ಫೆ. 08ರಂದು ನೀರವ್ ಮೋದಿಯ 100 ಕೋಟಿ ಬಂಗಲೆ ಧ್ವಂಸ| ಕಟ್ಟಡ ಕೆಡವಲು ಹೈಕೋರ್ಟ್ ಬಾಂಬೆ ಆದೇಶ| 6 ವಾರಗಳಿಂದ ನಡೆಯುತ್ತಿದೆ ಕಾರ್ಯಾಚರಣೆ| ಡೈನಾಮೈಟ್ ಸ್ಫೋಟಿಸಿ ಬಂಗಲೆ ನೆಲಸಮ
ಅಲಿಬಾಗ್[ಮಾ.07]: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಸಾವಿರಾರು ಕೋಟಿ ರು. ವಂಚಿಸಿರುವ ವಜ್ರೋದ್ಯಮಿ ನೀರವ್ ಮೋದಿಗೆ ಸೇರಿದ ಮಹಾರಾಷ್ಟ್ರದ ಅಲಿಬಾಗ್ ಕಡಲ ಕಿನಾರೆಯಲ್ಲಿರುವ 100 ಕೋಟಿ ರು. ವೆಚ್ಚದ ಐಷಾರಾಮಿ ಬಂಗಲೆಯನ್ನು ಶುಕ್ರವಾರ ಡೈನಾಮೈಟ್ ಬಳಿಸಿ ಧ್ವಂಸಗೊಳಿಸಲಾಗುತ್ತದೆ.
ಕರಾವಳಿ ನಿಯಂತ್ರಣ ವಲಯ ಹಾಗೂ ಹಲವಾರು ನಿಯಮಾವಳಿ ಉಲ್ಲಂಘಿಸಿ 33,000 ಚದರ ಅಡಿ ಪ್ರದೇಶದಲ್ಲಿ ನಿರ್ಮಿಸಿರುವ ಬಂಗಲೆಯನ್ನು ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನೆಲಸಮಗೊಳಿಸುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಕಳೆದ ಆರು ವಾರಗಳಿಂದ ಬುಲ್ಡೋಜರ್ ಹಾಗೂ ಇತರ ಯಂತ್ರಗಳ ಮೂಲಕ ಬಂಗಲೆಯನ್ನು ನೆಲಸಮಗೊಳಿಸುವ ಕಾರ್ಯ ನಡೆಯುತ್ತಿದೆ.
ಆದರೆ, ಬಂಗಲೆಯ ತಳಪಾಯ ಅತ್ಯಂತ ಗಟ್ಟಿಯಾಗಿರುವುದರಿಂದ ಬಂಗಲೆಯನ್ನು ಕೆಡವಲು ವಿಳಂಬವಾಗುತ್ತಿದೆ. ಹೀಗಾಗಿ ಪಿಲ್ಲರ್‌ಗಳಿಗೆ ರಂಧ್ರಗಳನ್ನು ಕೊರೆದು ಡೈನಾಮೈಟ್ ಬಳಸಿ ಕೆಡವಲಾಗುತ್ತಿದೆ. ಶುಕ್ರವಾರ ಮುಂಜಾನೆ ರಿಮೋಟ್ ಕಂಟ್ರೋಲ್ ಬಳಸಿ ನಿಯಂತ್ರಿತ ಸ್ಫೋಟ ನಡೆಸುವ ಮೂಲಕ ಬಂಗಲೆಯನ್ನು ನೆಲಸಮಗೊಳಿಸಲಾಗುವುದು ಎಂದು ರಾಯಗಢ ಹೆಚ್ಚುವರಿ ಜಿಲ್ಲಾಧಿಕಾರಿ ಭರತ್ ಶಿತೊಲೆ ತಿಳಿಸಿದ್ದಾರೆ.
ಮುಂಬೈನಿಂದ 90 ಕಿ.ಮೀ. ದೂರದ ಕಿಹಿಂ ಬೀಚ್‌ನಲ್ಲಿ ಇರುವ ಈ ಬಂಗಲೆ ನೆಲ ಮಾಳಿಗೆ ಹಾಗೂ ಇನ್ನೊಂದು ಅಂತಸ್ತನ್ನು ಹೊಂದಿದೆ. ಬಂಗಲೆ ಸುತ್ತ ಭಾರೀ ಗಾತ್ರ ಉಕ್ಕಿನ ಬೇಲಿಗಳನ್ನು ಹಾಕಲಾಗಿದ್ದು, ಬೃಹತ್ ಭದ್ರತಾ ಗೇಟ್ ಕೂಡ ಅಳವಡಿಸಲಾಗಿದೆ. ಬಂಗಲೆಯಲ್ಲಿ ಈಜುಕೊಳ, ರೆಸಾರ್ಟ್ ರೀತಿಯ ಐಷಾರಾಮಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಶಂಬುರಾಜೆ ಯುವ ಕ್ರಾಂತಿ ಎಂಬ ಹೆಸರಿನ ಎನ್‌ಜಿಒವೊಂದು 2009ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಹಿನ್ನೆಲೆಯಲ್ಲಿ ಪರಿಸರ ವಲಯನ್ನು ಉಲ್ಲಂಘಿಸಿ ನಿರ್ಮಿಸಲಾದ ಕಟ್ಟಡ ಹಾಗೂ ಬಂಗಲೆಗಳನ್ನು ಕಡವಲು ಬಾಂಬೆ ಹೈಕೋರ್ಟ್ ಆದೇಶಿಸಿದೆ. ಇದರಲ್ಲಿ ನೀರವ್ ಮೋದಿಗೆ ಸೇರಿದ ಅಲಿಬಾಗ್ ಬಂಗಲೆಯೂ ಸೇರಿದೆ.
ಪಿಎನ್‌ಬಿ ಹಗರಣ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ನೀರವ್ ಮೋದಿಗೆ ಸೇರಿದ ಅಲಿಬಾಗ್ ಬಂಗಲೆಯನ್ನು ಮುಟ್ಟುಗೋಲು ಹಾಕಿಕೊಂಡಿದ್ದು, ಆರಂಭದಲ್ಲಿ ಬಂಗಲೆ ಕೆಡವಲು ಆಕ್ಷೇಪ ವ್ಯಕ್ತಪಡಿಸಿತ್ತು. ಬೆಲೆಬಾಳುವ ವಸ್ತುಗಳನ್ನು ಬೇರೆಡೆ ಸಾಗಿಸಿದ ಬಳಿಕ ಬಂಗಲೆಯನ್ನು ರಾಯಗಢ ಜಿಲ್ಲಾ ಆಡಳಿತದ ವಶಕ್ಕೆ ಒಪ್ಪಿಸಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 7, 2019, 8:56 AM IST