ವಿಮಾ ಕ್ಷೇತ್ರದಲ್ಲಿ ನಿಯಮ ಬದಲಾವಣೆ; ಹೊಸ ವಿಮೆ ಖರೀದಿಸುವ ಮುನ್ನಈ ವಿಷಯ ಗಮನಿಸಿ
ವಿಮಾ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲವು ನಿಯಮಗಳು ಏ.1ರಿಂದ ಬದಲಾಗಲಿವೆ. ಇವು ಸಾಮಾನ್ಯ ಜನರ ಮೇಲೆ ಪರಿಣಾಮ ಬೀರಲಿವೆ ಕೂಡ. ಹಾಗಾದ್ರೆ ವಿಮಾ ಕ್ಷೇತ್ರಕ್ಕೆ ಸಂಬಂಧಿಸಿ ಯಾವೆಲ್ಲ ನಿಯಮಗಳಲ್ಲಿ ಬದಲಾವಣೆಯಾಗಿವೆ? ಇಲ್ಲಿದೆ ಮಾಹಿತಿ.
ನವದೆಹಲಿ (ಏ.3): ಏಪ್ರಿಲ್ 1ರಿಂದ ಹೊಸ ಆರ್ಥಿಕ ವರ್ಷ ಪ್ರಾರಂಭವಾಗಿದೆ. ಈ ಸಾಲಿನಲ್ಲಿ ವಿವಿಧ ಹಣಕಾಸು ನಿಯಮಗಳಿಗೆ ಸಂಬಂಧಿಸಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಅದರಲ್ಲೂ ವಿಮಾ ಕ್ಷೇತ್ರಕ್ಕೆ ಸಂಬಂಧಿಸಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ನಿರ್ದಿಷ್ಟ ವಿಧದ ವಿಮಾ ಪ್ರೀಮಿಯಂ ಮೇಲಿನ ತೆರಿಗೆ ರಿಯಾಯಿತಿಯನ್ನು ತೆಗೆದು ಹಾಕಲಾಗಿದೆ. ಇದರ ಜೊತೆಗೆ ವಿಮಾ ವೆಚ್ಚಗಳು ಹಾಗೂ ಕಮೀಷನ್ ಮಿತಿಯಲ್ಲೂ ಮಹತ್ವದ ಮಾರ್ಪಾಡು ಮಾಡಲಾಗಿದೆ. ಹೀಗಾಗಿ ವಿಮಾ ಪಾಲಿಸಿಗೆ ಸಂಬಂಧಿಸಿ ಮಾಡಲಾಗಿರುವ ಎಲ್ಲ ಬದಲಾವಣೆಗಳ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಅದರಲ್ಲೂ ಈ ಆರ್ಥಿಕ ಸಾಲಿನಲ್ಲಿ ಹೊಸ ವಿಮಾ ಪಾಲಿಸಿ ಖರೀದಿಸುವ ಪ್ಲ್ಯಾನ್ ಇದ್ದರೆ, ಈ ಮಾರ್ಪಾಡುಗಳ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಬದಲಾದ ನಿಯಮಗಳ ಬಗ್ಗೆ ಮಾಹಿತಿಯಿರದೆ ವಿಮಾ ಪಾಲಿಸಿ ಖರೀದಿಸಿದರೆ ಆ ಬಳಿಕ ತೊಂದರೆ ಎದುರಾಗುವ ಸಾಧ್ಯತೆ ಇರುತ್ತದೆ. ಅದರಲ್ಲೂ ತೆರಿಗೆ, ವಿಮಾ ವೆಚ್ಚ ಹಾಗೂ ಕಮೀಷನ್ ಮಿತಿಯಲ್ಲಿನ ಬದಲಾವಣೆಗಳು ವಿಮಾ ಪಾಲಿಸಿ ಖರೀದಿಸುವವರ ಜೇಬಿನ ಮೇಲೆ ನೇರ ಪರಿಣಾಮ ಬೀರಬಲ್ಲದು. ಹೀಗಾಗಿ ವಿಮಾ ಪಾಲಿಸಿ ಖರೀದಿಸುವ ಮುನ್ನವೇ ಈ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ.
