ಆದಾಯದ ಬಹುಪಾಲು ದಾನ ಮಾಡುವ ನಿರ್ಧಾರ ಮಾಡಿದ ಜಿರೋಧಾ ಸಂಸ್ಥಾಪಕ ನಿಖಿಲ್ ಕಾಮತ್!
ಅಜೀಂ ಪ್ರೇಮ್‌ಜಿ, ಕಿರಣ್ ಮಜುಂದಾರ್-ಶಾ ಮತ್ತು ರೋಹಿಣಿ ಮತ್ತು ನಂದನ್ ನಿಲೇಕಣಿ ಅವರ ನಂತರ ಕಾಮತ್ ಈಗ ಈ ಸಮುದಾಯದ ಭಾಗವಾಗುತ್ತಿರುವ ನಾಲ್ಕನೇ ಭಾರತೀಯ ವ್ಯಕ್ತಿ ಎನಿಸಿಕೊಂಡಿದ್ದಾರೆ.
ನವದೆಹಲಿ (ಜೂ.6); ಇತ್ತೀಚೆಗೆ ಜಿರೋಧಾ ಕಂಪನಿಯ ಸಹಸಂಸ್ಥಾಪಕ ನಿಖಿಲ್ ಕಾಮತ್ ತೀರಾ ಅಂತರ್ಮುಖಿಯಾಗುತ್ತಿದ್ದಾರೆ. ಒಂದು ತಿಂಗಳ ಹಿಂದೆಯಷ್ಟೇ ತನ್ನ ಮಾವನ ಬಗ್ಗೆ ಲಿಂಕ್ಡಿನ್ ಪೇಜ್‌ನಲ್ಲಿ ಸವಿಸ್ತಾರವಾಗಿ ಬರೆದುಕೊಂಡಿದ್ದ ನಿಖಿಲ್ ಕಾಮತ್, ಬದುಕಿನಲ್ಲಿ ನೆಮ್ಮದಿಯ ಹಾಗೂ ಹೆಮ್ಮೆಯ ಜೀವನ ಸಾಗಿಸಲು ಹಣವೊಂದೇ ಮುಖ್ಯವಲ್ಲ. ಬದುಕುವ ಆಸೆಗಳಿದ್ದರೆ ಸಾಕು ಎನ್ನುವ ಅರ್ಥದ ಪೋಸ್ಟ್‌ಅನ್ನು ಹಂಚಿಕೊಂಡಿದ್ದರು. 28 ಸಾವಿರ ಕೋಟಿ ರೂಪಾಯಿ ಸಂಪತ್ತನ್ನು ಹೊಂದಿರುವ ನಿಖಿಲ್ ಕಾಮತ್ ಅವರ ಮಾವ ಪುಟ್ಟ ಕಿರಾಣ ಅಂಗಡಿಯ ಮೂಲಕ ಬದುಕು ಸಾಗಿಸುತ್ತಿದ್ದರು. ಈಗ ಮತ್ತೊಮ್ಮೆ ಅಂಥದ್ದೇ ವಿಚಾರಗಳಿಂದ ನಿಖಿಲ್ ಕಾಮತ್ ಸುದ್ದಿಯಾಗಿದ್ದಾರೆ. ತಮ್ಮ ಆದಾಯದ ಬಹುಪಾಲನ್ನು ದಾನ ಮಾಡಲು ನಿಖಿಲ್ ನಿರ್ಧಾರ ಮಾಡಲಿದ್ದಾರೆ. ಇದರನಿಟ್ಟಿನಲ್ಲಿ ಅವರು ದ ಗಿವಿಂಗ್ ಪ್ಲೆಡ್ಜ್ ಸಂಸ್ಥೆಯ ಜೊತೆ ಕೈಜೋಡಿಸಿದ್ದಾರೆ. ನೆನಪಿರಲಿ, ಗಿವಿಂಗ್ ಪ್ಲೆಡ್ಜ್‌ನಲ್ಲಿ ಕೈಜೋಡಿಸಿದ ಅತ್ಯಂತ ಕಿರಿಯ ಭಾರತೀಯ ಇವರಾಗಿದ್ದಾರೆ. ಅದಲ್ಲದೆ, ತನ್ನ ಆದಾಯದ ಬಹುಪಾಲು ದಾನ ಮಾಡುವ ಈ ಸಂಸ್ಥೆಯೊಂದಿಗೆ ಕೈಜೋಡಿಸಿದ ನಾಲ್ಕನೇ ಭಾರತೀಯ ಎನಿಸಿದ್ದಾರೆ. ಇದಕ್ಕೂ ಮುನ್ನ ವಿಪ್ರೋದ ಅಜೀಂ ಪ್ರೇಮ್‌ಜೀ, ಬಯೋಕಾನ್‌ನ ಕಿರಣ್ ಮಜುಂದಾರ್ ಶಾ, ರೋಹಿಣಿ ಮತ್ತು ನಂದನ್ ನೀಲಕೇಣಿ ಇದರಲ್ಲಿ ಸೇರಿದ್ದರು.
