ಚಿನ್ನ, ಬೆಳ್ಳಿ, ಭೂಮಿ, ಹಣ ಅಲ್ಲ, ಮುಂದಿನ 5 ರಿಂದ 10 ವರ್ಷದಲ್ಲಿಈ ವಸ್ತು ಅತ್ಯಂತ ದುಬಾರಿಯಾಗುತ್ತದೆ ಎಂದು ಶ್ರೀಮಂತ ಯುವ ಉದ್ಯಮಿ ನಿಖಿಲ್ ಕಾಮತ್ ಹೇಳಿದ್ದಾರೆ. ಅಷ್ಟಕ್ಕೂ ನಿಖಿಲ್ ಕಾಮತ್ ಹೇಳಿದ ಅತೀ ಹೆಚ್ಚು ಮೌಲ್ಯ, ಬೆಲೆಯಾಗಿ ಹೊರಹೊಮ್ಮಲಿರು ಆ ವಸ್ತು ಯಾವುದು?
ಬೆಂಗಳೂರು(ಜೂ.10) ಝೆರೋಧ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಯುವ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಶ್ರೀಮಂತ ಉದ್ಯಮಿ ಜೊತೆಗೆ ಯೂಟ್ಯೂಬ್ ಮೂಲಕ ಪಾಡ್‌ಕಾಸ್ಟ್ ಮೂಲಕವೂ ಅತ್ಯಂತ ಜನಪ್ರಿಯವಾಗಿದ್ದಾರೆ.ಹೊಸದಾಗಿ ಉದ್ಯಮಿ ಆರಂಭಿಸುವವರಿಗೆ, ಹೂಡಿಕೆ, ಉಳಿತಾಯ ಸೇರಿದಂತೆ ಹಲವು ವಿಚಾರಗಳ ಕುರಿತು ಮಾತನಾಡುವ ನಿಖಿಲ್ ಕಾಮತ್ ಅತೀ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಇದೀಗ ನಿಖಿಲ್ ಕಾಮತ್ ಸ್ಫೋಟಕ ಮಾಹಿತಿಯೊಂದನ್ನು ಹೇಳಿದ್ದಾರೆ. ಮುಂದಿನ 5 ರಿಂದ 10 ವರ್ಷದಲ್ಲಿ ಅತೀ ದುಬಾರಿಯಾಗಲಿರುವ ವಸ್ತುವೊಂದನ್ನು ಹೇಳಿದ್ದಾರೆ. ಇದು ಚಿನ್ನ, ಬೆಳ್ಳಿ, ಹಣ, ಭೂಮಿ, ನಿವೇಶನ, ಮನೆ ಅಲ್ಲ. ಈ ದುಬಾರಿ ವಸ್ತು ಎಲೆಕ್ಟ್ರಾನ್ಸ್ ಹಾಗೂ ಎನರ್ಜಿ ಎಂದಿದ್ದಾರೆ. ಅರೇ ಇದೇನಿದು? ಇಂಧನ ಎಲ್ಲಕ್ಕಿಂತ ದುಬಾರಿಯಾಗುತ್ತಾ? ಅನ್ನೋ ಪ್ರಶ್ನೆಗೆ ನಿಖಿಲ್ ಕಾಮತ್ ವಿವರಣೆ ನೀಡಿದ್ದಾರೆ.
ವಿದ್ಯುತ್ ದುಬಾರಿ
ನಿಖಿಲ್ ಕಾಮತ್ ವಿದ್ಯುತ್, ಇಂಧನ ಶಕ್ತಿ ವಿಶ್ವದಲ್ಲಿ ಯಾವ ರೀತಿ ಬಳಕೆಯಾಗುತ್ತಿದೆ. ಮುಂದಿನ 5 ರಿಂದ 10 ವರ್ಷದಲ್ಲಿ ಇದರ ಬಳಕೆ ಹೇಗೆ ಹೆಚ್ಚಾಗಲಿದೆ ಎಂದು ವಿವರಿಸಿದ್ದಾರೆ. ಸದ್ಯ ಆರ್ಟಿಫೀಶಿಯಲ್ ಇಂಟಲಿಜೆನ್ಸ್, ನೆಟ್‌ಫ್ಲಿಕ್ಸ್ , ವಿದ್ಯುತ್ ಚಾಲಿತ ವಾಹನ ಸೇರಿದಂತೆ ನೇರವಾಗಿ ವಿದ್ಯುತ್ ಬಳಕೆ ಮಾಡುವವರ ಪ್ರಮಾಣ ಹೆಚ್ಚು. ಪ್ರತಿಯೊಬ್ಬರು ಮೊಬೈಲ್ ಬಳಕೆ ಮಾಡುತ್ತಾರೆ. ಹೆಡ್‌ಫೋನ್ ಸೇರಿದಂತೆ ಹಲವು ಗ್ಯಾಜೆಟ್ಸ್ ಬಳಕೆ ಮಾಡುತ್ತಾರೆ. ಸೋಶಿಯಲ್ ಮೀಡಿಯಾ ಸೇರಿದಂತೆ ಡೇಟಾ ಸರ್ವರ್ ಬಳಕೆಯೂ ಹೆಚ್ಚು. ಇವೆಲ್ಲದ್ದಕ್ಕೂ ವಿದ್ಯುತ್ ಶಕ್ತಿ ಅತ್ಯಂತ ಪ್ರಮುಖ.