ಈ ವರ್ಷದ ಪ್ರಾರಂಭದಲ್ಲಿ ಗ್ರಾಹಕರು ಅಧಿಕ ಪ್ರೀಮಿಯಂ ಪಾಲಿಸಿಗಳಲ್ಲಿ ಹೂಡಿಕೆ ಮಾಡಿದ್ದರೆ ಅವರು ಅಧಿಕ ತೆರಿಗೆ ಪಾವತಿಸಬೇಕು. ಈ ಹಿಂದೆ ಹೂಡಿಕೆದಾರರು ಇಂಥ ಪಾಲಿಸಿಗಳ ಮೇಲೆ ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿರಲಿಲ್ಲ. ಆದರೆ, ಇನ್ಮುಂದೆ ವಾರ್ಷಿಕ ಪ್ರೀಮಿಯಂ ಮೊತ್ತ 5ಲಕ್ಷ ರೂ. ಮೀರಿದರೆ ಅಂಥ ಗ್ರಾಹಕರು ತೆರಿಗೆ ಪಾವತಿಸೋದು ಕಡ್ಡಾಯ. ಆದರೆ, ಯುನಿಟ್ ಲಿಂಕ್ಡ್ ಇನ್ಯುರೆನ್ಸ್ ಪ್ಲ್ಯಾನ್ ಗಳು (ULIPs)ಈ ಹೊಸ ಆದಾಯ ತೆರಿಗೆ ನಿಯಮದಿಂದ ಹೊರಗಿವೆ. ULIPs ಪ್ರೀಮಿಯಂಗಳು ವಾರ್ಷಿಕ 5ಲಕ್ಷ ರೂ. ಮೀರಿದ್ದರೂ ಅವುಗಳ ಮೇಲೆ ಯಾವುದೇ ತೆರಿಗೆ ವಿಧಿಸೋದಿಲ್ಲ.
Shocking: ಇನ್ಮುಂದೆ ಎಲ್ಲಾ ಯುಪಿಎ ವಹಿವಾಟಿನ ಮೇಲೆ ಶೇ. 0.3 ರಷ್ಟು ಶುಲ್ಕ?
ವಿಮಾ ನಿಯಂತ್ರಕರಾದ ಐಆರ್ ಡಿಎಐ ನಿರ್ವಹಣಾ ವೆಚ್ಚಗಳು ಹಾಗೂ ಕಮೀಷನ್ ಮಿತಿಯನ್ನು ಕೂಡ ಬದಲಾಯಿಸಿವೆ. ಈ ಬದಲಾವಣೆಗಳು ಕೂಡ ಏ.1ರಿಂದ ಜಾರಿಗೆ ಬಂದಿವೆ. ನಿಯಮಗಳನ್ನು ಬದಲಾಯಿಸುವ ಸಮಯದಲ್ಲೇ ವಿಮಾ ಏಜೆಂಟ್ ಗಳು ಅಥವಾ ಸಂಗ್ರಾಹಕರ ಕಮೀಷನ್ ಮಿತಿಯನ್ನು ತೆಗೆಯುವ ನಿರ್ಧಾರವನ್ನು ಐಆರ್ ಡಿಎಐ ತೆಗೆದುಕೊಂಡಿದೆ. ಈ ಹಿಂದೆ ಕಮೀಷನ್ ಅನ್ನು ಒಟ್ಟು ವೆಚ್ಚದ ಶೇ.20ಕ್ಕೆ ಮಿತಿಗೊಳಿಸಲು ಐಆರ್ ಡಿಎಐ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಈಗ ಈ ಮಿತಿಯನ್ನು ತೆಗೆದು ಹಾಕಲಾಗಿದೆ. ಹೀಗಾಗಿ ಈಗ ವಿಮಾ ಕಂಪನಿಗಳು ತಮ್ಮ ಸ್ವಂತ ನಿರ್ಧಾರದ ಆಧಾರದಲ್ಲಿ ಕಮೀಷನ್ ಮೊತ್ತವನ್ನು ನಿರ್ಧರಿಸಬಹುದಾಗಿದೆ.
