮನ್ ಬ್ರದರ್ಸ್ ಪತನ ಮತ್ತು ಸಬ್-ಪ್ರೈಮ್ ಮಾರ್ಟ್‌ಗೇಜ್ ಬಿಕ್ಕಟ್ಟಿನಿಂದಾಗಿ ಜಾಗತಿಕ ಆರ್ಥಿಕ ಕುಸಿತ ಪ್ರಾರಂಭವಾಯಿತು. ಜನವರಿ 2008 ರಲ್ಲಿ 21206 ರ ಗರಿಷ್ಠ ಮಟ್ಟದಿಂದ ಅಕ್ಟೋಬರ್ 2008 ರವರೆಗೆ ಸೆನ್ಸೆಕ್ಸ್ 60% ಕ್ಕಿಂತ ಹೆಚ್ಚು ಕುಸಿದು 8160 ಕ್ಕೆ ತಲುಪಿತು. ಆದಾಗ್ಯೂ, ನಂತರ ಸರ್ಕಾರದ ಪ್ರೋತ್ಸಾಹಕ ಯೋಜನೆಗಳು, ರಿಸರ್ವ್ ಬ್ಯಾಂಕ್‌ನ ಮಧ್ಯಸ್ಥಿಕೆ ಮತ್ತು ಜಾಗತಿಕ ಲಿಕ್ವಿಡಿಟಿಯಿಂದಾಗಿ 2009 ರ ಆರಂಭದಿಂದ ಈ ಕುಸಿತದಿಂದ ಚೇತರಿಸಿಕೊಳ್ಳಲು ಸಾಕಷ್ಟು ಸಹಾಯವಾಯಿತು.

ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ಏಕೆ?
ಕಳೆದ ಕೆಲವು ವಾರಗಳಿಂದ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಂಡುಬರುತ್ತಿದೆ. ಇದಕ್ಕೆ ಅತಿದೊಡ್ಡ ಕಾರಣವೆಂದರೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 60ಕ್ಕೂ ಹೆಚ್ಚು ದೇಶಗಳ ಮೇಲೆ ವಿಧಿಸಿರುವ ರೆಸಿಪ್ರೋಕಲ್ ಟ್ಯಾರಿಫ್. ಇದರಿಂದಾಗಿ ವಿಶ್ವದ ಎರಡು ದೊಡ್ಡ ಶಕ್ತಿಗಳಾದ ಅಮೆರಿಕ-ಚೀನಾ ನಡುವೆ ವ್ಯಾಪಾರ ಸಮರದ ಭೀತಿ ಹೆಚ್ಚಾಗಿದೆ. ಅಮೆರಿಕ ಚೀನೀ ಸರಕುಗಳ ಮೇಲೆ 104 ಪ್ರತಿಶತದಷ್ಟು ಸುಂಕವನ್ನು ವಿಧಿಸಿದೆ, ಇದು ಮೊದಲು 54 ಪ್ರತಿಶತದವರೆಗೆ ಇತ್ತು. ಇದಕ್ಕೆ ಚೀನಾ ಕೂಡ ಅಮೆರಿಕದ ಉತ್ಪನ್ನಗಳ ಮೇಲೆ 34% ಸುಂಕ ವಿಧಿಸಿದೆ. ಇದಕ್ಕೆ ಪ್ರತಿಯಾಗಿ ಟ್ರಂಪ್ 50% ಹೆಚ್ಚುವರಿ ಸುಂಕ ವಿಧಿಸಿದರು, ಇದಕ್ಕೆ ತಿರುಗೇಟು ನೀಡಿದ ಚೀನಾ ಅಮೆರಿಕದ ಮೇಲೆ 84% ಸುಂಕ ವಿಧಿಸಿತು. ಎರಡೂ ದೇಶಗಳಲ್ಲಿ ಹೆಚ್ಚುತ್ತಿರುವ ವ್ಯಾಪಾರ ಉದ್ವಿಗ್ನತೆಯ ಪರಿಣಾಮವು ಇಡೀ ಜಗತ್ತಿನ ಮೇಲೆ ಹಣದುಬ್ಬರ ಮತ್ತು ಆರ್ಥಿಕ ಕುಸಿತದ ರೂಪದಲ್ಲಿ ಕಾಣಿಸಿಕೊಳ್ಳಬಹುದು. ಇದೇ ಭಯದಿಂದ ಇಡೀ ಜಗತ್ತಿನ ಷೇರು ಮಾರುಕಟ್ಟೆಗಳು ತತ್ತರಿಸಿವೆ.

ಆರ್ಥಿಕ ಹಿಂಜರಿತದ ಮುನ್ಸೂಚನೆ? ಶೇರು ಮಾರುಕಟ್ಟೆಯಲ್ಲಿ ಆತಂಕ!