Asianet Suvarna News Asianet Suvarna News

ಹೊಸ ಟೊಮೆಟೋ ಬೆಳೆ ಮಾರುಕಟ್ಟೆಗೆ ಆಗಮನ: ಟೊಮೆಟೋ ಬೆಲೆ ಇಳಿಕೆ

ಮಾರುಕಟ್ಟೆಗೆ ಹೊಸ ಟೊಮೆಟೋ ಬೆಳೆ ಪೂರೈಕೆಯಾಗುತ್ತಿರುವುದರಿಂದ ಟೊಮೆಟೋ ಬೆಲೆ ಇಳಿಕೆಯಾಗಿದೆ. ಸದ್ಯ ಪ್ರತಿ ಕೇಜಿ ಟೊಮೆಟೋ ಬೆಲೆ 70 ರಿಂದ 50 ರೂಪಾಯಿ ಇದೆ.

New tomato crop hits the market Tomato prices drops akb
Author
First Published Aug 22, 2023, 8:50 AM IST

ನವದೆಹಲಿ: ಮಾರುಕಟ್ಟೆಗೆ ಹೊಸ ಟೊಮೆಟೋ ಬೆಳೆ ಪೂರೈಕೆಯಾಗುತ್ತಿರುವುದರಿಂದ ಟೊಮೆಟೋ ಬೆಲೆ ಇಳಿಕೆಯಾಗಿದೆ. ಸದ್ಯ ಪ್ರತಿ ಕೇಜಿ ಟೊಮೆಟೋ ಬೆಲೆ 70 ರಿಂದ 50ರು. ಇದ್ದು ಬೆಲೆ ಸಾಮಾನ್ಯ ಸ್ಥಿತಿಗೆ ಬರುವವರೆಗೂ ರಿಯಾಯಿತಿ ದರದಲ್ಲಿ ಆಯ್ದ ರಾಜ್ಯಗಳಲ್ಲಿ ಟೊಮೆಟೋವನ್ನು ಮಾರಾಟ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ. 

ಅಕಾಲಿಕ ಮಳೆ ಮತ್ತು ಮಳೆಯ ಕೊರತೆ ಸೇರಿದಂತೆ ದೇಶಾದ್ಯಂತ ಟೊಮೆಟೋ ಪೂರೈಕೆ ಕಡಿಮೆಯಾಗಿ, ಬೆಲೆಯು ಕೇಜಿಗೆ 250 ರು.ಗಳ ಗಡಿ ತಲುಪಿತ್ತು. ಆದರೀಗ ಮಧ್ಯಪ್ರದೇಶದಿಂದ ಹೆಚ್ಚಾಗಿ ಹೊಸ ಟೊಮೆಟೋ ಬೆಲೆ ಮಾರುಕಟ್ಟೆಗೆ ಬರುತ್ತಿದೆ. ಬೆಲೆ ಪೂರೈಕೆಯ ಕೊರತೆಯಿದ್ದ ಟೊಮೆಟೋದ ತಾಜಾ ಬೆಳೆ ಇದೀಗ ಚಿಲ್ಲರೆ ಮಾರುಕಟ್ಟೆಗೆ ಬಂದಿದೆ. ಭಾರತೀಯ ರಾಷ್ಟ್ರೀಗ ಗ್ರಾಹಕ ಸಹಕಾರ ಸಂಸ್ಥೆಯು ಕೇಜಿಗೆ 20 ರಿಂದ 40ರು. ಗಳಿಗೆ ಸಬ್ಸಿಡಿ ದರದಲ್ಲಿ ಟೊಮೆಟೋ ಮಾರುತ್ತಿದೆ.