ಇಷ್ಟೆಲ್ಲಾ ವಿವರ ನೀಡಿದ ಬಳಿಕ ಈ ಸಂಸ್ಥೆ ಯಾವುದು ಅನ್ನೋ ಕುತೂಹಲ ಬಂದಿರಬಹುದು. ಗಿವಿಂಗ್ ಪ್ಲೆಡ್ಜ್ ಎನ್ನುವುದು 2010ರಲ್ಲಿ ವಾರನ್ ಬಫೆಟ್ ಹಾಗೂ ಬಿಲ್ ಗೇಟ್ಸ್ ಸ್ಥಾಪನೆ ಮಾಡಿರುವ ಜಂಟಿ ಸಂಸ್ಥೆ. ಇದರ ಉದ್ದೇಶ, ಶ್ರೀಮಂತ ವ್ಯಕ್ತಿಗಳು ಅಥವಾ ಅವರ ಕುಟುಂಬ ತಮ್ಮ ಆದಾಯದ ಬಹುಪಾಲನ್ನು ದಾನ ಹಾಗೂ ಲೋಕೋಪಯೋಗಿ ಕಾರ್ಯಗಳಿಗೆ ನೀಡುವ ಉದ್ದೇಶವಾಗಿದೆ. ಒಂದೋ ತಮ್ಮ ಜೀವನಪೂರ್ತಿ ಬರುವ ಆದಾಯದ ಹೆಚ್ಚಿನ ಪಾಲು ಈ ಸಂಸ್ಥೆಗೆ ಹೋಗಲಿದೆ ಅಥವಾ ಇಂತಿಷ್ಟು ವರ್ಷಗಳ ಕಾಲ ಅವರ ಆದಾಯದ ಬಹುಪಾಲು ಹಣ ಈ ಸಂಸ್ಥೆಗೆ ಹೋಗುತ್ತದೆ.
'ಯುವ ಸಮಾಜಸೇವಕನಾಗಿ, ನಾನು ಗಿವಿಂಗ್ ಪ್ಲೆಡ್ಜ್‌ಗೆ ಸೇರುತ್ತಿರುವುದರ ಬಗ್ಗೆ ಖುಷಿ ಇದೆ. ನನ್ನ ವಯಸ್ಸಿನ ಹೊರತಾಗಿಯೂ, ಜಗತ್ತನ್ನು ಧನಾತ್ಮಕವಾಗಿ ಪ್ರಭಾವಿಸಲು ನಾನು ಬದ್ಧನಾಗಿದ್ದೇನೆ ಮತ್ತು ಹೆಚ್ಚು ಸಮಾನ ಸಮಾಜವನ್ನು ರಚಿಸುವ ಪ್ರತಿಷ್ಠಾನದ ಧ್ಯೇಯವು ನನ್ನ ಮೌಲ್ಯಗಳು ಮತ್ತು ಆಕಾಂಕ್ಷೆಗಳೊಂದಿಗೆ ಹೊಂದಿಕೆಯಾಗುತ್ತದೆ ಎಂದು ನಂಬುತ್ತೇನೆ' ಎಂದು ಕಾಮತ್ ತಿಳಿಸಿದ್ದಾರೆ. ತಮ್ಮ 17ನೇ ವರ್ಷದಲ್ಲಿಯೇ ಪೂರ್ಣ ಪ್ರಮಾಣದ ಉದ್ಯಮಿಯಾಗಿ ಕೆಲಸ ಆರಂಭಿಸಿದ್ದ ನಿಖಿಲ್ ಕಾಮತ್ ಅವರ ಹೆಚ್ಚಿನ ಅನುಭವಗಳು ಸ್ಟಾಕ್ ಮಾರ್ಕೆಟ್ ಕುರಿತಾಗಿ ಇದೆ.
