ಭಾರತೀಯ ಷೇರು ಮಾರುಕಟ್ಟೆ ಪರಿಸರ ವ್ಯವಸ್ಥೆಗೆ ಹೊಸ ಚಿಲ್ಲರೆ ಹೂಡಿಕೆದಾರರನ್ನು ತರುವಲ್ಲಿ ಜಿಯೋ-ಬ್ಲ್ಯಾಕ್‌ರಾಕ್‌ನಂತಹ ಪಾಲುದಾರಿಕೆಯ ಅಗತ್ಯವಿದೆ ಅನ್ನೋದನ್ನ ನಿತಿನ್‌ ಕಾಮತ್‌ ಒಪ್ಪಿಕೊಂಡಿದ್ದಾರೆ. 

ಬೆಂಗಳೂರು (ಜು.3): ಸಾಮಾನ್ಯವಾಗಿ ತಾವು ಮಾಡಿದ ಉದ್ದಿಮೆಯಲ್ಲಿ ಮತ್ತೊಬ್ಬ ಪ್ರತಿಸ್ಪರ್ಧಿ ಬಂದಾಗ ಅಸೂಯೆ ಸಹಜ. ಅದರಲ್ಲೂ ಪ್ರತಿಸ್ಪರ್ಧಿ ತಮಗಿಂತ ದೊಡ್ಡವನಾಗಿದ್ದರೆ ತಮ್ಮ ಉದ್ಯಮ ಹಾಳಾಗಿ ಹೋಗುತ್ತದೆ ಅನ್ನೋ ಚಿಂತೆಯೇ ಹೆಚ್ಚು. ಆದರೆ, ಸ್ಟಾಕ್‌ ಬ್ರೋಕಿಂಗ್‌ ವ್ಯವಹಾರದಲ್ಲಿರುವ ಜೀರೋಧಾದ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ನಿತಿನ್‌ ಕಾಮತ್‌, ಇತ್ತೀಚೆಗೆ ಸೆಬಿಯಿಂದ ಸ್ಟಾಕ್‌ ಬ್ರೋಕಿಂಗ್‌ ಲೈಸೆನ್ಸ್‌ ಪಡೆದುಕೊಂಡಿರುವ ರಿಲಯನ್ಸ್‌ ಸಮೂಹದ ಜಿಯೋ ಬ್ಲ್ಯಾಕ್‌ರಾಕ್‌ನ ಜಂಟಿ ಉದ್ಯಮವನ್ನು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ.

ಜಿಯೋ-ಬ್ಲ್ಯಾಕ್‌ರಾಕ್ ಸ್ಟಾಕ್ ಬ್ರೋಕಿಂಗ್ ಲೈಸೆನ್ಸ್‌ ಪಡೆದಿದೆ ಎಂಬ ಸುದ್ದಿಗೆ ಪ್ರತಿಕ್ರಿಯೆಯಾಗಿ, ಜೆರೋಧಾ ಸಹ-ಸಂಸ್ಥಾಪಕ ಮತ್ತು ಸಿಇಒ ನಿತಿನ್ ಕಾಮತ್ ಅವರು ಭಾರತದ ಹಣಕಾಸು ಸೇವೆಗಳ ಕ್ಷೇತ್ರದಲ್ಲಿ ಹೊಸ ಬೆಳವಣಿಗೆಯ ಬಗ್ಗೆ ಆಶಾವಾದ ಹಾಗೂ ಎಚ್ಚರಿಕೆ ಎರಡನ್ನೂ ಒತ್ತಿ ಹೇಳಿದ್ದಾರೆ. ಸೋಶಿಯಲ್‌ ಮೀಡಿಯಾ ವೇದಿಕೆ ಎಕ್ಸ್‌ನಲ್ಲಿ ಅವರು ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದೊಂದು ಅದ್ಭುತ ಸುದ್ದಿ ಎಂದು ಜಿಯೋ-ಬ್ಲ್ಯಾಕ್‌ರಾಕ್ ಸ್ಟಾಕ್ ಬ್ರೋಕಿಂಗ್ ಲೈಸೆನ್ಸ್‌ ಪಡೆದ ಸುದ್ದಿಗೆ ಪ್ರತಿಕ್ರಿಯೆ ನೀಡಿದ್ದಾರೆ. "ಭಾರತೀಯ ಮಾರುಕಟ್ಟೆಗಳಿಗೆ ದೊಡ್ಡ ಸಮಸ್ಯೆ ಎಂದರೆ ಭಾಗವಹಿಸುವಿಕೆಯಲ್ಲಿ ವ್ಯಾಪಕತೆಯ ಕೊರತೆ. ನಾವು ಹೆಚ್ಚಾಗಿ ಅಗ್ರ 10 ಕೋಟಿ ಭಾರತೀಯರಿಗೆ ಸೀಮಿತರಾಗಿದ್ದೇವೆ. ಅದನ್ನು ಮೀರಿ ಯಾರಾದರೂ ಮಾರುಕಟ್ಟೆಗಳನ್ನು ವಿಸ್ತರಿಸಬಹುದಾದರೆ, ಅದು ಬಹುಶಃ ಜಿಯೋ ಮಾತ್ರ, ಅದರ ಎಲ್ಲಾ ವಿತರಣಾ ಶಕ್ತಿಯೊಂದಿಗೆ ಕೆಲಸ ಮಾಡಬಹುದು' ಎಂದು ಬರೆದಿದ್ದಾರೆ.

