ವಿದೇಶಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ ಮಾಡುವ ವೆಚ್ಚಕ್ಕೆ ಟಿಸಿಎಸ್ ಇಲ್ಲ; ಹೊಸ ದರ ಜು.1ರ ಬದಲು ಅ.1ರಿಂದ ಜಾರಿ
ಅಂತಾರಾಷ್ಟ್ರೀಯ ಕ್ರೆಡಿಟ್ ಕಾರ್ಡ್ ಬಳಸಿ ವಿದೇಶಗಳಲ್ಲಿ ಮಾಡುವ ವೆಚ್ಚಕ್ಕೆ ಯಾವುದೇ ಟಿಸಿಎಸ್ ಇಲ್ಲ ಎಂದು ಕೇಂದ್ರ ಹಣಕಾಸು ಇಲಾಖೆ ಬುಧವಾರ ಸ್ಪಷ್ಟಪಡಿಸಿದೆ. ಇನ್ನು ಪ್ರವಾಸ ವೆಚ್ಚಗಳು ಸೇರಿದಂತೆ ಎಲ್ ಆರ್ ಎಸ್ ಅಡಿಯಲ್ಲಿ ವಿದೇಶಗಳಲ್ಲಿ ಮಾಡುವ ನಿಗದಿತ ಮಿತಿಗಿಂತ ಹೆಚ್ಚಿನ ಖರ್ಚಿಗೆ ಶೇ.20ರಷ್ಟು ಟಿಸಿಎಸ್ ವಿಧಿಸುವ ನಿಯಮ ಜುಲೈ 1ರ ಬದಲು ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದೆ.
ನವದೆಹಲಿ (ಜೂ.29): ಅಂತಾರಾಷ್ಟ್ರೀಯ ಕ್ರೆಡಿಟ್ ಕಾರ್ಡ್ ಬಳಸಿ ವಿದೇಶಗಳಲ್ಲಿ ಮಾಡುವ ವೆಚ್ಚವನ್ನು ಎಲ್ಆರ್ ಎಸ್ ಅಡಿಯಲ್ಲಿ ಸೇರಿಸಲಾಗುವುದಿಲ್ಲ. ಹೀಗಾಗಿ ಇದಕ್ಕೆ ಟಿಸಿಎಸ್ (ಮೂಲದಲ್ಲಿ ತೆರಿಗೆ ಸಂಗ್ರಹ) ಅನ್ವಯಿಸೋದಿಲ್ಲ ಎಂದು ಹಣಕಾಸು ಸಚಿವಾಲಯ ಬುಧವಾರ ತಿಳಿಸಿದೆ. ಹಾಗೆಯೇ ಪ್ರವಾಸ ವೆಚ್ಚಗಳು ಸೇರಿದಂತೆ ಎಲ್ ಆರ್ ಎಸ್ ಅಡಿಯಲ್ಲಿ ವಿದೇಶಗಳಲ್ಲಿ ಮಾಡುವ ನಿಗದಿತ ಮಿತಿಗಿಂತ ಹೆಚ್ಚಿನ ಖರ್ಚಿಗೆ ಶೇ.20ರಷ್ಟು ಟಿಸಿಎಸ್ ವಿಧಿಸುವ ನಿಯಮ ಜಾರಿಯನ್ನು ಮೂರು ತಿಂಗಳು ಮುಂದೂಡಲಾಗಿದ್ದು, ಜುಲೈ 1ರ ಬದಲಿಗೆ ಅಕ್ಟೋಬರ್ 1ರಿಂದ ಅನುಷ್ಠಾನಗೊಳಿಸೋದಾಗಿ ಹಣಕಾಸು ಸಚಿವಾಲಯ ತಿಳಿಸಿದೆ. ಬ್ಯಾಂಕ್ ಗಳು ಹಾಗೂ ಕಾರ್ಡ್ ನೆಟ್ ವರ್ಕ್ ಗಳಿಗೆ ಅಗತ್ಯ ಐಟಿ ಆಧಾರಿತ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಸಾಕಷ್ಟು ಸಮಯಾವಕಾಶ ಕಲ್ಪಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರೋದಾಗಿಯೂ ಸಚಿವಾಲಯ ಸ್ಪಷ್ಟಪಡಿಸಿದೆ. ಇನ್ನು ವಿದೇಶಿ ಪ್ರವಾಸ ಪ್ಯಾಕೇಜ್ ಗಳು ಸೇರಿದಂತೆ ಎಲ್ಲ ಉದ್ದೇಶಗಳಿಗೆ ಪಾವತಿ ವಿಧಾನ ಯಾವುದೇ ಆಗಿದ್ದರೂ ಒಬ್ಬ ವ್ಯಕ್ತಿಗೆ ವಾರ್ಷಿಕ 7ಲಕ್ಷ ರೂ. ತನಕದ ಮೊತ್ತಕ್ಕೆ ವಿಧಿಸುವ ಟಿಸಿಎಸ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಅದು ಈ ಹಿಂದೆ ನಿಗದಿಪಡಿಸಿದಂತೆಯೇ ಇರಲಿದೆ.