'ಉತ್ತಮ ಜೀವನಕ್ಕೆ ಶ್ರೇಷ್ಠ ಉದಾಹರಣೆ...' ದಿನಸಿ ಅಂಗಡಿ ಇಟ್ಟುಕೊಂಡ ಮಾವನ ಬಗ್ಗೆ ಕೋಟ್ಯಧೀಶ ಅಳಿಯನ ಮಾತು!
ಷೇರು ಮಾರುಕಟ್ಟೆಯಲ್ಲಿ 18 ರಿಂದ 19 ವರ್ಷಗಳ ಕಾಲ ಕಳೆದಿರುವ ಅವರು, ತಮ್ಮ ಪರಿಣಿತಿ ಹೆಚ್ಚಾಗಿ ಹೂಡಿಕೆಯಲ್ಲಿದೆ. ಇದರಿಂದಾಗಿ ಹೆಚ್ಚಿನ ಸಮಯವನ್ನು ಸಾರ್ವಜನಿಕ ಮತ್ತು ಖಾಸಗಿ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುವಲ್ಲಿ ಕಳೆಯುತ್ತೇನೆ ಎನ್ನುತ್ತಾರೆ.
ಬೆಂಗಳೂರು ನನಗಿಷ್ಟ,ಇನ್ನೊಬ್ಬರನ್ನು ತುಳಿದು ಬೆಳೆಯುವ ಮನಸ್ಥಿತಿ ಇಲ್ಲಿಲ್ಲ: ನಿಖಿಲ್ ಕಾಮತ್
ಕಾಮತ್ ಅವರು 2010 ರಲ್ಲಿ ಜಿರೋಧಾ ಕಂಪನಿಯನ್ನು ಸ್ಥಾಪಿಸಿದರು. ಅದರೊಂದಿಗೆ ಖಾಸಗಿ ಹೂಡಿಕೆಗಳಿಗಾಗಿ ಗೃಹಾಸ್, ಭಾರತದಲ್ಲಿ ಅಲ್ಟ್ರಾ HNI ಗಳಿಗೆ ಸಂಪತ್ತನ್ನು ನಿರ್ವಹಿಸುವ ಹೆಡ್ಜ್ ಫಂಡ್ ಟ್ರೂ ಬೀಕನ್, ಫಿನ್‌ಟೆಕ್ ಇನ್‌ಕ್ಯುಬೇಟರ್ ರೈನ್‌ಮ್ಯಾಟರ್ ಮತ್ತು ಹವಾಮಾನ ಸಂಬಂಧಿತ ಲಾಭರಹಿತಗಳನ್ನು ಬೆಂಬಲಿಸುವ ರೈನ್‌ಮ್ಯಾಟರ್ ಫೌಂಡೇಶನ್ ಅನ್ನು ಸ್ಥಾಪಿಸಿದ್ದಾರೆ. ಇದರೊಂದಿಗೆ 34 ವರ್ಷದ ನಿಖಿಲ್ ಕಾಮತ್ ತಮ್ಮದೇ ಆದ ಯಂಗ್ ಇಂಡಿಯನ್ ಫಿಲಾಂಥ್ರೋಪಿಕ್ ಪ್ಲೆಡ್ಜ್ (ವೈಐಪಿಪಿ) ಕೂಡ ಹೊಂದಿದ್ದಾರೆ. ಇದರ ಅನ್ವಯ ಉದ್ಯಮಿಗಳು ತಮ್ಮ ಆದಾಯದ ಕನಿಷ್ಠ ಶೇ.25ರಷ್ಟನ್ನು ದಾನ ಕಾರ್ಯಗಳಿಗಾಗಿ ಮೀಸಲಿಡಬೇಕಾಗಿದೆ.