ಭಾರತೀಯ ಷೇರು ಮಾರುಕಟ್ಟೆ ಪರಿಸರ ವ್ಯವಸ್ಥೆಗೆ ಹೊಸ ಚಿಲ್ಲರೆ ಹೂಡಿಕೆದಾರರನ್ನು ತರುವಲ್ಲಿ ಜಿಯೋ-ಬ್ಲ್ಯಾಕ್‌ರಾಕ್‌ನಂತಹ ಪಾಲುದಾರಿಕೆಯ ಅಗತ್ಯವಿದೆ ಅನ್ನೋದನ್ನಕಾಮತ್ ಒಪ್ಪಿಕೊಂಡರು. ಆದರೆ, ಆ ಹೊಸ ಹೂಡಿಕೆದಾರರು ನಿಜವಾಗಿಯೂ ಭಾಗವಹಿಸಲು ಆರ್ಥಿಕ ಸಾಧನಗಳನ್ನು ಹೊಂದಿದ್ದಾರೆಯೇ ಎನ್ನುವುದು ನಿಜವಾದ ಸವಾಲಾಗಿದೆ ಎಂದಿದ್ದಾರೆ.

ಅದೇ ಪೋಸ್ಟ್‌ನಲ್ಲಿ, ಕಾಮತ್ ಅವರು ಜೆರೋಧಾ ಅವರ ವ್ಯವಹಾರದ ಫಿಲಾಸಪಿಯ ಬಗ್ಗೆ ಒಳನೋಟಗಳನ್ನು ನೀಡಿದರು, ಅವರ ಸಂಸ್ಥೆ ಮತ್ತು ಈ ಕ್ಷೇತ್ರದಲ್ಲಿ ಇತರ ವೇಗವಾಗಿ ಬೆಳೆಯುತ್ತಿರುವ ಕಂಪನಿಗಳ ನಡುವಿನ ವ್ಯತ್ಯಾಸವನ್ನು ಸೂಚ್ಯವಾಗಿ ಚಿತ್ರಿಸಿದರು. ಜೆರೋಧಾ ಯಾವುದೇ ರೀತಿಯಲ್ಲಿ ವ್ಯಾನಿಟಿ ಮೆಟ್ರಿಕ್ಸ್ ಅಥವಾ ಆಕ್ರಮಣಕಾರಿ ಬೆಳವಣಿಗೆಯ ಮೇಲೆ ಕೇಂದ್ರೀಕರಿಸುವುದಿಲ್ಲ ಎಂದು ಅವರು ಪುನರುಚ್ಚರಿಸಿದರು.

"ಗ್ರಾಹಕರಿಗೆ ಯಾವಾಗಲೂ ಸರಿಯಾದದ್ದನ್ನು ನೀಡಬೇಕು ಅನ್ನೋದು ನಮ್ಮ ಕಂಪನಿಯ ಫಿಲಾಸಫಿ" ಎಂದು ಕಾಮತ್ ಬರೆದಿದ್ದಾರೆ, ಕಂಪನಿಯು ಗ್ರಾಹಕರನ್ನು ಟ್ರೇಡಿಂಗ್‌ಗೆ ತಳ್ಳುವುದನ್ನು ಅಥವಾ "ಡಾರ್ಕ್ ಪ್ಯಾಟರ್ನ್ಸ್" ಅಥವಾ ನಿರಂತರ ನೋಟಿಫಿಕೇಶನ್‌ನಂಥ ಕುಶಲ ವಿನ್ಯಾಸ ತಂತ್ರಗಳನ್ನು ಬಳಸುವುದನ್ನು ತಪ್ಪಿಸುತ್ತದೆ ಎಂದು ಹೇಳಿದರು.

"ನಮ್ಮ ಹೆಚ್ಚಿನ ಉತ್ಪನ್ನ ನಿರ್ಧಾರಗಳು ಗ್ರಾಹಕರು ಕಡಿಮೆ ಟ್ರೇಡಿಂಗ್‌ ಮಾಡಿದಾಗ ದೀರ್ಘಾವಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂಬ ಕಲ್ಪನೆಯನ್ನು ಆಧರಿಸಿವೆ" ಎಂದು ಅವರು ಹೇಳಿದರು.

ಸ್ಪರ್ಧೆಯ ವಿಷಯದ ಕುರಿತು ಮಾತನಾಡಿರುವ ಕಾಮತ್, ಸಾಂಪ್ರದಾಯಿಕ ನಮ್ಮ ಜೊತೆ ಇರುವ ವ್ಯಕ್ತಿಗಳಿಂದ ನಮಗೆ ಬೆದರಿಕೆ ಆಗುತ್ತದೆ ಅನ್ನೋದನ್ನು ನಾನು ನಿರೀಕ್ಷೆ ಮಾಡೋದಿಲ್ಲ ಎಂದಿದ್ದಾರೆ. ಆದರೆ, ಪ್ರತಿ ಹಂತದಲ್ಲೂ ಟ್ರೇಡಿಂಗ್‌ಅನ್ನೇ ಉಸಿರಾಡುವ, ಅದರ ಹಿಂದೆಯೇ ಓಡುವ ಹೊಸ ತಲೆಮಾರಿನ ಫೌಂಡರ್‌ಗಳ ಬಗ್ಗೆ ನಮಗೆ ನಿಜವಾದ ಹೆದರಿಕೆ ಇದೆ ಎಂದಿದ್ದಾರೆ. ಆದರೆ, ನಾನು ಈ ವಿಚಾರದಲ್ಲಿ ತಪ್ಪಾಗಿರಲೂಬಹುದು" ಎಂದು ಹೇಳಿ ವಿನಮ್ರವಾಗಿ ತಮ್ಮ ಪೋಸ್ಟ್‌ ಮುಗಿಸಿದ್ದಾರೆ.