ಕೇಂದ್ರ ಸರ್ಕಾರ ಹಣಕಾಸು ಮಸೂದೆ 2023ರಲ್ಲಿ ಎಲ್ ಆರ್ ಎಸ್ ಅಡಿಯಲ್ಲಿ ವಿದೇಶಗಳಲ್ಲಿನ ವೆಚ್ಚ ಹಾಗೂ ವಿದೇಶಿ ಪ್ರವಾಸ ಪ್ಯಾಕೇಜ್ ಗಳ ಮೇಲಿನ ಟಿಸಿಎಸ್ ಅನ್ನು ಶೇ.5ರಿಂದ ಶೇ.20ಕ್ಕೆ ಏರಿಕೆ ಮಾಡಿದೆ. ಹಾಗೆಯೇ ಎಸ್ ಆರ್ ಎಸ್ ಅಡಿಯಲ್ಲಿ ಟಿಸಿಎಸ್ ಅನ್ವಯವಾಗಲು ಈ ಹಿಂದಿನ 7 ಲಕ್ಷದ ಮಿತಿಯನ್ನು ತೆಗೆದು ಹಾಕಿತ್ತು. ಆದರೆ, ಈ ಎರಡು ಬದಲಾವಣೆಗಳು ಶೈಕ್ಷಣಿಕ ಹಾಗೂ ವೈದ್ಯಕೀಯ ವೆಚ್ಚಗಳಿಗೆ ಅನ್ವಯಿಸೋದಿಲ್ಲ. ಈ ತಿದ್ದುಪಡಿ ಜುಲೈ 1ರಿಂದ ಜಾರಿಗೆ ಬರಬೇಕಿತ್ತು. ಈ ತಿದ್ದುಪಡಿಯಲ್ಲಿ ಅಂತಾರಾಷ್ಟ್ರೀಯ ಕ್ರೆಡಿಟ್ ಕಾರ್ಡ್ ಬಳಸಿ ವಿದೇಶಗಳಲ್ಲಿ ಮಾಡುವ ವೆಚ್ಚಕ್ಕೂ ಶೇ.20ರಷ್ಟು ಟಿಸಿಎಸ್ ಅನ್ವಯಿಸಲಾಗಿತ್ತು. ಸರ್ಕಾರದ ಈ ಒಂದು ನಿರ್ಧಾರದ ಬಗ್ಗೆ ಭಾರೀ ವಿರೋಧ ಕೂಡ ವ್ಯಕ್ತವಾಗಿತ್ತು. ಈಗ ಹಣಕಾಸು ಇಲಾಖೆ ನೀಡಿರುವ ಮಾಹಿತಿ ಅನ್ವಯ ಅಂತಾರಾಷ್ಟ್ರೀಯ ಕ್ರೆಡಿಟ್ ಕಾರ್ಡ್ ಬಳಸಿ ವಿದೇಶಗಳಲ್ಲಿ ಮಾಡುವ ವೆಚ್ಚಕ್ಕೆ ಟಿಸಿಎಸ್ ವಿಧಿಸುವ ನಿರ್ಧಾರವನ್ನು ಕೈಬಿಡಲಾಗಿದೆ.
ಈ 6 ಟಿಪ್ಸ್ ಅನುಸರಿಸಿದ್ರೆ ದೊಡ್ಡ ಪ್ರಮಾಣದ ತೆರಿಗೆ ಉಳಿತಾಯ ಮಾಡ್ಬಹುದು!