ಇನ್ಮುಂದೆ ಸಣ್ಣ ಉಳಿತಾಯ ಯೋಜನೆಗಳಿಗೆ ಪ್ಯಾನ್, ಆಧಾರ್ ಕಡ್ಡಾಯ
ಕೆವೈಸಿ ಕಡ್ಡಾಯ
ಹೊಸ ಆರೋಗ್ಯ, ವಾಹನ, ಪ್ರಯಾಣ ಹಾಗೂ ಗೃಹ ವಿಮಾ ಪಾಲಿಸಿಗಳನ್ನು ಖರೀದಿಸುವಾಗ ನೋ ಯುವರ್ ಕಸ್ಟಮರ್ ಅಥವಾ ಕೆವೈಸಿ ದಾಖಲೆಗಳನ್ನು ಜನವರಿ 1 , 2023ರಿಂದ ಭಾರತೀಯ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಐಆರ್ ಡಿಎಐ) ಕಡ್ಡಾಯಗೊಳಿಸಿದೆ. ಜೀವ, ಆರೋಗ್ಯ ವಿಮೆ ಸೇರಿದಂತೆ ಎಲ್ಲ ವಿಧದ ವಿಮೆಗಳಿಗೆ ಈ ನಿಯಮ ಅನ್ವಯಿಸುತ್ತದೆ. ಈ ಹಿಂದೆ ಒಂದು ಲಕ್ಷ ರೂ. ಮೇಲ್ಪಟ್ಟ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸುವಾಗ ಮಾತ್ರ ಕೆವೈಸಿ ದಾಖಲೆಗಳು ಕಡ್ಡಾಯವಾಗಿ ನೀಡಬೇಕಿತ್ತು. ಆದರೆ, ಈಗ ಗ್ರಾಹಕರು ಕ್ಲೈಮ್ ಮಾಡುವ ತನಕ ಕಾಯುವ ಬದಲು ಪಾಲಿಸಿ ಮಾಡಿಸುವಾಗಲೇ ಕೆವೈಸಿ ದಾಖಲೆಗಳನ್ನು ಒದಗಿಸಬೇಕು. ಇನ್ನು ಈಗಾಗಲೇ ಪಾಲಿಸಿಗಳನ್ನು ಹೊಂದಿರುವ ಪಾಲಿಸಿದಾರರಿಂದ ಕೆವೈಸಿ ದಾಖಲೆಗಳನ್ನು ಸಂಗ್ರಹಿಸಲು ಐಆರ್ ಡಿಎಐ ವಿಮಾ ಕಂಪನಿಗಳಿಗೆ ನಿರ್ದಿಷ್ಟ ಸಮಯದ ಚೌಕಟ್ಟನ್ನು ವಿಧಿಸಿದೆ. ಹೀಗಾಗಿ ಆ ಸಮಯ ಮಿತಿಯೊಳಗೆ ವಿಮಾ ಕಂಪನಿಗಳು ಪಾಲಿಸಿದಾರರಿಂದ ಕೆವೈಸಿ ದಾಖಲೆಗಳನ್ನು ಸಂಗ್ರಹಿಸಿ ನೀಡಬೇಕಿದೆ. ಈ ಸಮಯ ಮಿತಿ ಕಡಿಮೆ ಅಪಾಯದ ಪಾಲಿಸಿದಾರರಿಗೆ ಎರಡು ವರ್ಷಗಳಾದ್ರೆ, ಹೈ ರಿಸ್ಕ್ ಗ್ರಾಹಕರು ಸೇರಿದಂತೆ ಇತರರಿಗೆ ಒಂದು ವರ್ಷ.