ಡೇಟಾ ಸೆಂಟರ್
ಡೇಟಾ ಸೆಂಟರ್ ಪ್ರಮಾಣಗಳು ಹೆಚ್ಚಾಗುತ್ತಿದೆ. ಸರ್ವರ್ ಮೂಲಕ ನಿಯಂತ್ರಣ ಮಾಡಬೇಕಾದ ಅನಿವಾರ್ಯತೆ ಹೆಚ್ಚು. ಕ್ಲೌಡ್ ಸ್ಟೋರೇಜ್‌ನಿಂದ ಹಿಡಿದು ಎಲ್ಲಾ ಆನ್‌ಲೈನ್ ಚಟುವಟಿಕೆಗಳ ಸ್ಟೋರೇಜ್ ಸೆಂಟರ್ ಸರ್ವರ್‌ಗೆ ಹೆಚ್ಚಿನ ವಿದ್ಯುತ್ ಶಕ್ತಿ ಬೇಕು. ಇನ್ನು ಎಲೆಕ್ಟ್ರಿಕ್ ವಾಹನ ಬಳಕೆ ಪ್ರತಿ ವರ್ಷ 4 ಲಕ್ಷಕ್ಕೂ ಅಧಿಕವಾಗಿದೆ. ಇದಕ್ಕೆಲ್ಲಾ ಮುಖ್ಯ ಶಕ್ತಿ ವಿದ್ಯುತ್.
ಅಮೆರಿಕದಲ್ಲಿ 3,680 ಜೇಟಾ ಸೆಂಟರ್ ಇದೆ. ಇದು ವಿಶ್ವದಲ್ಲೇ ಅತೀ ಹೆಚ್ಚು. ಇನ್ನು ಎರಡನೇ ಸ್ಥಾನದಲ್ಲಿರುವ ಜರ್ಮನಿಯಲ್ಲಿ 424, ಯುಕೆಯಲ್ಲಿ 418 ಡೇಟಾ ಸೆಂಟರ್ ಇವೆ. ಭಾರತ ಈ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. 262 ಡೇಟಾ ಸೆಂಟರ್ ಇದೆ.ಆಯಾ ದೇಶದಲ್ಲಿ ಡೇಟಾ ಸೆಂಟರ್ ವರ್ಷದಿಂದ ವರ್ಷಕ್ಕೆ ಹೆಚ್ಚಾಗಲಿದೆ. ಸದ್ಯ ಡೇಟಾ ಸೆಂಟರ್ ಬಳಕೆ ಅತ್ಯವಶ್ಯಕವಾಗಿದೆ. ಜೊತೆಗೆ ಇರುವ ಡೇಟಾ ಸೆಂಟರ್ ಸಾಕಾಗುವುದಿಲ್ಲ. ಹೀಗಾಗಿ ಮತ್ತಷ್ಟು ಕೇಂದ್ರಗಳು ಸೇರಿಕೊಳ್ಳಲಿದೆ. ಇದರಿಂದ ವಿದ್ಯುತ್ ಬಳಕೆ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ. ಇದು ವಿದ್ಯುತ್ ಕೊರತೆಗೆ ನಾಂದಿ ಹಾಡಲಿದೆ.
ಪ್ರತಿ ದಿನ ವಿದ್ಯುತ್ ಬಳಕೆ ಹೆಚ್ಚಾಗುತ್ತಿದೆ. ಪ್ರತಿಯೊಬ್ಬರ ಬಳಿಕ ಕನಿಷ್ಠ ಒಂದು ಸ್ಮಾರ್ಟ್‌ಫೋನ್ ಇದೆ. ಇದರ ಜೊತೆಗೆ ಇತರ ಗ್ಯಾಜೆಟ್ಸ್ ಬಳಕೆ ಮಾಡುತ್ತಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಪ್ರತಿಯೊಬ್ಬನ ಪ್ರತಿ ದಿನದ ವಿದ್ಯುತ್ ಬಳಕೆ ಹೆಚ್ಚಾಗಲಿದೆ. ಕಾರಣ ತಂತ್ರಜ್ಞಾನ ಆವಿಷ್ಕಾರಗೊಂಡಂತೆ ಬಳಕೆಯೂ ಹೆಚ್ಚಾಗಲಿದೆ. ಹೊಸ ಜನರೇಶನ್ ಸಂಪೂರ್ಣ ಗ್ಯಾಜೆಟ್ಸ್ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಒಂದು ನಿಮಿಷವೂ ವಿದ್ಯುತ್ ಬಳಕೆ ಇಲ್ಲದೆ ಇರಲು ಸಾಧ್ಯವಿಲ್ಲ. ವಿಶ್ವದ ಎಲ್ಲಾ ದೇಶಗಳ ಪರಿಸ್ಥಿತಿ ಇದೇ ಆಗಿರುತ್ತದೆ. ಇದರಿಂದ ವಿದ್ಯುತ್ ಅಭಾವ ಅಥವಾ ವಿದ್ಯುತ್ ಉತ್ಪಾದನೆ ಪ್ರಮಾಣ ಹೆಚ್ಚಿಸಬೇಕಾಗುತ್ತದೆ. ಇದು ವಿಶ್ವದಲ್ಲೇ ವಿದ್ಯುತ್ ಶಕ್ತಿಯನ್ನು ಮತ್ತಷ್ಟು ದುಬಾರಿಯನ್ನಾಗಿ ಮಾಡಲಿದೆ ಎಂದು ನಿಖಿಲ್ ಕಾಮತ್ ಹೇಳಿದ್ದಾರೆ.