ಅತ್ಯಂತ ರುಚಿಕಟ್ಟಾದ ಮಸಾಲ ಪುರಿಯಿಂದ ಮನೆಗಳಲ್ಲಿ ಮಾಡುವ ಸಾಂಪ್ರದಾಯಿಕ ಸಾಂಬಾರು, ಎಲ್ಲರೂ ಚಪ್ಪರಿಸಿ ತಿನ್ನುವ ಮೆಕ್ ಡೊನಾಲ್ಡಿನ ಬರ್ಗರ್ ತನಕ ಎಲ್ಲದರಲ್ಲೂ ಒಂದು ಭಾಗವಾಗಿದ್ದ, ಸರಳ ತರಕಾರಿಯಾದ ಟೊಮ್ಯಾಟೊ ಈಗ ಸಲಾಡ್‌ಗಳಿಂದ ಪ್ರತಿದಿನದ ಸಾರು - ಸಾಂಬಾರು, ಮೆಕ್ ಡೊನಾಲ್ಡ್ ಆಹಾರಗಳಿಂದ ಕಾಣೆಯಾಗಿಬಿಟ್ಟಿದೆ! ಈ ವರ್ಷದಲ್ಲಿ ಮೇ ತಿಂಗಳಿನಿಂದ ಟೊಮ್ಯಾಟೊ ದರ ಪ್ರತಿ ಕೆಜಿಗೆ 10 ರೂಪಾಯಿಗಳಿಂದ ಹೆಚ್ಚಾಗುತ್ತಾ ಬಂದು, ಜುಲೈ ತಿಂಗಳಲ್ಲಿ ಪ್ರತಿ ಕೆಜಿಗೆ 200-250 ರೂಪಾಯಿ ತಲುಪಿತ್ತು.

ಟೊಮೆಟೋ ಆಯ್ತು, ಈಗ ದಾಳಿಂಬೆ ಕಾವಲಿಗೆ ಬಂದೂಕು ಹಿಡಿದ ರೈತರು

ಮಹಾರಾಷ್ಟ್ರ (Maharashtra), ಆಂಧ್ರಪ್ರದೇಶ, ಮತ್ತು ಕರ್ನಾಟಕದಲ್ಲಿ ಚಳಿಗಾಲದ (Winter crop) ಬೆಳೆಯಾಗಿ ಬೆಳೆಯುವ ಟೊಮ್ಯಾಟೊ, ಮಾರ್ಚ್‌ನಿಂದ ಆಗಸ್ಟ್ ನಡುವೆ ಮಾರುಕಟ್ಟೆಯನ್ನು ತಲುಪುತ್ತದೆ. ಆ ನಂತರ, ಖಾರಿಫ್ ಬೆಳೆಯಾಗಿ ಮಹಾರಾಷ್ಟ್ರದ ನಾಶಿಕ್, ಉತ್ತರ ಪ್ರದೇಶ ಮತ್ತು ದೇಶದ ಮತ್ತಿತರ ಭಾಗಗಳಲ್ಲಿ ಬೆಳೆಯುವ ಟೊಮ್ಯಾಟೊ ಮಾರುಕಟ್ಟೆ ಪ್ರವೇಶಿಸುತ್ತದೆ. ಮಾರುಕಟ್ಟೆಗೆ ಟೊಮ್ಯಾಟೊ ನಿರಂತರವಾಗಿ ಲಭಿಸುವುದನ್ನು ಖಾತ್ರಿ ಪಡಿಸಲು ರೈತರು ಸಾಮಾನ್ಯವಾಗಿ ಬೆಳೆಗಳನ್ನು ಆವರ್ತಕವಾಗಿ ಬೆಳೆಯುತ್ತಾರೆ.

ಈ ವರ್ಷದಲ್ಲಿ, ಮಾರ್ಚ್ - ಎಪ್ರಿಲ್ ತಿಂಗಳ ವೇಳೆಯಲ್ಲಿ ದೇಶಾದ್ಯಂತ ಟೊಮ್ಯಾಟೊ ಬಂಪರ್ ಬೆಳೆ ಬೆಳೆದ ಪರಿಣಾಮವಾಗಿ, ಟೊಮ್ಯಾಟೋದ ಸಗಟು ದರ ಪ್ರತಿ ಕೆಜಿಗೆ 2-3 ರೂಪಾಯಿಗಳಿಗೆ ಕುಸಿದಿತ್ತು. ಅಷ್ಟು ಕಡಿಮೆ ಬೆಲೆ ಟೊಮ್ಯಾಟೊದ ಸಾಗಾಣಿಕಾ ವೆಚ್ಚಕ್ಕೂ ಸಾಕಾಗುತ್ತಿರಲಿಲ್ಲ. ಮಾರುಕಟ್ಟೆಯಲ್ಲಿ ಟೊಮ್ಯಾಟೊ ಅತಿಯಾಗಿ ಪೂರೈಕೆಯಾದ ಕಾರಣ, ಬಹುತೇಕ ರೈತರಿಗೆ ಖರೀದಿದಾರರಿರಲಿಲ್ಲ. ಈ ಕಾರಣದಿಂದ ಬಹುತೇಕ ರೈತರು ಲೋಡ್‌ಗಟ್ಟಲೆ ಟೊಮ್ಯಾಟೋವನ್ನು ಸುರಿದು, ಟೊಮ್ಯಾಟೊ ಬೆಳೆಯನ್ನೇ ಕೈ ಬಿಡುವಂತಾಯಿತು. ಇನ್ನು ಹೊಲಗಳಲ್ಲಿ ಬೆಳೆದ, ಅಳಿದುಳಿದ ಪ್ರಮಾಣದ ಟೊಮ್ಯಾಟೊ ಬೆಳೆ ಜೂನ್ ತಿಂಗಳ ಮಧ್ಯ ಭಾಗದಲ್ಲಿ ಸುರಿದ ಮಳೆಯ ಕಾರಣದಿಂದ ನಾಶವಾಗಿ, ಇದ್ದಕ್ಕಿದ್ದಂತೆ ಟೊಮ್ಯಾಟೊ ಅಭಾವ ತಲೆದೋರಿತು.