ಮೂಲದಲ್ಲಿ ತೆರಿಗೆ ಸಂಗ್ರಹ (TCS) ಮೊತ್ತವನ್ನು ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವಾಗ ನಮೂದಿಸುವ ಮೂಲಕ ತೆರಿಗೆ ರೀಫಂಡ್ ಪಡೆಯಬಹುದು. ಆದರೆ, ಶಿಕ್ಷಣ ವೆಚ್ಚಕ್ಕೆ ಸಂಬಂಧಿಸಿದ ನಿಯಮದಲ್ಲಿ ಅಂದ್ರೆ ಶುಲ್ಕಕ್ಕೆ ಸಂಬಂಧಿಸಿ ಬದಲಾವಣೆ ಮಾಡಿರಲಿಲ್ಲ. ಒಂದು ವೇಳೆ ಸಾಲದ ಹಣವನ್ನು ವಿದೇಶಕ್ಕೆ ಶೈಕ್ಷಣಿಕ ಶುಲ್ಕ ಭರಿಸಲು ವರ್ಗಾವಣೆ ಮಾಡಿದ್ರೆ ಈ ಹಿಂದಿನಂತೆ ಒಂದು ಆರ್ಥಿಕ ಸಾಲಿನಲ್ಲಿ 7 ಲಕ್ಷ ರೂ. ಮೀರಿದ ಮೊತ್ತಕ್ಕೆ ಶೇ.0.5 ಟಿಸಿಎಸ್ ಕಡಿತ ಮಾಡಲಾಗುತ್ತದೆ. ಆದರೆ, ಶೈಕ್ಷಣಿಕ ವೆಚ್ಚವನ್ನು ಸಾಲದಿಂದ ಭರಿಸದ ಸಂದರ್ಭಗಳಲ್ಲಿ ಆರ್ಥಿಕ ಸಾಲಿನಲ್ಲಿ 7ಲಕ್ಷ ರೂ. ಗಿಂತ ಹೆಚ್ಚಿನ ಮೊತ್ತದ ವರ್ಗಾವಣೆಗೆ ಶೇ.5ರಷ್ಟು ತೆರಿಗೆ ವಿಧಿಸಲಾಗುತ್ತದೆ. ಈ ಎರಡೂ ನಿಯಮಗಳಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಇನ್ನು ವಿದೇಶದಲ್ಲಿ ವೈದ್ಯಕೀಯ ವೆಚ್ಚಕ್ಕಾಗಿ ವರ್ಗಾಯಿಸುವ ಹಣದ ಮೇಲೆ ಈ ಹಿಂದೆ ಶೇ.5ರಷ್ಟು ತೆರಿಗೆ ವಿಧಿಸಲಾಗುತ್ತಿದ್ದು, ಯಾವುದೇ ಬದಲಾವಣೆ ಮಾಡಿರಲಿಲ್ಲ.
ಐಟಿಆರ್ ಸಲ್ಲಿಕೆ ಮಾಡುತ್ತಿದ್ದೀರಾ? ಯಾವ ತೆರಿಗೆ ವ್ಯವಸ್ಥೆ ಆಯ್ಕೆ ಮಾಡೋದು ಉತ್ತಮ? ಇಲ್ಲಿದೆ ಮಾಹಿತಿ
ಶಿಕ್ಷಣ ಹಾಗೂ ವೈದ್ಯಕೀಯ ವೆಚ್ಚ ಹೊರತುಪಡಿಸಿ ಇತರ ಉದ್ದೇಶದ ಎಲ್‌ಆರ್‌ಎಸ್ ಗೆ 7ಲಕ್ಷ ರೂ. ತನಕ ಯಾವುದೇ ಟಿಸಿಎಸ್ ವಿಧಿಸೋದಿಲ್ಲ. 7 ಲಕ್ಷ ಮೇಲ್ಪಟ್ಟಿದ್ದರೆ ಶೇ.20ರಷ್ಟು ಟಿಸಿಎಸ್ ವಿಧಿಸಲಾಗುತ್ತದೆ. ಇನ್ನು ವಿದೇಶಿ ಪ್ರವಾಸ ಪ್ಯಾಕೇಜ್ ಖರೀದಿಗೆ 7ಲಕ್ಷ ರೂ. ತನಕ ಯಾವುದೇ ಟಿಸಿಎಸ್ ವಿಧಿಸೋದಿಲ್ಲ. ಆದರೆ, 7 ಲಕ್ಷ ಮೇಲ್ಪಟ್ಟಿದ್ದರೆ ಶೇ.20ಷ್ಟು ಟಿಸಿಎಸ್ ವಿಧಿಸಲಾಗುತ್ತದೆ.