ಮುಂಬೈ(ಡಿ.14): ಚೆಕ್ ಮೂಲಕ ಹಣ ಪಾವತಿಸುವುದಕ್ಕೆ ಸಂಬಂಧಿಸಿದಂತೆ ಆರ್‌ಬಿಐ 2021ರ ಜನವರಿ 1ರಿಂದ ಹೊಸ ನಿಯಮ ಜಾರಿಗೆ ತರುತ್ತಿದ್ದು, ಅದರನ್ವಯ 50,000 ರು.ಗಿಂತ ಹೆಚ್ಚಿನ ಮೊತ್ತಕ್ಕೆ ಚೆಕ್ ನೀಡುವವರು ತಮ್ಮ ಬ್ಯಾಂಕಿಗೆ ಆ ಬಗ್ಗೆ ಮಾಹಿತಿ ನೀಡುವುದು ಕಡ್ಡಾಯ. ಚೆಕ್‌ಗಳ ಮೂಲಕ ನಡೆಯುವ ವಂಚನೆ ತಪ್ಪಿಸಲು ಕಳೆದ ಆಗಸ್‌ಟ್ನಲ್ಲೇ ‘ಪಾಸಿಟಿವ್ ಪೇ ಸಿಸ್ಟಂ’ ಎಂಬ ವ್ಯವಸ್ಥೆ ತರುವುದಾಗಿ ಆರ್‌ಬಿಐ ಪ್ರಕಟಿಸಿತ್ತು. ಅಗತ್ಯವಿದ್ದವರು ಈ ಆಯ್ಕೆ ಪಡೆಯಬಹುದು.

ಹೊಸ ವ್ಯವಸ್ಥೆ ಹೇಗೆ...?

1ನಾವು ಯಾರಿಗಾದರೂ 50,000 ರು.ಗಿಂತ ಹೆಚ್ಚಿನ ಮೊತ್ತಕ್ಕೆ ಚೆಕ್ ನೀಡುವಾಗ ಚೆಕ್‌ನ ಮುಂಭಾಗ ಹಾಗೂ ಹಿಂಭಾಗದ ಫೋಟೋ ತೆಗೆದುಕೊಳ್ಳಬೇಕು.

2ಚೆಕ್ ನಂಬರ್, ಚೆಕ್‌ನ ದಿನಾಂಕ, ಚೆಕ್ ಪಡೆದವರ ಹೆಸರು, ಅವರ ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಚೆಕ್‌ನ ಮೊತ್ತ ಮುಂತಾದ ವಿವರಗಳನ್ನು ಫೋಟೋ ಜೊತೆಗೆ ನಮ್ಮ ಬ್ಯಾಂಕಿಗೆ ನೀಡಬೇಕು.

3ಎಸ್‌ಎಂಎಸ್, ಇಂಟರ್ನೆಟ್, ಮೊಬೈಲ್ ಅಥವಾ ಎಟಿಎಂ ಹೀಗೆ ಯಾವುದಾದರೊಂದು ಮಾರ್ಗದಲ್ಲಿ ಬ್ಯಾಂಕಿಗೆ ಈ ವಿವರಗಳನ್ನು ನೀಡುವ ವ್ಯವಸ್ಥೆ ಜಾರಿಗೆ ಬರಲಿದೆ.

4ಚೆಕ್ ಪಡೆದವರು ಆ ಚೆಕ್ ಅನ್ನು ಅವರ ಬ್ಯಾಂಕಿಗೆ ಸಲ್ಲಿಸಿ, ಅದು ನಮ್ಮ ಬ್ಯಾಂಕಿಗೆ ಕಲೆಕ್ಷನ್‌ಗೆ ಬಂದಾಗ, ನಾವು ಬ್ಯಾಂಕಿಗೆ ನೀಡಿದ ವಿವರವನ್ನು ನಮ್ಮ ಬ್ಯಾಂಕ್ ಆ ಚೆಕ್‌ನ ಜೊತೆಗೆ ತಾಳೆ ಹಾಕಿ ನೋಡುತ್ತದೆ.

5ಮಾಹಿತಿ ತಾಳೆಯಾದರೆ ಮಾತ್ರ ಚೆಕ್ ನಗದಾಗುತ್ತದೆ. ನಾವು ಚೆಕ್‌ನ ಮಾಹಿತಿಯನ್ನು ನಮ್ಮ ಬ್ಯಾಂಕಿಗೆ ನೀಡುವುದಕ್ಕೆ ಮರೆತರೂ ನಮ್ಮ ಚೆಕ್ ನಗದಾಗುವುದಿಲ್ಲ.

6ಪಾಸಿಟಿವ್ ಪೇ ವ್ಯವಸ್ಥೆಯು ಐಚ್ಛಿಕವಾಗಿದ್ದು, ನಾವು ಆಯ್ಕೆ ಮಾಡಿಕೊಂಡರಷ್ಟೇ ನಮ್ಮ ಬ್ಯಾಂಕ್ ಖಾತೆಯ ಮೂಲಕ ಚೆಕ್ ಹೀಗೆ ಪಾಸಾಗುತ್ತದೆ. ಆದರೆ, 5 ಲಕ್ಷ ರು.ಗಿಂತ ಹೆಚ್ಚಿನ ಮೊತ್ತದ ಚೆಕ್‌ಗಳಿಗೆ ಈ ವ್ಯವಸ್ಥೆಯನ್ನು ಕಡ್ಡಾಯಗೊಳಿಸುವ ಅಧಿಕಾರ ಬ್ಯಾಂಕುಗಳಿಗಿರುತ್ತದೆ.