ಬೆಳಗಾವಿ: 20 ದಿನಗಳಿಂದ ಟೊಮೆಟೋ ಕದಿಯುತ್ತಿದ್ದವ ಸಿಕ್ಕಿಬಿದ್ದ..!

ಅದಾಗಿ ಕೆಲ ಸಮಯದಲ್ಲಿ ಟೊಮ್ಯಾಟೊ ಬೆಲೆ ಹೆಚ್ಚಳವಾಗಲು ಆರಂಭಿಸಿತು. ಜುಲೈ ತಿಂಗಳ ವೇಳೆಗೆ ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮ್ಯಾಟೊ ದರ ಪ್ರತಿ ಕೆಜಿಗೆ 200-250 ರೂಪಾಯಿ ತಲುಪಿತ್ತು. ಇದಕ್ಕೆ ಕೀಟ ಬಾಧೆ, ಹೆಚ್ಚಿನ ಉಷ್ಣತೆ ಕಾರಣವಾಗಿತ್ತು. ಸಾಮಾನ್ಯವಾಗಿ, ಜುಲೈ ತಿಂಗಳಲ್ಲಿ ತರಕಾರಿಗಳ ದರ ವರ್ಷದ ಇತರ ಸಮಯಗಳಿಂದ ಹೆಚ್ಚಾಗಿ, ವಾರ್ಷಿಕ ಅತ್ಯಧಿಕ ದರವನ್ನು ತಲುಪುತ್ತದೆ. ಯಾಕೆಂದರೆ, ಜುಲೈ ತಿಂಗಳಲ್ಲಿ ಬೆಳೆಗಳು ಇನ್ನೂ ಕೊಯ್ಲಿಗೆ ಬಂದಿರುವುದಿಲ್ಲ.

ಪ್ರತಿ ಸಲವೂ ಇಂತದ್ದು ಏನಾದರೂ ನಡೆದಾಗ, ರೈತರು ಇದ್ದಕ್ಕಿದ್ದ ಹಾಗೇ ಅಂತಹ ಅಭಾವವಿರುವ ಬೆಳೆಗಳನ್ನು ಬೆಳೆಯಲು ಹೊರಟು, ಅಂತಹ ಬೆಳೆಗಳು ಮಿತಿಮೀರಿ ಲಭ್ಯವಾಗುವಂತಾಗುತ್ತದೆ. ಇಂತಹ ಸಂದರ್ಭದಲ್ಲಿ, ಹೆಚ್ಚಾದ ಬೆಲೆ ಇದ್ದಕ್ಕಿದ್ದಂತೆ ಕುಸಿತ ಕಾಣುತ್ತದೆ. ಇಂತಹ ಪರಿಸ್ಥಿತಿ ಪ್ರತಿವರ್ಷವೂ ಆಲೂಗಡ್ಡೆ, ಈರುಳ್ಳಿ, ಟೊಮ್ಯಾಟೊ, ಮತ್ತಿತರ ತರಕಾರಿಗಳ ಜೊತೆ ಮುಂದುವರಿಯುತ್ತಲೇ ಇರುತ್ತದೆ.

Follow Us:
Download App:
  • android
  • ios